ಎಲ್ಲ ವಿದೇಶಿ ಸಾಲಗಳ ಮರುಪಾವತಿ ತನ್ನಿಂದ ಅಸಾಧ್ಯ ಎಂದು ಪ್ರಕಟಿಸಿದ ಶ್ರೀಲಂಕಾ

Update: 2022-04-12 17:14 GMT

ಕೋಲಂಬೊ, ಎ.12: ತನ್ನ ಇತಿಹಾಸದಲ್ಲಿಯೇ ಅತ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ 51 ಶತಕೋಟಿ ಡಾಲರ್‌ ಗಳ ವಿದೇಶಿ ಸಾಲಗಳನ್ನು ಮರುಪಾವತಿಸಲು ವಿಫಲಗೊಂಡಿದೆ. ಸರಕಾರದ ರಾಜೀನಾಮೆಯನ್ನು ಆಗ್ರಹಿಸಿ ವ್ಯಾಪಕ ಪ್ರತಿಭಟನೆಗಳ ನಡುವೆಯೇ ದ್ವೀಪರಾಷ್ಟ್ರವು ಬಾಹ್ಯ ಸಾಲಗಳನ್ನು ತೀರಿಸಲು ತನ್ನಿಂದ ಸಾಧ್ಯವಿಲ್ಲ, ತಾನು ಸುಸ್ತಿದಾರನಾಗಿದ್ದೇನೆ ಎಂದು ಮಂಗಳವಾರ ಪ್ರಕಟಿಸಿದೆ.

ತೀವ್ರ ಆಹಾರ ಮತ್ತು ಇಂಧನ ಕೊರತೆಗಳು, ಜೊತೆಯಲ್ಲಿ ದಿನವಿಡೀ ವಿದ್ಯುತ್ ಪೂರೈಕೆ ಕಡಿತ ದೇಶದ 2.2 ಕೋಟಿ ಜನರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿವೆ. 1948ರಲ್ಲಿ ದೇಶಕ್ಕೆ ಸ್ವಾತಂತ್ರ ದೊರಕಿದಾಗಿನಿಂದ ಇದು ಅತ್ಯಂತ ನೋವಿನ ಆರ್ಥಿಕ ಕುಸಿತವಾಗಿದೆ.

ಇತ್ತೀಚಿನ ವಾರಗಳಲ್ಲಿ ಸಾರ್ವಜನಿಕ ಆಕ್ರೋಶವು ಭುಗಿಲೆದ್ದಿದ್ದು, ಉದ್ರಿಕ್ತ ಜನರ ಗುಂಪುಗಳು ಸರಕಾರದ ನಾಯಕರ ಮನೆಗಳಿಗೆ ನುಗ್ಗಲು ಯತ್ನಿಸುತ್ತಿವೆ. ಭದ್ರತಾ ಪಡೆಗಳು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಪ್ರಯೋಗಿಸುವ ಮೂಲಕ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸುತ್ತಿವೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ಪಾರುಗಾಣಿಕೆಯ ಮುನ್ನ ಶ್ರೀಲಂಕಾ ಹಣಕಾಸು ಸಚಿವಾಲಯವು ವಿದೇಶಿ ಸರಕಾರಗಳಿಂದ ಸಾಲಗಳು ಸೇರಿದಂತೆ ಎಲ್ಲ ವಿದೇಶಿ ಋಣಬಾಧ್ಯತೆಗಳನ್ನು ತೀರಿಸುವಲ್ಲಿ ದೇಶವು ವಿಫಲಗೊಂಡಿದೆ ಮತ್ತು ಸುಸ್ತಿದಾರನಾಗಿದೆ ಎಂದು ಹೇಳಿದೆ.
ಗಣರಾಜ್ಯದ ಹಣಕಾಸು ಸ್ಥಿತಿ ಇನ್ನಷ್ಟು ಹದಗೆಡುವುದನ್ನು ತಡೆಯಲು ಕೊನೆಯ ಉಪಾಯವಾಗಿ ಸರಕಾರವು ತುರ್ತು ಕ್ರಮವನ್ನು ತೆಗೆದುಕೊಳ್ಳುತ್ತಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಸಾಲದಾತರು ತಮಗೆ ಬರಬೇಕಿರುವ ಯಾವುದೇ ಬಡ್ಡಿ ಪಾವತಿಗಳನ್ನು ಬಂಡವಾಳೀಕರಿಸಿಕೊಳ್ಳಲು ಅಥವಾ ಶ್ರೀಲಂಕಾದ ರೂಪಾಯಿಗಳಲ್ಲಿ ಮರುಪಾವತಿಯನ್ನು ಆಯ್ಕೆ ಮಾಡಿಕೊಳ್ಳಲು ಮುಕ್ತರಾಗಿದ್ದಾರೆ ಎಂದು ಸಚಿವಾಲಯವು ಹೇಳಿದೆ.

ಕೋವಿಡ್ ಸಾಂಕ್ರಾಮಿಕವು ಪ್ರವಾಸೋದ್ಯಮ ಆದಾಯ ಮತ್ತು ವಿದೇಶಗಳಲ್ಲಿ ದುಡಿಯುತ್ತಿರುವ ತನ್ನ ಪ್ರಜೆಗಳಿಂದ ಸ್ವದೇಶಕ್ಕೆ ಹಣದ ರವಾನೆಗೆ ಹೊಡೆತ ನೀಡಿದ ಬಳಿಕ ಅಗತ್ಯ ಸರಕುಗಳನ್ನು ಆಮದು ಮಾಡಿಕೊಳ್ಳಲಾಗದ ಅಸಮರ್ಥತೆಯೊಂದಿಗೆ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಆರಂಭಗೊಂಡಿತ್ತು.

ತನ್ನ ವಿದೇಶಿ ಕರೆನ್ಸಿ ಮೀಸಲನ್ನು ರಕ್ಷಿಸಿಕೊಳ್ಳಲು ಮತ್ತು ಈಗ ಸುಸ್ತಿಯಾಗಿರುವ ಸಾಲಗಳ ಮರುಪಾವತಿಗೆ ಬಳಸಿಕೊಳ್ಳಲು ಸರಕಾರವು ಆಮದುಗಳ ಮೇಲೆ ವ್ಯಾಪಕ ನಿಷೇಧವನ್ನು ಹೇರಿತ್ತು.

ಸರಕಾರದ ದುರಾಡಳಿತ, ವರ್ಷಗಳ ಸಂಚಿತ ಸಾಲ ಮತ್ತು ಅಸಮರ್ಪಕ ತೆರಿಗೆ ಕಡಿತಗಳು ಆರ್ಥಿಕತೆ ತೀವ್ರ ಹದಗೆಡಲು ಕಾರಣವಾಗಿವೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು.

ಸರಕಾರದ ಬಗ್ಗೆ ಸಾರ್ವಜನಿಕರಲ್ಲಿ ಅಗಾಧ ಹತಾಶೆ ಮಡುಗಟ್ಟಿದೆ. ವಿರಳವಾಗಿ ಪೂರೈಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ಮತ್ತು ತಮ್ಮ ಅಡುಗೆ ಸ್ಟವ್ ಗಳಿಗಾಗಿ ಸೀಮೆಎಣ್ಣೆಯನ್ನು ಖರೀದಿಸಲು ಜನರು ದ್ವೀಪರಾಷ್ಟ್ರದಾದ್ಯಂತ ಪ್ರತಿದಿನ ಉದ್ದನೆಯ ಸರದಿ ಸಾಲುಗಳಲ್ಲಿ ಕಾದು ನಿಂತು ಹೈರಾಣಾಗುತ್ತಿದ್ದಾರೆ.
ರಾಷ್ಟ್ರಾಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ರಾಜೀನಾಮೆಗೆ ಆಗ್ರಹಿಸಿ ಸತತ ನಾಲ್ಕನೆಯ ದಿನವಾದ ಮಂಗಳವಾರವೂ ಸಹಸ್ರಾರು ಪ್ರತಿಭಟನಾಕಾರರು ರಾಜಧಾನಿ ಕೊಲಂಬೊದಲ್ಲಿರುವ ಅವರ ಕಚೇರಿಯ ಎದುರು ಬೀಡುಬಿಟ್ಟಿದ್ದರು. 
ರೇಟಿಂಗ್ ಕಡಿತ
ಅಂತರರಾಷ್ಟ್ರೀಯ ರೇಟಿಂಗ್ ಸಂಸ್ಥೆಗಳು ಕಳೆದ ವರ್ಷ ಶ್ರೀಲಂಕಾದ ರೇಟಿಂಗನ್ನು ಕಡಿತ ಮಾಡುವ ಮೂಲಕ ಹೊಸ ಸಾಲಗಳನ್ನೆತ್ತಲು ಹಾಗೂ ಆಹಾರ ಮತ್ತು ಇಂಧನ ಬೇಡಿಕೆಗಳನ್ನು ಪೂರೈಸಲು ವಿದೇಶಿ ಬಂಡವಾಳ ಮಾರುಕಟ್ಟೆಗಳನ್ನು ಪ್ರವೇಶಿಸುವುದನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಿವೆ.
ಶ್ರೀಲಂಕಾ ಭಾರತ ಮತ್ತು ಚೀನಾಗಳಿಂದ ಋಣ ಪರಿಹಾರವನ್ನು ಕೋರಿತ್ತಾದರೂ ಬದಲಿಗೆ ಉಭಯ ದೇಶಗಳು ತಮ್ಮಿಂದ ಸರಕುಗಳನ್ನು ಖರೀದಿಸಲು ಹೆಚ್ಚಿನ ಸಾಲ ಸೌಲಭ್ಯಗಳನ್ನು ಒದಗಿಸಿದ್ದವು.

ಶ್ರೀಲಂಕಾದ ವಿದೇಶಿ ಸಾಲಗಳಲ್ಲಿ ಚೀನಾ ಮತ್ತು ಜಪಾನ್ ತಲಾ ಶೇ.10ರಷ್ಟು ಪಾಲು ಹೊಂದಿದ್ದರೆ ಭಾರತವು ನೀಡಿರುವ ಸಾಲವು ಶೇ.5ಕ್ಕೂ ಕಡಿಮೆಯಿದೆ.
ಶ್ರೀಲಂಕಾದ ಒಟ್ಟು ಸಾಲದ ಪೈಕಿ ಅರ್ಧಕ್ಕೂ ಕಡಿಮೆ ಸಾಲಗಳು ಅಂತರರಾಷ್ಟ್ರೀಯ ಸಾರ್ವಭೌಮ ಬಾಂಡ್ ಗಳು ಮತ್ತು ಅಂತಹುದೇ ಇತರ ಸಾಧನಗಳ ಮೂಲಕ ಪಡೆದಿರುವ ಮಾರುಕಟ್ಟೆ ಸಾಲಗಳಾಗಿವೆ.

ಈ ವರ್ಷ ತನ್ನ ಸಾಲದ ಹೊರೆಯ ಮೇಲಿನ ಬಡ್ಡಿ ಇತ್ಯಾದಿ ಸೇವಾಶುಲ್ಕಗಳನ್ನು ಪಾವತಿಸಲು ಶ್ರೀಲಂಕಾಕ್ಕೆ ಏಳು ಶತಕೋಟಿ ಡಾಲರ್‌ ಗಳ ಅಗತ್ಯವಿದೆ ಎಂದು ಅಂದಾಜುಗಳು ತೋರಿಸಿದ್ದು,ಮಾರ್ಚ್ ಅಂತ್ಯದ ವೇಳೆಗೆ ಅದು ಕೇವಲ 1.9 ಶತಕೋಟಿ ಡಾಲರ್‌ ಗಳ ಮೀಸಲನ್ನು ಹೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News