ಬೆಲೆಯೇರಿಕೆ ಚರ್ಚೆಯಿಂದ ಕೇಂದ್ರ ಸರಕಾರ ತಪ್ಪಿಸಿಕೊಳ್ಳುತ್ತಿದೆ: ಕಾಂಗ್ರೆಸ್

Update: 2022-04-07 15:36 GMT

ಹೊಸದಿಲ್ಲಿ, ಎ.7: ಸಂಸತ್‌ನ ಬಜೆಟ್ ಅಧಿವೇಶನವನ್ನು ನಿಗದಿತ ಅವಧಿಗೆ ಮುಂಚಿತವಾಗಿ ಮುಕ್ತಾಯಗೊಳಿಸಿರುವುದನ್ನು ಕಾಂಗ್ರೆಸ್ ಪಕ್ಷವು ಗುರುವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬೆಲೆಯೇರಿಕೆ ಹಾಗೂ ಹಣದುಬ್ಬರದಂತಹ ವಿಷಯಗಳ ಕುರಿತ ಚರ್ಚೆಯನ್ನು ಎದುರಿಸಲು ಸಾಧ್ಯವಾಗದೆ ಕೇಂದ್ರ ಸರಕಾರವು ಪಲಾಯನಗೈದಿದೆಯೆಂದು ಅದು ಟೀಕಿಸಿದೆ.

ಬೆಲೆಯೇರಿಕೆಯ ಕುರಿತು ಚರ್ಚಿಸಲು ಲೋಕಸಭೆಯ ವ್ಯವಹಾರಗಳ ಸಲಹಾ ಸಮಿತಿ ಸಭೆ(ಬಿಎಸಿ) ಯಲ್ಲಿ ಹಾಗೂ ಮಹತ್ವದ ವಿಧೇಯಕಗಳ ಬಗ್ಗೆ ಚರ್ಚಿಸುವುದಕ್ಕಾಗಿ ಕಾಲಾವಕಾಶ ನೀಡಲು ರಾಜ್ಯಸಭಾದ ಬಿಎಸಿ ಸಭೆಯಲ್ಲಿ ಕೇಂದ್ರ ಸರಕಾರ ಸಮ್ಮತಿಸಿತ್ತು. ಆದರೆ ಈಗ ಸಂಸತ್ ಅಧಿವೇಶನವನ್ನು ಅವಧಿಗೆ ಮುಂಚಿತವಾಗಿ ಕೊನೆಗೊಳಿಸುವ ಮೂಲಕ ಅದು ತನ್ನ ಬದ್ಧತೆಯನ್ನು ಮುರಿದಿದೆಯೆಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಹೇಳಿದ್ದಾರೆ.

ಬೆಲೆಯೇರಿಕೆ ಕುರಿತ ಚರ್ಚೆಗಳಿಂದ ಕೇಂದ್ರ ಸರಕಾರವು ನುಣುಚಿಕೊಳ್ಳುತ್ತಿದೆಯೆಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಬೆಲೆಯೇರಿಕೆ ವಿರುದ್ಧ ಧ್ವನಿಯೆತ್ತುವುದನ್ನು ಪ್ರತಿಪಕ್ಷಗಳು ಮುಂದುವರಿಸಲಿವೆ ಹಾಗೂ ಬೀದಿಗಿಳಿದು ಹೋರಾಟ ನಡೆಸಲಿವೆಯೆಂದು ಅವರು ಹೇಳಿದ್ದಾರೆ.

‘‘ಶುಕ್ರವಾರದವರೆಗೆ ಸಂಸತ್ ಕಲಾಪಗಳನ್ನು ನಡೆಸುವ ಕಾರ್ಯಸೂಚಿಯನ್ನು ನೀಡಲಾಗಿತ್ತಾದರೂ, ಎರಡು ದಿನ ಮುಂಚಿತವಾಗಿ ಅಧಿವೇಶನವನ್ನು ಮುಕ್ತಾಯಗೊಳಿಸಲಾಗಿದೆ. ಬಡವರು, ನಿರುದ್ಯೋಗಿಗಳು ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರಕಾರವು ಆಸಕ್ತವಾಗಿಲ್ಲ’’ ಎಂದು ಖರ್ಗೆ ಆಪಾದಿಸಿದರು.

ಲೋಕಸಭೆಯಲ್ಲಿ ಬೆಲೆಯೇರಿಕೆಯ ಬಗ್ಗೆ ಚರ್ಚಿಸಲು ಬಿಎಸಿ ಸಭೆಯಲ್ಲಿ ಕೇಂದ್ರ ಸರಕಾರವು ಕಾಲಾವಕಾಶವನ್ನು ನೀಡಿದ ಆನಂತರ ಅದಕ್ಕೆ ಅವಕಾಶ ನೀಡದೆ ಇರುವ ಮೂಲಕ ಸರಕಾರವು ತನ್ನ ಬದ್ಧತೆಯನ್ನು ಉಲ್ಲಂಘಿಸಿದೆಯೆಂದು ಅಧೀರ್‌ರಂಜನ್‌ಚೌಧುರಿ ಆಪಾದಿಸಿದ್ದಾರೆ. ಕೇಂದ್ರ ಸರಕಾರದ ವಿಶ್ವಸನೀಯತೆಯ ಸೂಚ್ಯಂಕವು ಈಗ ಪ್ರಶ್ನಾರ್ಹವಾಗಿದೆ ಎಂದವರು ಟೀಕಿಸಿದ್ದಾರೆ.

ರಾಜ್ಯಸಭೆಯಲ್ಲಿ ಹಲವು ವಿಧೇಯಕಗಳ ಬಗ್ಗೆ ಚರ್ಚೆಗೆ ಕಾಲಾವಕಾಶವನನ್ನು ನೀಡಲಾಗಿತ್ತು ಮತ್ತು ಅದಕ್ಕಾಗಿ ಪ್ರತಿಪಕ್ಷಗಳು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದವು. ಆದರೆ ಬುಧವಾರದಂತಹ ಸದನವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಿರುವುದು ನಮಗೆ ತಿಳಿದುಬಂದಿತು ಎಂದು ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾದ ಜೈರಾಮ್ ರಮೇಶ್ ಹೇಳಿದ್ದಾರೆ.

ಸದನವನ್ನು ಮುಂದೂಡುವ ಮೂಲಕ ಎರಡು ದಿನಗಳು ವ್ಯರ್ಥವಾಗಿವೆ. ಇದು ಕೇಂದ್ರ ಸರಕಾರದ ವೈಫಲ್ಯವೇ ಹೊರತು ಪ್ರತಿಪಕ್ಷಗಳದ್ದಲ್ಲ ಎಂದವರು ಆಪಾದಿಸಿದ್ದಾರೆ. ರಾಜ್ಯಸಭೆಯ ಸದನ ನಾಯಕರಾದ ಪಿಯೂಶ್ ಗೋಯಲ್ ಅವರು ‘ನಾಪತ್ತೆಯಾಗಿದ್ದಾರೆ’ ಎಂದು ರಮೇಶ್ ಕಟಕಿಯಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News