ವಿವಾದಾತ್ಮಕ ಅಪರಾಧ ಡಾಟಾ ಮಸೂದೆಗೆ ಲೋಕಸಭೆ ಒಪ್ಪಿಗೆ

Update: 2022-04-05 18:05 GMT
ಲೋಕಸಭೆ (ಫೈಲ್‌ ಫೋಟೊ)

ಹೊಸದಿಲ್ಲಿ, ಎ.5: ಪೊಲೀಸರು ಮತ್ತು ತನಿಖಾಧಿಕಾರಿಗಳು ಅಪರಾಧಿಗಳಿಂತ ಎರಡು ಹೆಜ್ಜೆ ಮುಂದಿರುವುದನ್ನು ಖಚಿತಪಡಿಸುವ ಅಪರಾಧ ಪ್ರಕ್ರಿಯಾ (ಗುರುತಿಸುವಿಕೆ) ಮಸೂದೆಯ ನಿಬಂಧನೆಗಳನ್ನು ದುರುಪಯೋಗಿಸಿಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ಗೃಹಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ತಿಳಿಸಿದರು. ಸದನವು ಸೋಮವಾರ ಮಸೂದೆಯನ್ನು ಅಂಗೀಕರಿಸಿದೆ.

ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ಶಾ,ಅದು ಅಪರಾಧಿಗಳದ್ದು ಮಾತ್ರವಲ್ಲ,ಅಪರಾಧದ ಬಲಿಪಶುಗಳ ಮಾನವ ಹಕ್ಕುಗಳನ್ನೂ ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದರು. ಮಸೂದೆಯನ್ನು ಹೆಚ್ಚಿನ ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಒಪ್ಪಿಸುವಂತೆ ಪ್ರತಿಪಕ್ಷವು ಆಗ್ರಹಿಸಿತ್ತು.
‘ಮಸೂದೆಯ ನಿಬಂಧನೆಗಳ ದುರುಪಯೋಗದ ಯಾವುದೇ ಉದ್ದೇಶ ನಮಗಿಲ್ಲ ’ ಎಂದ ಶಾ,‘ಅದು ಪೊಲೀಸರು ಅಪರಾಧಿಗಳಿಂತ ಮುಂದೆ ಇರುವಂತೆ ಮಾಡಲು ಉದ್ದೇಶಿಸಿದೆ. ಮುಂದಿನ ತಲೆಮಾರಿನ ಅಪರಾಧಗಳನ್ನು ಹಳೆಯ ತಂತ್ರಗಳೊಂದಿಗೆ ಎದುರಿಸಲು ಸಾಧ್ಯವಿಲ್ಲ,ನಾವು ಅಪರಾಧ ನ್ಯಾಯ ವ್ಯವಸ್ಥೆಯನ್ನು ಮುಂದಿನ ಯುಗಕ್ಕೆ ಕೊಂಡೊಯ್ಯಲು ಪ್ರಯತ್ನಿಸಬೇಕಿದೆ ’ ಎಂದು ಹೇಳಿದರು.

ಕರಡು ಶಾಸನದ ಸಂಭಾವ್ಯ ದುರುಪಯೋಗದ ಬಗ್ಗೆ ಪ್ರತಿಪಕ್ಷ ವ್ಯಕ್ತಪಡಿಸಿದ ಆತಂಕವನ್ನು ನಿವಾರಿಸಲು ಮುಂದಾದ ಶಾ,ರಾಜ್ಯಗಳಿಗಾಗಿ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ನಂತರ ರೂಪಿಸಲಾಗುವುದು. ದತ್ತಾಂಶಗಳ ಸುರಕ್ಷತೆಗಾಗಿ ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಲಾಗುವುದು ಮತ್ತು ಸಿಬ್ಬಂದಿಗಳಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಸೂದೆಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪ್ರತಿಪಕ್ಷ ಸಂಸದರು,ಮಸೂದೆಯ ನಿಬಂಧನೆಗಳನ್ನು ‘ಕಠೋರ ’ಎಂದು ಬಣ್ಣಿಸಿದರಲ್ಲದೆ,ಅದನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸುವಂತೆ ಆಗ್ರಹಿಸಿದರು.

ಅಪರಾಧ ವಿಷಯಗಳಲ್ಲಿ ಗುರುತಿಸುವಿಕೆ ಮತ್ತು ತನಿಖೆಗಾಗಿ ಅಪರಾಧಿಗಳು ಮತ್ತು ಇತರ ವ್ಯಕ್ತಿಗಳ ಬಯೊಮೆಟ್ರಿಕ್ ಮಾಹಿತಿಗಳನ್ನು ಪಡೆದುಕೊಳ್ಳಲು ಮತ್ತು ದಾಖಲೆಗಳನ್ನು ಸಂರಕ್ಷಿಸಲು ಮಸೂದೆಯು ಅವಕಾಶ ನೀಡುತ್ತದೆ.
ಅಪರಾಧಿಗಳು ಮತ್ತು ಮುಂಜಾಗ್ರತಾ ಬಂಧನದಲ್ಲಿರುವವರ ಶರೀರದ ಮಾಪನಗಳನ್ನು ಮತ್ತು ಬಯೊಮೆಟ್ರಿಕ್ ಮಾಹಿತಿಗಳನ್ನು ಪಡೆದುಕೊಳ್ಳಲು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಅಥವಾ ಜೈಲಿನ ಮುಖ್ಯ ವಾರ್ಡನ್ಗೆ ಅಧಿಕಾರವನ್ನು ನೀಡಿರುವ ಮಸೂದೆಯ ನಿಬಂಧನೆಗಳ ಬಗ್ಗೆ ಹಲವಾರು ಪ್ರತಿಪಕ್ಷ ಸದಸ್ಯರು ಕಳವಳಗಳನ್ನು ವ್ಯಕ್ತಪಡಿಸಿದರು.

ಮಸೂದೆಯನ್ನು ‘ಕಠೋರ ಮತ್ತು ನಾಗರಿಕ ಸ್ವಾತಂತ್ರಗಳಿಗೆ ವಿರುದ್ಧ ’ ಎಂದು ಬಣ್ಣಿಸಿದ ಕಾಂಗ್ರೆಸ್ನ ಮನೀಷ ತಿವಾರಿ ಅವರು,ಅದು ಮಾನವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರಗಳಿಗೆ ಸಂಬಂಧಿಸಿದ ಸಂವಿಧಾನದ 14,19 ಮತ್ತು 21ನೇ ವಿಧಿಗಳ ಆಶಯಕ್ಕೆ ವಿರುದ್ಧವಾಗಿದೆ. ಅದು ತಪ್ಪು ಸಾಬೀತಾಗುವವರೆಗೆ ಪ್ರತಿಯೊಬ್ಬರನ್ನೂ ಅಮಾಯಕರೆಂದು ಪರಿಗಣಿಸಬೇಕು ಎಂಬ ವ್ಯಾಪಕವಾಗಿ ಅಂಗೀಕಾರಗೊಂಡಿರುವ ಹೇಳಿಕೆಯ ವಿರುದ್ಧವೂ ಆಗಿದೆ. ಮಸೂದೆಯ ನಿಬಂಧನೆಗಳು ಅತ್ಯಂತ ವಿಶಾಲವಾಗಿವೆ ಮತ್ತು ಅಸ್ಪಷ್ಟವಾಗಿವೆ,ಇವುಗಳನ್ನು ಸರಕಾರ ಮತ್ತು ಪೊಲೀಸರು ದುರ್ಬಳಕೆ ಮಾಡಿಕೊಳ್ಳಬಹುದು ಎಂದರು.
ಮಸೂದೆಯು ಭಾರತವು ಕಣ್ಗಾವಲು ದೇಶವನ್ನಾಗಲು ಅವಕಾಶವನ್ನು ಒದಗಿಸುತ್ತದೆ ಎಂದು ತಿವಾರಿ ಹೇಳಿದರು.
ಕಾಂಗ್ರೆಸ್ನ ಕಳವಳಕ್ಕೆ ಉತ್ತರಿಸಿದ ಶಾ,ಅಪರಾಧಿಗಳ ಬಯೊಮೆಟ್ರಿಕ್ ಮಾಹಿತಿಗಳ ಸಂಗ್ರಹದ ಉದ್ದೇಶ ಹೊಂದಿರುವ ಮಸೂದೆಯ ನಿಬಂಧನೆಗಳ ಮೂಲಕ ಬ್ರೇನ್ ಮ್ಯಾಪಿಂಗ್ ನಾರ್ಕೊ ಅನಾಲಿಸಿಸ್ ಮಾಡುವ ಉದ್ದೇಶವಿಲ್ಲ ಎಂದು ತಿಳಿಸಿದರು.

ಸರಕಾರವು ಕಣ್ಗಾವಲು ದೇಶವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಡಿಎಂಕೆಯ ದಯಾನಿಧಿ ಮಾರನ್ ಅವರು,ಇದು ಮುಕ್ತವಾಗಿದೆ ಮತ್ತು ವ್ಯಕ್ತಿಗಳ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.
ಕೈದಿಗಳ ಗುರುತಿಸುವಿಕೆ ಕಾಯ್ದೆ,1920ರ ಸ್ಥಾನದಲ್ಲಿ ಹೊಸ ಕಾಯ್ದೆಯನ್ನು ತರಲು ಮಸೂದೆಯು ಉದ್ದೇಶಿಸಿದೆ,ಆದರೆ ಪ್ರಸ್ತಾವಿತ ಕಾನೂನು ಬ್ರಿಟಿಷರು ತಂದಿದ್ದ ಕಾಯ್ದೆಗಿಂತ ಕಡಿಮೆ ಸುರಕ್ಷತಾ ಅಂಶಗಳನ್ನು ಹೊಂದಿದೆ ಎಂದು ಟಿಎಂಸಿಯ ಮಹುವಾ ಮೊಯಿತ್ರಾ ಹೇಳಿದರೆ, ಶಿವಸೇನೆಯ ಸಂಸದ ವಿನಾಯಕ ರಾವುತ್ ಅವರು,ಇದು ಮಾನವತೆಯ ಮೇಲೆ ಕ್ರೂರವಾದ ತಮಾಷೆಯಾಗಿದೆ ಎಂದು ಬಣ್ಣಿಸಿದರು. ಅದು ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಅತಿಕ್ರಮಿಸುತ್ತದೆ ಮತ್ತು ದುರುಪಯೋಗವಾಗುವ ಎಲ್ಲ ಸಾಧ್ಯತೆಗಳಿವೆ ಎಂದರು.

ಮಸೂದೆಯ ದುರುಪಯೋಗವನ್ನು ತಡೆಯಲು ಬಲವಾದ ಸುರಕ್ಷತಾ ಅಂಶಗಳನ್ನು ಸೇರಿಸುವಂತೆ ಬಿಜೆಡಿ ಸದಸ್ಯ ಭರ್ತೃಹರಿ ಮಹತಾಬ್ ಹೇಳಿದರು.
ಪ್ರತಿಪಕ್ಷ ವ್ಯಕ್ತಪಡಿಸಿದ ಕಳವಳಗಳನ್ನು ಪ್ರಸ್ತಾಪಿಸಿದ ಶಾ,ಕಾನೂನು ಶಿಕ್ಷೆಯ ಪ್ರಮಾಣವು ಭಾರತಕ್ಕಿಂತ ಹೆಚ್ಚಿರುವ ಬ್ರಿಟನ್, ದ.ಆಫ್ರಿಕಾದಂತಹ ದೇಶಗಳಲ್ಲಿ ಇಂತಹ ನಿಬಂಧನೆಗಳು ಅಸ್ತಿತ್ವದಲ್ಲಿವೆ. ಡಾಟಾ ಬೇಸ್ ಅಥವಾ ದತ್ತಾಂಶ ಕೋಶದ ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ,ಇಡೀ ಜಗತ್ತೇ ದತ್ತಾಂಶ ಕೋಶವನ್ನು ಬಳಸುತ್ತಿದೆ ಎಂದರು.
 ವಾಹನಗಳ ಕಳವುಗಳು ಸೇರಿದಂತೆ ಅಪರಾಧ ಪ್ರಕರಣಗಳನ್ನು ಬಗೆಹರಿಸಲು ಎರಡೂವರೆ ವರ್ಷಗಳಿಂದ ದತ್ತಾಂಶ ಕೋಶ ಬಳಕೆಯಲ್ಲಿದೆ ಎಂದು ಶಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News