ಮೇಲ್ದರ್ಜೆಗೇರಲು ಸಿದ್ಧವಾಗಿರುವ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿಲ್ಲ ಸುಸಜ್ಜಿತ ಶವಾಗಾರ
ಪುತ್ತೂರು, ಎ.6: ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯನ್ನು ಹೊರತುಪಡಿಸಿ ದ.ಕ. ಜಿಲ್ಲೆಯ ಅತಿದೊಡ್ಡ ಸರಕಾರಿ ಆಸ್ಪತ್ರೆಯಾಗಿದೆ ಪುತ್ತೂರು ಸರಕಾರಿ ಆಸ್ಪತ್ರೆ. 100 ಬೆಡ್‌ನಿಂದ 300 ಬೆಡ್‌ನ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲು ಸಿದ್ಧಗೊಂಡಿರುವ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಿನಕ್ಕೆ 500ಕ್ಕೂ ಅಧಿಕ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈ ಆಸ್ಪತ್ರೆಯಲ್ಲಿ ಸರಿಯಾದ ಶವಾಗಾರದ ವ್ಯವಸ್ಥೆಯಿಲ್ಲದಿರುವುದರಿಂದ ಅಗತ್ಯದ ಸಂದರ್ಭದಲ್ಲಿ ಇಲ್ಲಿನ ವೈದ್ಯರು, ಸಿಬ್ಬಂದಿ ಪರದಾಡಬೇಕಾದಂತಹ ಸ್ಥಿತಿಯಿದೆ. ಅಲ್ಲದೆ ಅಪರಾಧ ಕೃತ್ಯ, ಅಪರಿಚಿತ ಶವ ಪತ್ತೆಯಾದ ವೇಳೆ ಮೃತದೇಹಗಳನ್ನು ಸಂರಕ್ಷಿಸಿಡುವ ವ್ಯವಸ್ಥೆಯೂ ತುರ್ತಾಗಿ ಆಗಬೇಕಿದೆ. ಪುತ್ತೂರು ಸರಕಾರಿ ಆಸ್ಪತ್ರೆಯು ವೆನ್ಲಾಕ್ ಹೊರತುಪಡಿಸಿದರೆ ದ.ಕ. ಜಿಲ್ಲೆಯಲ್ಲಿ ಅತೀ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತದೆ. ಕೊರೋನ ಅಬ್ಬರದ ಕಠಿಣ ಸಂದರ್ಭದಲ್ಲೂ ಈ ಆಸ್ಪತ್ರೆ ಪ್ರತಿನಿತ್ಯ ಡಯಾಲಿಸಿಸ್ ರೋಗಿಗಳಿಗೆ ಡಯಾಲಿಸಿಸ್ ವ್ಯವಸ್ಥೆ ಕಲ್ಪಿಸಿದೆಯಲ್ಲದೆ, ಕೋವಿಡ್ ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಪ್ರತೀ ದಿನ ಸರಾಸರಿ 500ಕ್ಕೂ ಮಿಕ್ಕಿದ ಹೊರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಈ ಆಸ್ಪತ್ರೆಗೆ ಪುತ್ತೂರು ಮಾತ್ರವಲ್ಲದೆ, ಹೊರ ತಾಲೂಕು ಕೇಂದ್ರಗಳಿಂದಲೂ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈ ಆಸ್ಪತ್ರೆಯಲ್ಲಿ 5 ಡಯಾಲಿಸಿಸ್ ಯಂತ್ರಗಳಿದ್ದು, ಸದ್ಯ 53 ರೋಗಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಪೈಕಿ 41 ಮಂದಿ ಕಾಯುವವರ ಪಟ್ಟಿಯಲ್ಲಿದ್ದಾರೆ. ಪಟ್ಟಿ ಬೆಳೆಯದಂತೆ ಹಾಗೂ ಮೂತ್ರಪಿಂಡ ರೋಗಿಗಳಿಗೆ ಸಕಾಲದಲ್ಲಿ ಡಯಾಲಿಸಿಸ್ ಸೌಲಭ್ಯ ಸಿಗುವಂತಾಗಲು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇನ್ನೂ 4 ಡಯಾಲಿಸಿಸ್ ಯಂತ್ರ ಅಗತ್ಯವಿದೆ ಎಂಬುದು ಸಾರ್ವಜನಿಕರ ಒತ್ತಾಯ.