ಪರಿಶಿಷ್ಟ ಉದ್ಯೋಗಿಗಳಿಗೆ ಭಡ್ತಿಯಲ್ಲಿ ಮೀಸಲಾತಿ ಕೈಬಿಟ್ಟರೆ ಸಮಸ್ಯೆಯಾಗಬಹುದು: ಸುಪ್ರೀಂಗೆ ತಿಳಿಸಿದ ಕೇಂದ್ರ

Update: 2022-04-01 12:37 GMT

ಹೊಸದಿಲ್ಲಿ: ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಸರಕಾರಿ ಉದ್ಯೋಗಿಗಳಿಗೆ ಭಡ್ತಿ ನೀಡಿಕೆಯಲ್ಲಿ ಮೀಸಲಾತಿಯನ್ನು ರದ್ದುಗೊಳಿಸುವುದು  ಉದ್ಯೋಗಿಗಳಲ್ಲಿ ಅಸಮಾಧಾನ ತರುವ ಜೊತೆಗೆ ಹಲವಾರು ಕೋರ್ಟ್ ಪ್ರಕರಣಗಳಿಗೂ ಕಾರಣವಾಗಬಹುದು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

ಪರಿಶಿಷ್ಟರಿಗೆ ಮೀಸಲಾತಿ ನೀತಿಯು ಸಂವಿಧಾನದ  ಹಾಗೂ ನ್ಯಾಯಾಲಯದ  ಮಾರ್ಗಸೂಚಿಯನುಸಾರವೇ ಇದೆ ಎಂದು ಕೇಂದ್ರ ಸರಕಾರವು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರನ್ನೊಳಗೊಂಡ ಪೀಠಕ್ಕೆ ಸಲ್ಲಿಸಲಾದ ಅಫಿಡವಿಟ್‍ನಲ್ಲಿ ತಿಳಿಸಿದೆ.

ಸರಕಾರಿ ಹುದ್ದೆಗಳಲ್ಲಿ ಪರಿಶಿಷ್ಟರ ಪ್ರಾತಿನಿಧ್ಯ ಸಾಕಷ್ಟಿಲ್ಲ ಹಾಗೂ ಅವರ ಭಡ್ತಿಗೆ ಮೀಸಲಾತಿ ಒದಗಿಸುವುದು ಯಾವುದೇ ರೀತಿಯಲ್ಲಿ ಆಡಳಿತವನ್ನು ಬಾಧಿಸದು ಎಂದು ಕೇಂದ್ರ ತನ್ನ ನೀತಿಯನ್ನು ಸಮರ್ಥಿಸಿಕೊಂಡಿದೆ.

ತನ್ನ 75 ಸಚಿವಾಲಯಗಳು ಮತ್ತು ಇಲಾಖೆಗಳ ಅಂಕಿಅಂಶ ಒದಗಿಸಿದ ಕೇಂದ್ರ ಒಟ್ಟು 27,55,430 ಉದ್ಯೋಗಿಗಳ ಪೈಕಿ 4,79,301 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರು, 2,14,739 ಮಂದಿ ಪರಿಶಿಷ್ಟ ವರ್ಗಗಳಿಗೆ ಸೇರಿದವರು ಹಾಗೂ 4,57,148 ಮಂದಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ತಿಳಿಸಿದೆ.

ಪರಿಶಿಷ್ಟ ಜಾತಿ ಪಂಗಡಗಳಿಗೆ ಸೇರಿದ ಉದ್ಯೋಗಿಗಳಿಗೆ ಭಡ್ತಿಯಲ್ಲಿ ನೀಡಲಾಗುವ ಮೀಸಲಾತಿ ಕುರಿತಂತೆ ಅಂಕಿಅಂಶಗಳನ್ನು ಒದಗಿಸುವ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಈ ಹಿಂದೆ ಸರಕಾರಕ್ಕೆ ಸೂಚಿಸಿತ್ತು.

ಪರಿಶಿಷ್ಟ ಉದ್ಯೋಗಿಗಳಿಗೆ ಭಡ್ತಿಯಲ್ಲಿ ಮೀಸಲಾತಿ ನೀಡಿಕೆಗೆ ಯಾವುದೇ ಮಾನದಂಡಗಳನ್ನು ಸೂಚಿಸಲು ನ್ಯಾಯಾಲಯ ಜನವರಿ 28ರಂದು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News