ಕಳೆದು ಹೋದ ಬ್ಯಾಗ್ ಪತ್ತೆಗಾಗಿ ಇಂಡಿಗೊ ವೆಬ್‍ಸೈಟ್ ಹ್ಯಾಕ್ ಮಾಡಿದ ಪ್ರಯಾಣಿಕ !

Update: 2022-03-31 15:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು,ಮಾ.31: ತನ್ನ ಕಳೆದುಹೋಗಿದ್ದ ಲಗೇಜನ್ನು ಪತ್ತೆ ಹಚ್ಚಲು ಇಂಡಿಗೋ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್‌ನಲ್ಲಿಯ ತಾಂತ್ರಿಕ ದೌರ್ಬಲ್ಯವನ್ನು ಬಳಸಿಕೊಂಡಿದ್ದ ಪ್ರಯಾಣಿಕನೋರ್ವನ ಟ್ವಿಟರ್ ಥ್ರೆಡ್ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ನಂದನ ಕುಮಾರ್ ಕಳೆದ ರವಿವಾರ ಇಂಡಿಗೋ ವಿಮಾನದಲ್ಲಿ ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸಿದ್ದರು. ಆದರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರ ಮತ್ತು ಸಹಪ್ರಯಾಣಿಕನ ಬ್ಯಾಗ್‌ಗಳು ಅದಲುಬದಲಾಗಿದ್ದವು.

‘ನಮ್ಮಿಬ್ಬರಿಂದಲೂ ಪ್ರಾಮಾಣಿಕವಾದ ತಪ್ಪು ನಡೆದಿತ್ತು. ಅಲ್ಪ ವ್ಯತ್ಯಾಸಗಳನ್ನು ಹೊರತುಪಡಿಸಿ ಎರಡೂ ಬ್ಯಾಗ್ ಗಳು ಒಂದೇ ರೀತಿಯಾಗಿದ್ದವು’ ಎಂದು ಕುಮಾರ್ ತನ್ನ ಟ್ವಿಟರ್ ಥ್ರೆಡ್ ನಲ್ಲಿ ಬರೆದಿದ್ದಾರೆ.

ತನ್ನ ತಾಂತ್ರಿಕ ಜ್ಞಾನವನ್ನು ಬಳಸಿ ಇಂಡಿಗೋದ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಿ ಸಹಪ್ರಯಾಣಿಕನ ವಿವರಗಳನ್ನು ಪಡೆದುಕೊಂಡಿದ್ದನ್ನು ಮತ್ತು ನಂತರ ತನ್ನ ಬ್ಯಾಗ್ ಅನ್ನು ಮರಳಿ ಪಡೆದುಕೊಂಡಿದ್ದನ್ನು ಕುಮಾರ್ ವಿವರಿಸಿದ್ದಾರೆ. ವೈರಲ್ ಆಗಿರುವ ಟ್ವಿಟರ್ ಥ್ರೆಡ್ ಗೆ ಪ್ರತಿಕ್ರಿಯಿಸಿರುವ ಇಂಡಿಗೋ,ತಾನು ಡಾಟಾ ಗೋಪ್ಯತೆಗೆ ಬದ್ಧನಾಗಿದ್ದೇನೆ ಮತ್ತು ಯಾವುದೇ ಸಂದರ್ಭದಲ್ಲಿಯೂ ಕುಮಾರ್ ತನ್ನ ವೆಬ್‌ಸೈಟ್‌ ಅನ್ನು ಹ್ಯಾಕ್ ಮಾಡಿರಲಿಲ್ಲ ಎಂದು ತಿಳಿಸಿದೆ.

ತಾನು ಮನೆಗೆ ಸೇರಿದ ಬಳಿಕವೇ ತನ್ನ ಬಳಿಯಿರುವ ಬ್ಯಾಗ್ ಇನ್ನೋರ್ವ ಪ್ರಯಾಣಿಕನದು ಎನ್ನುವುದು ಗೊತ್ತಾಗಿತ್ತು. ಹಲವಾರು ಕರೆಗಳು ಮತ್ತು ಸುದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಇಂಡಿಗೋ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಲು ತನಗೆ ಸಾಧ್ಯವಾಗಿತ್ತು. ಅವರು ಸಹಪ್ರಯಾಣಿಕನೊಂದಿಗೆ ತನ್ನನ್ನು ಸಂಪರ್ಕಿಸಲು ವಿಫಲ ಯತ್ನ ನಡೆಸಿದ್ದರು. ಅವರು ಗೋಪ್ಯತೆ ಮತ್ತು ಡಾಟಾ ರಕ್ಷಣೆಯ ನೆಪ ಹೇಳಿ ಸಹಪ್ರಯಾಣಿಕನ ಸಂಪರ್ಕ ವಿವರಗಳನ್ನು ನೀಡಲು ನಿರಾಕರಿಸಿದ್ದರು ಎಂದು ಕುಮಾರ್ ತನ್ನ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಮರಳಿ ಕರೆ ಮಾಡುವುದಾಗಿ ಕಸ್ಟಮರ್ ಕೇರ್ ಏಜೆಂಟ್ ತನಗೆ ಭರವಸೆ ನೀಡಿದ್ದರು,ಆದರೆ ಅವರು ಕರೆ ಮಾಡಿರಲಿಲ್ಲ. ರಾತ್ರಿಯಿಡೀ ಪರಿಹಾರ ದೊರಕದೆ ಕಳೆದಿದ್ದ ತಾನು ಬಳಿಕ ವಿಷಯವನ್ನು ತನ್ನ ಕೈಗೇ ಎತ್ತಿಕೊಳ್ಳಲು ನಿರ್ಧರಿಸಿದ್ದೆ. ಬ್ಯಾಗ್ ನ ಟ್ಯಾಗ್‌ನಲ್ಲಿ ಬರೆದಿದ್ದ ಸಹಪ್ರಯಾಣಿಕನ ಪಿಎನ್ಆರ್ ಬಳಸಿ ಆತನ ವಿವರಗಳನ್ನು ಪಡೆಯಲು ಇಂಡಿಗೋ ವೆಬ್‌ಸೈಟ್‌ ಅನ್ನು ಜಾಲಾಡಿದ್ದೆ. ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದರೂ ಫಲ ನೀಡಿರಲಿಲ್ಲ. ಅಂತಿಮವಾಗಿ ತನ್ನ ‘ಟೆಕ್ಕಿ’ ಜ್ಞಾನವನ್ನು ಬಳಸಿ ಸಹಪ್ರಯಾಣಿಕನ ಇ-ಮೇಲ್ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಪತ್ತೆ ಹಚ್ಚಲು ಸಫಲನಾಗಿದ್ದೆ. ಬಳಿಕ ತಾವಿಬ್ಬರೂ ಬ್ಯಾಗ್‌ಗಳನ್ನು ಪರಸ್ಪರ ಬದಲಿಸಿಕೊಂಡಿದ್ದೇವೆ ಎಂದು ಕುಮಾರ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News