ಜಾಮೀನು ದೊರೆತ ಕೆಲವೇ ದಿನಗಳಲ್ಲಿ ಕಾಶ್ಮೀರಿ ಪತ್ರಕರ್ತ ಆಸಿಫ್‌ ಸುಲ್ತಾನ್ ವಿರುದ್ಧ ಮತ್ತೊಂದು ಪ್ರಕರಣ ದಾಖಲು

Update: 2022-04-11 08:44 GMT
Photo: Kashmir narrator

ಜಮ್ಮು:  ಶ್ರೀನಗರದ ವಿಶೇಷ ನ್ಯಾಯಾಲಯವು  ಕಾಶ್ಮೀರಿ ಪತ್ರಕರ್ತ ಆಸಿಫ್ ಸುಲ್ತಾನ್ ಅವರಿಗೆ ಜಾಮೀನು ನೀಡಿದ ಕೆಲವೇ ದಿನಗಳಲ್ಲಿ ರವಿವಾರ ಪೊಲೀಸರು ಅವರ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯಿದೆಯನ್ವಯ ಪ್ರಕರಣ ದಾಖಲಿಸಿದ್ದಾರೆ.

ಮೂವತ್ತೈದು ವರ್ಷದ ಆಸಿಫ್ ಅವರು ನಿಷೇಧಿತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಪರ ಕೆಲಸ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಪೊಲೀಸರು ಅವರನ್ನು ಆಗಸ್ಟ್ 2018 ರಲ್ಲಿ ಬಂಧಿಸಿದ್ದರು.

ಎಪ್ರಿಲ್ 5ರಂದು ವಿಶೇಷ ಎನ್‍ಐಎ ನ್ಯಾಯಾಲಯದ  ನ್ಯಾಯಾಧೀಶರು ಅವರನ್ನು ಈ ಪ್ರಕರಣದಲ್ಲಿ ರೂ 2 ಲಕ್ಷ ಬಾಂಡ್ ಒದಗಿಸುವ ಷರತ್ತಿನೊಂದಿಗೆ ಬಿಡುಗಡೆಗೆ ಆದೇಶಿಸಿದ್ದರು.

ಅವರ ಮೇಲಿನ ಆರೋಪ ಸಾಬೀತುಪಡಿಸಲು ನೇರ ಸಾಕ್ಷ್ಯ ಅಥವಾ ಯಾವುದೇ ಇತರ ಸಾಕ್ಷ್ಯವಿಲ್ಲ ಎಂದು ಜಾಮೀನು ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಜಾಮೀನು ಆದೇಶದ ಹೊರತಾಗಿಯೂ ಅವರನ್ನು ಬಂಧನದಿಂದ ಬಿಡುಗಡೆಗೊಳಿಸಲಾಗಿರಲಿಲ್ಲ ಎಂದು ಅವರ ವಕೀಲರು ಹೇಳಿದ್ದಾರೆ.

"ಕೋರ್ಟ್ ಆದೇಶ ಪಾಲನೆಯಾಗಲು ನಾವು ಕಾಯುತ್ತಿದ್ದೆವು. ಆದರೆ ಅವರನ್ನು ಇಷ್ಟು ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿರಿಸಲಾಗಿದೆ" ಎಂದು ವಕೀಲ ಆದಿಲ್ ಅಬ್ದುಲ್ಲಾಹ್ ಪಂಡಿತ್ ಹೇಳಿದ್ದಾರೆ.

ಅವರ ಬಂಧನ ಅವಧಿಯನ್ನು ವಿಸ್ತರಿಸುವ ಉದ್ದೇಶದಿಂದ ಜಮ್ಮು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಅವರ ಕುಟುಂಬಕ್ಕೂ ಮಾಹಿತಿ ನೀಡಿಲ್ಲ ಎಂದು ವಕೀಲರು ಹೇಳಿದ್ದಾರೆ.

2018ರಲ್ಲಿ ಬಂಧಿಸಿದಾಗ ಅವರ ವಿರುದ್ಧ ಕೊಲೆ ಮತ್ತು ಸಂಚಿನ ಆರೋಪವನ್ನು ಶ್ರೀನಗರದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಗೆ ಸಂಬಂಧಿಸಿದಂತೆ ಹೊರಿಸಲಾಗಿತ್ತು. ಅವರ ವಿರುದ್ಧ ಯುಎಪಿಎ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿತ್ತು.

ಜನವರಿಯಿಂದೀಚೆಗೆ ಜಮ್ಮು ಕಾಶ್ಮೀರದಲ್ಲಿ ಪತ್ರಕರ್ತರ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯಿದೆ ಹೇರಿದ ಮೂರನೇ ಪ್ರಕರಣ ಇದಾಗಿದೆ.

ಜನವರಿಯಲ್ಲಿ ಸಜ್ಜಾದ್ ಗುಲ್ ಎಂಬ ಪತ್ರಕರ್ತನ ವಿರುದ್ಧ ಹಾಗೂ ಮಾರ್ಚ್‍ನಲ್ಲಿ ದಿ ಕಾಶ್ಮೀರ್ ವಲ್ಲಾ  ಸುದ್ದಿ ತಾಣದ ಮುಖ್ಯ ಸಂಪಾದಕ ಫಹಾದ್ ಶಾ ವಿರುದ್ಧ ಈ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News