ಕರ್ನಾಟಕ ಸರ್ವ ಧರ್ಮಗಳ ಸಾಮರಸ್ಯ ರಾಜ್ಯವಾಗಿಯೇ ಉಳಿಯಲಿ

Update: 2022-03-30 10:12 GMT

ಬಹುತ್ವವು ಮಾನವ ಬದುಕಿನ ಎಲ್ಲ ಕ್ಷೇತ್ರಗಳನ್ನೂ ಆವರಿಸಿರುವ ಒಂದು ವಿಶಿಷ್ಟ ಜೀವನ ವಿಧಾನವಾಗಿದೆ. ಸ್ವಾತಂತ್ರ್ಯಾನಂತರದಲ್ಲಿ ರಾಷ್ಟ್ರನಾಯಕರು ಭಾರತವು ಜಾತ್ಯತೀತ - ಬಹುತ್ವ ಭಾರತವಾಗಿಯೇ ಉಳಿಯಬೇಕೆಂದು ಪ್ರಜ್ಞಾಪೂರ್ವಕವಾಗಿ ತೀರ್ಮಾನಿಸಿದರು. ಬಹುವಿಚಾರಧಾರೆಗಳು, ಆಚಾರಗಳು ಮತ್ತು ನಡವಳಿಕೆಗಳ ನಡುವೆಯೂ ಪ್ರಜೆಗಳು ಸಂಘರ್ಷವಿಲ್ಲದೆ ಬದುಕಬೇಕೆಂದು ಭಾರತೀಯ ಸಂವಿಧಾನ ತಿಳಿಸುತ್ತದೆ. ಬಹುತ್ವವನ್ನು ನಾಶಪಡಿಸುವುದು ಸಮಾಜವನ್ನೇ ನಾಶಮಾಡಿದಂತೆ. ಬಹುತ್ವವನ್ನು ಸ್ವಾರ್ಥಕ್ಕಾಗಿ ವಿರೋಧಿಸುವ ಜನರು ಮೋದಿ-ಯೋಗಿ ಯುಗದಲ್ಲಿ ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕರ್ನಾಟಕವು ಪ್ರಾಚೀನ ಕಾಲದಿಂದಲೂ ಧಾರ್ಮಿಕ-ಸಾಮಾಜಿಕ ವೈವಿಧ್ಯಗಳ ನಡುವೆಯೂ ಏಕತೆಯನ್ನು ಕಾಯ್ದುಕೊಂಡು ಸರ್ವಜನಾಂಗಗಳ ಶಾಂತಿಯ ತೋಟವೆಂಬ ಹೆಗ್ಗಳಿಕೆಯನ್ನು ದೇಶದಲ್ಲಿ ಹೊಂದಿರುವ ಮಾದರಿ ರಾಜ್ಯವಾಗಿದೆ. ಕರ್ನಾಟಕ ರೈತಚಳವಳಿ ಬಹುತ್ವಕ್ಕೆ ಪೂರಕವಾದ ಜಾತಿವಿನಾಶ, ಅಂತರ್ಜಾತಿ ವಿವಾಹ, ವರದಕ್ಷಿಣೆ ನಿರ್ಮೂಲನೆ, ಸರಳವಿವಾಹ ಮೊದಲಾದ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಅನುಷ್ಠಾನಗೊಳಿಸಿತು. ರೈತ ಚಳವಳಿ ಸಂಘಟಕರು ಲೋಹಿಯಾ, ಕುವೆಂಪು, ಜಯಪ್ರಕಾಶ್ ನಾರಾಯಣ, ಆಚಾರ್ಯ ನರೇಂದ್ರದೇವ ಮೊದಲಾದವರ ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಅಂಬೇಡ್ಕರ್‌ರವರ ಮಾನವೀಯ ಹಾಗೂ ಸಾಂವಿಧಾನಿಕ ಮೌಲ್ಯಗಳಿಂದಲೂ ಕೂಡ ರೈತ ಚಳವಳಿ ವಿಶೇಷ ಬಲ ಗಳಿಸಿತು. ದಲಿತ-ಬಂಡಾಯ ಸಾಹಿತ್ಯ ಚಳವಳಿಗಳು ಪ್ರಧಾನವಾಗಿ ಸಾಂಸ್ಕೃತಿಕ ನೆಲೆಗಟ್ಟನ್ನು ಹೊಂದಿದ್ದವು. ಶೋಷಕ ವ್ಯವಸ್ಥೆಯ ಪ್ರಮುಖ ಪಾಲುದಾರರಾದ ವೈದಿಕರು, ಜಮೀನ್ದಾರರು ಮತ್ತು ಬಂಡವಾಳಶಾಹಿಗಳ ಶೋಷಣಾ ಪ್ರವೃತ್ತಿಗಳನ್ನು ದಲಿತ-ಬಂಡಾಯ ಸಾಹಿತ್ಯ ಪ್ರಧಾನವಾಗಿ ವೈಚಾರಿಕತೆ, ಮಾನವೀಯತೆ ಮತ್ತು ಬಹುತ್ವಗಳ ಹಿನ್ನೆಲೆಯಲ್ಲಿ ವಿರೋಧಿಸಿತು. ನಂತರದಲ್ಲಿ ಗೋಕಾಕ್ ಚಳವಳಿ, ದಲಿತ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ, ಪರಿಸರ ಚಳವಳಿ ಮೊದಲಾದ ಪ್ರಗತಿಪರ ಚಳವಳಿಗಳು ಬಹುತ್ವದ ರಕ್ಷಣೆ ದೃಷ್ಟಿಯಿಂದ ನೀಡಿರುವ ಕೊಡುಗೆ ಅಮೂಲ್ಯವಾದುದು. 1990ರ ದಶಕದಲ್ಲಿ ಹಿಂದುತ್ವವಾದಿಗಳ ನೇತೃತ್ವದಲ್ಲಿ ಜರುಗಿದ ಕೋಮುಸಂಘರ್ಷಗಳು ಕರ್ನಾಟಕದ ಬಹುತ್ವ ಮೌಲ್ಯಗಳಿಗೆ ಅಪಚಾರ ಉಂಟುಮಾಡಿವೆ. ರಾಜ್ಯಾಧಿಕಾರವನ್ನು ಪಡೆಯುವ ಸಲುವಾಗಿ ಹಿಂದುತ್ವವಾದಿಗಳ ಬೆಂಬಲಿತ ಬಿಜೆಪಿ ಪ್ರಜಾಸತ್ತೆ ಮತ್ತು ಬಹುತ್ವಗಳ ವಿಷಯದಲ್ಲಿ ರಾಜಿ ಮಾಡಿಕೊಂಡು ಕರ್ನಾಟಕವನ್ನು ಹಿಂದುತ್ವ ರಾಜಕಾರಣದ ಪ್ರಮುಖ ಕೇಂದ್ರವನ್ನಾಗಿ ಬೆಳೆಸಿತು. ಏಕತ್ವವಾದಿಗಳು ಮೇಲ್ಜಾತಿ ಪ್ರಭುತ್ವದ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಗುಪ್ತ ಕಾರ್ಯಸೂಚಿಯನ್ನು ಹೊಂದಿದ್ದಾರೆ. ಮೂಲಭೂತವಾದ ಹಾಗೂ ಕೋಮುವಾದಗಳು ಸಮಾಜ, ರಾಜಕಾರಣ, ಆರ್ಥಿಕತೆ ಮುಂತಾದ ಹಲವು ಆಯಾಮಗಳನ್ನು ಪಡೆದಿವೆ. ಹಿಂದುತ್ವ ರಾಜಕಾರಣವನ್ನು ಪ್ರೋತ್ಸಾಹಿಸಿ ಕರ್ನಾಟಕದ ಬಹುತ್ವ ದುರ್ಬಲಗೊಳ್ಳಲು ಬಿಜೆಪಿಯನ್ನು ಬೆಂಬಲಿಸುವ ಹಿಂದುತ್ವವಾದಿಗಳ ಹುನ್ನಾರ ಬಹುಮುಖ್ಯ ಕಾರಣವಾಗಿದೆ.

ಕರಾವಳಿ ಕರ್ನಾಟಕದಲ್ಲಿ ಧಾರ್ಮಿಕ ಮೂಲಭೂತವಾದ ಮತ್ತು ಕೋಮುವಾದಿ ಸಾಮ್ರಾಜ್ಯಶಾಹಿಗಳು ಕೈಜೋಡಿಸಿ ಪ್ರಜಾಸತ್ತಾತ್ಮಕ ಹಾಗೂ ಬಹುತ್ವ ಮೌಲ್ಯಗಳನ್ನು ದುರ್ಬಲಗೊಳಿಸಿವೆ. ಅಯೋಧ್ಯೆಯ ರಾಮಜನ್ಮಭೂಮಿ ವಿವಾದದಂತೆಯೇ ಕರ್ನಾಟಕದಲ್ಲಿ ಬಾಬಾಬುಡನ್‌ಗಿರಿಯನ್ನು ಕೋಮುವಾದಿಗಳು ಪ್ರಮುಖ ದಾಳವನ್ನಾಗಿ ಬಳಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕೋಮುವಾದದ ಆದಿಮ ರೂಪವಾದ ಬ್ರಾಹ್ಮಣವಾದವನ್ನು ವಿರೋಧಿಸುವುದಕ್ಕೆ ಬೇಕಾದ ಭಿತ್ತಿ ಮೊದಲಿನಿಂದಲೂ ಇದೆ. ಕೋಮುವಾದ ವಿರೋಧಿ ಚಳವಳಿಯೆಂದರೆ ಬಹುತ್ವ ಪರ ಚಳವಳಿಯಾಗಿದೆ. 2006ರಲ್ಲಿ ಕರಾವಳಿ ಕರ್ನಾಟಕವು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಧರ್ಮವನ್ನು ಆಧರಿಸಿದ ದ್ವೇಷವು ಮೂಲಭೂತವಾದಿಗಳ ಸಂಘಟಿತ ಗುಂಪುಗಳಿಗೆ ಸೀಮಿತವಾಗಿರದೆ ಇಡೀ ಕರಾವಳಿ ಕರ್ನಾಟಕದ ಸಾಮಾಜಿಕ ವಲಯವನ್ನು ಕಲುಷಿತಗೊಳಿಸಿತು. ಬಹುತ್ವದ ಸುಸ್ಥಿರತೆಗೆ ಇಂತಹ ಬೆಳವಣಿಗೆಗಳು ಗಂಭೀರವಾಗಿ ಅಡ್ಡಬಂದವು. ಮಂಗಳೂರಿನ ಚರ್ಚುಗಳು ಮತ್ತು ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗೆ ಹಿಂದುತ್ವ ಪಡೆಗಳು ಮುಖ್ಯವಾಗಿ ಕಾರಣವಾಗಿವೆ. 1990-2020ರ ಅವಧಿಯಲ್ಲಿ ಕರ್ನಾಟಕ ಮಾರುಕಟ್ಟೆ ಶಕ್ತಿಗಳು ಮತ್ತು ಹಿಂದುತ್ವವಾದಿಗಳ ಪ್ರಬಲ ತಾಣವಾಗಿ ಬೆಳೆಯಿತು. ವಿಶೇಷವಾಗಿ ಕರಾವಳಿ ಕರ್ನಾಟಕದಲ್ಲಿ ಬಹುತ್ವ ಕಥನಗಳು ಏಕತ್ವದ ಕಥನಗಳಾಗಿ ಪರಿವರ್ತನೆಗೊಂಡವು. ಇತ್ತೀಚಿನ ದಿನಗಳಲ್ಲಿ ಹಿಜಾಬ್ ವಿವಾದ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ಕೆಲವು ದೇಗುಲಗಳ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಸರಕಾರ ಬೆಂಬಲಿತ ಹಿಂದುತ್ವವಾದಿಗಳು ನಿರ್ಬಂಧಿಸಿರುವುದು ನಿಜಕ್ಕೂ ಸಾಂವಿಧಾನಿಕ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಮುಜರಾಯಿ ಇಲಾಖೆ ಅಂದಿನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ 2002ರಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಹಿಂದೂಯೇತರರು ವ್ಯಾಪಾರ ವಹಿವಾಟು ನಡೆಸುವುದನ್ನು ನಿಷೇಧಿಸಿರುವುದು ಬಹುತ್ವದ ಸುಸ್ಥಿರತೆ ದೃಷ್ಟಿಯಿಂದ ಅತ್ಯಂತ ಅನಾರೋಗ್ಯಕರ ಹಾಗೂ ಸಂವಿಧಾನ ವಿರೋಧಿ ನಡೆಯಾಗಿದೆ. ಸುಮಾರು 20 ವರ್ಷಗಳ ತನಕ ಈ ಕಾನೂನಿನ ಸಾಂವಿಧಾನಿಕತೆಯನ್ನು ಯಾರೂ ಪ್ರಶ್ನಿಸದಿರುವುದು ನಾಗರಿಕ ಸಮಾಜದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಅನ್ನ ಮತ್ತು ಜೀವನೋಪಾಯ ಮಾರ್ಗಗಳನ್ನು ಕಸಿಯುವ ಉಗ್ರ ಹಿಂದುತ್ವವಾದ ಕರ್ನಾಟಕದ ಘನತೆಯನ್ನು ತಗ್ಗಿಸಿದೆ. ಈಗಾಗಲೇ ಕರ್ನಾಟಕದ ವಿಧಾನಸಭೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ಹಿಂದೂ ದೇಗುಲಗಳಲ್ಲಿ ಯಾವುದೇ ವಹಿವಾಟು ನಡೆಸಲು ನಿರ್ಬಂಧಿಸಿರುವ ವಿಚಾರ ಗಂಭೀರ ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಆದರೆ ಸಾಂವಿಧಾನಿಕ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಕೋಮುವಾದಿಗಳಿಂದ ನಿಯಂತ್ರಿಸಲ್ಪಟ್ಟಿರುವ ಸರಕಾರ ಈ ಸಮಸ್ಯೆಯನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸದೆ ಮತಬ್ಯಾಂಕ್ ರಾಜಕಾರಣದಲ್ಲಿ ಮಗ್ನವಾಗಿರುವುದು ಕರ್ನಾಟಕವು ಹಿಂದುತ್ವ ಪ್ರಯೋಗಾಲಯವಾಗಿ ರೂಪುಗೊಳ್ಳಲು ಪ್ರಮುಖ ಕಾರಣವಾಗಿದೆ.

ಹುಟ್ಟುವಾಗ ಯಾರೂ ಕೂಡ ಧರ್ಮ, ಜಾತಿ, ಕುಟುಂಬ ಮೊದಲಾದ ಆಯ್ಕೆಗಳನ್ನು ಹೊಂದಿರುವುದಿಲ್ಲ. ಹುಟ್ಟು ಆಕಸ್ಮಿಕ - ಸಾವು ಖಚಿತ. ಆದರೆ ಇವುಗಳ ಮಧ್ಯೆ ಮನುಷ್ಯರಾಗಿ ಬದುಕುವಂತಹ ಮಾನವೀಯ ಪರಿಸರವನ್ನು ನಿರ್ಮಿಸುವುದು ಸರಕಾರದ ಪ್ರಮುಖ ಹೊಣೆಗಾರಿಕೆಯಾಗಿದೆ. ಬಡವ್ಯಾಪಾರಿಗಳು ಯಾವುದೇ ಧರ್ಮದವರಿರಲಿ ಅಥವಾ ಜಾತಿಯವರಾಗಿರಲಿ ಅವರು ನೆಮ್ಮದಿಯಿಂದ ಜೀವನೋಪಾಯ ಮಾರ್ಗಗಳನ್ನು ಗಳಿಸಿ ಬದುಕಲು ಬಿಡುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಸರ್ವಜನಾಂಗದ ಶಾಂತಿಯ ತೋಟವೆಂದೇ ಹೆಸರಾಗಿರುವ ಕರ್ನಾಟಕ ರಾಜ್ಯದಲ್ಲಿ ಧಾರ್ಮಿಕ ಧ್ರುವೀಕರಣ ಅಥವಾ ಸಾಮಾಜಿಕ ವಿಭಜನೆ ಸಲ್ಲದು. ಪುರಾಣಗಳು, ಶಾಸ್ತ್ರಗಳು, ಕಂದಾಚಾರಗಳು ಮೊದಲಾದವುಗಳನ್ನು ಬಹುಜನರ ಮೇಲೆ ಹೇರುವ ಬ್ರಾಹ್ಮಣಶಾಹಿಯ ಕುತಂತ್ರಗಳ ವಿರುದ್ಧ ಬಹುಜನರನ್ನು ರಕ್ಷಿಸುವ ಸಾಂಸ್ಕೃತಿಕ ಆಂದೋಲನ ಕರ್ನಾಟಕ ಮತ್ತು ದೇಶದ ಎಲ್ಲೆಡೆ ಅತ್ಯವಶ್ಯಕ. ಭಾರತವನ್ನು ಪ್ರಜಾಸತ್ತಾತ್ಮಕ ಶಕ್ತಿಗಳು ಆಳುವುದಕ್ಕೆ ಹಿಂದುತ್ವವಾದಿಗಳು ಮತ್ತು ಬಂಡವಾಳಶಾಹಿ ಅಡ್ಡಬಂದಿರುವುದನ್ನು ಪ್ರಜ್ಞಾವಂತರು ಗಂಭೀರವಾಗಿ ಪರಿಗಣಿಸಿ ಕರ್ನಾಟಕದಲ್ಲಿ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಹಿಂದುಳಿದವರು ಮೊದಲಾದವರ ಮಾನವ ಹಕ್ಕುಗಳನ್ನು ರಕ್ಷಿಸುವುದು ಅತ್ಯವಶ್ಯಕ. ಎಲ್ಲ ಪ್ರಜ್ಞಾವಂತ ಮನಸ್ಸುಗಳು ಇಂತಹ ಅಹಿತಕರ ಘಟನೆಗಳನ್ನು ಉಗ್ರವಾಗಿ ಖಂಡಿಸಿ ಕರ್ನಾಟಕದಲ್ಲಿ ಬಹುತ್ವ - ಬಂಧುತ್ವ ಗಟ್ಟಿಯಾಗಿ ಬೆಳೆಯಲು ಸಹಕರಿಸಬೇಕು.

Writer - ಡಾ. ಬಿ.ಪಿ. ಮಹೇಶ ಚಂದ್ರ ಗುರು

contributor

Editor - ಡಾ. ಬಿ.ಪಿ. ಮಹೇಶ ಚಂದ್ರ ಗುರು

contributor

Similar News