ಇಂದಿನಿಂದ ಬೂಸ್ಟರ್ ಡೋಸ್ ಬೆಲೆ 225 ರೂ.

Update: 2022-04-10 01:56 GMT

ಹೊಸದಿಲ್ಲಿ: ಎಲ್ಲ ವಯಸ್ಕರಿಗೆ ಕೋವಿಡ್-19 ತಡೆಗಾಗಿ ಬೂಸ್ಟರ್ ಡೋಸ್ ಅಥವಾ ಮುಂಜಾಗ್ರತಾ ಡೋಸ್ ಆರಂಭಿಸುವ ಮುನ್ನಾ ದಿನ ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‍ಐಐ) ಮತ್ತು ಭಾರತ್ ಬಯೋಟೆಕ್ ಕ್ರಮವಾಗಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಬೆಲೆಯನ್ನು ಇಳಿಸಿವೆ.

ಇದರ ಅನ್ವಯ ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‍ಗೆ 225 ರೂ. ನಿಗದಿಪಡಿಸಲಾಗಿದೆ. ಲಸಿಕೆ ನೀಡಿಕೆಗಾಗಿ ಖಾಸಗಿ ಆಸ್ಪತ್ರೆಗಳು ಹೆಚ್ಚುವರಿಯಾಗಿ 150 ರೂ.ವರೆಗೆ ಸೇವಾ ಶುಲ್ಕ ವಿಧಿಸಬಹುದಾಗಿದೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಗರಿಷ್ಠ 375 ರೂ. ವಿಧಿಸಬಹುದು.

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸಂಬಂಧ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ಖಾಸಗಿ ಲಸಿಕಾ ಕೇಂದ್ರಗಳು ವಿಧಿಸುವ ದರವನ್ನು ಕೋವಿನ್ ಪೋರ್ಟೆಲ್‍ನಲ್ಲಿ ಘೋಷಿಸಬೇಕು ಎಂದು ಸೂಚಿಸಿದೆ.

ಕೇಂದ್ರ ಸರ್ಕಾರದ ಜತೆ ಚರ್ಚಿಸಿ ಬೆಲೆ ಇಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸಂಸ್ಥೆಗಳು ಪ್ರಕಟಿಸಿವೆ. ಆದರೆ ಈಗಾಗಲೇ 600 ರೂ. ಮತ್ತು 1200 ರೂ. ದರದಲ್ಲಿ ಖರೀದಿಸಿದ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ತಮ್ಮ ಬಳಿ ಈಗಾಗಲೇ ಇವೆ ಎಂದು ಹಲವು ಖಾಸಗಿ ಆಸ್ಪತ್ರೆಗಳು ಹೇಳಿವೆ. ಈ ಸಮಸ್ಯೆ ಬಗ್ಗೆ ಆರೋಗ್ಯ ಸಚಿವಾಲಯದ ಜತೆ ಚರ್ಚಿಸುವುದಾಗಿ ಆಸ್ಪತ್ರೆಗಳು ಸ್ಪಷ್ಟಪಡಿಸಿವೆ.

18-59 ವರ್ಷ ವಯಸ್ಸಿನ ಅರ್ಹ ನಾಗರಿಕರು ಬೂಸ್ಟರ್ ಡೋಸ್‍ಗೆ ಆನ್‍ಲೈನ್ ಅಪಾಯಿಂಟ್‍ಮೆಂಟ್ ಕಾಯ್ದಿರಿಸಬಹುದು ಅಥವಾ ನೇರವಾಗಿ ಕೇಂದ್ರಗಳಿಗೆ ತೆರಳಬಹುದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಈ ಹಿಂದಿನ ಲಸಿಕಾ ದಾಖಲೆಗಳ ಹಿನ್ನೆಲೆಯಲ್ಲಿ ಅರ್ಹರಿಗೆ ಕೋವಿನ್ ಸಿಸ್ಟಂ ಎಸ್‍ಎಂಎಸ್ ಕಳುಹಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News