ಜಮ್ಮು-ಕಾಶ್ಮೀರ 51 ಸಾವಿರ ಕೋ.ರೂ. ಹೂಡಿಕೆ ಪ್ರಸ್ತಾವ ಸ್ವೀಕರಿಸಿದೆ: ಕೇಂದ್ರ ಸರಕಾರ

Update: 2022-04-06 16:50 GMT

ಹೊಸದಿಲ್ಲಿ, ಎ. 5: ಜಮ್ಮು ಹಾಗೂ ಕಾಶ್ಮೀರ ಇದುವರೆಗೆ ಸುಮಾರು 51 ಸಾವಿರ ಕೋಟಿ ರೂಪಾಯಿ ವೌಲ್ಯದ ಹೂಡಿಕೆ ಪ್ರಸ್ತಾವವನ್ನು ಸ್ವೀಕರಿಸಿದೆ ಎಂದು ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರು ಬುಧವಾರ ರಾಜ್ಯ ಸಭೆಗೆ ಮಾಹಿತಿ ನೀಡಿದರು. ಪ್ರಶ್ನೆಯೊಂದಕ್ಕೆ ಲಿಖಿತ ಪ್ರತಿಕ್ರಿಯೆ ನೀಡಿದ ಸಚಿವರು, ಜಮ್ಮು ಹಾಗೂ ಕಾಶ್ಮೀರದಲ್ಲಿ ವಿಧಿ 370 ಹಾಗೂ ವಿಧಿ 35 ಎಯನ್ನು ರದ್ದುಗೊಳಿಸಿದ ಬಳಿಕ ಈ ಪ್ರಸ್ತಾವಗಳ ಬಗೆಗಿನ ಮಾಹಿತಿಯನ್ನು ಸಚಿವರು ಹಂಚಿಕೊಂಡರು.

ಇದಲ್ಲದೆ, ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗಾರಿಕೆ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಜಮ್ಮು ಹಾಗೂ ಕಾಶ್ಮೀರ ಸರಕಾರ ಜಮ್ಮು ಹಾಗೂ ಕಾಶ್ಮೀರ ಕೈಗಾರಿಕಾ ನೀತಿ, ಜಮ್ಮು ಹಾಗೂ ಕಾಶ್ಮೀರ ಖಾಸಗಿ ಕೈಗಾರಿಕೆ ಎಸ್ಟೇಟ್ ಅಭಿವೃದ್ಧಿ ನೀತಿ, ಜಮ್ಮು ಹಾಗೂ ಕಾಶ್ಮೀರ ಕೈಗಾರಿಕಾ ಭೂ ಹಂಚಿಕೆ ನೀತಿಯನ್ನು ಕೂಡ ಸೂಚಿಸಿದೆ ಎಂದು ರೈ ಹೇಳಿದರು.

28,400 ಕೋಟಿ ರೂಪಾಯಿ ಹಣಕಾಸು ವೆಚ್ಚ (2037ರ ವರೆಗೆ)ದೊಂದಿಗೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಕೇಂದ್ರ ಸರಕಾರ ಕೇಂದ್ರಾಡಳಿತ ಪ್ರದೇಶಗಳ ಕೈಗಾರಿಕೆ ಅಭಿವೃದ್ಧಿಗಾಗಿ ನೂತನ ಕೇಂದ್ರ ವಲಯ ಯೋಜನೆಯನ್ನು ಅಧಿ ಸೂಚಿಸಿದೆ ಎಂದು ಅವರು ಹೇಳಿದ್ದಾರೆ. ಈ ಯೋಜನೆ ನಾಲ್ಕು ಮಾದರಿಯ ಉತ್ತೇಜಕಗಳನ್ನು ನೀಡುತ್ತದೆ. ಅದು ಬಂಡವಾಳ ಹೂಡಿಕೆ ಉತ್ತೇಜಕ, ಬಂಡವಾಳ ಬಡ್ಡಿ ರಿಯಾಯತಿ, ಸರಕು ಹಾಗೂ ಸಾಗಾಟ ಸಂಪರ್ಕ ಹೊಂದಿದ ಉತ್ತೇಜಕ, ಕಾರ್ಯನಿರ್ವಹಣಾ ಬಂಡವಾಳ ಬಡ್ಡಿ ರಿಯಾಯತಿ ಎಂದು ಅವರು ತಿಳಿಸಿದರು. ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗಾರಿಕೆ ಚಟುವಟಿಕೆಗಳನ್ನು ಉತ್ತೇಜಿಸಲು ಜಮ್ಮು ಹಾಗೂ ಕಾಶ್ಮೀರಕ್ಕೆ ಸರಕಾರ ಯಾವುದಾದರೂ ಕೈಗಾರಿಕೆ ನೀತಿ ಘೋಷಿಸಲಾಗಿದೆಯೇ ಎಂಬ ಪ್ರಶ್ನೆಗೆ ರಾಯ್ ಅವರು ಈ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News