ನಿತೀಶ್‌ ಕುಮಾರ್ ಬಿಹಾರ ಸಿಎಂ ಸ್ಥಾನ ಭದ್ರ: ಜೆಡಿಯು ನಾಯಕರು

Update: 2022-04-09 17:42 GMT
photo pti

ಪಾಟ್ನಾ,ಎ.9: ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು ಮತ್ತು ಬಿಜೆಪಿ ಮುಖ್ಯಮಂತ್ರಿಯನ್ನು ನೇಮಿಸಬೇಕು ಎಂಬ ಕೆಲವು ಬಿಜೆಪಿ ಶಾಸಕರ ಆಗ್ರಹದ ನಡುವೆಯೇ ಆಡಳಿತಾರೂಢ ಜೆಡಿಯುದ ಇಬ್ಬರು ನಾಯಕರು,ನಿತೀಶ ಬಿಹಾರದ ಮುಖ್ಯಮಂತ್ರಿಯಾಗಿ ಮತ್ತು ರಾಜ್ಯದಲ್ಲಿ ಎನ್ಡಿಎ ಮುಖವಾಗಿ ಮುಂದುವರಿಯಲಿದ್ದಾರೆ ಎಂದು ಪಕ್ಷದ ಬೆಂಬಲಿಗರಿಗೆ ಭರವಸೆಯನ್ನು ನೀಡಿದ್ದಾರೆ.

ರಾಷ್ಟ್ರಪತಿ ಹುದ್ದೆಗೆ ನಿತೀಶ್ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ ಎಂಬ ಇತ್ತೀಚಿನ ವದಂತಿ ಮತ್ತು ಅವರು ರಾಜ್ಯಸಭೆ ಸದಸ್ಯತ್ವದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಈ ಭರವಸೆ ಹೊರಬಿದ್ದಿದೆ.

ನಿತೀಶ ಕುಮಾರ ಜನರ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದಾರೆಯೇ ಹೊರತು ಯಾರದೋ ಅನುಗ್ರಹದಿಂದಲ್ಲ ಎಂದು ಶನಿವಾರ ಪಾಟ್ನಾದಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ ಜೆಡಿಯು ರಾಷ್ಟ್ರೀಯ ವರಿಷ್ಠ ರಾಜೀವ್ ರಂಜನ್ ಸಿಂಗ್ ಅವರು,ಬಿಹಾರದ ಜನರು ನಿತೀಶ್ ಜೊತೆಯಲ್ಲಿದ್ದಾರೆ. ಅವರು ರಾಜ್ಯಕ್ಕಾಗಿ ಏನೇನನ್ನು ಮಾಡಿಲ್ಲ? ಅವರು ಪಂಚಾಯತಿಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿಯನ್ನು ನೀಡಿದ್ದಾರೆ. ಅತ್ಯಂತ ಹಿಂದುಳಿದ ವರ್ಗಗಳಿಗೆ ನೆರವಾಗುವ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳೂ ಮಾತನಾಡುತ್ತವೆ,ಆದರೆ ಚುನಾವಣೆಗಳಿಗೆ ಮೊದಲು ನಿತೀಶರತ್ತ ನೋಡುತ್ತವೆ ಮತ್ತು ಅವರು ಮಾಡುತ್ತಿರುವುದನ್ನೇ ನಕಲು ಮಾಡುತ್ತವೆ ಎಂದರು.

ಚುನಾವಣೆಯಲ್ಲಿ 74 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಹೋಲಿಸಿದರೆ ಜೆಡಿಯು ಕೇವಲ 43 ಸ್ಥಾನಗಳನ್ನು ಗೆದ್ದು ಕಳಪೆ ಸಾಧನೆಯನ್ನು ಪ್ರದರ್ಶಿಸಿದ್ದರೂ 2020,ನವಂಬರ್ನಲ್ಲಿ ನಿತೀಶ ನಾಲ್ಕನೇ ಬಾರಿಗೆ ಬಿಹರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಜೆಡಿಯು ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ಅವರೂ ಬಿಹಾರದ ಮೈತ್ರಿಕೂಟಕ್ಕೆ ಆಧಾರವಾಗಿರುವ ಪಕ್ಷದ ’ರಾಜಿ ಮಾಡಿಕೊಳ್ಳಲಾಗದ ಎರಡು ಶರತ್ತುಗಳನ್ನು ’ ಪಕ್ಷದ ಬೆಂಬಲಿಗರಿಗೆ ನೆನಪಿಸಿದ್ದಾರೆ.
‘ನಿತೀಶ್ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಅವರು ಮುಖ್ಯಮಂತ್ರಿಯಾಗಿ ಉಳಿಯಲಿದ್ದಾರೆ. ಇದರಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಎರಡನೆಯದಾಗಿ ನಮ್ಮ ಪಕ್ಷದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News