ಹೊಸೂರು: ವಾಕಿಂಗ್‌, ಸೈಕ್ಲಿಂಗ್‌ ಉತ್ತೇಜಿಸಲು ಪ್ರತಿ ರವಿವಾರ ಎರಡು ಗಂಟೆಗಳ ಕಾಲ ವಾಹನ ಸಂಚಾರ ನಿಷೇಧ

Update: 2022-04-07 13:22 GMT

ಹೊಸೂರು: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೊಲೀಸರು ಪಾದಚಾರಿಗಳನ್ನು ಮತ್ತು ಸೈಕಲ್‌ ಸವಾರರ ಮುಕ್ತ ಸಂಚಾರವನ್ನು ಉತ್ತೇಜಿಸಲು ಹೊಸೂರು ಮುನ್ಸಿಪಲ್‌ ಕಾರ್ಪೊರೇಶನ್‌ ನ ಐದು ಸ್ಥಳಗಳಲ್ಲಿ ಬೆಳಗ್ಗೆ 6 ರಿಂದ 8 ರವರೆಗೆ ವಾಹನಗಳನ್ನು ನಿಷೇಧಿಸಿದ್ದಾರೆ ಎಂದು TheNewsMinute ವರದಿ ಮಾಡಿದೆ.

ಹೊಸೂರು-ಕೋತೂರು ಜಂಕ್ಷನ್‌ನಿಂದ ಟಿವಿಎಸ್‌, ಮತ್ತಿಗಿರಿ ಜಂಕ್ಷನ್‌ನಿಂದ ಅಂತಿವಾಡಿ, ಮುತ್ತುಮಾರಿಯಮ್ಮನ ದೇವಸ್ಥಾನದಿಂದ ವೆಂಡ್ಟ್ ಇಂಡಿಯಾ, ಸಬ್ ಕಲೆಕ್ಟರ್ ಆಫೀಸ್‌ನಿಂದ ಸೆಂಟ್ರಲ್ ಅಬಕಾರಿ ಕಚೇರಿ ಮತ್ತು ಬತ್ತಲಪಲ್ಲಿ ಮಾರುಕಟ್ಟೆಯಿಂದ ಹುಡ್ಕೊ ಪೊಲೀಸ್ ಠಾಣೆ ಬಳಿಯ ಕಲಿಗಾಂಬಲ್ ದೇವಸ್ಥಾನದ ವರೆಗೆ ಐದು ಸ್ಥಳಗಳಲ್ಲಿ ವಾಹನ ಸಂಚಾರವನ್ನು ಅನುಮತಿಸಲಾಗುವುದಿಲ್ಲ. ಆದರೆ, ಆಂಬ್ಯುಲೆನ್ಸ್ ಮತ್ತು ತುರ್ತು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಯೋಗ, ವಾಕಿಂಗ್‌ ಹಾಗೂ ಸೈಕ್ಲಿಂಗ್‌ ಅನ್ನು ಉತ್ತೇಜಿಸಲು ಮುಂಬೈ ಪೊಲೀಸರು ಮುಂಬೈಯ ಆಯ್ದ ಕೆಲವೆಡೆ ಪ್ರತಿ ರವಿವಾರ 6 ರಿಂದ 10 ಗಂಟೆವರೆಗೆ ವಾಹನಗಳನ್ನು ನಿಷೇಧಿಸಿದ್ದಾರೆ. ನಾವು ಹೊಸೂರು ವ್ಯಾಪ್ತಿಯಲ್ಲಿ ಪ್ರತಿ ರವಿವಾರ 6 ರಿಂದ 8 ರ ವರೆಗೆ ವಾಹನಗಳಿಗೆ ನಿರ್ಬಂಧ ವಿಧಿಸುತ್ತೇವೆ ಎಂದು ಕೃಷ್ಣಗಿರಿ ಎಸ್‌ಪಿ ಸರೋಜ್‌ ಕುಮಾರ್‌ ಠಾಕೂರ್‌ IANS ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಹೊಸೂರಿನಲ್ಲಿ ಅಪರಾಧ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು 12 ಪೊಲೀಸ್ ಸಿಬ್ಬಂದಿ ಇರುವ ನಾಲ್ಕು ವಿಶೇಷ ತಂಡಗಳು ಗಸ್ತು ತಿರುಗಲಿದ್ದು, ಎರಡು ತಂಡಗಳು ಸಂಚಾರ ನಿರ್ವಹಣೆ ಮಾಡಲಿವೆ ಎಂದು ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News