ವಿಧಾನಸಭಾ ಚುನಾವಣೆಗಳಲ್ಲಿ ಜಯ ಗಳಿಸಿಯೂ, ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ಏರಿಕೆಯಾಗುವ ಸಾಧ್ಯತೆಯಿಲ್ಲ !

Update: 2022-03-29 10:59 GMT

ಹೊಸದಿಲ್ಲಿ: ಇತ್ತೀಚೆಗೆ ಪಂಚರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕರಲ್ಲಿ ಅಧಿಕಾರ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲೂ ಇದು ಪಕ್ಷದ ಬಲವರ್ಧನೆಗೆ ಕಾರಣವಾಗಿ ವಿವಿಧ ಮಸೂದೆಗಳು ಹಾಗೂ ನಿರ್ಣಯಗಳು ಹೆಚ್ಚಿನ ವಿರೋಧವಿಲ್ಲದೆ ಅಂಗೀಕಾರಗೊಳ್ಳಬಹುದೆಂಬುದು ಸಾಮಾನ್ಯ ನಂಬಿಕೆಯಾಗಿದೆಯಾದರೂ ನಿಜಸ್ಥಿತಿ ಹಾಗಿಲ್ಲ ಎಂದು thequint.com ವರದಿ ಮಾಡಿದೆ.

ಈ ವರ್ಷ 75ರಷ್ಟು ರಾಜ್ಯಸಭಾ ಸದಸ್ಯರು ನಿವೃತ್ತರಾಗಲಿದ್ದಾರೆ ಹಾಗೂ ಸದ್ಯ ಎಂಟು ಸ್ಥಾನಗಳು ಖಾಲಿಯಿವೆ, ಇವುಗಳಲ್ಲಿ ನಾಲ್ಕು ಜಮ್ಮು ಕಾಶ್ಮೀರದ ಸ್ಥಾನಗಳಾಗಿವೆ. ಮಾರ್ಚ್ 31ರಂದು 13 ಸ್ಥಾನಗಳು ತೆರವಾಗಲಿದ್ದರೆ ಎಪ್ರಿಲ್ 2ರಂದು ಅಸ್ಸಾಂನ ಇಬ್ಬರು, ಕೇರಳದ ಮೂವರು, ತ್ರಿಪುರಾ, ನಾಗಾಲ್ಯಾಂಡ್ ತಲಾ ಒಬ್ಬರು ಹಾಗೂ ಅಸ್ಸಾಂನ ಇಬ್ಬರು ನಿವೃತ್ತರಾಗಲಿದ್ದಾರೆ. ಪಂಜಾಬ್ ನ ಐದು ಸದಸ್ಯರು ಎಪ್ರಿಲ್ 9ರಂದು ನಿವೃತ್ತರಾಗಲಿದ್ದಾರೆ.

ಪಂಜಾಬ್‍ನಲ್ಲಿ ಅಧಿಕಾರಕ್ಕೇರಿರುವ ಆಪ್, ಎಲ್ಲಾ ಐದು ರಾಜ್ಯಸಭಾ ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ. ಸಾಮಾನ್ಯವಾಗಿ ಅಧಿಕಾರದಲ್ಲಿರುವ ಯಾವುದೇ ಪಕ್ಷಕ್ಕೆ ರಾಜ್ಯಸಭೆಯಲ್ಲಿ ಬಹುಮತವಿರುವುದಿಲ್ಲ.

ರಾಜ್ಯಸಭೆಯಲ್ಲಿ ಒಟ್ಟು 245 ಸದಸ್ಯರಿದ್ದು ಇವರ ಪೈಕಿ 12 ಮಂದಿ ನಾಮನಿರ್ದೇಶಿತರು. ಬಿಜೆಪಿಯ ಸದಸ್ಯ ಬಲ 97 ಆಗಿದ್ದು ಇವರಲ್ಲಿ ಒಂಬತ್ತು ಮಂದಿ ನಾಮನಿರ್ದೇಶಿತರು. ಹದಿಮೂರು ಸ್ಥಾನಗಳಿಗೆ ಚುನಾವಣೆ ನಡೆದಾಗ ಬಿಜೆಪಿಯ ಸದಸ್ಯ ಬಲ 100ಕ್ಕೆ ಏರಿಕೆಯಾಗಬಹುದು. ಹಾಗೂ ಅದು ಅಸ್ಸಾಂ, ತ್ರಿಪುರಾ, ಹಿಮಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‍ನಲ್ಲಿ ತಲಾ ಒಂದು ಸ್ಥಾನ ಗೆದ್ದು ಪಂಜಾಬ್‍ನಲ್ಲಿ ಒಂದು ಸ್ಥಾನದಲ್ಲಿ ಸೋಲಬಹುದು.

ಆದರೆ ವರ್ಷಾಂತ್ಯದೊಳಗೆ ಬಿಜೆಪಿಯ ಸಂಖ್ಯಾಬಲ ಮತ್ತೆ 100ಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ,. ಚುನಾವಣೆ ನಡೆಯಬೇಕಿರುವ ಉಳಿದ 62 ಸ್ಥಾನಗಳಲ್ಲಿ 11 ಉತ್ತರ ಪ್ರದೇಶದಲ್ಲಿ, ಆರು ಮಹಾರಾಷ್ಟ್ರದಲ್ಲಿ, ಐದು ತಮಿಳುನಾಡಿನಲ್ಲಿ, ತಲಾ ನಾಲ್ಕು ಆಂಧ್ರ, ರಾಜಸ್ಥಾನ, ಬಿಹಾರ ಮತ್ತು ಕರ್ನಾಟಕದಲ್ಲಿದ್ದು ತಲಾ ಮೂರು ಸ್ಥಾನಗಳು ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿವೆ.

ಈ 62 ಸೀಟುಗಳ ಪೈಕಿ 30ರಲ್ಲಿ ಸದ್ಯ ಬಿಜೆಪಿ ಸದಸ್ಯರಿದ್ದು ಇವರಲ್ಲಿ ಐದು ಮಂದಿ ನಾಮನಿರ್ದೇಶಿತರು. ಉತ್ತರಪ್ರದೇಶ ಮತ್ತು ಉತ್ತರಾಖಂಡದ ಸ್ಥಾನಗಳು ಬಿಜೆಪಿಯ ಪಾಲಾಗಬಹುದು. ಚುನಾವಣೆ ನಡೆಯುವ 12ರಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಮೂರು ಹಾಗೂ ಉತ್ತರಾಖಂಡದ ಒಂದರಲ್ಲಿ ಜಯಗಳಿಸಿ 104ಕ್ಕೆ ತನ್ನ ಸದಸ್ಯ ಬಲವನ್ನು ಏರಿಸಬಹುದು. ಆದರೆ ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿಯ ಐದು ಸದಸ್ಯರು ನಿವೃತ್ತರಾಗಲಿದ್ದು ಒಂದು ಅಥವಾ ಎರಡರಲ್ಲಿ ಗೆಲ್ಲಬಹುದು. ಆಂಧ್ರದಲ್ಲಿ ಬಿಜೆಪಿಯ ಮೂವರು ಸದಸ್ಯರು ನಿವೃತ್ತರಾಗಲಿದ್ದು ಈ ಮೂವರು ಮಾಜಿ ಟಿಡಿಪಿ ಸದಸ್ಯರು. ಆದರೆ ಇಲ್ಲಿ ಪಕ್ಷ ಒಂದೇ ಒಂದು ರಾಜ್ಯಸಭಾ ಸ್ಥಾನ ಪಡೆಯುವ ಸಾಧ್ಯತೆಯಿಲ್ಲ. ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಪಕ್ಷ ತಲಾ ಒಂದು ಸ್ಥಾನ ಕಳೆದುಕೊಳ್ಳಬಹುದು ಹಾಗೂ ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳಬಹುದು.

ಒಟ್ಟಾರೆಯಾಗಿ 62 ಸ್ಥಾನಗಳ ಪೈಕಿ 30ಕ್ಕೆ ಚುನಾವಣೆಗಳು ನಡೆದಾಗ ಬಿಜೆಪಿ ಒಟ್ಟು ಐದು ಸ್ಥಾನಗಳನ್ನು ಕಳೆದುಕೊಂಡರೆ ಅದರ ಸಂಖ್ಯಾಬಲ ವರ್ಷಾಂತ್ಯಕ್ಕೆ 95ಕ್ಕೆ ಇಳಿಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News