ಕೊನೆಗೆ ಖಾಲಿ ಕೈಯಲ್ಲಿ ಮನೆಗೆ ಹೋದ ಕೊರೋನ ವಾರಿಯರ್ಸ್...!

Update: 2022-04-11 06:02 GMT

ನೀತಿ ನಿಯಮಗಳು ಏನೇ ಇರಲಿ, ಪ್ರಾಣದ ಹಂಗು ತೊರೆದು ಹೋರಾಡಿರುವ ಈ ಕೊರೋನ ವಾರಿಯರ್ಸ್‌ಗಳಿಗೆ ಒಂದಿಷ್ಟು ಸಹಾಯ ಯಾವುದಾದರೂ ರೀತಿಯಲ್ಲಿ ಬೇಕಾಗಿದೆ. ಅವರ ಅರ್ಹತೆಗೆ ತಕ್ಕಂತೆ ಸರಕಾರದ ಇಲಾಖೆಗಳಲ್ಲಿ ತಾತ್ಕಾಲಿಕವಾಗಿಯಾದರೂ ಉದ್ಯೋಗವನ್ನು ಮುಂದುವರಿಸುವುದು ಮಾನವೀಯವಾಗುತ್ತದೆ.

ಓದುಗ ಮಹಾಶಯರು ಕನಿಷ್ಠ ೨ವರ್ಷ ಹಿಂದಕ್ಕೆ ಹೋಗಬೇಕು. ಅದು ೨೦೨೦ರ ಅಕ್ಟೋಬರ್. ಅಲ್ಲಿವರೆಗೆ ಅತ್ಯಂತ ಸುಂದರ
ವಾಗಿದ್ದ ಈ ಪ್ರಪಂಚ ಇದ್ದಕ್ಕಿದ್ದಂತೆ ಒಂದು ಮಹಾನ್ ಅವಘಡಕ್ಕೆ ಇನ್ನೇನು ಸ್ವಲ್ಪದರಲ್ಲೇ ಸಾಕ್ಷಿಯಾಗುವುದರಲ್ಲಿ ಇತ್ತು. ಎಲ್ಲೋ ಏನೋ ಮಿಸುಕಾಡಿದ ಅನುಭವ, ಏನೋ ಕೆಟ್ಟ ಸಮಯ ಕಾದಿದೆ ಎಂದು ಅನಿಸುತ್ತಿದ್ದ ಕಾಲವದು.  ಚೀನಾದ ಯಾವುದೋ ಮೂಲೆಯಲ್ಲಿ ಹುಟ್ಟಿ, ಪ್ರಪಂಚವನ್ನೇ ಆವರಿಸಿಕೊಂಡ ಕೊರೋನ ವೈರಸ್‌ನ ಕಾಲವದು. ಯಾರ ಊಹೆಗೂ ಮೀರಿದ, ಯಾವ ವಿಜ್ಞಾನಕ್ಕೂ ಸಿಕ್ಕದ ಈ ಪೀಳಿಗೆ ಕಂಡು ಕೇಳರಿಯದ ಒಂದು ಭಯಾನಕ ವೈರಸ್‌ಗೆ
ಇಡೀ ವಿಶ್ವವೇ ಸಾಕ್ಷಿಯಾಗಿತ್ತು. ಒಂದು ವೈರಸ್ ಇಡೀ ಮನುಕುಲವನ್ನೇ ಆಪೋಷಣ ತೆಗೆದುಕೊಳ್ಳುವ ಸಮಯಕ್ಕೆ ಕೋಟಿ-ಕೋಟಿ ಜನ ಸಾಕ್ಷಿಯಾಗುವ ಸಮಯ... ಶ್ರೀಮಂತ-ಬಡವ ಎಂಬ ಯಾರ ಮುಖವನ್ನೂ ನೋಡದೆ, ಯಾವ ದೇಶವನ್ನ್ನೂ ನೋಡದೆ ಸಿಕ್ಕ ಸಿಕ್ಕವರನ್ನು ಕೊರೋನ ಬಲಿ ತೆಗೆದುಕೊಂಡಿತ್ತು. ಭಾರತಕ್ಕೆ ಕೊರೋನ ವೈರಸ್ ನಿಧಾನವಾಗಿ ಪ್ರವೇಶಿಸಿದರು ಸಹ ಕೊನೆಗೆ ಅದು ಮಾಡಿದ ಹಾವಳಿ ಮತ್ತು ಪ್ರಾಣಹಾನಿ ನೂರು ವರ್ಷವಾದರೂ ಮರೆಯುವಂಥದಲ್ಲ. ದೇಶದ ಆರೋಗ್ಯ ವ್ಯವಸ್ಥೆಯನ್ನು ಬೆತ್ತಲು ಮಾಡಿದ ಕ್ಷಣಗಳು. ದೇಶದ ನಾಯಕರ ದೂರ ದೃಷ್ಟಿಯ ಕೊರತೆ, ಅತಿಯಾದ ಆತ್ಮವಿಶ್ವಾಸ, ಅವೈಜ್ಞಾನಿಕ ನಿರ್ವಹಣೆ ಎಲ್ಲವನ್ನೂ ಸಹ ತೆರೆದಿಟ್ಟ ಕಾಲವದು. ಆಮ್ಲಜನಕ ಇಲ್ಲ, ಆಸ್ಪತ್ರೆಗಳಿಲ್ಲ, ಕೊನೆಗೆ ನೆಮ್ಮದಿಯಾಗಿಅಂತ್ಯಕ್ರಿಯೆ ಮಾಡಲು ಪರದಾಡಬೇಕಾದಂತಹ ಸಂದರ್ಭ. ಜನರು ಮನೆಯಿಂದ ಹೊರ ಬರಲಾರದ ಪರಿಸ್ಥಿತಿ. ಜನರು ಪರಸ್ಪರ ಮುಟ್ಟಲಾರದ ದುಸ್ಥಿತಿ. ಒಬ್ಬರನ್ನೊಬ್ಬರು ನಂಬಲಾರದ ದುರ್ಗತಿ. ಯಾರಿಗೆ ಯಾವ ಕ್ಷಣದಲ್ಲಿ ವೈರಸ್ ಅಂಟಿಕೊಳ್ಳುತ್ತದೆ ಎಂದು ಭಯಪಡುವ ಸ್ಥಿತಿಯಲ್ಲಿ ಮನುಕುಲವೇ ಇತ್ತು. ಸರಕಾರಗಳು ತಬ್ಬಿಬ್ಬಾದವು. ವೈದ್ಯಲೋಕ ಗೊಂದಲಕ್ಕೀಡಾಗಿದ್ದು, ವಿಜ್ಞಾನಿಗಳು ವಿಪ್ಲವ ಗೊಂಡರು. ಇಂತಹ ಸಮಯದಲ್ಲಿ ಈ ದೇಶವನ್ನು ಸ್ವಲ್ಪ ಮಟ್ಟಿಗೆ ಮುನ್ನಡೆಸಲು ಸರಕಾರ, ವೈದ್ಯಲೋಕ ಮತ್ತು ವಿಜ್ಞಾನಿಗಳಿಗೆ ಸಹಾಯ ಮಾಡಲು ಕೊರೋನ ವಾರಿಯರ್ಸ್ ಎಂಬ ಪಡೆ ಹುಟ್ಟಿಕೊಂಡಿತ್ತು. ವ್ಯವಸ್ಥೆಗೆ ಅಗತ್ಯವಾದಷ್ಟು ಇಂತಹ ಸಿಬ್ಬಂದಿಯನ್ನು ಸರಕಾರದ ಆರೋಗ್ಯ ಇಲಾಖೆ ಹೊರಗುತ್ತಿಗೆ ಆಧಾರದ ಮೇಲೆ ಅಂದು ನೇಮಕಾತಿ ಮಾಡಿಕೊಂಡಿತ್ತು.

ಕೊರೋನ ಸಮಸ್ಯೆಯನ್ನು ಎದುರಿಸಲು ಕೊರೋನ ವಾರಿಯರ್ಸ್ ಬೇಕು ಎಂಬ ಜಾಹೀರಾತು ಎಲ್ಲೆಡೆ ಹರಿದಾಡುತ್ತಿತ್ತು. ಆಸಕ್ತರು, ಸ್ವಯಂ ಸೇವಕರು, ವಿದ್ಯಾವಂತರು, ಗೃಹಿಣಿಯರು, ವಿದ್ಯಾರ್ಥಿಗಳು ಎಲ್ಲರೂ ಸಹ ಕೊರೋನ ವಾರಿಯರ್ಸ್ ಪಡೆಯನ್ನು ಸೇರಿಕೊಂಡರು. ಇವರಿಗೆ ಒಂದಿಷ್ಟು ಗೌರವ ಧನವನ್ನು ನೀಡಲು ಸರಕಾರ ಸಹ ಒಪ್ಪಿಕೊಂಡಿತು. ಅಂದಿನ ಒಂದು ಅಂದಾಜು ಪ್ರಕಾರ ಅಂದು  ರಾಜ್ಯದಲ್ಲಿ ಸುಮಾರು ೨೫ ಸಾವಿರಕ್ಕಿಂತ ಹೆಚ್ಚಿನ ಮಂದಿ ಸ್ವಯಂ ಸೇವಕರು ಕೊರೋನ ವಾರಿಯರ್ಸ್ ಎಂಬ ಹೆಸರಿನಡಿಯಲ್ಲಿ ಸಮುದಾಯ ಮತ್ತು ಸಮಾಜಕ್ಕೆ ಸಹಾಯ ಮಾಡಲು ಟೊಂಕಕಟ್ಟಿ ನಿಂತರು. ಅಂದು ಹೆಚ್ಚಾಗಿ ವೈದ್ಯಕೀಯ ಕ್ಷೇತ್ರಗಳು, ಆಸ್ಪತ್ರೆಗಳಿಗೆ, ಪ್ರಯೋಗ ಶಾಲೆಗಳಿಗೆ, ಡೇಟಾ ಎಂಟ್ರಿ ಆಪರೇಟರ್‌ಗಳಿಗೆ, ಲಾಕ್‌ಡೌನ್ ಮತ್ತು ಸೀಲ್‌ಡೌನ್ ಸಮಯದಲ್ಲಿ ಅಧಿಕಾರಿಗಳಿಗೆ ಸಹಾಯ ಮಾಡಲು, ಕೊರೋನ ಪೀಡಿತರನ್ನು ಗುರುತಿಸಲು, ಕೊರೋನ ಟೆಸ್ಟ್ ನಡೆಸಲು ಇತ್ಯಾದಿ ಸಹಾಯ ಮಾಡಲು ಕೊರೋನ ವಾರಿಯರ್ಸ್‌ರನ್ನು ನೇಮಿಸಲಾಯಿತು. ಅಷ್ಟೇ ಅಲ್ಲ ಕೊರೋನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು, ಕೊರೋನದ ಬಗ್ಗೆ ಅರಿವು ಮೂಡಿಸಲು, ಸೈಬರ್ ತಂತ್ರಜ್ಞರು,  ಕಂಪ್ಯೂಟರ್ ತಜ್ಞರು,  ಪೌರಕಾರ್ಮಿಕರು, ವಾಹನ ಚಾಲಕರು, ಪೇಪರ್ ಹಂಚುವವರು ಹೀಗೆ ಎಲ್ಲರೂ ಕೊರೋನ ವಾರಿಯರ್ಸ್‌ಗಳಾಗಿ ಬದಲಾದರು. ಆಸ್ಪತ್ರೆಯಲ್ಲಿ ದಾದಿಯರ ಸಂಖ್ಯೆ ಕಡಿಮೆಯಾಗಿತ್ತು. ಮತ್ತೊಂದೆಡೆ ಇರುವ ದಾದಿಯರಿಗೂ ಕೊರೋನ ವೈರಸ್ ಅಂಟಿಕೊಂಡಿತ್ತು. ಕೆಲವು ದಾದಿಯರು ಪ್ರಾಣವನ್ನು ಬಿಟ್ಟರು. ಇನ್ನು ಕೆಲವರನ್ನು ಐಸೋಲೇಶನ್‌ನಲ್ಲಿ ಇಡಲಾಗಿತ್ತು. ಇಂತಹ ಸಂದರ್ಭದಲ್ಲಿ ದಾದಿಯರನ್ನು ಸಹ ಗುತ್ತಿಗೆ ಆಧಾರದಲ್ಲಿ ಅಂದು ಕೊರೋನ ವಾರಿಯರ್ಸ್‌ಗಳಾಗಿ ನೇಮಿಸಿಕೊಳ್ಳಲಾಗಿತ್ತು.

ಅಂದಿನ ಕೊರೋನ ಸಂದರ್ಭ ಹೇಗಿತ್ತೆಂದರೆ ಕೊರೋನ ರೋಗಿಗಳನ್ನು ನಮ್ಮ ಮನೆಯವರೇ ಮುಟ್ಟಿಸಿ ಕೊಳ್ಳಲಾರದ ಸ್ಥಿತಿಯಲ್ಲಿದ್ದರು. ಕೊನೆ-ಕೊನೆಗೆ ತಮ್ಮಅಪ್ಪ-ಅಮ್ಮ, ಮಕ್ಕಳು, ಸಂಬಂಧಿಗಳು ಸಹ ಅಂತ್ಯಕ್ರಿಯೆ  ಮಾಡಲು ಹಿಂದೇಟು  ಹಾಕಿದ್ದ  ಸಮಯ.  ಈ ಪರಿಸ್ಥಿತಿಯಲ್ಲಿ ಕೊರೋನದಿಂದ  ಮೃತಪಟ್ಟವರ ಹತ್ತಿರಕ್ಕೂ ಸಹ ಹೋಗಲು ಜನರು ಭಯಪಡುತ್ತಿದ್ದರು. ಸರಕಾರಿ ಅಧಿಕಾರಿಗಳೇ ದಿಕ್ಕೆಟ್ಟು ಮನೆಯೊಳಗೆ ಐಸೋಲೇಶನ್ ಹೆಸರಿನಲ್ಲಿ ಬಂದಿಯಾಗಿದ್ದರು. ಇಂತಹ ಒಂದು ತುರ್ತು ಪರಿಸ್ಥಿತಿಯಲ್ಲಿ ಕೊರೋನ ವಾರಿಯರ್ಸ್‌ಗಳು ತಮ್ಮ ಜೀವದ ಹಂಗು ತೊರೆದು ಪೊಲೀಸ್/ಸೇನೆಯಂತೆೆ ಸಮಾಜವನ್ನು ಕಾಪಾಡಿದ್ದಾರೆ. ಅಂದು  ತಮ್ಮ ಜೀವನವನ್ನೇ ಪಣಕ್ಕಿಟ್ಟು ಎರಡು ವರ್ಷ ಸತತವಾಗಿ ದುಡಿದ ಈ ಮಂದಿ ಇಂದು ಈಗ ಖಾಲಿ ಕೈಯಲ್ಲಿ ಮನೆಗೆ ಹೋಗುವ ಸ್ಥಿತಿ ಬಂದಿದೆ.  ಕೊರೋನ ಒಂದು ಹಂತದವರೆಗೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರುವುದರಿಂದ ಸದ್ಯ ರಾಜ್ಯಾದ್ಯಂತ ಕೊರೋನ ವಾರಿಯರ್ಸ್‌ಗಳಾಗಿದ್ದ ಸರಿಸುಮಾರು ೨೫ ಸಾವಿರ ಮಂದಿ ಈಗ ಕೆಲಸ ಕಳೆದುಕೊಂಡಿದ್ದಾರೆ. ಅಂದರೆ ಅವರೆಲ್ಲರೂ ಬೀದಿಗೆ ಬೀಳುವ ಸಮಯವಾಗಿದ್ದು, ಇತ್ತೀಚಿನ ಮಾಹಿತಿಗಳ ಪ್ರಕಾರ ಅವರೆಲ್ಲರನ್ನು ೨೦೨೨ ಮಾರ್ಚ್ ೩೧ಕ್ಕೆ ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಹಾಗೆ ನೋಡಿದರೆ ಸಂದರ್ಭಾನುಸಾರ ಆಯ್ಕೆ ಮಾಡಿಕೊಂಡು ಕೆಲಸ ಮುಗಿದ ನಂತರ ಇತರರನ್ನು ಮನೆಗೆ ಕಳುಹಿಸುವ ವ್ಯವಸ್ಥೆ ನಮಗೇನು ಹೊಸದಲ್ಲ ಅಥವಾ ಇದು ಮೊದಲು ಸಹ ಅಲ್ಲ.

ಕೊರೋನ ಪೀಡಿತರನ್ನು ಮತ್ತು ಕೊರೋನ ವೈರಸ್‌ನ್ನು ತಡೆಗಟ್ಟಲು ಬಹಳಷ್ಟು ಸಹಾಯ ಮಾಡಿದ್ದ ಕೆಲವು ಕೊರೋನ ವಾರಿಯರ್ಸ್‌ಗಳು
ಕೊನೆಗೆ ತಮ್ಮ ಪ್ರಾಣವನ್ನೇ ಕಳೆದುಕೊಂಡರು. ವಾರಿಯರ್ಸ್‌ಗಳಾಗಿ ಹೋರಾ
ಡಿದ್ದ ಇವರನ್ನು ತಮ್ಮ ಕುಟುಂಬದವರೇ ಮನೆಗೆ ಸೇರಿಸಿಕೊಳ್ಳಲು ಅಂದು ಭಯ
ಪಟ್ಟಿದ್ದರು. ವರದಿಗಳ ಪ್ರಕಾರ  ಇವರಿಂದ ತಮ್ಮ ಕುಟುಂಬಕ್ಕೂ ವೈರಸ್
ಅಂಟಿಕೊಂಡು ಅವರಲ್ಲಿ ಕೆಲವರು ತಮ್ಮ ಕುಟುಂಬವನ್ನು ಕಳೆದುಕೊಂಡರು.
ಕೇವಲ ಸ್ವಯಂ ಸೇವಕರಾಗಿ ಸೇರಿಕೊಂಡ ಇವರು ತಮ್ಮ ಕರ್ತವ್ಯವನ್ನು ಬಹಳ ನಿಷ್ಠೆಯಿಂದ ಪ್ರಾಣದ ಹಂಗು ತೊರೆದು ನಿರ್ವಹಿಸಿದ್ದಾರೆ.

ದೇಶದಲ್ಲಿ ಕೊರೋನ ಮೊದಲ ಅಲೆ ಉಂಟು ಮಾಡಿದ್ದ ಅನಾಹುತಕ್ಕಿಂತ ಎರಡನೇ ಅಲೆ ಉಂಟು ಮಾಡಿದ್ದ ಅನಾಹುತ ರೀತಿ ಅತ್ಯಂತ ಭಯಾನಕ
ವಾಗಿತ್ತು. ಮೊದಲು ಆರು ತಿಂಗಳ ಮಟ್ಟಿಗೆ ಮಾತ್ರಇವರ ನೇಮಕಾತಿ ಮಾಡಿಕೊಂಡ ಆರೋಗ್ಯ ಇಲಾಖೆ ಆಗ ಎರಡನೆಯ ಅಲೆಯ ತೀವ್ರತೆಯ ಕಾರಣದಿಂದ ಅವರನ್ನು ಮುಂದುವರಿಸಲಾಗಿತ್ತು. ಈಗ ಕೊರೋನ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದರಿಂದ ಇವರ ಸೇವೆಯನ್ನು ಏಕಾಏಕಿ ಹಿಂದಕ್ಕೆ ಪಡೆಯುವುದು ಯಾವ ನ್ಯಾಯ ಎನ್ನುವುದು ಕೊರೋನ ವಾರಿಯರ್ಸ್‌ಗಳ ಪ್ರಶ್ನೆ. ಈ ಸಂಬಂಧ ಇತ್ತೀಚೆಗೆ ಕೆಲವು ಅಧಿಕಾರಿಗಳನ್ನು ವಿಚಾರಿಸಲಾಗಿ ‘ಕಳೆದ ಬಾರಿಯಂತೆ ಇವರನ್ನು ಸರಕಾರದ ಆದೇಶದ ಮೇರೆಗೆ ಕೇವಲ ಆರು ತಿಂಗಳ ಗುತ್ತಿಗೆ ಆಧಾರದ ಮೇಲೆ ನೇಮಕಾತಿ
ಮಾಡಿಕೊಳ್ಳಲಾಗಿತ್ತು ಮತ್ತು ಇದು ತಾತ್ಕಾಲಿಕ ನೇಮಕಾತಿ ಎಂದು ಸ್ಪಷ್ಟವಾಗಿ ಅಂದು ಎಲ್ಲರಿಗೂ ಹೇಳಲಾಗಿತ್ತು. ಅದಕ್ಕೆಒಪ್ಪಿಎಲ್ಲರೂ ಆಸಕ್ತಿಯಿಂದ ಕೊರೋನ ವಾರಿಯರ್ಸ್‌ಗಳಾಗಿ ಕೆಲಸ ಮಾಡಿದ್ದಾರೆ. ಈಗ ಸರಕಾರದ ಆದೇಶದಂತೆ ಬಿಡುಗಡೆ ಮಾಡಲಾಗಿದೆ ಎಂದು ಹಾರಿಕೆಯ ಉತ್ತರವನ್ನು ಸುದ್ದಿ ಪತ್ರಿಕೆಗಳಲ್ಲಿ ನೀಡುತ್ತಿದ್ದಾರೆ.ಆರೋಗ್ಯ ಇಲಾಖೆ ಈಗ ಮೌನವಾಗಿದೆ.

ಈ ಮಧ್ಯೆ ವಿಜ್ಞಾನಿಗಳ ಅಭಿಪ್ರಾಯದಂತೆ ೨೦೨೫ ರವರೆಗೂ ಕೊರೋನ ವಿಶ್ವವನ್ನು ವಿವಿಧ ರೀತಿಯಲ್ಲಿ, ವಿವಿಧ ಹೆಸರಿನಲ್ಲಿ, ವಿವಿಧ ತಳಿಗಳ ರೂಪದಲ್ಲಿ ಕಾಡಲಿದೆ ಎಂದು ಹೇಳುತ್ತಾರೆ. ಇದೀಗ ಬಂದ ಮಾಹಿತಿಯ ಪ್ರಕಾರ ಇದೇ ಜೂನ್‌ನಲ್ಲಿ ಕೊರೋನ ೪ನೇಯ ಅಲೆ ದೇಶವನ್ನು ಅಪ್ಪಳಿಸಲಿದೆ ಎನ್ನುವ ಗಾಳಿಸುದ್ದಿಗಳು ಸಹ ಅಷ್ಟೇ ವೇಗವಾಗಿ ಹರಡುತ್ತಿದೆ. ನಾಲ್ಕನೇ ಅಲೆಯ ಪರಿಣಾಮವನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ಆದರೂ ಸಹ ಪರಿಸ್ಥಿತಿ ಕೈಮೀರಿದರೆ ಕೊರೋನ ವಾರಿಯರ್ಸ್‌ನ ಸಹಾಯ ಪುನಹ ಅಗತ್ಯ ವಾಗಬೇಕಾಗುತ್ತದೆ. ಒಂದು ವೇಳೆ ಕೊರೋನ ಸಮಸ್ಯೆ ಉಂಟಾದರೆ ಇವರನ್ನೇ ಮುಂದುವರಿಸುವುದೇ ಅಥವಾ ಹೊಸಬರನ್ನು ತೆಗೆದುಕೊಳ್ಳುವುದೇ ಎಂಬ ಗೊಂದಲ ಈಗ ಇಲಾಖೆಯಲ್ಲೇ ಉಂಟಾಗಿದೆ ಎನ್ನುವುದು ಕೆಲವರ ವಾದ. ಪರಿಸ್ಥಿತಿಯನ್ನು ನೋಡಿ ಕ್ರಮಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ಕೆಲವು ಕೊರೋನ ವಾರಿಯರ್ಸ್‌ಗಳು ‘ನಾವು ಜೀವನದ ಹಂಗು ತೊರೆದು ಹೋರಾಡಿದ್ದೇವೆ, ನಮ್ಮಲ್ಲಿ ಎಷ್ಟೋ ಮಂದಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಂದಿಗೂ ಕೆಲವರ ಆರೋಗ್ಯ ಸರಿ ಹೊಂದಿಲ್ಲ ಈ ಸಂದರ್ಭದಲ್ಲಿ ನಮ್ಮನ್ನು ಕೈಬಿಡುವುದು ಎಷ್ಟರ ಮಟ್ಟಿಗೆ ಸಮಂಜಸ ಎನ್ನುವ ಪ್ರಶ್ನೆಯನ್ನು ಕೇಳುತ್ತಾರೆೆ. ಈಗಾಗಲೇ ಇಲಾಖೆಯ ನಿರ್ಧಾರದ ವಿರುದ್ಧ ಕೆಲವು ಕೊರೋನ ವಾರಿಯರ್ಸ್‌ಗಳು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಕೆಲವು ಕೊರೋನ ವಾರಿಯರ್ಸ್‌ಗಳ ಪ್ರಕಾರ ಸಾರ್ವಜನಿಕ ಆರೋಗ್ಯ ದದೃಷ್ಟಿಯಿಂದ ನಮ್ಮನ್ನು ಕೆಲಸದಲ್ಲಿ ಮುಂದುವರಿಸಬೇಕು ಅಥವಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ನಮ್ಮನ್ನು ನೇಮಿಸಿಕೊಂಡಿರುವ ಅವಧಿಯನ್ನು ಮುಂದುವರಿಸಬೇಕು ಮತ್ತು ಬಾಕಿ ಉಳಿದಿರುವ ವೇತನವನ್ನು ಪಾವತಿಸಬೇಕು. ಕೊರೋನ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ವಿಶೇಷ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು. ಕೊರೋನ ಸಮಯದಲ್ಲಿ ಇದಕ್ಕೆ ಸಂಬಂಧಪಟ್ಟ ಕೊರೋನ ವಾರಿಯರ್ಸ್‌ಗಳ ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು
ಜೀವದ ಹಂಗು ತೊರೆದು ಹಗಲು-ರಾತ್ರಿ ಎನ್ನದೇ ಹೋರಾಡಿದ ನಮಗೆ
ನ್ಯಾಯ ದೊರಕಿಸಿಕೊಡಬೇಕು ಎಂದು ಮಾತನಾಡಿದ್ದಾರೆ. ಇನ್ನು ಕೆಲವು ವರದಿ
ಗಳ ಪ್ರಕಾರ ‘ಫೆಬ್ರವರಿ-ಮಾರ್ಚ್‌ನಲ್ಲಿ ಕೆಲವು ಕೊರೋನ ವಾರಿಯರ್ಸ್‌ಗಳು
ಆರೋಗ್ಯ ಇಲಾಖೆಯವರನ್ನು ಸಂಪರ್ಕಿಸಿ ನಮ್ಮ ಸೇವೆಯನ್ನು ಮುಂದುವರಿಸಿ
ಕೊಡಿ ಎಂದು ಕೇಳಿಕೊಂಡಾಗ ಅಧಿಕಾರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ, ಆದರೆ ಈಗ ನಮ್ಮನ್ನು ಏಕಾಏಕಿ ಕರ್ತವ್ಯದಿಂದ ಬಿಡುಗಡೆ ಮಾಡುತ್ತಿದ್ದಾರೆ’ ಎಂದು ಕೆಲವೆಡೆ ಅಳಲು ತೋಡಿಕೊಂಡಿದ್ದಾರೆ.

ನೀತಿ ನಿಯಮಗಳು ಏನೇ ಇರಲಿ, ಪ್ರಾಣದ ಹಂಗು ತೊರೆದು ಹೋರಾಡಿ
ರುವ ಈ ಕೊರೋನ ವಾರಿಯರ್ಸ್‌ಗಳಿಗೆ ಒಂದಿಷ್ಟು ಸಹಾಯ ಯಾವು
ದಾದರೂ ರೀತಿಯಲ್ಲಿ ಬೇಕಾಗಿದೆ. ಅವರ ಅರ್ಹತೆಗೆ ತಕ್ಕಂತೆ ಸರಕಾರದ
ಇಲಾಖೆಗಳಲ್ಲಿ ತಾತ್ಕಾಲಿಕವಾಗಿಯಾದರೂ ಉದ್ಯೋಗವನ್ನು ಮುಂದುವರಿ ಸುವುದು ಮಾನವೀಯವಾಗುತ್ತದೆ. ವಿಧಾನಸೌಧದಲ್ಲಿ ಇಂದಿಗೂ ಸಾವಿರಾರು ಅನವಶ್ಯಕ ತಾತ್ಕಾಲಿಕ ಉದ್ಯೋಗಿಗಳಿರುವುದನ್ನು ದಿನನಿತ್ಯ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಪ್ರಾಣದ ಹಂಗು ತೊರೆದು ಹೋರಾಡಿದ ಇವರಿಗೆ ಏನಾದರೂ  ವ್ಯವಸ್ಥೆ ಸರಕಾರ ಮಾಡಬೇಕಾಗುತ್ತದೆ. ಸಂಬಂಧಪಟ್ಟವರು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.

Writer - ಡಾ. ಡಿ.ಸಿ. ನಂಜುಂಡು

contributor

Editor - ಡಾ. ಡಿ.ಸಿ. ನಂಜುಂಡು

contributor

Similar News