ಕೊರೋನ ಗದ್ದಲದ ನಡುವೆ ಮಂಗನ ಕಾಯಿಲೆ ಮರೆಯದಿರೋಣ...
ಒಮ್ಮೆ ಒಂದು ಮಂಗಕ್ಕೆ ಈ ವೈರಸ್ ತಟ್ಟಿದರೆ ಕ್ರಮೇಣ ಎಲ್ಲಾ ಮಂಗಗಳಿಗೂ ಈ ಕಾಯಿಲೆ ಅಂಟಿಕೊಳ್ಳುತ್ತವೆ ಮತ್ತು ಎಲ್ಲಾ ಮಂಗಗಳು ಗುಂಪು ಗುಂಪಾಗಿ ಕಾಡಿನಲ್ಲಿ ಸಾಯುತ್ತವೆ. ಬೇಸಿಗೆ ಕಾಲದಲ್ಲಿ ಮಂಗಗಳ ದೇಹಗಳು ಬಹಳ ಬೇಗ ಕೊಳೆಯುವುದರಿಂದ ಅವುಗಳ ಕೊಳೆತ ದೇಹದಿಂದ ಪ್ರತಿರೂಪ ಪಡೆದು ಹೊರಬರುವ ವೈರಸ್‌ಗಳು ವಿವಿಧ ಮಾಧ್ಯಮಗಳ(ಇಲಿ, ಹೆಗ್ಗಣ ಇತ್ಯಾದಿ) ಮೂಲಕ ಕಾಡನ್ನು ಪ್ರವೇಶಮಾಡುವ ಜನರಿಗೆ ಹರಡುತ್ತದೆ. ಇದರಿಂದ ಅವರಿಗೆ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ.
ರಾಜ್ಯದಲ್ಲಿ ಬಿರುಬೇಸಿಗೆ ಆರಂಭವಾಗಿದೆ. ಉತ್ತರ ಕರ್ನಾಟಕದಲ್ಲಿ ನೆಲ ಬಿರಿಯುವಷ್ಟು ಬಿಸಿಲಿನ ತಾಪ. ನೆತ್ತಿ ಸುಟ್ಟುಹೋಗುವ ಸೂರ್ಯನ ಪ್ರತಾಪ. ಈ ಸಂದರ್ಭದಲ್ಲಿ ಬೇಸಿಗೆಯಲ್ಲಿ ಮಾತ್ರ ಶಿವಮೊಗ್ಗ ಮತ್ತಿತರ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಕೆ.ಎಫ್.ಡಿ. ಅಥವಾ ಮಂಗನ ಕಾಯಿಲೆ ನಿಧಾನವಾಗಿ ವರದಿಯಾಗುತ್ತಿದೆ. ಇದು ಕೇವಲ ಬೇಸಿಗೆ ಕಾಲದಲ್ಲಿ ಮಾತ್ರ ಕಾಣಿಸಿಕೊಳ್ಳುವ ಕಾಯಿಲೆ. ಕೆ.ಎಫ್. ಡಿ. ಅಂದರೆ ಕ್ಯಾಸನೂರು ಫಾರೆಸ್ಟ್ ಡಿಸೀಸಸ್. ಮಂಗಗಳಿಂದ ಮನುಷ್ಯರಿಗೆ ಹರಡುವ ಈ ಕಾಯಿಲೆ ಮೊದಲು ಕಾಣಿಸಿಕೊಂಡಿದ್ದು 1957ರಲ್ಲಿ. ಸದ್ಯ ಕಾಯಿಲೆಗೆ ಯಾವುದೇ ಒಂದು ಹೇಳಿಕೊಳ್ಳುವಂತಹ ಔಷಧಿ ಇಲ್ಲ. ಬದಲಾಗಿ ಮೂರು ಹಂತದ ಲಸಿಕೆಯನ್ನು ಪಡೆಯಬೇಕಾಗುತ್ತದೆ. ಆದರೆ ಲಸಿಕೆ ಬಹಳ ಪ್ರಮಾಣದಲ್ಲಿ ಜನಗಳಿಗೆ ಉಪಯೋಗವಾಗುತ್ತಿಲ್ಲ ಎನ್ನುವ ಆರೋಪವಿದೆ. ಮಳೆ ಸುರಿದಾಗ ಮಾತ್ರ ಈ ಕಾಯಿಲೆ ಸ್ವಲ್ಪಮಟ್ಟಿಗೆ ಮರೆಯಾಗುತ್ತದೆ ಮತ್ತು ಮಳೆ ನಿಂತ ನಂತರ ಮತ್ತೆ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕಳೆದ 50 ವರ್ಷಗಳಿಂದ ಈ ಕಾಯಿಲೆಗೆ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 1982ರಿಂದ 1984ರವರೆಗೆ ಗರಿಷ್ಠ ಪ್ರಮಾಣದಲ್ಲಿ ಅಂದರೆ ಹೆಚ್ಚುಕಮ್ಮಿ 2,700 ಪ್ರಕರಣಗಳು ಪತ್ತೆಯಾಗಿತ್ತು. ಆದರೆ ಮುಂದಿನ 16 ವರ್ಷವರೆಗೆ ಅಂದರೆ 2001 ವರೆಗೆ ಯಾವುದೇ ಪ್ರಕರಣಗಳು ಈ ಜಿಲ್ಲೆಯಲ್ಲಿ ವರದಿ ಆಗಲಿಲ್ಲ. ಆದರೆ ಮುಂದೆ 2004ರಲ್ಲಿ ಅದೇ ಜಿಲ್ಲೆಯ ಇತರ ಪ್ರದೇಶಗಳಿಗೆ ಈ ಕಾಯಿಲೆ ವ್ಯಾಪಿಸಿದಂತೆ ಕಂಡುಬಂದಿದ್ದು ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ ಪ್ರತಿವರ್ಷವೂ ಈ ಕಾಯಿಲೆ ಹೊಸ-ಹೊಸ ಪ್ರದೇಶಗಳಲ್ಲಿ ಕಂಡುಬರುತ್ತಿರುವುದು. ಐತಿಹಾಸಿಕ ದಾಖಲೆಗಳ ಪ್ರಕಾರ 1958ರಿಂದ 1980ರವರೆಗೆ ಚಿಕ್ಕಮಗಳೂರು, ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಸಹ ಮಂಗನಕಾಯಿಲೆ ಕಂಡುಬಂದಿರುವ ದಾಖಲೆಗಳಿವೆ. ಆದರೆ ಮುಂದೆೆ 1980ರಿಂದ ದಕ್ಷಿಣಕನ್ನಡದಲ್ಲಿ ಗಣನೀಯವಾಗಿ ಕಾಯಿಲೆ ಕಡಿಮೆಯಾಗಿದ್ದು ಸದ್ಯ ಈ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ. ಆದರೆ ಶಿವಮೊಗ್ಗದ ವಿವಿಧ ತಾಲೂಕುಗಳಲ್ಲಿ ಭಾರೀ ಪ್ರಮಾಣದಲ್ಲಿ ಈ ಕಾಯಿಲೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಮೈಸೂರು ಮತ್ತು ಚಾಮರಾಜ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಂಗಗಳು ಸಾವಿಗೀಡಾಗಿ ಅದು ಮಂಗನ ಕಾಯಿಲೆ ಎಂಬ ಗುಮಾನಿ ಹರಡಿತ್ತು. ಆದರೆ ವಿಜ್ಞಾನಿಗಳು ಅದು ಮಂಗನ ಕಾಯಿಲೆ ಅಲ್ಲ ಎಂದು ಅಂದು ದೃಢಪಡಿಸಿದ್ದರು.ಒಮ್ಮೆ ಪ್ರತ್ಯಕ್ಷಗೊಳ್ಳುವ ಮಂಗನಕಾಯಿಲೆ ಔಷಧ, ಲಸಿಕೆ ಮತ್ತಿತರ ಕಾರಣಗಳಿಂದ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದಾಗ ಮುಂದಿನ ಕೆಲವು ವರ್ಷ ಅದು ಕಾಣಿಸಿಕೊಳ್ಳುವುದಿಲ್ಲ. ಸ್ವಲ್ಪ ಸಮಯದ ನಂತರ ಅದು ಇನ್ನೊಂದು ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ನಿಜಕ್ಕೂ ವೈಜ್ಞಾನಿಕ ವಿಸ್ಮಯ ಎನ್ನುವುದು ಕೆಲ ವಿಜ್ಞಾನಿಗಳ ಅಭಿಪ್ರಾಯ. ಶಿವಮೊಗ್ಗದ ನರಸಿಂಹರಾಜಪುರ, ಮಂಡಗದ್ದೆ, ಅಗ್ರಹಾರ, ಗಾಂಧಿ ಗ್ರಾಮ, ವಾಜಗೋಡು, ಮುತ್ತೂರು ಹೋಬಳಿ ಇತ್ಯಾದಿ ಪ್ರದೇಶಗಳಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು ಇದುವರೆಗೆ ನೂರಾರು ಜನರು ಬಲಿಯಾಗಿದ್ದಾರೆ. 1980ರ ದಶಕದಲ್ಲಿ ಆಗುಂಬೆಯ ಎಲ್ಲಾ ಹಳ್ಳಿಗಳಲ್ಲೂ ಇದು ಕಾಣಿಸಿಕೊಂಡಿತ್ತು. ದಾಖಲೆಗಳ ಪ್ರಕಾರ ಮೊದಲು ಕರ್ನಾಟಕದ ಶಿವಮೊಗ್ಗದಲ್ಲಿ ಕಾಣಿಸಿಕೊಂಡ ಈ ಕಾಯಿಲೆ ತದನಂತರ ಕೇರಳ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿದ್ದು ವರದಿಯಾಗಿದೆ. ಆದರೆ ಬಹಳ ವಿಸ್ಮಯಕಾರಿ ವಿಚಾರ ಎಂದರೆ ಈ ರಾಜ್ಯಗಳಲ್ಲಿ ಅದು ಮತ್ತೆ ಕಾಣಿಸಿಕೊಂಡಿಲ್ಲ. ಶಿವಮೊಗ್ಗದ ಅಕ್ಕಪಕ್ಕದ ತಾಲೂಕಿನಲ್ಲಿ ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ತೀವ್ರವಾಗುತ್ತಿದೆ.
ಮಂಗನ ಕಾಯಿಲೆ ಕಾಣಿಸಿಕೊಂಡ ದಿನದಿಂದ ಇಂದಿನವರೆಗೂ ವಿಜ್ಞಾನಿಗಳು ಇದಕ್ಕೆ ಪರಿಹಾರವನ್ನು ಪಡೆಯಲು ಪ್ರಯತ್ನ ಮಾಡಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರಯತ್ನ ಕೈಗೂಡಲಿಲ್ಲ. ಇದು ಒಂದು ರೀತಿಯ ನಿಗೂಢ ಕಾಯಿಲೆಯಾಗಿ ಪರಿವರ್ತನೆ ಆಗಿದೆ. ಮುಖ್ಯವಾಗಿ ಕಾಡುಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ರೈತರಿಗೆ ಹೆಚ್ಚಾಗಿ ಮಂಗನ ಕಾಯಿಲೆ ಅಂಟಿಕೊಳ್ಳಲು ಸಾಧ್ಯತೆಗಳಿವೆ. ಇಲ್ಲಿ ಮೊದಲು ಮಂಗನ ಕಾಯಿಲೆಗೆ ಕಾರಣವಾಗುವ ವೈರಸ್ ಮಂಗನಲ್ಲಿ ಅತಿ ಜ್ವರ, ರಕ್ತಸ್ರಾವ, ಮೆದುಳಿನ ಉರಿಯೂತ ಉಂಟು ಮಾಡಿ ಕೊನೆಗೆ ಮಂಗನನ್ನು ಕೊಂದು ಹಾಕುತ್ತದೆ. ಗಮನಿಸಬೇಕಾದ ಮುಖ್ಯ ಅಂಶವೆಂದರೆ ಕಾಡಿನಲ್ಲಿ ಮಂಗಗಳು ಗುಂಪು ಗುಂಪಾಗಿ ವಾಸಿಸುತ್ತವೆ. ಈ ಕಾರಣದಿಂದ ಒಮ್ಮೆ ಒಂದು ಮಂಗಕ್ಕೆ ಈ ವೈರಸ್ ತಟ್ಟಿದರೆ ಕ್ರಮೇಣ ಎಲ್ಲಾ ಮಂಗಗಳಿಗೂ ಈ ಕಾಯಿಲೆ ಅಂಟಿಕೊಳ್ಳುತ್ತವೆ ಮತ್ತು ಎಲ್ಲಾ ಮಂಗಗಳು ಗುಂಪು ಗುಂಪಾಗಿ ಕಾಡಿನಲ್ಲಿ ಸಾಯುತ್ತವೆ. ಬೇಸಿಗೆ ಕಾಲದಲ್ಲಿ ಮಂಗಗಳ ದೇಹಗಳು ಬಹಳ ಬೇಗ ಕೊಳೆಯುವುದರಿಂದ ಅವುಗಳ ಕೊಳೆತ ದೇಹದಿಂದ ಪ್ರತಿರೂಪ ಪಡೆದು ಹೊರಬರುವ ವೈರಸ್‌ಗಳು ವಿವಿಧ ಮಾಧ್ಯಮಗಳ(ಇಲಿ, ಹೆಗ್ಗಣ ಇತ್ಯಾದಿ) ಮೂಲಕ ಕಾಡನ್ನು ಪ್ರವೇಶಮಾಡುವ ಜನರಿಗೆ ಹರಡುತ್ತದೆ. ಇದರಿಂದ ಅವರಿಗೆ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇದರ ಮುಖ್ಯ ಲಕ್ಷಣವೆಂದರೆ ಅತಿಯಾದ ಜ್ವರ ಮತ್ತು ಸಂಧಿಗಳಲ್ಲಿ ಕಾಣಿಸಿಕೊಳ್ಳುವ ವಿಪರೀತ ನೋವು. ತಕ್ಷಣ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ 8ರಿಂದ 10 ದಿನದಲ್ಲಿ ರೋಗಿಯು ಸಾವನ್ನಪ್ಪುತ್ತಾನೆ. ವೈರಸ್‌ಗಳು ಹೊಸ ಹೊಸ ಪ್ರದೇಶಗಳಿಗೆ ವ್ಯಾಪಿಸಲು ಕಾರಣವೇನು ಎಂಬುದನ್ನು ಮೊದಲು ಪತ್ತೆ ಹಚ್ಚಬೇಕಾಗಿದೆ ಮತ್ತು ವೈರಸ್‌ಗಳು ಮನುಷ್ಯನ ದೇಹವನ್ನು ತಲುಪಲು ಬೇರೆಬೇರೆ ಮಾಧ್ಯಮಗಳನ್ನು ಹೇಗೆ ವೈರಸ್ ಬಳಸಿಕೊಳ್ಳುತ್ತಿದೆ ಎನ್ನುವುದರ ಕುರಿತಾಗಿ ಹೊಸ ಹೊಸ ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕಾಗಿದೆ.
ಮೊತ್ತಮೊದಲ ಬಾರಿಗೆ ಈ ಕಾಯಿಲೆ ಕಾಣಿಸಿಕೊಂಡಾಗ ಅಂದಿನ ಭಾರತ ಸರಕಾರ ಕೆಲವು ವಿಜ್ಞಾನಿಗಳ ತಂಡವನ್ನು ಶಿವಮೊಗ್ಗಕ್ಕೆ ಕಳುಹಿಸಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ನಂತರದ ದಿನಗಳಲ್ಲಿ ಇದರ ಬಗ್ಗೆ ಯಾರೂ ಸರಿಯಾದ ಗಮನ ವಹಿಸಲಿಲ್ಲ. 1990ರ ನಂತರ ಪ್ರಾಣ ಹಾನಿ ಹೆಚ್ಚಾದಾಗ ಸರಕಾರಗಳು ಗಮನ ವಹಿಸಿ ವಿಜ್ಞಾನಿಗಳಿಂದ ಹೊಸದಾಗಿ ಸಂಶೋಧನೆ ನಡೆಸಿದವು. ನಂತರ 1998ರಲ್ಲಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯವರು ಈ ಕಾಯಿಲೆಗೆ ತಕ್ಕಮಟ್ಟಿಗೆ ಒಂದು ಲಸಿಕೆಯನ್ನು ಕಂಡುಹಿಡಿದರು. ಈ ಲಸಿಕೆಯನ್ನು ಮೂರು ಹಂತದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ.ಆದರೆ ಜನರಿಗೆ ಇದರ ಬಗ್ಗೆ ಸರಿಯಾದ ಅರಿವಿಲ್ಲ ಮತ್ತು ಅವರು ಮೂರು ಬಾರಿ ತೆಗೆದುಕೊಳ್ಳಲು ತಯಾರಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ. ಈ ಲಸಿಕೆ ಮೂಲತಃ ದುರ್ಬಲವಾಗಿತ್ತು ಮತ್ತು ಹೇಳಿಕೊಳ್ಳುವಷ್ಟು ರಕ್ಷಣೆ ಜನರಿಗೆ ಸಿಗುತ್ತಿರಲಿಲ್ಲ. ಇನ್ನು ಕೆಲವರ ಪ್ರಕಾರ ಇದರ ಸಾಮರ್ಥ್ಯ ಒಂದು ವರ್ಷಕ್ಕಿಂತಲೂ ಕಡಿಮೆ. ಅಂದರೆ ಪ್ರತಿ ವರ್ಷ ಎಲ್ಲರೂ ಈ ಲಸಿಕೆ ಪಡೆಯಬೇಕು. ಇದು ಪೋಲಿಯೊ ವ್ಯಾಕ್ಸಿನ್ ಮಾದರಿಯಲ್ಲಿ ಜೀವಮಾನಪೂರ್ತಿ ಸುರಕ್ಷತೆ ನೀಡುವುದಿಲ್ಲ. ಇನ್ನೊಂದು ಸಮಸ್ಯೆ ಏನೆಂದರೆ ಪುಣೆಯ ಈ ಸಂಸ್ಥೆಯು ಈ ಲಸಿಕೆಯನ್ನು ಬೇಕಾದಷ್ಟು ಪ್ರಮಾಣದಲ್ಲಿ ತಯಾರಿಸುತ್ತಿಲ್ಲ ಮತ್ತು ಸಾಕಷ್ಟು ಪ್ರಮಾಣದಲ್ಲಿ ನಿಗದಿತ ಸಮಯದಲ್ಲಿ ಸರಬರಾಜು ಆಗುತ್ತಿಲ್ಲ ಎನ್ನುವ ಆರೋಪವಿದೆ. ಕೆಲವರ ಪ್ರಕಾರ ಜೀವನಪೂರ್ತಿ ಸುರಕ್ಷತೆ ನೀಡುವ ಲಸಿಕೆಗಳ ಅಭಿವೃದ್ಧಿ ಮೊದಲು ಆಗಬೇಕು. ಖಾಸಗಿ ಕಂಪೆನಿಗಳು ಇದರ ಬಗ್ಗೆ ಗಮನಹರಿಸುತ್ತಿಲ್ಲ. ಏಕೆಂದರೆ ಕಂಪೆನಿಗಳಿಗೆ ಇದರಿಂದ ಯಾವುದೇ ದೊಡ್ಡಮಟ್ಟದ ಹಣಕಾಸಿನ ಲಾಭ ಇಲ್ಲ. ಕೆಲವು ಮಾಹಿತಿಗಳ ಪ್ರಕಾರ ಬೇಸಿಗೆ ಕಾಲದಲ್ಲಿ ಕಾಡಿಗೆ ಹೋಗುವಂತಹ ಪ್ರತಿ ರೈತರು ಮತ್ತು ಕಾರ್ಮಿಕರು ಕೈಕಾಲುಗಳಿಗೆ ಕೆಲವು ಔಷಧಿ ಸಸ್ಯಗಳ ರಸವನ್ನು /ಡಿಪಿಎಂ ತೈಲವನ್ನು ಉಜ್ಜಿಕೊಂಡು ಹೋಗುತ್ತಾರೆ. ಇದರಿಂದ ವೈರಸ್ ಕಚ್ಚುವುದಿಲ್ಲ ಎನ್ನುವ ನಂಬಿಕೆ ಇದೆ.ಆದರೆ ಇದು ಎಷ್ಟರಮಟ್ಟಿಗೆ ನಿಜ ಅನ್ನುವುದನ್ನು ಇನ್ನಷ್ಟೇ ವಿಜ್ಞಾನಿಗಳು ಹೇಳಬೇಕು. ಇನ್ನೊಂದು ಬಹುಮುಖ್ಯ ಅಂಶವೆಂದರೆ ಮಂಗನ ಕಾಯಿಲೆಗೆ ಜೈವಿಕ ಕಾರಣಗಳ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳ ಬಗ್ಗೆ ಇದುವರೆಗೂ ಯಾವುದೇ ರೀತಿಯ ಸಂಶೋಧನೆಗಳು ನಡೆದಿಲ್ಲ.
ಈ ಕಾಯಿಲೆ ಕಾಣಿಸಿಕೊಳ್ಳಲು ಪರಿಸರ ನಾಶ, ಅರಣ್ಯ ಒತ್ತುವರಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕೃಷಿ ಚಟುವಟಿಕೆ, ಬರಗಾಲ ಕಾರಣವಾಗಿದೆ. ಇವುಗಳ ಕುರಿತು ಹೆಚ್ಚಿನ ಸಾಮಾಜಿಕ ಅಧ್ಯಯನಗಳು ಬೇಕಾಗಿದೆ. ಅದಕ್ಕಿಂತ ಮುಖ್ಯವಾಗಿ ಈ ಕಾಯಿಲೆಯ ಕುರಿತು ಜನರ ಆರೋಗ್ಯ ವರ್ತನೆಗಳ ಕುರಿತು ಹೊಸ ಹೊಸ ದತ್ತಾಂಶಗಳು ಬೇಕಾಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಮಲೆನಾಡಿನಲ್ಲಿ ಉಂಟಾಗುತ್ತಿರುವ ಕಡಿಮೆ ಮಳೆಯ ಪ್ರಮಾಣ ಮತ್ತು ಅದಕ್ಕೆ ಪರ್ಯಾಯವಾಗಿ ಕಡಿಮೆಯಾಗುತ್ತಿರುವ ಅರಣ್ಯಗಳ ಪ್ರಮಾಣದ ಕುರಿತು ಹೊಸ ಬೆಳಕು ಚೆಲ್ಲಬೇಕಾಗಿದೆ. ಏಕೆಂದರೆ ಈ ಕಾಯಿಲೆ ಮಳೆಗಾಲದಲ್ಲಿ ಮಾತ್ರ ಕಡಿಮೆ ಇರುತ್ತದೆ, ಉಳಿದ ಕಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಂದರೆ ಮಳೆಯ ಪ್ರಮಾಣ ಕಡಿಮೆಯಾಗಿ ಕಾಡಿನ ಪ್ರಮಾಣ ಕಡಿಮೆಯಾದಷ್ಟು ಇದು ಕಾಣಿಸಿಕೊಳ್ಳುವ ಸಂಭವ ಹೆಚ್ಚು ಇರುತ್ತದೆ. ಸಾಮಾನ್ಯವಾಗಿ ಇಲ್ಲಿ ಆರೋಗ್ಯ ಇಲಾಖೆಯು ಅಕ್ಟೋಬರ್ ತಿಂಗಳಿನಿಂದಲೇ ಈ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವನ್ನು ಉಂಟುಮಾಡುವ, ಕಾಡಿಗೆ ಹೋಗುವ ಜನರು ಮೈಗೆ ಹಚ್ಚಿಕೊಳ್ಳಬೇಕಾದ ತೈಲಗಳನ್ನು ನೀಡುತ್ತದೆ ಮತ್ತು ಲಸಿಕೆಯನ್ನು ಪಡೆಯಲು ಜನರಿಗೆ ಪ್ರೇರೇಪಿಸುತ್ತದೆ.
ಈ ಎಲ್ಲಾ ಕಾರಣಗಳಿಂದ ಕಳೆದ ಎರಡು-ಮೂರು ವರ್ಷಗಳಲ್ಲಿ ಸಾವಿನ ಪ್ರಮಾಣ ಸ್ವಲ್ಪ ಕಡಿಮೆಯಾದಂತೆ ಕಾಣುತ್ತದೆ. ಈ ಕುರಿತು ಸರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ವೈರಾಣು ಸಂಶೋಧನಾ ಕೇಂದ್ರವನ್ನು ಆರಂಭಿಸುವ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ ಸಹಭಾಗಿತ್ವದಲ್ಲಿ ಹೊಸ ಸಂಶೋಧನೆ ಕೈಗೊಳ್ಳುವ ಕುರಿತು ಹೇಳಿಕೆ ನೀಡಿತ್ತು. ಹೇಳಿಕೆ ಬಿಟ್ಟರೆ ಮುಂದೆ ಯಾವುದೇ ರೀತಿಯ ಬೆಳವಣಿಗೆ ಆಗಿರುವುದು ಅನುಮಾನ. ಈಗಾಗಲೇ ಬೇಸಿಗೆ ಆರಂಭವಾಗಿರುವುದರಿಂದ ಈ ಕಾಯಿಲೆ ಕಾಣಿಸಿಕೊಳ್ಳುವುದಕ್ಕೆ ಆರಂಭವಾಗಿದೆ. ಕಾಡಿಗೆ ಹೋಗುವ ಪ್ರತಿಯೊಬ್ಬರು ಇಲಾಖೆ ನೀಡುವ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಮೈತುಂಬ ಬಟ್ಟೆ ಧರಿಸಿಯೇ ಕಾಡಿಗೆ ಹೋಗಬೇಕಾಗುತ್ತದೆ. ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಇದರಿಂದ ಅಲ್ಪಸ್ವಲ್ಪರಕ್ಷಣೆ ಸಿಗುವ ಸಾಧ್ಯತೆ ಇದ್ದೇ ಇರುತ್ತದೆ. ಈ ಕಾಯಿಲೆ ಕುರಿತು ವಿಶ್ವಮಟ್ಟದಲ್ಲಿ ಸಾಕಷ್ಟು ಸಂಶೋಧನೆ ಅಗತ್ಯವಿದೆ. ಈ ಕಾಯಿಲೆಗೆ ಜೈವಿಕ ಕಾರಣಗಳೊಂದಿಗೆ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳ ಕುರಿತು ಸಂಶೋಧನೆಗೆ ಉತ್ತೇಜನ ನೀಡಬೇಕಾಗಿದೆ. ಈ ಕಾಯಿಲೆ ಕುರಿತು ಕೆಲವು ಸ್ಥಳೀಯರಲ್ಲಿ ಮೂಢನಂಬಿಕೆಗಳಿದ್ದು, ಅದರ ನಿವಾರಣೆಗೂ ಒತ್ತು ನೀಡಬೇಕಾಗಿದೆ.