ಸಿಬಿಐ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಆಕಾರ್ ಪಟೇಲ್

Update: 2022-04-08 07:33 GMT

ಹೊಸದಿಲ್ಲಿ: ತನ್ನ ವಿರುದ್ಧದ ಲುಕ್‌ಔಟ್‌ ಸುತ್ತೋಲೆಯನ್ನು ರದ್ದುಗೊಳಿಸಿದ ನ್ಯಾಯಾಲಯದ ಆದೇಶದ ಹೊರತಾಗಿಯೂ ತನ್ನನು ಅಮೆರಿಕಕ್ಕೆ ತೆರಳದಂತೆ ತಡೆದಿರುವ ಸಿಬಿಐ ವಿರುದ್ಧ ಆ್ಯಮೆಸ್ಟಿ  ಇಂಡಿಯಾದ ಮಾಜಿ ಮುಖ್ಯಸ್ಥ ಆಕಾರ್‌ ಪಟೇಲ್‌ ಶುಕ್ರವಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

ಗೌರವಾನ್ವಿತ  ನ್ಯಾಯಾಲಯವು ತನ್ನ ಆದೇಶದಲ್ಲಿ  "ತಕ್ಷಣ"  ಎಂಬ ಪದವನ್ನು ಬಳಸಿದ ಹೊರತಾಗಿಯೂ ಅರ್ಜಿದಾರರು 07.04.2022 ರಂದು ರಾತ್ರಿ ಪ್ರಯಾಣಿಸುತ್ತಿದ್ದಾರೆ ಎಂಬ ಅಂಶದ ಬಗ್ಗೆ ತಿಳಿದಿದ್ದರೂ ಎಲ್ಲ ಸಮಯದಲ್ಲೂ ಲಭ್ಯವಿರಬೇಕಾದ ಸಿಬಿಐನಂತಹ ಕಾನೂನು ಜಾರಿ ಸಂಸ್ಥೆಯು  ನೆಮ್ಮದಿಯ ನಿದ್ದೆಯಲ್ಲಿತ್ತು ಎನ್ನುವುದನ್ನು  ನಂಬಲು ಸಾಧ್ಯವಾಗುತ್ತಿಲ್ಲ ಎಂದು  ಪಟೇಲ್ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ.

ತನಗೆ  ಗುರುವಾರ ರಾತ್ರಿ 11 ಗಂಟೆಗೆ ಹೊರಡಬೇಕು ಎಂದು ಸಿಬಿಐಗೆ ತಿಳಿಸಿದ್ದೇನೆ ಎಂದು ಪಟೇಲ್ ಒತ್ತಿ ಹೇಳಿದರು.

ವಿಶೇಷ ನ್ಯಾಯಾಲಯದ ಆದೇಶವು ನಿನ್ನೆ ಸಂಜೆ 4.30 ರ ಸುಮಾರಿಗೆ ಬಂದಿದೆ ಮತ್ತು ಅದನ್ನು ಅನುಸರಿಸಲು ಏಜೆನ್ಸಿಗೆ 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ದಿಲ್ಲಿ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದ್ದರೂ ಗುರುವಾರ ತಡರಾತ್ರಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಮ್ಮನ್ನು ಅಮೆರಿಕಕ್ಕೆ ತೆರಳದಂತೆ ಮತ್ತೆ ತಡೆದಿದ್ದಾರೆ. ತನ್ನ  ವಿರುದ್ಧದ ಲುಕ್ ಔಟ್ ಸುತ್ತೋಲೆಯನ್ನು ಸಿಬಿಐ ಹಿಂಪಡೆದಿಲ್ಲ ಎಂದು ಪಟೇಲ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News