ಕೇಜ್ರಿವಾಲ್ ನಿವಾಸದ ಮೇಲೆ ದಾಳಿ: ದಾಂಧಲೆಗಳ ಸಿಸಿಟಿವಿ ದೃಶ್ಯಾವಳಿಗಳು ನಮ್ಮ ಬಳಿಯಿವೆ ಎಂದ ದಿಲ್ಲಿ ಪೊಲೀಸ್

Update: 2022-04-01 15:25 GMT
photo pti

ಹೊಸದಿಲ್ಲಿ,ಎ.1: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಹೊರಗೆ ನಡೆದ ದಾಳಿಯನ್ನು ಅರಿವಿಗೆ ತೆಗೆದುಕೊಂಡಿದ್ದೇವೆ ಮತ್ತು ಈ ಬಗ್ಗೆ ಎಫ್ಐಆರ್ ಅನ್ನು ದಾಖಲಿಸಿದ್ದೇವೆ ಎಂದು ದಿಲ್ಲಿ ಪೊಲೀಸ್ ಇಲಾಖೆಯು ಶುಕ್ರವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
'ದಿ ಕಾಶ್ಮೀರ ಫೈಲ್ಸ್' ಕುರಿತು ಹೇಳಿಕೆಗಾಗಿ ಕಳೆದ ಬುಧವಾರ ಆಪ್ನ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ನಿವಾಸದ ಹೊರಗೆ ಪ್ರತಿಭಟನೆಯನ್ನು ನಡೆಸಿದ್ದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಅಲ್ಲಿದ್ದ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದರು.

ಕಳವಳಗಳನ್ನು ನಿವಾರಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಹಾಗೂ ಮುಖ್ಯಮಂತ್ರಿಗಳ ನಿವಾಸದ ಸುತ್ತುಮುತ್ತಲಿನ ಮತ್ತು ರಸ್ತೆಗಳಲ್ಲಿನ ಕ್ಯಾಮೆರಾಗಳಿಂದ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಎಲ್ಲ ಸಾಕ್ಷಾಧಾರಗಳನ್ನು ಸಂರಕ್ಷಿಸಲಾಗುವುದು ಎಂದು ದಿಲ್ಲಿ ಪೊಲೀಸ್ ಮತ್ತು ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ ಜೈನ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದೆ ಮತ್ತು ತನಿಖೆಯನ್ನು ನಡೆಸಲಾಗುತ್ತಿದೆ ಎಂದರು.

ಆಪ್ ಶಾಸಕ ಸೌರಭ್ ಭಾರದ್ವಾಜ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ಪ್ರಭಾರ ಮುಖ್ಯ ನ್ಯಾಯಾಧೀಶ ವಿಪಿನ್ ಸಾಂಘಿ ಮತ್ತು ನ್ಯಾ.ನವೀನ್ ಚಾವ್ಲಾ ಅವರ ಪೀಠವು, ಹಾಲಿ ನಡೆಯುತ್ತಿರುವ ತನಿಖೆಯ ಕುರಿತು ಸ್ಥಿತಿಗತಿ ವರದಿಯನ್ನು ಮೊಹರು ಮಾಡಲಾದ ಲಕೋಟೆಯಲ್ಲಿ ಸಲ್ಲಿಸಲು ದಿಲ್ಲಿ ಪೊಲೀಸರಿಗೆ ಸಮಯಾವಕಾಶವನ್ನು ನೀಡಿದರು.ದಾಳಿಯ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಅರ್ಜಿಯಲ್ಲಿ ಕೋರಿರುವ ಭಾರದ್ವಾಜ್,ವಿಧ್ವಂಸಕ ಕೃತ್ಯಗಳು ದಿಲ್ಲಿ ಪೊಲೀಸರ 'ಮೌನ ಸಹಭಾಗಿತ್ವ'ದೊಂದಿಗೆ ನಡೆದಿರುವಂತೆ ಕಂಡುಬರುತ್ತಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News