ಮರಳಿ ಮಣ್ಣಿನೆಡೆಗೆ ಹೋಗುವ ದಾರಿಯಲ್ಲಿ...
ತೋಟದಲ್ಲಿ ಎಲೆ-ಹೂವು ಕಾಯಿ-ಹಣ್ಣು ಬಿಟ್ಟ ಮೇಲೆ ಕೋತಿ, ನವಿಲು, ಹಕ್ಕಿಗಳು ಹಾರಿ ಬಂದು ತಿಂದು ಹೋಗಲಿ, ಕಾಡು ಪ್ರಾಣಿಗಳೂ ಒಂದಷ್ಟು ತಿನ್ನಲಿ. ಕಳ್ಳರೂ ಒಂದಷ್ಟು ಕದ್ದುಕೊಂಡು ಹೋಗಲಿ. ನಮಗೂ ಒಂದಷ್ಟು ಉಳಿಯದೇ ಹೋಗುತ್ತದೆಯೇ? ಎಲ್ಲವೂ ನಡೆಯಲಿ. ಎಲ್ಲರೂ ಭೂಮಿಯ ವಾರಸುದಾರರು ತಾನೇ? ಯಾವುದೂ ಏನೇ ಆಗಲಿ ನಾನಂತೂ ಹಳ್ಳಿಗೆ ಹೋಗಿ ತೋಟದಲ್ಲಿ ಒಂದು ಸಣ್ಣ ಮನೆ ಕಟ್ಟಿಕೊಂಡು ಪಕ್ಷಿ-ಪ್ರಾಣಿಗಳು, ಗಿಡಮರ/ಮಣ್ಣಿನ ಜೊತೆಗೆ ಕಾಲ ಕಳೆಯಲು ನಿಶ್ಚಯ ಮಾಡಿಕೊಂಡಿದ್ದೇನೆ.
ನಿವೃತ್ತಿಯಾದ ಮೇಲೆ ಯಾಕೋ ಏನೋ ಒಂದು ಮಿನಿ ಫಾರೆಸ್ಟ್ ಬೆಳೆಸೋಣ ಎಂಬ ಆಲೋಚನೆ ಬಂದುಬಿಟ್ಟಿತು. ಮನುಷ್ಯ ಹುಟ್ಟಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ, ಎಷ್ಟೇ ದೂರ ಹೋಗಿ ಕೆಲಸ ಮಾಡಿದರೂ ಕೊನೆಗೆ ಮಣ್ಣಿಗೆ(ಊರಿಗೆ) ವಾಪಸ್ ಬರಲೇಬೇಕು. ರಾಮಾಯಣ, ಮಹಾಭಾರತಗಳಲ್ಲಿ ಮನುಷ್ಯನ ಕೊನೆಘಟ್ಟವನ್ನು ವನಪ್ರಸ್ಥಾನಗಳಲ್ಲಿ ನೋಡಬಹುದು. ಹುಟ್ಟಿ ಬೆಳೆದ ಹಳ್ಳಿಗೆ ವಾಪಸ್ ಹೋಗುವುದೆಂದರೆ ಸಂತೋಷದ ವಿಷಯ. ಇದಕ್ಕಿಂತ ಸಂಭ್ರಮದ ವಿಷಯ ಇನ್ನೊಂದಿಲ್ಲ ಎನ್ನುವುದು ನನ್ನ ಅನಿಸಿಕೆ. ಸಾವೆಂದರೆ ಸಂಭ್ರಮ ಎಂಬುದಾಗಿ ಯಾರೋ ಮಹಾನುಭಾವರು ಹೇಳಿದಂತೆ ಜ್ಞಾಪಕ. ಬೇರೆಯವರಿಗೆ ಅದು ಹೇಗೆನಿಸುತ್ತದೊ ಏನೋ ನನಗೆ ಗೊತ್ತಿಲ್ಲ. ಮಹಾನಗರಗಳ ಸಹವಾಸ ಮಾಡಿದವರು (ವಿದೇಶಗಳಿಗೆ ಹೋಗಿ ನೆಲೆಸಿದವರ ವಿಷಯ ಬೇಡ) ಮತ್ತು ಆಧುನಿಕ ಸವಲತ್ತುಗಳಲ್ಲಿ ಮಿಂದು ಎದ್ದವರು ಮತ್ತೆ ಹಳ್ಳಿಗಳಿಗೆ ಹೋಗಿ ನೆಲೆಸುವುದು ಸುಲಭವಲ್ಲಎನ್ನುವುದು ಬಹಳ ಜನರ ನಂಬಿಕೆ ಮತ್ತು ಅದು ನಿಜವೂ ಹೌದು.
ಹಾಗೆ ನೋಡಿದರೆ ಹಳ್ಳಿಗಳಿಂದ ಪಟ್ಟಣಗಳಿಗೆ ಹೋಗಿ ದೊಡ್ಡ ದೊಡ್ಡ ಹುದ್ದೆಗಳನ್ನು ಹಿಡಿದವರು ಮತ್ತು ಶ್ರೀಮಂತರಾದವರು ಮತ್ತೆ ಹಳ್ಳಿಗಳಿಗೆ ವಾಪಸ್ ಬಂದು ನೆಲೆಸುವುದು ತೀರಾ ಅಪರೂಪ. ಆದರೆ ಅಂತಹ ಕೆಲವರು ತಮ್ಮ ಹಳ್ಳಿಗಳಿಗೆ ಹೋಗಿ ದೇವಸ್ಥಾನಗಳನ್ನು ಕಟ್ಟಿದ/ಜೀರ್ಣೋದ್ಧಾರ ಮಾಡಿದ ಸಾಕಷ್ಟು ಜನರನ್ನು ನೋಡಿದ್ದೇನೆ. ಆದರೆ ಇವರು ಶಾಲೆ/ಕಾಲೇಜು ಮತ್ತು ಆಸ್ಪತ್ರೆಗಳನ್ನು ಕಟ್ಟಿಸಿದ್ದು ತೀರಾ ಅಪರೂಪ. ಕೆಲವರು ತೋಟದ ಮನೆಗಳನ್ನು ಮಾಡಿಕೊಂಡು ಒಂದೆರಡು ದಿನ ಅಲ್ಲಿಗೆ ಹೋಗಿ ಕಾಲ ಕಳೆದು ಹಿಂದಕ್ಕೆ ಬರುತ್ತಾರೆ. ಹಣ ಮಾಡಿ ಚೆನ್ನಾಗಿ ಸೆಟ್ಲ್ ಆಗಿರುವವರು ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವಕಾರಣದಿಂದ ನಗರಗಳಲ್ಲಿ ಅಥವಾ ಹೊರ ವಲಯದಲ್ಲಿ ಆಸ್ಪತ್ರೆಗಳಿಗೆ ಹತ್ತಿರವೇ ನೆಲೆಸಿರುತ್ತಾರೆ. ಬಹಳ ವರ್ಷಗಳ ಕಾಲ ಇನ್ನೂಬದುಕಬೇಕು ಎನ್ನುವ ಹಂಬಲದಿಂದ. ಆದರೆ ಕಣ್ಣಿಗೆ ಕಾಣದ ಕೊರೋನ ಎಂಬ ವೈರಸ್ ಅದೆಷ್ಟೋ ಜನರನ್ನು ಕಣ್ಣುಮುಚ್ಚಿ ತೆರೆೆಯುವುದರಲ್ಲಿ ಬಾಚಿಕೊಂಡು ಹೊರಟುಹೋಗಿದೆ. ಇನ್ನೂ ಅದರ ಆರ್ಭಟದ ಅಲೆಗಳು ಸಮುದ್ರಗಳ ಮೇಲಿನಿಂದ ಬರುವ ಸುನಾಮಿಗಳಂತೆ ಜಗತ್ತಿನಾದ್ಯಂತ ಬರುತ್ತಲೇ ಇದೆ. ಪ್ರಸ್ತುತ ಹಣ ಇರುವವರೆಲ್ಲ ತೋಟದ ಮನೆಗಳನ್ನು ಮಾಡುವುದು ಒಂದು ಫ್ಯಾಶನ್ ಆಗಿದೆ. ಆದರೆ ಮರಳಿ ಮಣ್ಣಿನ ಕಡೆಗೆ ಅಥವಾ ತಾನು ಹುಟ್ಟಿದ ಹಳ್ಳಿಗೆ ಹೋಗಿ ನೆಲೆಸುವುದು ಬಹಳ ಅಪರೂಪ. ಅದಕ್ಕೆ ಕಾರಣ ಹಳ್ಳಿಗಳಲ್ಲಿ ತಲೆ ಎತ್ತಿರುವ ಜಾತಿ ರಾಜಕಾರಣ, ಬಡತನ, ಅನಾರೋಗ್ಯ, ಶಿಕ್ಷಣ, ಸಾಮಾಜಿಕ ತಾರತಮ್ಯ ಹೀಗೆ ಅನೇಕ ರೀತಿಯ ತೊಂದರೆಗಳಿಂದ ಹಳ್ಳಿಗಳು ನರಳುತ್ತಿರುವುದು. ನಿರುದ್ಯೋಗದ ಕಾರಣಕ್ಕೆ ಇಡೀ ದೇಶದ ಯುವ ಜನರೆಲ್ಲ ಕೆಲಸ ಹುಡುಕಿಕೊಂಡು ಪಟ್ಟಣಗಳನ್ನು ಸೇರಿಕೊಂಡಿದ್ದು ಹಳ್ಳಿಯಲ್ಲಿ ವ್ಯವಸಾಯ ಮಾಡುವುದಕ್ಕೆ ಜನರೇ ದೊರಕುವುದಿಲ್ಲ. ಫಲಿತಾಂಶ ಹಳ್ಳಿಗಳೆಲ್ಲ ವೃದ್ಧಾಶ್ರಮಗಳಾಗಿ ಮಾರ್ಪಡುತ್ತಿವೆ.ಇದರಮಧ್ಯೆಯೂ ಕೃಷಿ ಮಾಡುವವರು, ಮಾಡಿಸುವವರ ಸಮಸ್ಯೆಗಳನ್ನು ಹಳ್ಳಿಗಳಿಗೆ ಹೋಗಿಯೇ ನೋಡಬೇಕು. ಒಂದು ಒಳ್ಳೆಯವಿಷಯವೆಂದರೆ ಹಳ್ಳಿಗಳಲ್ಲಿ ಈಗಲೂ ಯಾರಾದರೂ ಸತ್ತರೆ ಹೂಳಲು ಒಂದಿಷ್ಟು ಜಾಗ ದೊರಕುತ್ತದೆ. ನಗರಗಳಲ್ಲಿ ಏನಿದ್ದರೂವಿದ್ಯುತ್ ಶವಾಗಾರದಲ್ಲಿ ಸುಟ್ಟ ಮೇಲೆ ಒಂದಷ್ಟು ಬೂದಿಯನ್ನು ಪಡೆದುಕೊಳ್ಳಬಹುದು, ಬೇಡವೆಂದರೆ ಅದೂ ಬೇಡ. ***
ಬಹಳ ಹಿಂದೆಯೇ ನಮ್ಮ ಮನೆ ಎರಡು ಮೂರು ಸಲ ಇಬ್ಭಾಗಗೊಂಡು ಜಮೀನುಗಳೆಲ್ಲ ತುಂಡುತುಂಡುಗಳಾಗಿ ಹೋಗಿದ್ದವು. ಬೆಟ್ಟಕ್ಕೆ ಹೋಗುವ ರಸ್ತೆಯ ಪಕ್ಕದಲ್ಲೇ ಇದ್ದ ನಮ್ಮ ಚಿಕ್ಕಪ್ಪಮತ್ತು ತಮ್ಮನ ಹೆಸರಿನಲ್ಲಿ ಅಕ್ಕಪಕ್ಕದಲ್ಲೇ ಇದ್ದ ಒಂದು ಎಕರೆ ಜಮೀನನ್ನು ಕೇಳಿದ ತಕ್ಷಣ ಯಾವ ತಕರಾರೂ ಇಲ್ಲದೆ ನನ್ನ ಹೆಸರಿಗೆ ಮಾಡಿ ಕೊಟ್ಟುಬಿಟ್ಟರು. ನಂತರ ನಾನೇ ಬುದ್ಧಿವಂತನಂತೆ ಎರಡು ಸ್ಟೆಪ್‌ಗಳಲ್ಲಿದ್ದ ಜಮೀನನ್ನು ಜೆಸಿಬಿಯಿಂದ ಸಮತಟ್ಟು ಮಾಡಿ 60 ಸಾವಿರ ಹಣ ಪೋಲು ಮಾಡಿದ ಮೇಲೆ ಕೆಲವು ಕೃಷಿ ಅನುಭವ ಇರುವ ಗೆಳೆಯರಿಗೆ ಮತ್ತು ಕೃಷಿ ತಜ್ಞರಿಗೆ ವಿಷಯ ಹೇಳಿದೆ. ಅವರು ಹಾಗೆ ಮಾಡಬಾರದಿತ್ತು ಎತ್ತರದಲ್ಲಿದ್ದ ಮಣ್ಣನ್ನು ಕೆಳಹಂತಕ್ಕೆ ತಳ್ಳಿದಾಗ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಭೌತಿಕ ಸ್ವರೂಪ ಹಾಳು ಮಾಡದೆ ಪ್ಲ್ಯಾನ್ ಮಾಡಬೇಕಾಗಿತ್ತು ಎಂದರು. ದುಡಿಕಿಬಿಟ್ಟೆನೆ ಎನಿಸಿತು? ನಂತರ ಕೆಲವು ಗೆಳೆಯರ ಜೊತೆಗೆ ಫೋನ್‌ನಲ್ಲಿ ಮಾತನಾಡಿದ ಮೇಲೆ ಅರ್ಧ ಎಕರೆಯಲ್ಲಿ ಟಿಂಬರ್ ಬೇರಿಂಗ್, ಇನ್ನರ್ಧ ಎಕರೆಯಲ್ಲಿ ಫ್ರೂಟ್ ಬೇರಿಂಗ್, ಮನೆಗಾಗುವ ನುಗ್ಗೆ, ಕರಿಬೇವು, ಒಂದಿಷ್ಟು ಹೂವಿನ ಗಿಡಗಳನ್ನು ಹಾಕಲು ತೀರ್ಮಾನ ಮಾಡಿಕೊಂಡೆ. ಯೋಜನೆಯ ಪ್ರಕಾರ ಬಾಗಿಲಿಂದ 20 ಅಡಿಗಳನ್ನು ಬಿಟ್ಟು ಸಂಪು, ಅದರ ಪಕ್ಕ ಕಾರ್ ನಿಲ್ಲಿಸಲು ಸ್ಥಳ, 30x30 ಅಡಿಗಳ ಅಳತೆಯಲ್ಲಿ ಒಂದು ಮನೆ ಮತ್ತು ಅದರ ಪಕ್ಕದಲ್ಲಿ ಕೈತೋಟ ಪ್ಲ್ಯಾನ್ ಮಾಡಿಕೊಂಡಿದ್ದೆ. ಆದರೆ ಸಂಪು ಕಟ್ಟಲು ಬಂದ ಮೇಸ್ತ್ರಿ ಮತ್ತು ನನ್ನ ತಮ್ಮ ವಾಸ್ತು ಪ್ರಕಾರ ಕಟ್ಟಬೇಕೆಂದು ಹಠ ಹಿಡಿದು, ಜಮೀನಿನ ಮಧ್ಯದಲ್ಲಿ ಸಂಪು ತೋಡಿಸಿದರು. 10x10 ಅಡಿಗಳು ಸಂಪು ಮಾಡಿ ಅದಕ್ಕೆ 90 ಸಾವಿರ ರೂ. ಕೈಬಿಟ್ಟುಹೋಯಿತು. ಸಂಪು ನೋಡಿದವರೆಲ್ಲ ಇದ್ಯಾಕೆ ಇಷ್ಟು ದೊಡ್ಡದು ಮಾಡಿದಿರಿ? ಇದರ ಬದಲು ಮನೇನೆ ಕಟ್ಟಬಹುದಾಗಿತ್ತಲ್ಲ ಎಂದರು. ಆದರೆ ತಪ್ಪುನಡೆದುಹೋಗಿತ್ತಲ್ಲ! ಇಷ್ಟಕ್ಕೂ 100 ಗಿಡಗಳಿಗೆ ಎರಡೆರಡು ಬಕೆಟ್ ನೀರುಣಿಸಿದರೂ ಒಂದೆರಡು ಸಾವಿರ ಲೀಟರ್ ಸಾಕಾಗಿತ್ತು. ಒಂದು ಕಡೆ ಜನರ ಬದುಕನ್ನು ಹಿಂಡಿಹಿಪ್ಪೆಮಾಡಿದ ಕೊರೋನ, ಇನ್ನೊಂದು ಕಡೆ ಭೀಕರ ಚಂಡಮಾರುತಗಳ ಹಾವಳಿ. ಎರಡುಮೂರು ತಿಂಗಳಾದರೂ ಮಳೆ ನಿಲ್ಲಲೇ ಇಲ್ಲ. ಕೊನೆಗೆ ಒಂದು ದಿನ ಮಳೆ ಸ್ವಲ್ಪ ವಿಶ್ರಾಂತಿ ಕೊಟ್ಟು ಕೃಷಿ ಪದವೀಧರರೊಬ್ಬರನ್ನು ಹೊಲಕ್ಕೆ ಕರೆದುಕೊಂಡು ಬಂದು ಗುಂಡಿಗಳು ಎಷ್ಟು ಆಳ ಇರಬೇಕು ನೀವೇ ನೋಡಿಕೊಳ್ಳಿ ಎಂದಾಗ ಅವರು, 2x2 ಅಡಿಗಳು ಎಂದರು. ಜೆಸಿಬಿ ಚಾಲಕ 2x2 ಅಡಿ ಬಕೆಟ್ ನಮ್ಮಲ್ಲಿಲ್ಲ 3x3 ಅಡಿ ಬಕೆಟ್ ಮಾತ್ರ ಇದೆ ಎಂದು ಮಣ್ಣಿಗೆ ಎರಡು ಸಲ ಬಕೆಟ್ ಹಾಕಿ ಮಣ್ಣು ತೆಗೆದಿದ್ದೇ ಗುಂಡಿಗಳು ಮೂರುನಾಲ್ಕು ಅಡಿಗಳ ಆಳ ಮತ್ತು ಅಗಲವಾಗಿಬಿಟ್ಟವು. ಮತ್ತೆ ಅರ್ಧ ಮಣ್ಣನ್ನು ಗುಂಡಿಗಳಿಗೆ ತಳ್ಳಿ ಗಿಡಗಳನ್ನು ನೆಡಲಾಯಿತು. ಮತ್ತೆ ಎರಡುಮೂರು ತಿಂಗಳು ಮಳೆ ನಿಲ್ಲಲೇ ಇಲ್ಲ. ಕಡಿಮೆ ಎತ್ತರ ಇದ್ದ ಗಿಡಗಳು ನೀರಿನಲ್ಲಿ ಮುಳುಗಿ ಉಸಿರುಬಿಟ್ಟಿದ್ದವು. ಮತ್ತೆ ಇನ್ನಷ್ಟು ಗಿಡಗಳನ್ನು ತಂದು ನೆಡಲಾಯಿತು.
ಸುತ್ತಲೂ ಹೊಲಗಳು ಇರುವುದರಿಂದ ಯಾವ ರೀತಿಯ ಬೇಲಿ ಹಾಕಬೇಕು ಎನ್ನುವ ಚರ್ಚೆ ನಡೆಯಿತು. ಕೆಲವರು ಗ್ರಾನೈಟ್ ಕಲ್ಲು ಕೂಸುಗಳನ್ನು ನೆಟ್ಟು ಐದಾರು ಸಾಲು ಮುಳ್ಳುತಂತಿಗಳನ್ನು ಸುತ್ತಿದರೆ ಸಾಕೆಂದರೆ, ಕೆಲವರು ಅದರಿಂದ ಏನಾಗುತ್ತೆ, ಒಂದು ಕಂಬಿಯನ್ನು ಎಳೆದರೆ ಸಾಕು ಕುರಿ ಮೇಕೆಗಳೇನು ಮನುಷ್ಯರೇ ಆರಾಮಾಗಿ ಒಳಗೋಗಿ ಬರಬಹುದು ಎಂದರು. ಮಾಡುವುದು ಹೇಗೋ ಮಾಡಿಸ್ತೀರಿ ಡೈಮಂಡ್ ಫೆನ್ಸ್ ಹಾಕಿಬಿಡಿ ಎಂದರು. ಕಲ್ಲು ಕಡಿಯುವವರನ್ನು ಸಂರ್ಪಕಿಸಿ 9 ಅಡಿ ಎತ್ತರ 6x
6 ಇಂಚು ದಪ್ಪ ಇರುವ ಕಲ್ಲುಗಳನ್ನು ತರುವಂತೆ ಹೇಳಿ ಅವರು ಒಂದು ಜೊತೆಗೆ 750 ರೂಪಾಯಿಗಳಂತೆ ಒಪ್ಪಿಕೊಂಡರು. ಆದರೆ ಮತ್ತೆ ಎರಡು ತಿಂಗಳು ಮಳೆ ಬೀಳುತ್ತಲೇ ಇದ್ದು ಕೊನೆಗೂ ಒಂದು ಸಾಯಂಕಾಲ ಕತ್ತಲಲ್ಲಿ ಮೂರು ಲಾರಿಗಳಲ್ಲಿ ಕಲ್ಲುಗಳನ್ನು ತಂದು ಹೊಲದಲ್ಲಿ ದಬ್ಬಿದರು. ರಾತ್ರಿ ಕತ್ತಲಲ್ಲಿ ಕಲ್ಲುಗಳನ್ನು ದಬ್ಬಿಹೋದ ಅದೇ ಒಂಭತ್ತು ಜನರು ಮತ್ತೆ ಬೆಳಗ್ಗೆ ಬಂದು ಕೈಗೆ ಎಟುಕುವಷ್ಟು (ಎರಡೂವರೆ ಅಡಿ) ಗುಂಡಿಗಳನ್ನು ತೋಡಿ ಅವುಗಳನ್ನು ದೊಗ್ಗಡಬಗ್ಗಡ ನಿಲ್ಲಿಸಿ ಅಕ್ಕಪಕ್ಕ ಕಲ್ಲು/ಮಣ್ಣು ತುಂಬಿ ಗಟ್ಟಿ ಮಾಡಿದರು. ತಂದಿದ್ದ ನೂರು ಕಲ್ಲುಗಳಲ್ಲಿ ಅರ್ಧ ಕಲ್ಲುಕೂಸುಗಳಿಗೆ ತಲೆಬುಡ, ಸರಿಯಾದ ಆಕಾರವೇ ಇರಲಿಲ್ಲ. ಅದಕ್ಕಾಗಿಯೇ ಅವರು ಕಲ್ಲುಗಳನ್ನು ಕತ್ತಲಲ್ಲಿ ತಂದು ಇಳಿಸಿದ್ದರು. ಆಗಲೇ ಎರಡು ತಿಂಗಳಿಂದ ಗುದ್ದಾಡಿದ್ದ ಕಾರಣ ಯಾವುದೇ ಇರಲಿ ಎಂದುಕೊಂಡು, ಹಣ ಕೊಡಲು ಹೋದಾಗ ಮೇಸ್ತ್ರೀ ‘‘ಸಾರ್, ಇವು 750 ರೂಪಾಯಿ ಕಲ್ಲುಗಳಲ್ಲ ಸರ್. ಜೋಡಿ ಕಲ್ಲುಗಳಿಗೆ 1,200 ರೂಪಾಯಿ’’ ಎಂದ. ನನಗೆ ಒಮ್ಮೆಲೆ ಪಿತ್ತ ನೆತ್ತಿಗೆ ಏರಿ ‘‘ಮೊದಲೇ ಯಾಕೇ ಹೇಳಲಿಲ್ಲ’’ ಎಂದರೆ, ಕೂಲಾಗಿ ‘‘ಮರೆತುಬಿಟ್ಟೆ ಸರ್’’ ಎಂದ. ಕೊನೆಗೆ ಜೋಡಿಗೆ 1,000, ಅಂದರೆ 50 ಸಾವಿರ ಕೊಡುವವರೆಗೂ ಬಿಡಲೇ ಇಲ್ಲ. ಹಣ ತೆಗೆದುಕೊಂಡು ಕಂಬಿಗಳನ್ನು ಕಟ್ಟಲು ಯಾವಾಗ ಬರಲಿ ಎಂದು ಕೇಳಿದ. ನಿನ್ನ ಸಹವಾಸನೇ ಬೇಡ, ಇಲ್ಲಿಂದ ಮೊದಲು ತೊಲಗು ಎಂದು ಓಡಿಸಿದೆ. ಒಂದೆಕರೆಯ ಹೊಲದ ಉತ್ತರದಲ್ಲಿ ಪಕ್ಕದ ಹೊಲಕ್ಕೆ ಟ್ರ್ಯಾಕ್ಟರ್ ಹೋಗಲು ರಸ್ತೆ ಬೇಕೆಂದು ಕೇಳಿದ ಸಂಬಂಧಿಕರಿಗೆ ಹನ್ನೆರಡು ಅಡಿಗಳ ಉದ್ದಕ್ಕೂ ದಾರಿ ಬಿಟ್ಟುಕೊಟ್ಟೆ. ಬೇಲಿ ಕಟ್ಟಿದ ಮೇಲೆ ಇನ್ನೊಬ್ಬ ನೆಂಟ ನಾವು ಹೊಲಕ್ಕೆ ಹೋಗುವುದು ಹೇಗೆ ಎಂದು ನನ್ನ ಪತ್ನಿ ಹಳ್ಳಿಯ ಗುಡಿಗೆ (ಆತ ಆ ಗುಡಿಯ ಪೂಜಾರಿ) ಹೋಗಿದ್ದಾಗ ಜೋರಾಗಿಯೇ ಜಗಳವಾಡಿದ ವಿಷಯ ತಿಳಿಯಿತು. ಅವನಿಗೆ ದಕ್ಷಿಣದಲ್ಲಿ ನಿಲ್ಲಿಸಿದ್ದ ಕಲ್ಲುಕೂಸುಗಳನ್ನು ಉದ್ದಕ್ಕೂ ಬೀಳಿಸಿ ನಾಲ್ಕು ಅಡಿಗಳ ದಾರಿ ಬಿಟ್ಟು ಮತ್ತೆ ಕಲ್ಲುಗಳನ್ನು ಕಟ್ಟಿಸಿದೆ. ಒಂದು ಕಾಲದಲ್ಲಿ ಎತ್ತುಗಳು ಮತ್ತು ನೇಗಿಲಿಂದ ವ್ಯವಸಾಯ ಮಾಡುತ್ತಿದ್ದಾಗ ಎಲ್ಲವನ್ನೂ ಎರಡು ಹೊಲಗಳ ನಡುವಿನ ಬದುಗಳ ಮೇಲೆಯೇ ಸಾಗಿಸಲಾಗುತ್ತಿತ್ತು. ಜೊತೆಗೆ ಹಳ್ಳಿಯಲ್ಲಿ ಎಲ್ಲರ ಮಧ್ಯೆ ಜಾತಿಗಳನ್ನು ಮೀರಿದ ಒಂದು ಆರೋಗ್ಯಕರ ಸಂಬಂಧವಿತ್ತು. ಆದರೆ ಈಗ ನೇಗಿಲು, ಎತ್ತುಗಳು, ಕೃಷಿ ಸಲಕರಣೆಗಳು ಸಂಪೂರ್ಣವಾಗಿ ಮಾಯವಾಗಿ ಹೋಗಿವೆ. ಈಗ ಏನಿದ್ದರೂ ಟ್ರ್ಯಾಕ್ಟರ್‌ಗಳು ಮತ್ತು ಜೆಸಿಬಿಗಳ ಕಾಲ. ರಾಗಿ ಬೆಳೆ ಕೊಯ್ಯುವುದಕ್ಕೂ, ರಾಗಿಕಾಳು ಹೊಡೆಯುವುದಕ್ಕೂ, ಎಲ್ಲದಕ್ಕೂ ಯಂತ್ರಗಳೇ ಬಂದುಬಿಟ್ಟಿವೆ. ಹಾಗಾಗಿ ಯಾರೂ ತಮ್ಮ ಹೊಲಗಳ ಮೂಲಕ ಪಕ್ಕದ ಹೊಲಗಳಿಗೆ ಹೋಗಲು ಟ್ರ್ಯಾಕ್ಟರ್ ಮತ್ತು ಜೆಸಿಬಿಗಳಿಗೆ ದಾರಿ ಕೊಡುತ್ತಿಲ್ಲ. ಇದೇ ಕಾರಣಕ್ಕೆ ಸಣ್ಣಪುಟ್ಟ ಹಿಡುವಳಿದಾರರು ವ್ಯವಸಾಯ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ. ನಮ್ಮೂರಿನ ಕೆರೆ ಕೆಳಗಿರುವ ಗದ್ದೆಗಳಲ್ಲಿ ಈಗ ಯಾರೂ ಭತ್ತ ನಾಟಿ ಮಾಡುತ್ತಿಲ್ಲ. ಕಾರಣ, ಒಬ್ಬರು ಇನ್ನೊಬ್ಬರ ಗದ್ದೆಗೆ ಹೋಗಲು ದಾರಿ ಕೊಡುತ್ತಿಲ್ಲ. ನಾನು ಸತ್ತರೂ ಪರವಾಗಿಲ್ಲ, ಪಕ್ಕದ ಹೊಲದವನು ಬದುಕಲೇಬಾರದು ಎನ್ನುವುದು ಇಂದಿನ ಹಳ್ಳಿಗಳ ನ್ಯಾಯ. ಇದರ ಜೊತೆಗೆ ಕೆರೆಗಳು ಒತ್ತುವರಿಯಾಗಿ ಹೂಳು ತುಂಬಿಕೊಂಡಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಹಳ್ಳಿಗಳನ್ನು ಜಾತಿ ರಾಜಕೀಯ, ಕುಡಿತ, ಆಧುನಿಕತೆಯ ಸೋಮಾರಿತನ ಆವರಿಸಿಕೊಂಡುಬಿಟ್ಟಿದೆ. ಇನ್ನು ಅಷ್ಟೋ ಇಷ್ಟೋ ಕೃಷಿ ಮಾಡುವವರ ಪಜೀತಿ ಹೇಳತೀರದು. ಒಂದು ದಿನ ಕಲ್ಲು-ಕಂಬಿ ಕಟ್ಟುವವರ ಜೊತೆಗೆ ಮಾತಿಗೆಳೆದು ‘‘ನಿಮಗೆ ಯಾವಾಗಲೂ ಕೆಲಸ ಸಿಗುತ್ತಾ?’’ ಕೇಳಿದೆ. ‘‘ಅಯ್ಯೋ ಸ್ವಾಮಿ ಅದರ ಮಾತು ಯಾಕೇಳ್ತೀರ? ಈ ಕೊರೋನ ಬಂದು ನಮ್ಮ ಕತೆ ಬೇಡ. ಊಟಕ್ಕೆ ಹೇಗೋ ನಡೆದೋಗುತ್ತೆ. ಸೊಸೈಟಿಯಲ್ಲಿ ಒಬ್ಬರಿಗೆ ಐದೋ ಹತ್ತೊ ಕೇಜಿ ಅಕ್ಕಿ ಕೊಡ್ತಾರೆ. ಆದರೆ ನಮಗೆ ದಿನಾ ಒಂದು ಕ್ವಾಟ್ರು ಬೇಕಲ್ಲ. ಈ ಕೊರೋನ ಕಾಲದಲ್ಲಿ ಅರವತ್ತು ಎಪ್ಪತ್ತು ರೂಪಾಯಿ ಬೆಲೆ ಇದ್ದ ಕ್ವಾಟ್ರು ಬಾಟಲು ನಾನೂರು, ಐನೂರು, ಆರುನೂರು ರೂಪಾಯಿಗೆ ತೆಕೊಂಡು ಕುಡಿದಿದ್ದೀವಿ ನೋಡಿ’’ ಎಂದರು. ‘‘ಅದೇಗೆ ನಿಮಗೆ ಸಿಗುತ್ತೆ? ಬ್ಯಾನ್ ಮಾಡಿದ್ದರಲ್ಲ?’’ ಎಂದಿದ್ದಕ್ಕೆ, ‘‘ಸ್ವಾಮಿ ರಾತ್ರಿ ಹನ್ನೆರಡು ಗಂಟೆಗೆ ಬಾರ್‌ಗಳಿಂದ ಎಲ್ಲಾ ಪ್ಯಾಕ್ ಮಾಡಿಕೊಂಡು ಹಳ್ಳಿಗೆ ತಂದುಬಿಡ್ತಾರೆ. ಆಮೇಲೆ ಅವರು ಕೇಳಿದಷ್ಟು ಹಣ ಕೊಡಬೇಕು’’ ಎಂದರು. ನಂತರ ಒಬ್ಬಾತ, ‘‘ಇಂತಹ ಕಷ್ಟದ ಕೆಲಸಗಳು ನಮ್ಮ ಪೀಳಿಗೆಗೆ ಕೊನೆ. ಮತ್ತೆ ಯಾರೂ ಮಾಡುವುದಿಲ್ಲ’’ ಎಂದ. ಕೆಲಸ ಮುಗಿದ ಮೇಲೆ ಎಲ್ಲರೂ ಮೊಬೈಲ್‌ಗಳಲ್ಲಿ ಮಾತನಾಡುತ್ತ ದ್ವಿಚಕ್ರ ವಾಹನಗಳನ್ನೇರಿ ಹೊರಟುಹೋದರು. ಇನ್ನು ಕೂಲಿಗೆ ಬರುವವರು ಕೆಲವು ಕಂಡಿಷನ್ಸ್ ಹಾಕುವುದಾಗಿ ತಿಳಿಯಿತು. ಹೆಣ್ಣಾಳಿಗೆ ಮುನ್ನೂರು/ನಾನೂರು, ಗಂಡಾಳುಗಳಿಗೆ ಐದು/ಆರು/ಏಳುನೂರು ದಿನಗೂಲಿ (ಬೇಡಿಕೆ ಮೇಲೆ). ದೂರ ಇದ್ದರೆ ಬೆಳಗ್ಗೆ 7 ಗಂಟೆಗೆ ಅವರನ್ನು ಗಾಡಿಯಲ್ಲಿ ಕೆರದುಕೊಂಡೋಗಿ ಎರಡು ಗಂಟೆಗೆಲ್ಲ ತಂದು ವಾಪಸ್ ಬಿಟ್ಟುಬಿಡಬೇಕು. ಹನ್ನೆರಡು ಗಂಟೆಗೆ ಅವರು ಹೇಳಿದ ಹೋಟೆಲ್‌ನಿಂದ ಊಟ, ಮಿನರಲ್ ವಾಟರ್ ಬಾಟಲ್ ತರಿಸಿಕೊಡಬೇಕು. ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದರೆ, ನಾಳೆ ಬರುವುದು ಗ್ಯಾರಂಟಿ ಇಲ್ಲ. ಈಗ ಹಳ್ಳಿಗಳಲ್ಲಿ ದಿನ ಕೂಲಿ ಮಾಡುವವರಿಗೆ ಇರುವಷ್ಟು ಸುಖ, ಕೃಷಿ ಮಾಡಿಸುವವರಿಗೆ ಇಲ್ಲ. ಒಂದು ಮನೆಯಲ್ಲಿ ಇಬ್ಬರೋ ಮೂವರೋ ದುಡಿಯುವವರಿದ್ದರೆ ದಿನಕ್ಕೆ ಒಂದೂ-ಒಂದೂವರೆ ಸಾವಿರ ಗ್ಯಾರಂಟಿ. ಆದರೆ ಹೆಚ್ಚಿನವರು ಈ ಹಣವನ್ನು ಮದ್ಯಕ್ಕಾಗಿ ವೆಚ್ಚಮಾಡುತ್ತಾರೆ. ಕೃಷಿ ಮಾಡಿಸುವವರ ಅದೃಷ್ಟ ಚೆನ್ನಾಗಿದ್ದರೆ ಯಾವಾಗಲೊ ಒಮ್ಮೆ ಲಾಟರಿ ಹೊಡೆಯಬಹುದು? ಇಲ್ಲವೆಂದರೆ ಬೆಳೆಗಳನ್ನು ತೋಟದಲ್ಲೇ ಬಿಟ್ಟು ಆಕಾಶದ ಕಡೆಗೆ ನೋಡುತ್ತ ನಿಂತುಕೊಳ್ಳಬೇಕು. ಸಾಲ ಮಾಡಿಕೊಂಡಿದ್ದರೆ ಅವರ ಕತೆಗಳನ್ನು ಹೇಳುವುದೇ ಬೇಡ.
ಒಂದು ತಿಂಗಳಾದ ಮೇಲೆ ಬೇರೆಯವರನ್ನು ಹಿಡಿದುಕೊಂಡು ಡೈಮಂಡ್ ಫೆನ್ಸ್ ಕಟ್ಟಿಸಿದೆ. ಇದಕ್ಕೆ ಇನ್ನೊಂದು ಕಾರಣವೆಂದರೆ ನಮ್ಮ ತೋಟದ ಅಂಚಿನಿಂದಲೇ ಪ್ರಾರಂಭವಾಗುವ ಕಾಡು-ಬೆಟ್ಟದಲ್ಲಿ ಕೋತಿ, ಜಿಂಕೆ, ಕಾಡಂದಿ, ಮೊಲ, ನವಿಲುಗಳು ವಿಪರೀತವಾಗಿದ್ದು, ನಮ್ಮೆಲ್ಲರ ಜೀವ ವಿಕಾಸದ ನೆಂಟರಾದ ಆನೆಗಳು ಸಹ ಆಗಾಗ ಬಂದು ಬೆಳೆಗಳನ್ನು ತಿಂದುಕೊಂಡು ಹೋಗುವುದನ್ನು ಕೇಳುತ್ತಿದ್ದೆ. ಮಳೆ ಚೆನ್ನಾಗಿ ಬಿದ್ದು ತಮ್ಮ ಗಿಡಗಳ ಮಧ್ಯದಲ್ಲೇ ಒಂದಷ್ಟು ಕೊತ್ತಂಬರಿ ಬೀಜ ಚೆಲ್ಲಿ ಚೆನ್ನಾಗಿ ನೆಲದ ಗಮಲನ್ನು ಗಮಗಮನೆ ಹೀರಿಕೊಂಡು ಬೆಳೆದುಕೊಂಡಿತ್ತು. ಸುತ್ತಮುತ್ತಲಿನ ಹೊಲಗಳವರು ಆ ಕಡೆಗೆ ಹೋದಾಗೆಲ್ಲ ಸ್ವಲ್ಪಸ್ವಲ್ಪಕಿತ್ತುಕೊಂಡು ಹೋಗುತ್ತಿರುವುದಾಗಿ ತಿಳಿಯಿತು. ತೋಟಕ್ಕೆ ಬಾಗಿಲು ಇನ್ನೂ ಇಟ್ಟಿರಲಿಲ್ಲ. ಒಂದು ದಿನ ಬಾಗಿಲಿಟ್ಟು ಸಮಾಧಾನದಿಂದ ಬೆಂಗಳೂರಿಗೆ ವಾಪಸ್ ಬಂದಿದ್ದೆ. ಬಂದ ಮರುದಿನವೇ ಕೋತಿಗಳು ಮತ್ತು ನವಿಲುಗಳು ಡೈಮಂಡ್ ಫೆನ್ಸ್ ಹಾರಿ ಬಂದು ಎಲ್ಲವನ್ನು ತಿಂದುಕೊಂಡು ಹೋಗಿರುವುದಾಗಿ ತಿಳಿಯಿತು. ತೋಟದಲ್ಲಿ ಎಲೆ-ಹೂವು ಕಾಯಿ-ಹಣ್ಣು ಬಿಟ್ಟ ಮೇಲೆ ಕೋತಿ, ನವಿಲು, ಹಕ್ಕಿಗಳು ಹಾರಿ ಬಂದು ತಿಂದು ಹೋಗಲಿ, ಕಾಡು ಪ್ರಾಣಿಗಳೂ ಒಂದಷ್ಟು ತಿನ್ನಲಿ. ಕಳ್ಳರೂ ಒಂದಷ್ಟು ಕದ್ದುಕೊಂಡು ಹೋಗಲಿ. ನಮಗೂ ಒಂದಷ್ಟು ಉಳಿಯದೇ ಹೋಗುತ್ತದೆಯೇ? ಎಲ್ಲವೂ ನಡೆಯಲಿ. ಎಲ್ಲರೂ ಭೂಮಿಯ ವಾರಸುದಾರರು ತಾನೇ? ಯಾವುದೂ ಏನೇ ಆಗಲಿ ನಾನಂತೂ ಹಳ್ಳಿಗೋಗಿ ತೋಟದಲ್ಲಿ ಒಂದು ಸಣ್ಣ ಮನೆ ಕಟ್ಟಿಕೊಂಡು ಪಕ್ಷಿ-ಪ್ರಾಣಿಗಳು, ಗಿಡಮರ/ಮಣ್ಣಿನ ಜೊತೆಗೆ ಕಾಲ ಕಳೆಯಲು ನಿಶ್ಚಯ ಮಾಡಿಕೊಂಡಿದ್ದೇನೆ. ನನ್ನನ್ನು ಸೃಷ್ಟಿಸಿದ ಈ ಮಣ್ಣಿಗೆ ಒಂದು ಧನ್ಯವಾದ. ನಾನೂ ಒಂದು ದಿನ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತೇನೆ ಎನ್ನುವುದೇ ಒಂದು ಸಂಭ್ರಮ.