ಉಪ್ಪಿನ ಸತ್ಯಾಗ್ರಹವೆಂಬ ಚಳವಳಿಯ ರೂಪಕ
ಭಾರತದ ಇತಿಹಾಸದಲ್ಲೇ ಪ್ರಾಯಶಃ ಮೊತ್ತ ಮೊದಲು ಸರಕಾರದ ದಮನ, ಶೋಷಣೆಯ ತೆರಿಗೆ ನೀತಿ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿ ಅವರೂ ಭಾಗವಹಿಸಬಹುದಾದ ಹೋರಾಟದ ಹಾದಿಯನ್ನು ಈ ಸತ್ಯಾಗ್ರಹ ತೋರಿಸಿಕೊಟ್ಟಿತು. ಆಧುನಿಕ ಸಾರಿಗೆ, ಸಂವಹನ ವ್ಯವಸ್ಥೆ ಮತ್ತು ಶಸ್ತ್ರಾಸ್ತ್ರಗಳ ಶಕ್ತಿ ಹೊಂದಿರುವ ಪ್ರಭುತ್ವ ನಿರಾಯುಧರ ಪ್ರತಿರೋಧಕ್ಕೆ ಅಂಜುತ್ತದೆ ಎಂಬ ಸಂಗತಿಯನ್ನು ಗಾಂಧಿ ಸಶಕ್ತವಾಗಿ ಅನಾವರಣಗೊಳಿಸಿದರು.
1929ರ ಡಿಸೆಂಬರ್31ರ ನಡುರಾತ್ರಿ ಲಾಹೋರ್ ಕಾಂಗ್ರೆಸ್‌ಅಧಿವೇಶನದಲ್ಲಿ ಅಧಿವೇಶನದ ಅಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರೂ ಅವರು ತ್ರಿವರ್ಣ ಧ್ವಜವನ್ನು ಹಾರಿಸಿದ್ದಷ್ಟೇ ಅಲ್ಲ 1930ರ ಜನವರಿ 26ನೇ ತಾರೀಕನ್ನು ಭಾರತದ ಪೂರ್ಣ ಸ್ವರಾಜ್ ದಿನವನ್ನಾಗಿ ಘೋಷಿಸಿದರು. ‘‘ಸ್ವಾತಂತ್ರ್ಯವನ್ನು ಪಡೆಯುವುದು ಭಾರತೀಯರ ಹಕ್ಕು, ಬ್ರಿಟಿಷರು ಭಾರತೀಯರನ್ನು ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ನಾಶಪಡಿಸಿದ್ದಾರೆ. ಆದ್ದರಿಂದಲೇ ನಾವು ಪೂರ್ಣ ಸ್ವರಾಜ್ಯವನ್ನು ಪಡೆಯಬೇಕಿದೆ’’ ಎಂದು ನೆಹರೂ ಘೋಷಿಸಿದರು. ಇದರ ಮುಂದುವರಿಕೆಯಾಗಿ ಕಾಂಗ್ರೆಸ್‌ಕಾರ್ಯಕಾರಿಣಿಯು ನಾಗರಿಕ ಅಸಹಕಾರವನ್ನು ಸಂಘಟಿಸಲು ಗಾಂಧಿಯವರಿಗೆ ಪೂರ್ಣ ಅಧಿಕಾರ ನೀಡಿತು. ಗಾಂಧಿ ಈ ಪ್ರಕಾರ ಉಪ್ಪಿನ ತೆರಿಗೆ ಮತ್ತು ಉಪ್ಪಿನ ಮೇಲೆ ಸರಕಾರದ ಏಕಸ್ವಾಮ್ಯದ ವಿರುದ್ಧ ಚಳವಳಿಯನ್ನು ಸಂಘಟಿಸಲು ತೀರ್ಮಾನಿಸಿದರು.
ಬ್ರಿಟಿಷ್ ಸರಕಾರ 1882ರಲ್ಲಿ ಉಪ್ಪಿನ ಉತ್ಪಾದನೆ, ಮಾರಾಟದ ಏಕಸ್ವಾಮ್ಯವನ್ನು ಹೊಂದುವ ಕಾನೂನು ತಂದಿತ್ತು. ಇದರ ಪ್ರಕಾರ ಉಪ್ಪಿನ ಉತ್ಪಾದನೆ ಮಾರಾಟಗಳೆರಡೂ ಸರಕಾರದ ಅನುಮತಿ ಮತ್ತು ತೆರಿಗೆ ಸಂಗ್ರಹದ ಮೂಲಕವೇ ನಡೆಯಬೇಕಿತ್ತು. ಈ ಕಾನೂನನ್ನು ಉಲ್ಲಂಘಿಸುವುದು ಕ್ರಿಮಿನಲ್ ಅಪರಾಧವಾಗಿತ್ತು. ಭಾರತದ ಸಮದ್ರಕಿನಾರೆಗಳಲ್ಲಿ ಉಪ್ಪನ್ನು ಸಹಜವಾಗಿ ಯಥೇಚ್ಛವಾಗಿ ತಯಾರು ಮಾಡಲಾಗುತ್ತಿತ್ತು. ಆದರೆ ಭಾರತೀಯರು ಈ ಕಾನೂನಿನ ಕಾರಣಕ್ಕೆ ಬ್ರಿಟಿಷ್ ಸರಕಾರದಿಂದ ಕೊಳ್ಳಬೇಕಿತ್ತು. ಈ ಉಪ್ಪಿನ ಕಾನೂನಿನ ತೆರಿಗೆ ವ್ಯವಸ್ಥೆ ಮೂಲಕವೇ ಬ್ರಿಟಿಷ್ ಸರಕಾರದ ಸುಮಾರು ಶೇ. 8ರಷ್ಟು ತೆರಿಗೆ ಸಂಗ್ರಹವಾಗುತ್ತಿತ್ತು.
ಗಾಂಧಿ ಈ ಚಳವಳಿಯ ಪ್ರಸ್ತಾಪ ಮುಂದಿಟ್ಟಾಗ ಬಹುತೇಕ ಕಾಂಗ್ರೆಸ್ ನಾಯಕರಿಗೆ ಇದೊಂದು ಕ್ಷುಲ್ಲಕ ವಿಷಯ ಅನ್ನಿಸಿತ್ತು. ನೀರು ಮತ್ತು ಗಾಳಿ ಬಿಟ್ಟರೆ ಮನುಷ್ಯರಿಗೆ ಅತ್ಯಂತ ಅನಿವಾರ್ಯವಾಗಿರುವುದು ಉಪ್ಪುಎಂದು ಗಾಂಧಿ ಸರಳವಾಗಿ ಹೇಳಿದ್ದರು. ರಾಜಾಜಿ ಒಬ್ಬರು ಮಾತ್ರ ಗಾಂಧಿಯವರ ಒಳನೋಟವನ್ನು ಗ್ರಹಿಸಿ ಬೆರಗಾಗಿದ್ದರು.
ಮೇಲ್ನೋಟಕ್ಕೆ ಕ್ಷುಲ್ಲಕ ವಿಷಯದ ವಿರುದ್ಧದ ಹೋರಾಟ ಎನ್ನುವುದು ನೋಡ ನೋಡುತ್ತಿದ್ದಂತೆ ಬದುಕಿನ ಬಲು ಮುಖ್ಯ ಸಂಗತಿಯ ಮೇಲೆ ಕೇಂದ್ರೀಕರಿಸಿ ಬ್ರಿಟಿಷ್ ಸರಕಾರದ ಒಟ್ಟಾರೆ ದಮನ ನೀತಿಯ ವಿರುದ್ಧ ಜನರನ್ನು ಸಂಘಟಿಸುವ ಚಳವಳಿಯಾಗಿ ಹೋಯಿತು. ಗಾಂಧಿ ಈ ಪಾದಯಾತ್ರೆಯ ಚಳವಳಿಯನ್ನು ಪ್ರಕಟಸಿದಾಗಲೂ ಬ್ರಿಟಿಷ್ ಸರಕಾರ ಉದಾಸೀನ ತೋರಿತ್ತು. ಇದೇನು ನಿದ್ರೆಗೆಡಿಸುವ ಸಂಗತಿ ಅಲ್ಲ ಎಂದು ವೈಸ್‌ರಾಯ್ ಇರ್ವಿನ್ ತಾತ್ಸಾರದಲ್ಲಿ ಹೇಳಿದ್ದರು.
ಈ ಚಳವಳಿ ಜಾತಿ ಮತ ಮೀರಿದ ಎಲ್ಲರ ಅನಿವಾರ್ಯ ಬಳಕೆಯ ವಸ್ತುವಿಗೆ ಸಂಬಂಧಿಸಿದ ಕಾರಣಕ್ಕೇ ಹಿಂದೂ-ಮುಸ್ಲಿಮ್ ಭಾಗವಹಿಸುವಿಕೆಯೂ ಸಾಧ್ಯವಾಗುತ್ತದೆ ಎಂಬುದು ಗಾಂಧೀಜಿಯ ಲೆಕ್ಕಾಚಾರವಾಗಿತ್ತು.
ಫೆಬ್ರವರಿ 5ರಂದು ಈ ಸತ್ಯಾಗ್ರಹದ ಮೊದಲ ವರದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಆಮೇಲೆ ಗಾಂಧಿ ಪ್ರತಿ ದಿನ ಈ ಬಗ್ಗೆ ಮಾತಾಡುತ್ತಾ ಹೋದರು.
ಜಾಗತಿಕ ಮಾಧ್ಯಮ ಈ ಸತ್ಯಾಗ್ರಹದ ಬಗ್ಗೆ ಕುತೂಹಲ ಹುಟ್ಟುವ ಹಾಗೆ ಗಾಂಧಿ ವ್ಯವಸ್ಥಿತವಾಗಿ ಹೇಳಿಕೆ ನೀಡುತ್ತಾ ಬಂದರು. ತನ್ನನ್ನು ಬಂಧಿಸಬಹುದು ಎಂಬುದನ್ನು ಗಾಂಧಿ ಪದೇ ಪದೇ ಹೇಳುತ್ತಾ ಬಂದರು. ನಾವು ಸಾವು-ಬದುಕಿನ ಹೋರಾಟಕ್ಕೆ, ಒಂದು ಧರ್ಮಯುದ್ಧಕ್ಕೆ ಅಣಿಯಾಗುತ್ತಿದ್ದೇವೆ ಎಂಬಂತಹ ನಾಟಕೀಯ ಭಾಷೆಯನ್ನು ಗಾಂಧಿ ಬಳಸುತ್ತಾ ಹೋದರು. ಇದು ಒಂದೆಡೆಯಾದರೆ ಪಾದಯಾತ್ರೆ ಹಾದು ಹೋಗುವ ಮಾರ್ಗ, ಅಲ್ಲಿರುವ ಹಳ್ಳಿಗಳು, ಎಲ್ಲೆಲ್ಲಿ ಎಷ್ಟು ಸಮಯ ಕಳೆಯಬೇಕು ಇತ್ಯಾದಿ ಸಂಗತಿಗಳ ಬಗ್ಗೆ ಗಾಂಧಿ ವ್ಯವಸ್ಥಿತವಾಗಿ ಯೋಜನೆ ಹಾಕಿಕೊಂಡಿದ್ದರು. ಜೊತೆಗೆ ತನ್ನೊಂದಿಗೆ ಭಾಗವಹಿಸಲಿರುವ ಸತ್ಯಾಗ್ರಹಿಗಳನ್ನು ಕಾಂಗ್ರೆಸ್‌ನಿಂದ ಆರಿಸಲೇ ಇಲ್ಲ. ಆಶ್ರಮವಾಸಿಗಳ ಪೈಕಿ ಸಂಪೂರ್ಣ ಅಹಿಂಸಾತ್ಮಕ ಮಾರ್ಗದ ದೃಢತೆ ಇರುವವರೆಂದು ತನಗೇ ಖಾತ್ರಿಯಾದ 78 ಮಂದಿಯನ್ನು ಗಾಂಧಿ ಆರಿಸಿದ್ದರು.
ಹಾದು ಹೋಗುವ ದಾರಿಯ ಹಳ್ಳಿಗಳಿಗೆ ಸ್ವಯಂಸೇವಕರನ್ನೂ ಗಾಂಧಿ ಮುಂಚಿತವಾಗಿಯೇ ಕಳಿಸಿ. ಆಯಾ ಹಳ್ಳಿಗಳ ಸಾಮಾಜಿಕ ಆರ್ಥಿಕ ವಿವರಗಳನ್ನು ಸಂಗ್ರಹಿಸುವ ಸೂಚಿಯನ್ನೂ ನೀಡಿದ್ದರು. ಈ ಪಾದಯಾತ್ರೆ ನಾಲ್ಕು ಜಿಲ್ಲೆಗಳ 48 ಹಳ್ಳಿಗಳನ್ನು ಹಾದುಹೋಗಲಿತ್ತು. ಮಾರ್ಚ್ 2, ಅಂದರೆ ಸತ್ಯಾಗ್ರಹ ಆರಂಭವಾಗುವ ಹತ್ತು ದಿನ ಮೊದಲು ಗಾಂಧಿಯವರು ವೈಸ್‌ರಾಯ್ ಇರ್ವಿನ್ ಅವರಿಗೆ ಹನ್ನೊಂದು ಬೇಡಿಕೆಗಳ ಪತ್ರ ಬರೆಯುತ್ತಾರೆ. ಅವುಗಳಲ್ಲಿ ಭೂಕಂದಾಯದ ಕಡಿತ, ಮಿಲಿಟರಿ ವೆಚ್ಚದ ಕಡಿತ, ವಿದೇಶಿ ಬಟ್ಟೆಗಳ ಮೇಲೆ ತೆರಿಗೆ, ಉಪ್ಪಿನ ಮೇಲಿನ ತೆರಿಗೆ ರದ್ದತಿ ಒಳಗೊಂಡ ಬೇಡಿಕೆಗಳ ಪತ್ರ ಇದು. ಇವುಗಳಿಗೆ ಒಪ್ಪಿದರೆ ಸತ್ಯಾಗ್ರಹ ಹಿಂಪಡೆಯುವುದಾಗಿ ಗಾಂಧಿ ಹೇಳುತ್ತಾರೆ. ಈ ಪತ್ರ ನಿಮ್ಮ ಹೃದಯಕ್ಕೆ ತಾಕದಿದ್ದರೆ ಇದೇ ತಿಂಗಳ 11ರಂದು ಸತ್ಯಾಗ್ರಹ ಆರಂಭಿಸುವುದಾಗಿ ಹೇಳುತ್ತಾರೆ.
ಈ ಪತ್ರವೂ ಲೆಕ್ಕಾಚಾರದ್ದೇ. ಯಾವ ಸರಕಾರವೂ ಹತ್ತು ದಿನಗಳ ಒಳಗೆ ಮಣಿಯುವ ಮರ್ಜಿ ತೋರಿಸುವುದೇ ಇಲ್ಲ. ನಿರ್ಲಕ್ಷದ ಧೋರಣೆ ಯಾವುದೇ ಪ್ರಭುತ್ವದ ಲಕ್ಷಣ. ವೈಸ್ ರಾಯ್ ಇರ್ವಿನ್ ಈ ಪತ್ರವನ್ನು ನಿರ್ಲಕ್ಷಿಸಿದರು. ಇದಕ್ಕೇ ಕಾಯುತ್ತಿದ್ದರೋ ಎಂಬಂತೆ ಗಾಂಧಿ, ‘‘ನಾನು ಬ್ರೆಡ್ ಕೇಳಿದರೆ ನನಗೆ ಕಲ್ಲು ದಕ್ಕಿತು’’ ಎಂದು ಹೇಳಿದರು. ಗಾಂಧಿ ತೋಡಿದ ಖೆಡ್ಡಾಕ್ಕೆ ಬ್ರಿಟಿಷ್ ಸರಕಾರ ಬಿದ್ದಿದ್ದು ಹೀಗೆ!
ಸತ್ಯಾಗ್ರಹದ ಮುನ್ನಾ ದಿನದ ಪ್ರಾರ್ಥನಾ ಸಭೆಗೆ 60 ಸಾವಿರ ಮಂದಿ ನೆರೆದಿದ್ದರು! ಮಾರ್ಚ್ 12ರಂದು ಆರಂಭವಾದ ಈ ಪಾದಯಾತ್ರೆಯಲ್ಲಿ ಎಲ್ಲಾ ಜಾತಿ, ಧರ್ಮಗಳಿಗೆ ಸೇರಿದ ಸಹಪಥಿಕರಿದ್ದರು. ಯಾವ ನಾಯಕ ಬಂಧಿಸಲ್ಪಟ್ಟರೂ ಚಳವಳಿಯನ್ನು ಮುಂದುವರಿಸುವ ಬಗ್ಗೆ ಕಾರ್ಯ ನಕ್ಷೆಯೊಂದನ್ನೂ ಗಾಂಧೀಜಿ ಮುಂದಿಟ್ಟಿದ್ದರು.
ಪಾದಯಾತ್ರೆ ಆರಂಭವಾದಾಗ ಶುದ್ಧ ಶ್ವೇತ ಖಾದಿಧಾರಿಗಳ ಈ ಮೆರವಣಿಗೆಯನ್ನು ‘‘ಹರಿವ ಬಿಳಿ ನದಿ’’ ಎಂದು ಪತ್ರಿಕೆಗಳು ಬಣ್ಣಿಸಿದ್ದವು. ಈ ಪಾದಯಾತ್ರೆ ಸೂರತ್ ತಲುಪಿದಾಗ ಸುಮಾರು 30 ಸಾವಿರ ಮಂದಿ ಜೊತೆಗೂಡಿದ್ದರೆ, ಪಾದಯಾತ್ರೆ ದಂಡಿ ತಲುಪಿದಾಗ ಈ ಸಂಖ್ಯೆ 50 ಸಾವಿರ ಮೀರಿತ್ತು. ದಾರಿಯುದ್ದಕ್ಕೂ ಗಾಂಧಿ ಸಂದರ್ಶನ ನೀಡುತ್ತಿದ್ದರಲ್ಲದೆ ಸತತವಾಗಿ ಬರೆದರು.
ಎಪ್ರಿಲ್ 6ರ ಬೆಳಗ್ಗೆ ಗಾಂಧೀಜಿ ಉಪ್ಪುಬೆರೆತ ಮಣ್ಣನ್ನು ಸಮುದ್ರದ ನೀರಿಗೆ ಬೆರೆಸಿ ಕುದಿಸಿ ಒಂದಿಷ್ಟು ಉಪ್ಪುತಯಾರಿಸಿದರು. ಅಕ್ರಮ ಉಪ್ಪುಅದು!
ಕೋಲ್ಕತಾ, ಕರಾಚಿ, ಗುಜರಾತ್‌ಗಳಲ್ಲಿ ಹಿಂಸಾಚಾರಗಳೂ ನಡೆದು ಪ್ರತಿಭಟನಾಕಾರರು ಹುತಾತ್ಮರಾದ ಘಟನೆಗಳೂ ಜರುಗಿದವು. ಆದರೆ ಈ ಬಾರಿ ಗಾಂಧಿ ಈ ಹಿಂಸಾಚಾರ ಕೂಡದು ಎಂದು ಹೇಳಿಕೆ ನೀಡಿದರೂ ಚಳವಳಿಯನ್ನು ಹಿಂದೆಗೆದುಕೊಳ್ಳುವ ಮಾತಾಡಲಿಲ್ಲ. ಅಷ್ಟೇಕೆ ಹುತಾತ್ಮರಾದವರ ಹೆತ್ತವರಿಗೆ, ಅವರ ತ್ಯಾಗದ ಕುರಿತು ಕೃತಜ್ಞತೆ ಹೇಳಿದರು. ಎಪ್ರಿಲ್ 23ರಂದು ಪೇಶಾವರದಲ್ಲಿ ಖಾನ್ ಅಬ್ದುಲ್ ಗಪ್ಫಾರ್ ಖಾನ್ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯಿತು. ಅಂದಾಜು 50 ಸಾವಿರ ಸತ್ಯಾಗ್ರಹಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಲ್ಲಿ ಅಂದಾಜು 200ಕ್ಕೂ ಮಿಕ್ಕಿ ಸತ್ಯಾಗ್ರಹಿಗಳು ಸಾವನ್ನಪ್ಪಿದರು. ಬ್ರಿಟಿಷ್ ಸೈನ್ಯದ ರಾಯಲ್ ಘಡ್ ವಾಲ್ ರೈಫಲ್ಸ್‌ನ ಅಧಿಕಾರಿಯಾಗಿದ್ದ ಚಂದ್ರ ಸಿಂಗ್ ಘರ್ವಾಲಿ ಮತ್ತು ಇತರ ಸೈನಿಕರು ಈ ಜನಸ್ತೋಮದ ಮೇಲೆ ಗುಂಡುಹಾರಿಸಲು ನಿರಾಕರಿಸಿ ಜೀವಾವಧಿ ಶಿಕ್ಷೆಗೂ ಗುರಿಯಾದರು.
ಕರ್ನಾಟಕದ ಅಂಕೋಲದಲ್ಲಿ 40 ಸಾವಿರ ಜನ ಈ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಅಂದು ತಯಾರಾದ ಉಪ್ಪಿನ ಒಂದು ಮೂಟೆ 30 ರೂಪಾಯಿಗೆ ಮಾರಾಟವಾಗಿತ್ತು. ಹಳ್ಳಿ ಹಳ್ಳಿಗಳಲ್ಲಿ ಹೀಗೆ ತಯಾರಾದ ಉಪ್ಪನ್ನು ಚಿಲ್ಲರೆಯಾಗಿ ಮಾರುವ ವ್ಯವಸ್ಥೆ ಮಾಡಲಾಗಿತ್ತು. ಹಮ್ಮಣ್ಣ ಗೋವಿಂದ ನಾಯಕ, ಬೊಮ್ಮಯ್ಯ ರಾಕು ಗಾಂವ್ಕರ್, ವೀರಣ್ಣ ಬೊಮ್ಮಯ್ಯ ನಾಯಕ, ಬಸಗೋಡು ರಾಮ ನಾಯಕ್ ಮುಂತಾದವರು ಅಂಕೋಲಾ ಸತ್ಯಾಗ್ರಹದ ಮುಂಚೂಣಿಯಲ್ಲಿದ್ದರು. ಒಳ ನಾಡುಗಳಲ್ಲಿ ಸರಕಾರದ ಅರಣ್ಯ ಕಾನೂನು, ಕಂದಾಯ ಮತ್ತಿತರ ಕಾನೂನುಗಳ ವಿರುದ್ಧ ದೊಡ್ಡ ಪ್ರಮಾಣದ ಅಸಹಕಾರ ಚಳವಳಿ ನಡೆದವು. ಕರ್ನಾಟಕದಲ್ಲಿ ಅರಣ್ಯಪ್ರವೇಶ ಮಾಡುವ ಮೂಲಕ ಗ್ರಾಮಸ್ಥರು ಕಾನೂನು ಉಲ್ಲಂಘನೆ ಮಾಡಿದರೆ, ಗುಜರಾತ್‌ನಲ್ಲಿ ಭೂಕಂದಾಯ ಪಾವತಿಸಲು ಜನ ನಿರಾಕರಿಸಿದರು. ಈ ಚಳವಳಿಯಲ್ಲಿ ಮಹಿಳೆಯರು ದೊಡ್ಡ ಮಟ್ಟದಲ್ಲಿ ಭಾಗವಹಿಸಿದ್ದನ್ನು ಅಂದಿನ ಧೀರ ನಾಯಕಿ ಉಷಾ ಮೆಹ್ತಾ ಉಲ್ಲೇಖಿಸುತ್ತಾರೆ. ಸಾವಿರಾರು ಮಹಿಳೆಯರು ಬಿಂದಿಗೆಗಳಲ್ಲಿ ಸಮುದ್ರದ ನೀರುತಂದು ಮನೆಯಲ್ಲಿ ಕುದಿಸಿ ಉಪ್ಪುತಯಾರು ಮಾಡಿ ಹಂಚಿದ್ದರು. ಸ್ವತಃ ಇರ್ವಿನ್ ಈ ಮಹಿಳೆಯರ ಭಾಗವಹಿಸುವಿಕೆ ಗಂಭೀರ ಹೊಸ ಸಂಗತಿ ಎಂದು ಟಿಪ್ಪಣಿ ಹಾಕಿದರು. ಈ ಸತ್ಯಾಗ್ರಹ ಹಾದು ಹೋಗುವ ಹಳ್ಳಿಗಳ ಸಾಮಾಜಿಕ -ಆರ್ಥಿಕ ವಿವರ ಸಂಗ್ರಹದ ಸೂಚಿಯಲ್ಲಿ ಗ್ರಾಮದ ಜನಸಂಖ್ಯೆ: ಹೆಣ್ಣು ಗಂಡು/ ಧರ್ಮವಾರು ವಿವರ, ಗ್ರಾಮದ ಅಸ್ಪೃಶ್ಯರ ಸಂಖ್ಯೆ, ಶಾಲೆ, ಆರೋಗ್ಯ ವ್ಯವಸ್ಥೆ, ಶಾಲೆಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳು/ಅಸ್ಪೃಶ್ಯರ ಸಂಖ್ಯೆ, ಬಳಕೆಯಾಗುತ್ತಿರುವ ಉಪ್ಪಿನ ಪ್ರಮಾಣ, ಭೂಕಂದಾಯದ ಮೊತ್ತ, ಮಾಸಿಕ ಖಾದಿ ಮಾರಾಟ, ಚರಕಾಗಳ ಸಂಖ್ಯೆ, ಹೆಂಡದಂಗಡಿ ಇದ್ದರೆ ಅದರ ವಿವರ -ಹೀಗೆ ಸೂಚಿಗಳಿದ್ದವು. ಇವನ್ನೆಲ್ಲಾ ಸಂಗ್ರಹಿಸಿ ಇಡಬೇಕು ಎಂದು ಗಾಂಧಿ ಸ್ವಯಂಸೇವಕರಿಗೆ ಹೇಳಿದ್ದರು.
ಆಯಾ ಗ್ರಾಮಗಳನ್ನು ಪ್ರವೇಶಿಸಿದಾಗ ಗಾಂಧಿ ಈ ಪಟ್ಟಿಯ ವಿವರಗಳನ್ನಿಟ್ಟುಕೊಂಡು ಊರಿನ ಕಷ್ಟಗಳ ಬಗ್ಗೆ ಗ್ರಾಮಸ್ಥರಲ್ಲಿ ಸಂವಾದಿಸುತ್ತಿದ್ದರು. ಭಾರತದ ಇತಿಹಾಸದಲ್ಲೇ ಪ್ರಾಯಶಃ ಮೊತ್ತ ಮೊದಲು ಸರಕಾರದ ದಮನ, ಶೋಷಣೆಯ ತೆರಿಗೆ ನೀತಿ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿ ಅವರೂ ಭಾಗವಹಿಸಬಹುದಾದ ಹೋರಾಟದ ಹಾದಿಯನ್ನು ಈ ಸತ್ಯಾಗ್ರಹ ತೋರಿಸಿಕೊಟ್ಟಿತು. ಆಧುನಿಕ ಸಾರಿಗೆ, ಸಂವಹನ ವ್ಯವಸ್ಥೆ ಮತ್ತು ಶಸ್ತ್ರಾಸ್ತ್ರಗಳ ಶಕ್ತಿ ಹೊಂದಿರುವ ಪ್ರಭುತ್ವ ನಿರಾಯುಧರ ಪ್ರತಿರೋಧಕ್ಕೆ ಅಂಜುತ್ತದೆ ಎಂಬ ಸಂಗತಿಯನ್ನು ಗಾಂಧಿ ಸಶಕ್ತವಾಗಿ ಅನಾವರಣಗೊಳಿಸಿದರು. ಹಾಗೇ ಯಾವುದೇ ಚಳವಳಿ ಜನರೊಂದಿಗೆ ಸಂವಾದಿಸಬೇಕಾದ ರೀತಿ ಬಗ್ಗೆ ಮಾದರಿ ಸೂಚಿಯನ್ನು ಮುಂದಿಟ್ಟರು. ‘‘ನಿತ್ಯದ ಒದ್ದಾಟದಲ್ಲಿರುವ ಸಾಮಾನ್ಯ ಜನರು ನಾವು ಬಯಸಿದ ರೀತಿಯಲ್ಲಿ ಹೋರಾಟಕ್ಕೆ ಬೀದಿಗಿಳಿಯಲಾರರು. ಆದರೆ ಚಳವಳಿಯ ಉದ್ದೇಶವನ್ನು ಅವರೊಳಗೆ ಊರುವ ಸಂಕೇತವೊಂದನ್ನು ಮುಂದಿಟ್ಟರೆ ಅವರು ವಿಶಿಷ್ಟವಾಗಿ ಭಾಗಿಯಾಗುತ್ತಾರೆ. ಚರಕಾ ಅಂಥಾ ಒಂದು ರೂಪಕ.’’ ಎಂದು ಗಾಂಧಿ ಲೋಹಿಯಾ ಅವರಿಗೆ ಪತ್ರವೊಂದರಲ್ಲಿ ಹೇಳುತ್ತಾರೆ. ಉಪ್ಪೂಅಂಥಾ ರೂಪಕ.