ಮಧ್ಯ ಪ್ರದೇಶ: ಠಾಣೆಯಲ್ಲಿ 'ಪತ್ರಕರ್ತ'ನನ್ನು ವಿವಸ್ತ್ರಗೊಳಿಸಿದ ಫೋಟೋ ವೈರಲ್!

Update: 2022-04-07 15:09 GMT
Photo: Twitter

ಸಿಧಿ: ಮಧ್ಯಪ್ರದೇಶ ಬಿಜೆಪಿ ಸರ್ಕಾರವನ್ನು ಟೀಕಿಸಿದಕ್ಕಾಗಿ ಪತ್ರಕರ್ತರನ್ನು ಪೊಲೀಸ್‌ ಠಾಣೆಯಲ್ಲಿ ವಿವಸ್ತ್ರಗೊಳಿಸಲಾಗಿದೆ ಎಂಬ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್‌ ಆಗುತ್ತಿದೆ. 

ವೈರಲ್‌ ಆಗಿರುವ ಚಿತ್ರದಲ್ಲಿ ಅರೆನಗ್ನರಾಗಿರುವ ಎಂಟು ಮಂದಿ ವ್ಯಕ್ತಿಗಳಿದ್ದಾರೆ, ಈ ಘಟನೆ ಎಪ್ರಿಲ್‌ 2 ರಂದು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. 

ಈ ಎಂಟು ಮಂದಿಯಲ್ಲಿ ಒಬ್ಬರನ್ನು ಸ್ಥಳೀಯ ಪತ್ರಕರ್ತ, ಯೂಟ್ಯೂಬರ್‌ ಕಾನಿಷ್ಕ್‌ ತಿವಾರಿ ಎಂದು ಗುರತಿಸಲಾಗಿದೆ ಎಂದು TheQuint ವರದಿ ಮಾಡಿದೆ.

ಬಿಜೆಪಿ ಶಾಸಕ ಕೇದರನಾಥ್‌ ಶುಕ್ಲಾ ಹಾಗೂ ಅವರ ಮಗನ ಬಗ್ಗೆ ನಕಲಿ ಖಾತೆಯಲ್ಲಿ ಅಸಭ್ಯ ಟೀಕೆ ಮಾಡಿರುವ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ರಂಗಭೂಮಿ ಕಲಾವಿದ ನೀರಜ್‌ ಕುಂದರ್‌ ಬಗ್ಗೆ ವರದಿ ಮಾಡಲು ತಾನು ತೆರಳಿದ್ದಾಗ ಅವರೊಂದಿಗೆ ನನ್ನನ್ನೂ ವಶಕ್ಕೆ ಪಡೆದು ಪೊಲೀಸರು ಥಳಿಸಿದ್ದಾರೆ ಎಂದು ಕಾನಿಷ್ಕ್‌ ತಿವಾರಿ ಆರೋಪಿಸಿದ್ದಾರೆ ಎಂದು TheQuint ವರದಿ ಮಾಡಿದೆ. 

ನೀರಜ್ ಕುಂದರ್ ಅವರು ಸಿಧಿ ಜಿಲ್ಲೆಯ ಇಂದ್ರಾವತಿ ನಾಟ್ಯ ಸಮಿತಿಯ ನಿರ್ದೇಶಕರಾಗಿದ್ದು, ವಿಂಧ್ಯ ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಕುಂದರ್, ಅನುರಾಗ್ ಮಿಶ್ರಾ ಎಂಬ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಐಡಿಯನ್ನು ರಚಿಸಿದ್ದರು. ಆತನ ಬಂಧನದ ನಂತರ, ಕುಂದರ್ ಪೋಷಕರು ಮತ್ತು ತಿವಾರಿ ಸೇರಿದಂತೆ ಅನೇಕರು ಪೊಲೀಸ್ ಠಾಣೆಗೆ ಹೋಗಿದ್ದರು.

ನೀರಜ್ ಕುಂದರ್ ಅವರನ್ನು ಬೆಂಬಲಿಸಿ ಪೊಲೀಸ್ ಠಾಣೆಗೆ ತೆರಳಿದ್ದ ಮತ್ತೊಬ್ಬ ರಂಗಭೂಮಿ ಕಲಾವಿದ ನರೇಂದ್ರ ಬಹದ್ದೂರ್ ಸಿಂಗ್, ತಮ್ಮೆಲ್ಲರನ್ನು ಥಳಿಸಿ, ವಿವಸ್ತ್ರಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. 

“ನಾನೊಬ್ಬ ಪತ್ರಕರ್ತ. ನಾನು ರಾಜಕಾರಣಿಗಳ ಬಗ್ಗೆ, ವಿಶೇಷವಾಗಿ ಶಾಸಕ ಕೇದಾರನಾಥ್ ಶುಕ್ಲಾ ಮತ್ತು ಇಲ್ಲಿನ ಪೊಲೀಸ್ ಇಲಾಖೆ ಬಗ್ಗೆ ಕಠಿಣ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ನನ್ನ YouTube ಚಾನಲ್ 1 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿದೆ. ನನ್ನ ವಿಮರ್ಶಾತ್ಮಕ ಪತ್ರಿಕೋದ್ಯಮಕ್ಕಾಗಿ ನಾನು ಗುರಿಯಾಗಿದ್ದೇನೆ." ಎಂದು ಕಾನಿಷ್ಕ್‌ ಹೇಳಿದ್ದಾರೆ. 

ಅದಾಗ್ಯೂ, ವೈರಲ್‌ ಆಗಿರುವ ಚಿತ್ರದಲ್ಲಿರುವ ಎಂಟು ಮಂದಿಯಲ್ಲಿ ಯಾರೂ ಪತ್ರಕರ್ತರಿರಲಿಲ್ಲ ಎಂದು ಸಿಧಿ ಜಿಲ್ಲೆಯ ಎಸ್‌ಪಿ ಮುಕೇಶ್‌ ಕುಮಾರ್‌ ಶ್ರೀವಾಸ್ತವ ಹೇಳಿದ್ದಾರೆ. ದುಷ್ಕರ್ಮಿಗಳನ್ನು ತಡೆಗಟ್ಟಲು ಬೇಕಾಗಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇದೊಂದು ಸಾಮಾನ್ಯ ಪ್ರಕ್ರಿಯೆ. ಯಾರೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ತೊಡಗಬಾರದೆಂದು ಅವರನ್ನು ವಿವಸ್ತ್ರ ಮಾಡಲಾಗಿತ್ತು ಎಂದು ಅವರು ಸಮರ್ಥಿಸಿರುವುದಾಗಿ 'ದಿ ಕ್ವಿಂಟ್‌' ವರದಿ ಮಾಡಿದೆ.

ಅವರು ಅರೆನಗ್ನವಾಗಿರುವ ಚಿತ್ರವನ್ನು ಯಾರು ತೆಗೆದಿದ್ದಾರೆ ಮತ್ತು ವೈರಲ್‌ ಮಾಡಿದ್ದಾರೆ ಎಂದು ತನಿಖೆ ಪ್ರಾರಂಭಿಸಲಾಗಿದೆ. ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಿ ಕಾನೂನು ರೀತಿಯ ಕ್ರಮ ಜರುಗಿಸುವುದಾಗಿ ಎಸ್‌ಪಿ ಹೇಳಿದ್ದಾರೆ.  

ಆದರೆ, ಪೊಲೀಸರ ವಾದವನ್ನು ಕಾನಿಷ್ಕ್‌ ನಿರಾಕರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News