ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನದ ಜಯಕ್ಕೆ ಸಂಭ್ರಮ ಪ್ರಕರಣ: ಬಂಧಿತ ಮೂವರು ವಿದ್ಯಾರ್ಥಿಗಳಿಗೆ ಜಾಮೀನು

Update: 2022-03-30 19:00 GMT

ಅಲಹಾಬಾದ್, ಮಾ. 30: ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಜಯಗಳಿಸಿದ ಹಿನ್ನೆಲೆಯಲ್ಲಿ ಸಂಭ್ರಮ ಆಚರಿಸಿದ ಆರೋಪದಲ್ಲಿ ಉತ್ತರಪ್ರದೇಶದ ಆಗ್ರಾ ಜಿಲ್ಲೆಯಿಂದ ಅಕ್ಟೋಬರ್‌ನಲ್ಲಿ ಬಂಧಿತರಾಗಿದ್ದ ಕಾಶ್ಮೀರದ ಮೂವರು ವಿದ್ಯಾರ್ಥಿಗಳಿಗೆ ಅಲಹಬಾದ್ ಉಚ್ಚ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ. ಅಕ್ಟೋಬರ್ 24ರಂದು ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿದ ಮೂರು ದಿನಗಳ ಬಳಿಕ ಬಿಜೆಪಿಯ ಯುವ ಘಟಕದ ನಾಯಕ ಸಲ್ಲಿಸಿದ ದೂರಿನ ಆಧಾರದಲ್ಲಿ ಅರ್ಶೀದ್ ಯೂಸುಫ್, ಇನಾಯತ್ ಅಲ್ತಾಫ್ ಶೇಖ್, ಶೌಕತ್ ಅಹ್ಮದ್ ಗನೈ ಅವರನ್ನು ಬಂಧಿಸಲಾಗಿತ್ತು.

ಕಾಶ್ಮೀರದ ಈ ಮೂವರು ವಿದ್ಯಾರ್ಥಿಗಳು ಜಮ್ಮು ಹಾಗೂ ಕಾಶ್ಮೀರದಲ್ಲಿ ಆರ್ಥಿಕ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ನೀಡುವ ಪ್ರಧಾನ ಮಂತ್ರಿ ವಿಶೇಷ ಶಿಷ್ಯವೇತನ ಯೋಜನೆಯ ಫಲಾನುಭವಿಗಳಾಗಿದ್ದರು. ಅವರು ಆಗ್ರಾದ ರಾಜಾ ಬಲ್ವಂತ್ ಸಿಂಗ್ ಎಂಜಿನಿಯರಿಂಗ್ ಟೆಕ್ನಿಕಲ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ. ಪಂದ್ಯದಲ್ಲಿ ಪಾಕಿಸ್ತಾನ ಜಯ ಗಳಿಸಿದ ಒಂದು ದಿನದ ಬಳಿಕ ತಮ್ಮ ವ್ಯಾಟ್ಸ್ ಆ್ಯಪ್‌ನಲ್ಲಿ ಆಕ್ಷೇಪಾರ್ಹ ಸ್ಟೇಟಸ್ ಹಾಕಿದ ಹಿನ್ನೆಲೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಅವರನ್ನು ಅಮಾನತುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News