ಜಗತ್ತಿನ ಬಡತನ ಮತ್ತು ಆರೋಗ್ಯ

Update: 2022-04-07 05:23 GMT

ಜಗತ್ತಿನಲ್ಲಿ ಮನುಷ್ಯ ಕಾಣಿಸಿಕೊಂಡಾಗಿನಿಂದಲೇ ತಾರತಮ್ಯ ಹುಟ್ಟಿಕೊಂಡಿದೆ. ವಿಶ್ವದಲ್ಲಿನ ಜನರ ಆರೋಗ್ಯವನ್ನು ಗಮನಿಸಿದರೆ ಕೆಲವು ಖಂಡ/ದೇಶಗಳಲ್ಲಿ ಜನರಿಗೆ ತಿನ್ನಲು ಒಂದು ಹೊತ್ತು ಆಹಾರವು ಇಲ್ಲದೆ ಬಳಲುತ್ತಿದ್ದರೆ, ಕೆಲವು ಖಂಡ/ದೇಶಗಳು ಅಪಾರ ಸವಲತ್ತುಗಳನ್ನು ಗುಡ್ಡೆ ಹಾಕಿಕೊಂಡು ಐಷಾರಾಮಿ ಬದುಕನ್ನು ನಡೆಸುತ್ತಿವೆ. ಜಗತ್ತಿನಲ್ಲಿ ಒಟ್ಟು 195 ದೇಶಗಳಿದ್ದು, ಆಫ್ರಿಕಾ 54, ಏಶ್ಯ 48, ಯುರೋಪ್ 44, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ 33, ಒಷಿಯಾನಿಯ 14 ಮತ್ತು ಉತ್ತರ ಅಮೆರಿಕದಲ್ಲಿ 2 ದೇಶಗಳಿವೆ. 2022ರ ಬ್ಲೂಮ್ಬರ್ಗ್ ಗ್ಲೋಬಲ್ ಹೆಲ್ತ್ ಇಂಡೆಕ್ಸ್: 73.21 ಮತ್ತು ಜಾಗತಿಕ ಆರೋಗ್ಯ ಭದ್ರತಾ ಸೂಚ್ಯಂಕ: 56.2ರ ಪ್ರಕಾರ ಆರೋಗ್ಯಕರ ದೇಶಗಳ ಪಟ್ಟಿಯನ್ನು ತಯಾರಿಸಲಾಗಿದೆ. ಈ ಪಟ್ಟಿಯನ್ನು ತಯಾರು ಮಾಡಲು ಪ್ರತಿ ದೇಶದ ಜನರ ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳ ನಿವಾಸಿಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ, ಅದರಲ್ಲೂ ವಿಶೇಷವಾಗಿ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ಜನರಿಗಿಂತ ಒಟ್ಟಾರೆಯಾಗಿ ಆರೋಗ್ಯಕರವಾಗಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳು ಕಡಿಮೆ ಮಾಲಿನ್ಯ ದರಗಳನ್ನು ಒಳಗೊಂಡಿದ್ದು ಉನ್ನತ ಗುಣಮಟ್ಟದ ಬದುಕನ್ನು ನೀಡುತ್ತಿವೆ; ರಸ್ತೆಗಳು ಮತ್ತು ಉಪಯುಕ್ತತೆಗಳಂತಹ ಉತ್ತಮ ಮೂಲಸೌಕರ್ಯಗಳು, ಗುಣಮಟ್ಟದ ಆರೋಗ್ಯಸೇವೆ, ಉತ್ತಮ ಶಿಕ್ಷಣ, ಉದ್ಯೋಗಗಳು, ಪೌಷ್ಟಿಕ ಆಹಾರ ಮತ್ತು ಸ್ವಚ್ಛ ನೀರು ಇತ್ಯಾದಿಯನ್ನು ಒದಗಿಸುತ್ತವೆ. ಕಾರಣ ಈ ದೇಶಗಳು ವಿಶ್ವ ಸಂತೋಷ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಮತ್ತೊಂದು ಕಡೆ ಅನಾರೋಗ್ಯಕರ ದೇಶಗಳು ಮೇಲಿನ ಪ್ರಯೋಜನಗಳಿಲ್ಲದೆ ಹಿಂದೆ ಉಳಿದುಕೊಂಡಿವೆ. ಶಿಕ್ಷಣದ ಕೊರತೆಯಿಂದ ಸಭ್ಯ ವೇತನದ ಉದ್ಯೋಗಗಳು ದೊರಕುವುದಿಲ್ಲ. ಮಾಲಿನ್ಯ ಹೆಚ್ಚಾದಂತೆ ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತವೆ. ಶುದ್ಧ ನೀರು ಮತ್ತು ಒಳ್ಳೆಯ ರಸ್ತೆಗಳು ಬಹಳ ಮುಖ್ಯ. ಈ ಅನಾರೋಗ್ಯಕರ ದೇಶಗಳ ಜನರ ಜೀವಿತಾವಧಿ ಕಡಿಮೆ ಇದ್ದು ಶಿಶುಮರಣವೂ ಹೆಚ್ಚಿದೆ. ಇದು ಒಟ್ಟು ಯಾವುದೇ ದೇಶೀಯ ಕೈಗಾರಿಕೆ, ಉತ್ಪನ್ನ(ಜಿಡಿಪಿ) ಅಥವಾ ಆರ್ಥಿಕ ಪರಿಭಾಷೆಯಲ್ಲಿ ಆರೋಗ್ಯವನ್ನು ಒಳಗೊಂಡಿರುತ್ತದೆ. 2019ರ ಶ್ರೇಯಾಂಕದ ಪ್ರಕಾರ ಸ್ಪೇನ್‌ನ ಒಟ್ಟಾರೆ ಅಂಕ 92.75 ಆಗಿದ್ದು ಅದು ವಿಶ್ವದ ಅತ್ಯಂತ ಆರೋಗ್ಯಕರ ದೇಶವಾಗಿದೆ ಎನ್ನಲಾಗಿದೆ. ಸ್ಪೇನ್ ದೇಶದ ಜನರ ಸರಾಸರಿ ಜೀವಿತಾವಧಿ 83.5 ವರ್ಷಗಳು. 2040ರ ವೇಳೆಗೆ ಅದು 85.8ಕ್ಕೆ ಮುಟ್ಟುವ ನಿರೀಕ್ಷೆ ಇದೆ. ಸ್ಪೇನ್ ಜನರು ಆರೋಗ್ಯಕರ ಕೊಬ್ಬು, ದ್ವಿದಳ ಧಾನ್ಯಗಳು, ಹಣ್ಣು-ತರಕಾರಿ ಮತ್ತು ಕಡಿಮೆ ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮೆಡಿಟರೇನಿಯನ್ ಆಹಾರ ತಿನ್ನುತ್ತಾರೆ. ಸ್ಪೇನ್‌ನಲ್ಲಿ ಶೇ. 37 ಜನರು ಕಾಲು ನಡುಗೆಯಲ್ಲೇ ಕೆಲಸಕ್ಕೆ ಹೋಗಿ ಬರುತ್ತಾರೆ. ಅಮೆರಿಕದಲ್ಲಿ ಕೇವಲ ಶೇ. 6 ಜನರು ಮಾತ್ರ ಕೆಲಸಕ್ಕೆ ನಡೆದು ಹೋಗುತ್ತಾರೆ. ಸ್ಪೇನ್‌ನ ಸಾರ್ವತ್ರಿಕ ಆರೋಗ್ಯ ರಕ್ಷಣಾ ಕಾರ್ಯಕ್ರಮವು ಬಹಳ ಯಶಸ್ವಿಯಾಗಿದ್ದು ಶೇ. 45.4 ಸಾವಿನ ಪ್ರಮಾಣವನ್ನು ತಡೆಗಟ್ಟಿದೆ. ವಿಶ್ವ ಆರೋಗ್ಯ ದೇಶಗಳ ಪಟ್ಟಿಯಲ್ಲಿ ಸ್ಪೇನ್, ಇಟಲಿ, ಐಸ್‌ಲ್ಯಾಂಡ್, ಜಪಾನ್, ಸ್ವಿಟ್ಸರ್‌ಲ್ಯಾಂಡ್, ಸ್ವೀಡನ್, ಆಸ್ಟ್ರೇಲಿಯ, ಸಿಂಗಾಪುರ, ನಾರ್ವೇ ಮತ್ತು ಇಸ್ರೇಲ್ ಮೊದಲ 10 ಸ್ಥಾನಗಳನ್ನು ಪಡೆದುಕೊಂಡಿವೆ. ಇನ್ನು ಅತ್ಯಂತ ದುಃಸ್ಥಿತಿಯಲ್ಲಿರುವ ಕೊನೆಯ ಹತ್ತು ದೇಶಗಳೆಂದರೆ ಬುರುಂಡಿ, ಮಧ್ಯ ಆಫ್ರಿಕನ್ ಗಣರಾಜ್ಯ, ಕಾಂಗೋ, ಮಲಾವಿ, ನೈಜರ್, ಮೊಝಾಂಬಿಕ್, ದಕ್ಷಿಣ ಸುಡಾನ್, ಲೈಬೀರಿಯಾ, ಎರಿಟ್ರಿಯಾ ಮತ್ತು ಚಾಡ್ ದೇಶಗಳು. ಅಮೆರಿಕ 20, ಭಾರತ 103, ಪಾಕಿಸ್ಥಾನ 121 ಮತ್ತು ಆಶ್ಚರ್ಯ ಎಂಬಂತೆ ಬಾಂಗ್ಲಾ 94ರ ಸ್ಥಾನ ಪಡೆದುಕೊಂಡಿದೆ. ಅಮೆರಿಕ ಆರೋಗ್ಯಕರ ಪಟ್ಟಿಯ ಮೊದಲ 10ರ ಸ್ಥಾನದಲ್ಲಿ ಇಲ್ಲ ಎನ್ನಲಾಗಿದೆ, ಇದಕ್ಕೆ ಮುಖ್ಯವಾಗಿ ರಾಷ್ಟ್ರೀಯ ಬೊಜ್ಜು ಸಮಸ್ಯೆ ಕಾರಣವಾಗಿದೆ. ಅಂದರೆ ಅಮೆರಿಕದ ಜನರು ಹೆಚ್ಚು ಬೊಜ್ಜು ಹೊಟ್ಟೆಗಳಿಂದ ನರಳಾಡುತ್ತಿದ್ದಾರೆ. ಕೋವಿಡ್-19ರ ಸಮಯದಲ್ಲಿ ಅಮೆರಿಕ ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ ಎನ್ನುವುದು ಇನ್ನೊಂದು ತೊಡಕಾಗಿದೆ. ಲಭ್ಯವಿರುವ ಕೆಲವು ಸಂಕೀರ್ಣವಾದ ಮ್ಯಾಟ್ರಿಕ್ಸ್‌ಗಳಿಗೆ ಹೋಲಿಸಿದರೆ ಹಣದ ಸೂಚ್ಯಂಕ ಕೆಳಗಿನ ಅಂಶಗಳನ್ನು ಒಳಗೊಂಡಿದೆ ಎನ್ನುತ್ತದೆ. ಜನರ ಸರಾಸರಿ ಜೀವಿತಾವಧಿ, ಆರೋಗ್ಯ ಕಾಪಾಡಿಕೊಳ್ಳಲು ವ್ಯಯಿಸುವ ಹಣ, ವಾಯುಮಾಲಿನ್ಯ, ಸ್ಥೂಲಕಾಯದ ಪ್ರಮಾಣ, ಸುರಕ್ಷತೆ ಮತ್ತು ಸೂರ್ಯನ ಬೆಳಕಿನ ಅವಧಿ (ಪಾಶ್ಚಿಮಾತ್ಯ ದೇಶಗಳಲ್ಲಿ) ಇತ್ಯಾದಿಗಳು ಸೇರುತ್ತವೆ. ಜಗತ್ತಿನಲ್ಲಿ ಯುರೋಪ್ ಖಂಡ/ದೇಶಗಳು ಅದರಲ್ಲೂ ಉತ್ತರ ಯುರೋಪಿಯನ್ ದೇಶಗಳು ಅತ್ಯಂತ ಆರೋಗ್ಯಕರ ದೇಶಗಳಾದರೆ, ಆಫ್ರಿಕಾ ದೇಶಗಳು ಅತ್ಯಂತ ಕಳಪೆ ಆರೋಗ್ಯ ಹೊಂದಿರುವ ದೇಶಗಳಾಗಿವೆ. ಬ್ಲೂಮ್ಬರ್ಗ್ ಪಟ್ಟಿಯಲ್ಲಿ ಕೆಳಗಿನ 30 ದೇಶಗಳಲ್ಲಿ 27 ದೇಶಗಳು ಆಫ್ರಿಕನ್ ಖಂಡಕ್ಕೆ ಸೇರಿದ ದೇಶಗಳಾಗಿವೆ. ಕಾರಣ ಈ ದೇಶಗಳು ಸಬ್-ಸಹರಾದ ದೇಶಗಳಾಗಿದ್ದು ವಿಶ್ವದ ಅತ್ಯಂತ ಬಡ ರಾಷ್ಟ್ರಗಳ ನೆಲೆಯಾಗಿದೆ. ಶುದ್ಧ ನೀರು ಮತ್ತು ಪ್ರಾಥಮಿಕ ಆರೋಗ್ಯದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ಇದರ ಜೊತೆಗೆ ಈ ದೇಶಗಳು ಸಶಸ್ತ್ರ ಸಂಘರ್ಷಗಳಲ್ಲಿ ತೊಡಗಿಕೊಂಡಿದ್ದು ಆರೋಗ್ಯ ಸುಧಾರಿಸುವ ಪ್ರಯತ್ನಗಳು ಜಟಿಲಗೊಂಡಿವೆ. ಪ್ರಸ್ತುತ ಜಗತ್ತಿನಲ್ಲಿ ಸುಮಾರು ನೂರು ಕೋಟಿ ಜನರು ವಿಶ್ವಬ್ಯಾಂಕ್‌ನ ಬಡತನ ರೇಖೆಗಿಂತ ಕೆಳಗೆ (1.90 ಡಾಲರ್) ಬದುಕು ನಡೆಸುತ್ತಿದ್ದಾರೆ. ಜಗತ್ತಿನ ಪ್ರತಿಯೊಂದು ರಾಷ್ಟ್ರದಲ್ಲೂ ಬಡಜನರು/ಬಡತನವನ್ನು ಕಾಣಬಹುದು, ಆದರೆ ಕೆಲವು ದೇಶಗಳಲ್ಲಿ ಬಡತನವು ತೀವ್ರವಾಗಿದೆ. ಈ ರಾಷ್ಟ್ರಗಳು ವಿಶೇಷವಾಗಿ ಭೂಮಿಯ ದಕ್ಷಿಣ ಭಾಗದಲ್ಲಿರುವ ಆಫ್ರಿಕಾ ಮತ್ತು ಏಶ್ಯ ಖಂಡಗಳಿಗೆ ಸೇರಿವೆ.

ಈ ಬಡರಾಷ್ಟ್ರಗಳು ಬಹುತೇಕ ಅಂತರ್ಯುದ್ಧಗಳು ಮತ್ತು ಇತರ ರೀತಿಯ ರಾಜಕೀಯ ಅಸ್ಥಿರತೆಯಿಂದ ನರಳುತ್ತಿವೆ. ಪ್ರಸ್ತುತ ಭಾರತದ ಜನಸಂಖ್ಯೆ 140 ಕೋಟಿ ದಾಟಿದೆ. ಅಭಿವೃದ್ಧಿ ಹೊಂದುತ್ತಿರುವ ಭಾರತ ದೇಶ ಒಂದು ರೀತಿಯಲ್ಲಿ ಎಲ್ಲಾ ವಿಷಯಗಳಲ್ಲೂ ಮಧ್ಯದ ಸ್ಥಾನವನ್ನು ಪಡೆದುಕೊಂಡಿದೆ. ಭಾರತವು ಒಂದೆಡೆ ಅಮೆರಿಕದಷ್ಟೇ ಸಂತೋಷ ಮತ್ತು ಮಧ್ಯಪ್ರಾಚ್ಯ ದೇಶಗಳಂತೆ ಶ್ರೀಮಂತ ಕುಟುಂಬಗಳನ್ನು ಹೊಂದಿದ್ದರೆ ಇನ್ನೊಂದು ಕಡೆ ಒಂದುಹೊತ್ತು ಊಟಕ್ಕೂ ಗತಿ ಇಲ್ಲದೆ ಹಸಿವಿನಿಂದ ನರಳುತ್ತಿರುವ ಕೋಟ್ಯಂತರ ಜನರಿದ್ದಾರೆ. ಮಕ್ಕಳು ಮಹಿಳೆಯರು ಅಪೌಷ್ಟಿಕತೆಯಿಂದ ನರಳುತ್ತಿದ್ದು ಮಕ್ಕಳು ಸಾಯುತ್ತಿವೆ. ಭಾರತ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮಗಳ ಕೇಂದ್ರವಾಗಿದೆ. ವಿಶ್ವದರ್ಜೆಯ ವಿಜ್ಞಾನಿಗಳು, ಕ್ಲಿನಿಕಲ್ ಪ್ರಯೋಗಾಲಯಗಳು ಮತ್ತು ಆಸ್ಪತ್ರೆಗಳನ್ನು ಹೊಂದಿದ್ದರೂ ಅಪೌಷ್ಟಿಕತೆ ಮತ್ತು ನವಜಾತ ಶಿಶುಗಳು ಮತ್ತು ತಾಯಂದಿರ ಮರಣದ ಸಂಖ್ಯೆ ಹೆಚ್ಚಾಗಿಯೇ ಇದೆ. ಸಾಂಕ್ರಾಮಿಕ, ಸಾಂಕ್ರಾಮಿಕವಲ್ಲದ ರೋಗಗಳ ಬೆಳವಣಿಗೆ ಮತ್ತು ಸಾರ್ವಜನಿಕ ಆರೋಗ್ಯ ಸಂಬಂಧಿತ ಸವಾಲುಗಳನ್ನು ಎದುರಿಸುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸುಧಾರಣೆಯನ್ನು ತರಬೇಕಿದೆ. ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ ಕನಿಷ್ಠ ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ಸಮಾನವಾಗಿ ಮತ್ತು ಉಚಿತವಾಗಿ ದೊರಕಬೇಕಿದೆ. ಜಗತ್ತಿನಲ್ಲಿ ಶೇ. 16 ಸಾವುಗಳು ಹೃದ್ರೋಗದಿಂದ ಸಂಭವಿಸುತ್ತಿದ್ದು ಮೊದಲನೇ ಸ್ಥಾನದಲ್ಲಿದೆ. ಶೇ. 11 ಪಾರ್ಶ್ವವಾಯು ಮತ್ತು ಶೇ. 6 ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳ ಸಾವುಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಉಸಿರಾಟದ ಸೋಂಕುಗಳ ಸಾಂಕ್ರಾಮಿಕ ರೋಗಗಳು 4ನೇ ಸ್ಥಾನದಲ್ಲಿವೆ. ನವಜಾತ ಶಿಶುಗಳ ಸಾವುಗಳು 5ನೇ ಸ್ಥಾನದಲ್ಲಿದ್ದು 2019ರಲ್ಲಿ 2 ದಶಲಕ್ಷ ನವಜಾತ ಶಿಶುಗಳು ಮತ್ತು ಸಣ್ಣ ಮಕ್ಕಳು ಸಾವನ್ನಪ್ಪಿವೆ.

ಸಾಂಕ್ರಾಮಿಕವಲ್ಲದ ರೋಗಗಳಿಂದ ಸಾವುಗಳು ಜಗತ್ತಿನಾದ್ಯಂತ ಹೆಚ್ಚುತ್ತಿವೆ. ಉದಾಹರಣೆಗೆ ಶ್ವಾಸನಾಳ, ಬ್ರಾಂಕಸ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಸಾವುಗಳು 1.2 ದಶಲಕ್ಷದಿಂದ 1.8 ದಶಲಕ್ಷಕ್ಕೆ ಏರಿದ್ದು ಇದು 6ನೇ ಸ್ಥಾನದಲ್ಲಿದೆ. ತಂಬಾಕು ಮತ್ತು ಧೂಮಪಾನ ಸಂಬಂಧಿತ ಕಾಯಿಲೆಗಳಿಂದ ವಾರ್ಷಿಕ ಸರಾಸರಿ 10 ಲಕ್ಷ ಜನರು ಸಾಯುತ್ತಿದ್ದಾರೆ. 2019ರಲ್ಲಿ ಅಲ್ಝೀಮರ್ಸ್ ಮತ್ತು ಇತರ ಬುದ್ಧಿಮಾಂದ್ಯತೆ ಕಾಯಿಲೆಗಳು 7ನೇ ಸ್ಥಾನದಲ್ಲಿದ್ದು ಇದರಲ್ಲಿ ಮಹಿಳೆಯರ ಸಂಖ್ಯೆ ಶೇ.65. 8ನೇ ಸ್ಥಾನದಲ್ಲಿರುವ ಅತಿಸಾರ ರೋಗಗಳ ಸಾವಿನ ಸಂಖ್ಯೆ ಕಡಿಮೆಗೊಂಡಿದ್ದು 2019ರಲ್ಲಿ 2.6 ದಶಲಕ್ಷಗಳಿದ್ದು 2000ದಲ್ಲಿ ಅದು 1.5 ದಶಲಕ್ಷಕ್ಕೆ ಇಳಿದಿದೆ. ಮಧುಮೇಹವು 2000ದಿಂದೀಚೆಗೆ ಗಂಡಸರಲ್ಲಿ ಶೇ. 70ರಷ್ಟು ಹೆಚ್ಚಿದ್ದು 9ನೇ ಸ್ಥಾನದಲ್ಲಿದೆ. ಮೂತ್ರಪಿಂಡ ಕಾಯಿಲೆ ಸಾವುಗಳು 10ನೇ ಸ್ಥಾನ ಪಡೆದುಕೊಂಡಿದೆ. ಮೊದಲ ಹತ್ತರೊಳಗೆ ಸ್ಥಾನ ಪಡೆದಿದ್ದು ಎಚ್‌ಐವಿ/ಏಡ್ಸ್ ಸಾವುಗಳು ಕಳೆದ 20 ವರ್ಷಗಳಲ್ಲಿ ಶೇ. 51ರಷ್ಟು ಕಡಿಮೆಯಾಗಿ ಹತ್ತರ ಕೆಳಗಿನ ಸ್ಥಾನಕ್ಕೆ ಇಳಿದಿದೆ. ಭಾರತದಲ್ಲಿ ಸಾವುಗಳು ಸಂಭವಿಸುವ ಮೊದಲ ಹತ್ತು ರೋಗಗಳೆಂದರೆ ಹೃದ್ರೋಗ, ದೀರ್ಘಕಾಲದ ಪ್ರತಿಬಂಧಕ ಶ್ವಾಸಕೋಶದ ಕಾಯಿಲೆ, ಅತಿಸಾರ, ಪಾರ್ಶ್ವವಾಯು, ಉಸಿರಾಟದ ಸೋಂಕುಗಳು, ಕ್ಷಯ ರೋಗ, ನವಜಾತ ಶಿಶುಗಳ ಅವಧಿಪೂರ್ವ ಜನನ, ಸ್ವಯಂ ಹಾನಿ/ಆತ್ಮಹತ್ಯೆ, ರಸ್ತೆ ಅಪಘಾತಗಳು ಮತ್ತು ಇತರ ನವಜಾತ ಶಿಶುಗಳ ಸಾವುಗಳು. ಅತಿಸಾರ ಭೇದಿಯಿಂದ 5 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ವಾರ್ಷಿಕ ಸುಮಾರ 9 ಲಕ್ಷ ಮಕ್ಕಳು ಸಾಯುತ್ತಾರೆ. ಕ್ಷಯ ರೋಗದಿಂದ ಸಾಯುವವರ ಸಂಖ್ಯೆ ವಾರ್ಷಿಕ 2,20,000 ಮತ್ತು ರಸ್ತೆ ಅಪಘಾತಗಳಲ್ಲಿ 2020ರಲ್ಲಿ ಸತ್ತವರ ಸಂಖ್ಯೆ 3,74,397. ಇನ್ನು ಜಲಮಾಲಿನ್ಯದಿಂದ ವಾರ್ಷಿಕ ಸರಾಸರಿ 1.7 ದಶಲಕ್ಷ ಜನರು ಸಾಯುತ್ತಿದ್ದಾರೆ.

Writer - ಡಾ.ಎಂ. ವೆಂಕಟಸ್ವಾಮಿ

contributor

Editor - ಡಾ.ಎಂ. ವೆಂಕಟಸ್ವಾಮಿ

contributor

Similar News