ಐದು ದಶಕದ ಗಡಿ ವಿವಾದ ಬಗೆ ಹರಿಸಿಕೊಳ್ಳುವ ಐತಿಹಾಸಿಕ ಒಪ್ಪಂದಕ್ಕೆ ಮೇಘಾಲಯ, ಅಸ್ಸಾಂ ಸಹಿ

Update: 2022-03-29 12:01 GMT
Photo: twitter./nihaal_punjab

ಹೊಸದಿಲ್ಲಿ: ಈಶಾನ್ಯ ಭಾರತ ರಾಜ್ಯಗಳಾದ ಅಸ್ಸಾಂ ಹಾಗೂ ಮೇಘಾಲಯ ರಾಜ್ಯಗಳ ನಡುವೆ ಅರ್ಧ ಶತಮಾನದಿಂದ ಬಾಕಿ ಉಳಿದಿದ್ದ ಗಡಿ ವಿವಾದವನ್ನು ಬಗೆಹರಿಸಿಕೊಳ್ಳುವ ಒಪ್ಪಂದಕ್ಕೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವ ಶರ್ಮ ಹಾಗೂ ಕಾನ್ರಾಡ್‌ ಸಂಗ್ಮಾ ಮಂಗಳವಾರ ಮಧ್ಯಾಹ್ನ ಸಹಿ ಹಾಕಿದ್ದಾರೆ.

ಮೇಘಾಲಯ ರಾಜ್ಯದಲ್ಲಿ ವಿವಾದದ 12 ಪ್ರದೇಶಗಳಿವೆ ಮತ್ತು ನಿರ್ಣಯದ ಮೊದಲ ಹಂತದಲ್ಲಿ ಆರು ಪ್ರದೇಶಗಳ ವಿವಾದವನ್ನು ಪರಿಹರಿಸಲಾಗಿದೆ ಎಂದು ಶರ್ಮಾ ಈ ಹಿಂದೆ ಹೇಳಿದ್ದರು.

ಮಂಗಳವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿದೆ. ದೀರ್ಘಕಾಲೀನ ಈ ವಿವಾದವನ್ನು ಅಂತ್ಯಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದು ಈಶಾನ್ಯ ಭಾಗಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

 ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಮಾತನಾಡಿದ ಅಮಿತ್‌ ಶಾ, ಈಶಾನ್ಯ ಭಾಗದಲ್ಲಿ ಅಭಿವೃದ್ಧಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಹಲವಾರು ಪ್ರಯತ್ನಗಳನ್ನು ಉಲ್ಲೇಖಿಸಿದ್ದಾರೆ. ವಿವಾದದ ಕೇಂದ್ರ ಬಿಂದುವಾಗಿದ್ದ 12 ಪ್ರದೇಶಗಳಲ್ಲಿ 6 ಪ್ರದೇಶಗಳ ವಿವಾದ ಸುಖಾಂತ್ಯ ಕಂಡಿದೆ. ಇದು 70 ಶೇಕಡಾ ಗಡಿಭಾಗಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

 1972 ರಲ್ಲಿ ಅಸ್ಸಾಂನಿಂದ ಮೇಘಾಲಯವು ಬೇರ್ಪಟ್ಟು ಪ್ರತ್ಯೇಕ ರಾಜ್ಯವಾದಾಗಿನಿಂದ ಗಡಿ ವಿವಾದವು ಹುಟ್ಟಿಕೊಂಡಿತು. ಹೊಸ ರಾಜ್ಯ ರಚನೆಯ ಆರಂಭಿಕ ಒಪ್ಪಂದದಲ್ಲಿ ಗಡಿಗಳ ಗಡಿರೇಖೆಯ ಭಿನ್ನಾಭಿಪ್ರಾಯದ ಪರಿಣಾಮವಾಗಿ ಗಡಿ ಸಮಸ್ಯೆಗಳು ಉದ್ಭವಿಸಿದವು.

ಈ ವಿವಾದವನ್ನು ಬಗೆ ಹರಿಸಲು, ಕಳೆದ ವರ್ಷ ಆಗಸ್ಟ್‌ನಲ್ಲಿ, ಅಸ್ಸಾಂ ಮತ್ತು ಮೇಘಾಲಯ ಸರ್ಕಾರಗಳು 12 ವಿವಾದಿತ ಪ್ರದೇಶಗಳ ಪೈಕಿ ಆರರಲ್ಲಿ ಗಡಿ ಸಮಸ್ಯೆಯನ್ನು ಹಂತ ಹಂತವಾಗಿ ಪರಿಹರಿಸಲು ಉಭಯ ರಾಜ್ಯಗಳ ಮೂರು ಪ್ರಾದೇಶಿಕ ಸಮಿತಿಯನ್ನು ರಚಿಸಲಾಗಿತ್ತು. ಪ್ರತಿ ಸಮಿತಿಯು ಪ್ರತಿ ರಾಜ್ಯದ ಕ್ಯಾಬಿನೆಟ್ ಸಚಿವರು ಮತ್ತು ಅಧಿಕಾರಿಗಳು ಸೇರಿದಂತೆ ಐದು ಸದಸ್ಯರನ್ನು ಹೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News