ನೆರವಿನ ನಿರೀಕ್ಷೆಯಲ್ಲಿ ಗೋಸಂಗಿ ಸಮುದಾಯ

Update: 2022-04-07 19:30 GMT

ಗೋವುಗಳ ಪಾಲನೆ, ಪೋಷಣೆ ಮಾಡುತ್ತಾ, ತಮ್ಮ ಕಸುಬಿನ ಸರಕು ಸಾಮಾನುಗಳು, ಕೋಳಿ, ಕುರಿಗಳು ಹಾಗೂ ಕುಟುಂಬದೊಂದಿಗೆ ಊರೂರು ಸುತ್ತುತ್ತಾ ತಮ್ಮ ಮೂಲ ಕಸುಬುಗಳಾಗಿದ್ದ ಬೇಟೆಗಾರಿಕೆ, ಗಿಡಮೂಲಿಕೆ ಔಷಧಿ, ಗಂಧದ ಎಣ್ಣೆ ಮಾರಾಟ ಮತ್ತು ಹೈನುಗಾರಿಕೆ ಮಾಡಿಕೊಂಡು ಜೀವನ ಮಾಡುತ್ತಿದ್ದ ಗೋಸಂಗಿಗಳು ಇಂದು ತಮ್ಮ ಮೂಲ ಕಸುಬುಗಳಿಂದ ವಿಮುಖರಾಗುತ್ತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಕಂಡು ಬರುವ ಗೋಸಂಗಿ ಸಮುದಾಯವು ಅಲೆಮಾರಿ ಸಮುದಾಯಗಳಲ್ಲಿ ಒಂದಾಗಿದೆ. ಗೋಸಂಗಿ ಎಂಬುದು ಗೋ ಮತ್ತು ಸಂಗಿ ಎಂಬ ಎರಡು ಪದಗಳಿಂದ ಬಂದಿದ್ದು ಗೋವುಗಳ ಸಂಗದಲ್ಲಿರುವವರು ಅಥವಾ ಗೋಪಾಲಕರು ಎಂದು ಅರ್ಥೈಸಬಹುದು. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಗೋಸಂಗಿಗಳು ತೀರಾ ಕೆಳಸ್ಥರದಲ್ಲಿದ್ದಾರೆ. ತಾವು ಮೂಲತಃ ಆದಿಜಾಂಬವನ ವಂಶಸ್ಥರು ಎಂದು ಗೋಸಂಗಿ ಸಮುದಾಯದ ಜನರು ಹೇಳುತ್ತಾರೆ. ಇವರು ಮೂಲತಃ ರಾಜಸ್ಥಾನದ ಮೂಲದವರು. ಹಲವು ಅಲೆಮಾರಿ ಸಮುದಾಯಗಳಂತೆ ಇವರೂ ಕೂಡ ರಾಣಪ್ರತಾಪನ ಸಾಮ್ರಾಜ್ಯದಲ್ಲಿ ವಿವಿಧ ಕೆಲಸಗಳನ್ನು ಮಾಡಿಕೊಂಡಿದ್ದರು. ರಾಣಪ್ರತಾಪನ ಆಳ್ವಿಕೆ ಕೊನೆಗೊಂಡ ನಂತರ ಬದುಕನ್ನು ಆಶ್ರಯಿಸಿಕೊಂಡು ದಕ್ಷಿಣ ಭಾರತದ ಕಡೆ ವಲಸೆ ಬಂದರು.

ಭಾರತದಾದ್ಯಂತ ನೆಲೆಸಿರುವ ಗೋಸಂಗಿ ಸಮುದಾಯದವರನ್ನು ವಿವಿಧ ಭೌಗೋಳಿಕತೆಗೆ ಅನುಗುಣವಾಗಿ ಗೋಸಂಗಿ, ಸೋಸಂಗಲು, ಗೋಸರ, ಗೋಷ್ಟಿಕ, ಗೋಸಿಕಾಳ್ಳು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕದ ಬಳ್ಳಾರಿ, ದಾವಣಗೆರೆ, ಧಾರವಾಡ, ಚಿಕ್ಕಮಗಳೂರು, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಬೆರಳಣಿಕೆಯಷ್ಟು ಸಂಖ್ಯೆಯ ಕುಟುಂಬಗಳು ವಾಸಿಸುತ್ತಿವೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಇವರ ಜನಸಂಖ್ಯೆ ಕೇವಲ 2,016. ಪ್ರಸ್ತುತ ಇವರ ಜನಸಂಖ್ಯೆ ಸುಮಾರು 5,000ದಷ್ಟಿದ್ದು ಇದೊಂದು ಅತ್ಯಂತ ಸೂಕ್ಷ್ಮ ಮತ್ತು ತಳ ಸಮುದಾಯವಾಗಿದೆ. ಗೋಸಂಗಿ ಕೋಗಿ ಭಾಷೆಯನ್ನು ಮನೆಗಳಲ್ಲಿ ಮಾತನಾಡುವ ಈ ಸಮುದಾಯದ ಜನರು ವ್ಯಾವಹಾರಿಕ ಭಾಷೆಯಾಗಿ ಕನ್ನಡವನ್ನು ಮಾತನಾಡುತ್ತಾರೆ. ಗೋಸಂಗಿ ಭಾಷೆಯಲ್ಲಿ ಗುಪ್ತ ಭಾಷೆಯಾದ ಮರಗು ಭಾಷೆಯ ಕೆಲವು ಪದಗಳನ್ನು ಮತ್ತು ಸಂಪೂರ್ಣ ವಾಕ್ಯಗಳನ್ನು ಕೂಡ ಬಳಸುತ್ತಾರೆ. ಅನ್ಯ ಭಾಷೆಗಳ ಪ್ರಭಾವದಿಂದಾಗಿ ಗೋಸಂಗಿ ಕೋಗಿ ಭಾಷೆಯನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು ಈ ಭಾಷೆ ಅವನತಿಯತ್ತ ಸಾಗುತ್ತಿದೆ.

ಅನಕ್ಷರತೆಯೇ ಮನೆ ಮಾಡಿರುವ ಈ ಸಮುದಾಯದಲ್ಲಿ ಹಿಂದೆಲ್ಲಾ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಇದುವರೆಗೂ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಇತ್ತೀಚೆಗೆ ಈ ಮನೋಭಾವ ಕಡಿಮೆಯಾಗುತ್ತಿದ್ದು ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ ಉನ್ನತ ಶಿಕ್ಷಣದ ವಿಷಯ ಬಂದಾಗ ಹೆಣ್ಣು ಮಕ್ಕಳ ವಿಷಯದಲ್ಲಿ ನಿರ್ಲಕ್ಷ ಮನೋಭಾವ ಮುಂದುವರಿದೇ ಇದೆ. ಹೆಚ್ಚಿನ ಮಕ್ಕಳು ಹೈಸ್ಕೂಲ್ ಮುಗಿಯುವುದರೊಳಗೆ ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಈ ಸಮುದಾಯದ ಜನಸಂಖ್ಯೆಯ ಕೇವಲ ಶೇ.1ರಷ್ಟು ಜನರಿಗೂ ಕೂಡ ಖಾಯಂ ಉದ್ಯೋಗ ದೊರೆತಿಲ್ಲ. ಕೇವಲ ಬೆರಳಣಿಕೆಯಷ್ಟು ಸಂಖ್ಯೆಯ ಜನರು ಮಾತ್ರ ಸಣ್ಣ ಪುಟ್ಟ ಸರಕಾರಿ ಉದ್ಯೋಗದಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದು ಅಸಂಘಟಿತ ಕಾರ್ಮಿಕರಿಗೆ ದೊರೆಯುವ ಎಲ್ಲಾ ಸವಲತ್ತುಗಳು ಇವರಿಗೂ ದೊರೆಯಬೇಕಾಗಿದೆ. ಆದ್ದರಿಂದ ಇಂತಹವರಿಗೆ ಸರಕಾರದ ವತಿಯಿಂದ ಗುರುತುಪತ್ರಗಳನ್ನು ನೀಡಬೇಕಾಗಿದೆ. ವೃತ್ತಿ ಸ್ಥಿತ್ಯಂತರಗಳ ಫಲವಾಗಿ ತಾವು ಸಾಂಪ್ರದಾಯಿಕವಾಗಿ ಮಾಡಿಕೊಂಡು ಬಂದಿದ್ದ ವೃತ್ತಿಗಳ ಬದಲಾಗಿ ಜೀವನ ನಿರ್ವಹಣೆಗಾಗಿ ಇತ್ತೀಚೆಗೆ ಕೆಲವರು ಸುಗಂಧದೆಣ್ಣೆ ಮಾರಾಟ ಮಾಡುತ್ತಾರೆ. ಇದರಿಂದ ಇವರನ್ನು ಅತ್ತರ್‌ವಾಲ ಮತ್ತು ಗನ್‌ದೇನೇರ್ ಎಂದು ಕರೆಯುತ್ತಾರೆ. ಗಿಡಮೂಲಿಕೆ ಔಷಧಿಗಳ ವ್ಯಾಪಾರವನ್ನು ಕೆಲವರು ಮಾಡುತ್ತಿದ್ದಾರೆ. ಉಳಿದಂತೆ ಹೈನುಗಾರಿಕೆ, ಕೂಲಿ ಕೆಲಸ, ವಿವಿಧ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ರಿಪೇರಿ ಮಾಡುವುದು ಸೇರಿದಂತೆ ಹಲವು ವೃತ್ತಿಗಳನ್ನು ಈ ಸಮುದಾಯದ ಜನರು ಮಾಡುತ್ತಿದ್ದಾರೆ. ಇವರು ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಾದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೆಚ್ಚಾಗಿ ನೆಲೆ ಕಂಡುಕೊಂಡಿದ್ದಾರೆ.

ಗೋಸಾಯಿ, ರಜಪೂತ್, ಮರಾಠಾ ಮತ್ತು ಡುಂಗ್ರಿಗರಾಸಿಯ ಸಮುದಾಯ ಗಳು ಗೋಸಂಗಿ ಸಮುದಾಯದೊಂದಿಗೆ ಹತ್ತಿರದ ಸಾಮ್ಯತೆಗಳನ್ನು ಹೊಂದಿವೆ. ಇದರಿಂದಾಗಿ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಇಂದಿಗೂ ಬಳ್ಳಾರಿ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗೊಂದಲಗಳಿವೆ. ಕೆಲವು ಅಧಿಕಾರಿಗಳಿಗೆ ಅಲೆಮಾರಿಗಳ ಕುರಿತು ಸರಿಯಾದ ತಿಳುವಳಿಕೆಯಿಲ್ಲದೆ ಇರುವುದರಿಂದ ಅಧಿಕಾರಿಗಳೂ ಕೂಡ ಇವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಗೋಸಾಯಿ ಸಮುದಾಯದ ಜನರ ಅಜ್ಞಾನ ಮತ್ತು ತಿಳುವಳಿಕೆಯ ಕೊರತೆಯಿಂದಾಗಿ ನಿಮ್ಮ ಜಾತಿ ಯಾವುದು ಎಂದು ಕೇಳಿದರೆ ಮರಾಠಿ ಮಿಶ್ರಿತ ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಿದ್ದುದರಿಂದ ಕೆಲವರು ಮರಾಠಿಗಳು, ಮರಾಠರು ಎಂದು ಹೇಳಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಅಲೆಮಾರಿ ಸಮುದಾಯಗಳಲ್ಲಿ ಜಾತಿಗೆ ಸಂಬಂಧಿಸಿದಂತೆ ಇಂದಿಗೂ ಹಲವು ಗೊಂದಲಗಳಿರುವುದನ್ನು ಕಾಣಬಹುದು. ಗೋಸಂಗಿ ಸಮುದಾಯವನ್ನು ಕರ್ನಾಟಕ ಸರಕಾರ ಪರಿಶಿಷ್ಟ ಜಾತಿಗೆ ಸೇರಿಸಿದ್ದು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಡುಂಗ್ರಿಗರಾಸಿಯ ಸಮುದಾಯದವರಲ್ಲಿ ಕೆಲವರು ಗೋಸಂಗಿ ಸಮುದಾಯದ ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಇತ್ತೀಚೆಗೆ ಈ ಪ್ರವೃತ್ತಿ ಕಡಿಮೆಯಾಗುತ್ತಿದೆ. 

1901ರ ಮದ್ರಾಸ್ ಜನಗಣತಿಯಲ್ಲಿ ಗೋಸಂಗಿಗಳನ್ನು ಕೋಸಂಗಿ ಎಂದು ದಾಖಲಿಸಲಾಗಿದೆ. ಎಡ್ಗರ್ ಥರ್ಸ್ಟನ್ ತಮ್ಮ ಕ್ಯಾಸ್ಟ್ ಆ್ಯಂಡ್ ಸದರನ್ ಇಂಡಿಯಾ ಕೃತಿಯಲ್ಲಿ ಗೋಸಂಗಿಗಳ ಮೂಲ ಕಸುಬು ಭಿಕ್ಷಾಟನೆಯಾಗಿದ್ದು ಜೊತೆಗೆ ಗಿಡಮೂಲಿಕೆ ಔಷಧಿಗಳನ್ನು ಕೊಡುವುದರಲ್ಲಿ ನಿಪುಣರಾಗಿದ್ದರು ಮತ್ತು ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದರೆಂದು ಉಲ್ಲೇಖಿಸಿದ್ದಾರೆ. ಕೆ.ಎಸ್.ಸಿಂಗ್‌ರವರು ತಮ್ಮ ‘ದಿ ಶೆಡ್ಯೂಲ್ ಕ್ಯಾಸ್ಟ್’ ಗ್ರಂಥದಲ್ಲಿ ಗೋಸಂಗಿಗಳು ಗೋವುಗಳ ಪಾಲನೆ ಮಾಡುತ್ತಾ ಅವುಗಳ ನೆರವಿನಿಂದ ತಮ್ಮ ಸಾಮಗ್ರಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತಿದ್ದರು ಎಂದಿದ್ದಾರೆ. ಗೋಸಂಗಿ ಸಮುದಾಯದಲ್ಲಿ ಬೆಡಗುಗಳನ್ನು ಕುಲಗಳೆಂದು ಹೇಳುತ್ತಾರೆ. ಇವರಲ್ಲಿ 25 ಬೆಡಗುಗಳನ್ನು ಕಾಣಬಹುದು. ಪ್ರತಿಯೊಂದು ಬೆಡಗುಗಳು ಮನೆ ದೇವರು ಅಥವಾ ಕುಲದೈವಗಳನ್ನು ಆರಾಧಿಸುತ್ತಾರೆ. ಗೋಸಂಗಿಗಳಲ್ಲಿ ವಿವಾಹಗಳು ಭಿನ್ನ ಬೆಡಗುಗಳೊಂದಿಗೆ ನಡೆಯುತ್ತವೆ. ಈ ಸಮುದಾಯದ ಜನರು ದೇವರು ಮತ್ತು ದೈವಗಳ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಇತರ ಅಲೆಮಾರಿಗಳಂತೆ ಇವರೂ ಕೂಡ ಹೆಣ್ಣು ದೇವತೆಗಳನ್ನು ಹೆಚ್ಚಾಗಿ ಪೂಜಿಸುತ್ತಾರೆ. ಆದಿಶಕ್ತಿ, ತುಳಜಾಭವಾನಿ, ಅಂಬಾಭವಾನಿ, ಕಾಳಿಕಾಂಬ, ಸೀತಾಳದೇವಿ, ಸೌದತ್ತಿ ಯಲ್ಲಮ್ಮ ಮುಂತಾದ ಸ್ತ್ರೀ ದೇವತೆಗಳಲ್ಲದೆ ತಿರುಪತಿ ತಿಮ್ಮಪ್ಪ, ಆಂಜನೇಯ ಮುಂತಾದ ದೇವರುಗಳನ್ನೂ ಪೂಜಿಸುತ್ತಾರೆ. ತಂಗಡಿ ಗಿಡವನ್ನು ದೇವರೆಂದು ಆರಾಧಿಸುತ್ತಾರೆ. ತಂಗಡಿ ಗಿಡವನ್ನು ಇವರು ಹೊನ್ನಂಬರಕೆ ಎನ್ನುತ್ತಾರೆ. ದೀಪಾವಳಿ, ಹೋಳಿ ಮತ್ತು ದಸರೆಯನ್ನು ಇವರು ವಿಶೇಷವಾಗಿ ಆಚರಿಸುತ್ತಾರೆ.

ಗೋಸಂಗಿ ಸಮುದಾಯದಲ್ಲಿ ಮದುವೆಗೆ ಮುನ್ನ ಗಂಡು ಮತ್ತು ಹೆಣ್ಣು ಪರಸ್ಪರ ನೋಡುವಂತಿರಲಿಲ್ಲ. ಸಂಬಂಧಿಸಿದ ಕುಟುಂಬಗಳ ಹಿರಿಯರು ನೋಡಿ ಒಪ್ಪಿಕೊಂಡರೆ ಸಾಕು ಮದುವೆ ಮಾಡಿ ಮುಗಿಸುತ್ತಿದ್ದರು. ಆದರೆ ಈ ಪ್ರವೃತ್ತಿ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಇವರಲ್ಲಿಯೂ ವಧುದಕ್ಷಿಣೆ ಪದ್ಧತಿಯೇ ಜಾರಿಯಲ್ಲಿದ್ದು ಗಂಡಿನ ಕಡೆಯವರು ಹೆಣ್ಣಿನ ಮನೆಯವರಿಗೆ 60 ರೂಪಾಯಿಗಳನ್ನು ತೆರದ ರೂಪದಲ್ಲಿ ಕೊಡುವುದು ವಾಡಿಕೆಯಲ್ಲಿದೆ. ಮದುವೆಗಳನ್ನು ಸಾಮಾನ್ಯವಾಗಿ ಹೆಣ್ಣಿನ ಮನೆಯಲ್ಲಿಯೇ ಮಾಡುತ್ತಾರೆ. ಮೊದಲೆಲ್ಲ ಮದುವೆಗಳು 5 ರಿಂದ 6 ದಿನಗಳವರೆಗೂ ನಡೆಯುತ್ತಿದ್ದವು. ಈಗ ಈ ಅವಧಿ ಕಡಿಮೆಯಾಗಿದೆ. ಮೊದಲೆಲ್ಲ ಸಂಬಂಧಗಳಲ್ಲಿ ಹೆಚ್ಚಾಗಿ ವಿವಾಹಗಳು ನಡೆಯುತ್ತಿದ್ದವು. ಇತ್ತೀಚೆಗೆ ಸಂಬಂಧಗಳಲ್ಲಿ ವಿವಾಹ ಮಾಡಿಕೊಳ್ಳುವುದು ಕಡಿಮೆಯಾಗುತ್ತಿದೆ. ಇದು ವೈಜ್ಞಾನಿಕವಾಗಿಯೂ ಒಳ್ಳೆಯದೇ ಆಗಿದೆ.

ಗೋಸಂಗಿಗಳನ್ನು ಗೌಡರ ಮನೆತನ, ರೈತರ ಮನೆತನ ಮತ್ತು ಭಾಟ್ ಮನೆತನದವರು ಎಂದು ಮೂರು ಗುಂಪುಗಳಾಗಿ ಕಾಣಬಹುದು. ಗೌಡರ ಮನೆತನಕ್ಕೆ ಕಟ್ಟೆಮನೆ ಗೌಡ ಅಥವಾ ಹಿರಿಯ ಎಂದು ಕರೆಯುತ್ತಾರೆ. ಇವರಿಗೆ ಸಮುದಾಯದ ಇತರರು ತುಂಬಾ ಗೌರವ ಕೊಡುತ್ತಾರೆ. ರೈತ ಮನೆತನದವರು ಗೌಡರ ನಂತರದ ಸ್ಥಾನದಲ್ಲಿದ್ದು ಭಾಟ್ ಮನೆತನಕ್ಕೆ ಕೊನೆಯ ಸ್ಥಾನವನ್ನು ನೀಡಲಾಗಿದೆ. ಈ ಸಮುದಾಯದಲ್ಲಿ ಕುಲಪಂಚಾಯಿತಿ ವ್ಯವಸ್ಥೆ ಇದ್ದು ಕುಲಪಂಚಾಯಿತಿಗಳು ನ್ಯಾಯ ತೀರ್ಮಾನಗಳನ್ನು ಮಾಡಲು ಸೇರುವ ಸಂದರ್ಭದಲ್ಲಿ ಗೌಡರ ಅನುಮತಿಯ ಮೇಲೆ ಉಳಿದವರಿಗೆಲ್ಲಾ ಈ ಭಾಟ್ ಮನೆತನದ ಜನರು ವಿಷಯವನ್ನು ಮುಟ್ಟಿಸುವ ಮಾಹಿತಿದಾರರಾಗಿ ಕೆಲಸ ನಿರ್ವಹಿಸುತ್ತಾರೆ.

ಇತರ ಅಲೆಮಾರಿ ಸಮುದಾಯಗಳಂತೆ ಇತ್ತೀಚೆಗೆ ಈ ಸಮುದಾಯದಲ್ಲಿಯೂ ಅಲೆಮಾರಿತನ ಕಡಿಮೆಯಾಗುತ್ತಿದೆ. ಇದಕ್ಕೆ ಹಲವು ಸಾಮಾಜಿಕ ಸ್ಥಿತ್ಯಂತರಗಳು ಕಾರಣವಾಗಿವೆ. ಗೋಸಂಗಿ ಜನಾಂಗ ಇಂದಿಗೂ ರಾಜಕೀಯ ರಂಗದಿಂದ ದೂರವೇ ಇದೆ. ಅವರಿಗೆ ಯಾವುದೇ ರೀತಿಯ ಸರಿಯಾದ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಗೋಸಂಗಿ ಸಮುದಾಯ ಸೇರಿದಂತೆ ಇತರ ಅಲೆಮಾರಿ ಜನಾಂಗಗಳ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಇಂದಿಗೂ ಮರೀಚಿಕೆಯಾಗಿದೆ. ಉನ್ನತ ಶಿಕ್ಷಣದಲ್ಲಿ ಅಂತಹ ಪ್ರಗತಿಯನ್ನು ಇಂದಿಗೂ ಸಾಧಿಸಲು ಸಾಧ್ಯವಾಗಿಲ್ಲ. ಅಲೆಮಾರಿ ಜನಾಂಗಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು ಅವರು ಆರ್ಥಿಕವಾಗಿ ಸದೃಢರಾಗಲು ಮತ್ತು ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಲು ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ಜನಾಂಗದ ಜನ ವಿವಿಧ ರೋಗಗಳಿಂದ ಬಳಲುತ್ತಿದ್ದು ಸರಿಯಾದ ಆರೋಗ್ಯ ವ್ಯವಸ್ಥೆಯಿಂದ ಸಹ ವಂಚಿತರಾಗಿದ್ದಾರೆ. ಆದ್ದರಿಂದ ಸರಕಾರ ಇವರಿಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದೆ.

 ಅಲೆಮಾರಿ ಸಮುದಾಯಗಳ ಮಹಿಳೆಯರು ಮಾಡಿಕೊಂಡು ಬರುತ್ತಿದ್ದ ವೃತ್ತಿಗಳಾದ ಕೌದಿ ಹಾಕುವುದು, ಅಚ್ಚೆ ಹಾಕುವುದು ಮುಂತಾದ ವೃತ್ತಿಗಳಿಗೆ ಇಂದು ಮಾರುಕಟ್ಟೆಯಿಲ್ಲದಂತಾಗಿದ್ದು ತಮ್ಮ ಸಾಂಪ್ರದಾಯಿಕ ವೃತ್ತಿಗಳಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಮಹಿಳೆಯರು ಆರ್ಥಿಕವಾಗಿ ಪರಾವಲಂಬಿಗಳಾಗುತ್ತಿದ್ದಾರೆ. ಆದ್ದರಿಂದ ಈ ಸಮುದಾಯದ ಮಹಿಳೆಯರ ಸಬಲೀಕರಣಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಹಳೆಯ ಬಟ್ಟೆಯಿಂದಲೇ ಹೊಸ ಬದುಕನ್ನು ಕಟ್ಟಿಕೊಳ್ಳುವ ಅಲೆಮಾರಿ ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ, ಸ್ವಂತ ಉದ್ಯೋಗ ಕೈಗೊಳ್ಳಲು ಸಾಲದ ವ್ಯವಸ್ಥೆಗಳು ಸೇರಿದಂತೆ ಹಲವು ಸುಧಾರಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅಲೆಮಾರಿ ಸಮುದಾಯಗಳ ಅಭಿವೃದ್ಧಿಯ ಕುರಿತು ಹಲವಾರು ಆಶ್ವಾಸನೆಗಳನ್ನು ನೀಡುತ್ತಿದ್ದರೂ ವಾರ್ಷಿಕ ಆಯವ್ಯಯದಲ್ಲಿ ಅಲೆಮಾರಿ ಸಮುದಾಯಗಳ ಪ್ರಗತಿಗಾಗಿ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡುವಲ್ಲಿ ನಿರ್ಲಕ್ಷ ತೋರುವುದು ಮುಂದುವರಿದೇ ಇದೆ. ಈ ಮನೋಭಾವ ಈ ಸಮುದಾಯಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಅಡ್ಡಗಾಲಾಗಿ ಪರಿಣಮಿಸಿವೆ. ಅಲೆಮಾರಿಗಳು ಮಹತ್ವವಾದದ್ದೇನನ್ನು ಆಕಾಶದಿಂದ ತಂದು ಕೊಡಿ ಎಂದು ಕೇಳುತ್ತಿಲ್ಲ. ಅವರು ಕೇಳುತ್ತಿರುವುದು ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ, ತಮಗೊಂದು ನೆಲೆ, ಎರಡೊತ್ತಿನ ಊಟ, ತಾವು ವಾಸ ಮಾಡುತ್ತಿರುವ ಸ್ಥಳಗಳಿಗೆ ಕುಡಿಯುವ ನೀರು, ಬೀದಿ ದೀಪ, ಒಳಚರಂಡಿಯಂತಹ ಕನಿಷ್ಠ ಮೂಲ ಸೌಕರ್ಯಗಳನ್ನು ಮಾತ್ರ. ಅಲೆಮಾರಿ ಸಮುದಾಯಗಳ ಜನರಿಗೂ ಕೂಡ ಸಮಾಜದಲ್ಲಿ ಸಮಾನವಾದ ಅವಕಾಶಗಳನ್ನು ಕೇಳುವ, ತಮ್ಮ ಮಕ್ಕಳ ಶಿಕ್ಷಣದ ಹಕ್ಕನ್ನು ಪ್ರತಿಪಾದಿಸುವ, ತಮಗೆ ಆಗುತ್ತಿರುವ ಅನ್ಯಾಯಗಳ ಕುರಿತಾಗಿ ಧ್ವನಿಯೆತ್ತುವ, ಪ್ರತಿಭಟಿಸುವ ಹಕ್ಕಿದೆ ಎಂಬುದನ್ನು ಯಾರೂ ಮರೆಯಬಾರದು.

ಅಲೆಮಾರಿಗಳೆಂದರೆ ಅವರೇನೂ ಪ್ರತ್ಯೇಕ ಗುಂಪಲ್ಲ ಅವರೂ ಕೂಡ ಭಾರತದ ಪ್ರಜೆಗಳೇ ಆಗಿದ್ದಾರೆ. ಈ ದೇಶದ, ಈ ನಾಡಿನ ಸಂಸ್ಕೃತಿ, ಕಲೆ, ಭಾಷೆಗಳ ಬೆಳವಣಿಗೆಗೆ ತಮ್ಮದೇ ಆದ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಅಲೆಮಾರಿ ಸಮುದಾಯಗಳ ಅಳಿವು ಉಳಿವಿನ ಪ್ರಶ್ನೆ ಇಂದು ಎದುರಾಗಿದೆ. ವೈವಿಧ್ಯ ಮಯ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ತಲ್ಲಣಗಳನ್ನು ಅಲೆಮಾರಿಗಳು ಇಂದು ಎದುರಿಸುತ್ತಿದ್ದಾರೆ. ಸರಕಾರ ಈ ಅಲೆಮಾರಿ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಮಾನವೀಯ ನೆಲೆಯಲ್ಲಿ ಅನುಷ್ಠಾನಕ್ಕೆ ತರಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.

Writer - ಡಾ. ಅಮ್ಮಸಂದ್ರ ಸುರೇಶ್

contributor

Editor - ಡಾ. ಅಮ್ಮಸಂದ್ರ ಸುರೇಶ್

contributor

Similar News