ಶಿವಸೇನೆ ಕಚೇರಿಯೆದುರು ‘ಹನುಮಾನ್ ಚಾಲಿಸಾ’ ಮೊಳಗಿಸಿದ್ದ ನಾಲ್ವರು ಎಂಎನ್ಎಸ್ ಕಾರ್ಯಕರ್ತರ ಸೆರೆ

Update: 2022-04-10 18:12 GMT
photo:twitter

ಮುಂಬೈ,ಎ.೧೦: ರಾಮನವಮಿ ಸಂದರ್ಭ ರವಿವಾರ ಇಲ್ಲಿಯ ದಾದರ್ನಲ್ಲಿರುವ ಶಿವಸೇನೆ ಕೇಂದ್ರಕಚೇರಿಯ ಎದುರು ‘ಹನುಮಾನ ಚಾಲೀಸಾ’ವನ್ನು ಮೊಳಗಿಸಿದ್ದಕ್ಕಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್)ಯ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಕಾರ್ಯಕರ್ತರು ಟ್ಯಾಕ್ಸಿಯೊಂದರ ಮೇಲೆ ಧ್ವನಿವರ್ಧಕವನ್ನು ಅಳವಡಿಸಿದ್ದರು. ಶ್ರೀರಾಮ ಮತ್ತು ಎಂಎನ್ಎಸ್ ವರಿಷ್ಠ ರಾಜ್ ಠಾಕ್ರೆ ಚಿತ್ರಗಳಿದ್ದ ಭಿತ್ತಿಪತ್ರವೊಂದನ್ನೂ ಟ್ಯಾಕ್ಸಿಗೆ ಕಟ್ಟಲಾಗಿತ್ತು. ಟ್ಯಾಕ್ಸಿಯ ಮೇಲೆ ‘ಶ್ರೀರಾಮ ರಥ ’ಎಂದು ಬರೆಯಲಾಗಿತ್ತು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಹನುಮಾನ ಚಾಲೀಸಾ ಮೊಳಗಿಸುವುದನ್ನು ಸ್ಥಗಿತಗೊಳಿಸಿ ವಾಹನ ಮತ್ತು ಧ್ವನಿವರ್ಧಕವನ್ನು ವಶಪಡಿಸಿಕೊಂಡಿದ್ದಾರೆ. ನಾಲ್ವರು ಎಂಎನ್ಎಸ್ ಕಾರ್ಯಕರ್ತರನ್ನು ಶಿವಾಜಿ ಪಾರ್ಕ್ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.ಘಟನೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆಯವರು,‘ಅವರು ಮೃತಪಕ್ಷಕ್ಕೆ ಮರುಜೀವ ನೀಡಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಹಿಂದುತ್ವದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ನಾವು ಈಡೇರಿಸುತ್ತೇವೆ ’ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.

ಮಸೀದಿಗಳಲ್ಲಿರುವ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಬೇಕು,ಇಲ್ಲದಿದ್ದರೆ ಮಸೀದಿಗಳ ಹೊರಗೆ ಧ್ವನಿವರ್ಧಕಗಳಿಂದ ಹನುಮಾನ ಚಾಲೀಸಾವನ್ನು ಗಟ್ಟಿಯಾಗಿ ಮೊಳಗಿಸಲಾಗುವುದು ಎಂದು ಎ.೨ರಂದು ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದರು. ಅವರನ್ನು ತರಾಟೆಗೆತ್ತಿಕೊಂಡಿದ್ದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ ಪವಾರ್ ಅವರು,ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಕೆಲವರನ್ನು ಸಂತೋಷಗೊಳಿಸಲು ವಿಭಜನಕಾರಿ ಕರೆಗಳಿಗೆ ರಾಜ್ಯವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.ಮಹಾರಾಷ್ಟ್ರದ ಸಮ್ಮಿಶ್ರ ಸರಕಾರದ ಭಾಗವಾಗಿರುವ ಎನ್ಸಿಪಿ ಮುಖ್ಯಸ್ಥ ಶರದ ಪವಾರ್ ಮತ್ತು ಮುಖ್ಯಮಂತ್ರಿ ಹಾಗೂ ತನ್ನ ಸೋದರ ಸಂಬಂಧಿ ಉದ್ಧವ ಠಾಕ್ರೆಯವರನ್ನೂ ರಾಜ್ ಠಾಕ್ರೆ ಟೀಕಿಸಿದ್ದರು.

ಎಂಎನ್ಎಸ್ ಬೇಡಿಕೆಯನ್ನು ಬಿಜೆಪಿ ಬೆಂಬಲಿಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಹನುಮಾನ ಚಾಲೀಸಾ ಮೊಳಗಿಸಲು ಧ್ವನಿವರ್ಧಕಗಳನ್ನು ತಾನು ಒದಗಿಸುವುದಾಗಿ ಎ.5ರಂದು ಹೇಳಿದ್ದ ಬಿಜೆಪಿ ನಾಯಕರೋರ್ವರು ಮಸೀದಿಗಳಲ್ಲಿ ಆಝಾನ್ ವಿರುದ್ಧದ ವಿಭಜನಕಾರಿ ಅಭಿಯಾನವನ್ನು ಬೆಂಬಲಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News