ಭಾರತದ ಬೆಳವಣಿಗೆಯ ಮುನ್ನಂದಾಜನ್ನು ಶೇ.8.7ರಿಂದ ಶೇ.8ಕ್ಕೆ ತಗ್ಗಿಸಿದ ವಿಶ್ವ ಬ್ಯಾಂಕ್

Update: 2022-04-14 16:02 GMT
Photo: PTI

ಹೊಸದಿಲ್ಲಿ,ಎ.14: ವಿಶ್ವ ಬ್ಯಾಂಕ್ ಪ್ರಸಕ್ತ ವಿತ್ತವರ್ಷ (2022-23)ಕ್ಕೆ ಭಾರತದ ಬೆಳವಣಿಗೆಯ ಮುನ್ನಂದಾಜನ್ನು ಜನವರಿಯಲ್ಲಿ ತಾನು ನಿರೀಕ್ಷಿಸಿದ್ದ ಶೇ.8.7ರಿಂದ ಶೇ.8ಕ್ಕೆ ತಗ್ಗಿಸಿದೆ. ವಿಶ್ವ ಬ್ಯಾಂಕ್ ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ತನ್ನ ಪರಿಷ್ಕರಣೆಗೆ ಕಾರಣವಾಗಿ ನೀಡಿದೆ.

ಭಾರತದಲ್ಲಿ ಕಾರ್ಮಿಕ ಮಾರುಕಟ್ಟೆಯ ಅಪೂರ್ಣ ಚೇತರಿಕೆ ಮತ್ತು ಹಣದುಬ್ಬರ ಒತ್ತಡಗಳು ಕುಟುಂಬಗಳಿಂದ ಬಳಕೆಯನ್ನು ನಿರ್ಬಂಧಿಸಲಿವೆ ಎಂದು ವಿಶ್ವ ಬ್ಯಾಂಕ್ ದಕ್ಷಿಣ ಏಶ್ಯಾ ಪ್ರದೇಶಕ್ಕಾಗಿ ತನ್ನ ದ್ವೈವಾರ್ಷಿಕ ವರದಿಯಲ್ಲಿ ಹೇಳಿದೆ.

ವಿಶ್ವ ಬ್ಯಾಂಕ್ ದಕ್ಷಿಣ ಏಶ್ಯಾಕ್ಕಾಗಿ ತನ್ನ ಬೆಳವಣಿಗೆ ಮುನ್ನಂದಾಜನ್ನೂ ಶೇ.6.6ಕ್ಕೆ ತಗ್ಗಿಸಿದೆ. ಕಳೆದ ಜನವರಿಯಲ್ಲಿ ಅದು ಶೇ.7.6ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಿತ್ತು.

ಬಾಹ್ಯ ಆಘಾತಗಳನ್ನು ಎದುರಿಸಲು ಮತ್ತು ದುರ್ಬಲರನ್ನು ರಕ್ಷಿಸಲು ಪ್ರದೇಶದಲ್ಲಿಯ ಸರಕಾರಗಳು ತಮ್ಮ ಹಣಕಾಸು ಮತ್ತು ವಿತ್ತೀಯ ನೀತಿಗಳನ್ನು ಎಚ್ಚರಿಕೆಯಿಂದ ಯೋಜಿಸುವ ಅಗತ್ಯವಿದೆ ಎಂದು ಹೇಳಿದ ವಿಶ್ವ ಬ್ಯಾಂಕ್ ಉಪಾಧ್ಯಕ್ಷ (ದ.ಏಶ್ಯಾ) ಹಾರ್ಟ್‌ವಿಗ್ ಶೇಫರ್ ಅವರು, ದ.ಏಶ್ಯಾ ಕಳೆದೆರಡು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕದ ತೀವ್ರ ದುಷ್ಪರಿಣಾಮ ಸೇರಿದಂತೆ ಹಲವಾರು ಆಘಾತಗಳನ್ನು ಎದುರಿಸಿದೆ. ಉಕ್ರೇನ್‌ನಲ್ಲಿಯ ಯುದ್ಧದಿಂದಾಗಿ ಏರುತ್ತಿರುವ ತೈಲ ಮತ್ತು ಆಹಾರ ಬೆಲೆಗಳು ಜನರ ನೈಜ ಆದಾಯಗಳ ಮೇಲೆ ಬಲವಾದ ಋಣಾತ್ಮಕ ಪರಿಣಾಮಗಳನ್ನು ಬೀರಲಿವೆ ಎಂದು ತಿಳಿಸಿದರು.

ಇಂಧನ ಬೆಲೆಗಳ ಮೇಲೆ ಉಕ್ರೇನ್ ಯುದ್ಧದ ಪರಿಣಾಮವು ತನ್ನ ಇಂಧನ ಆಮದುಗಳನ್ನು ಕಡಿತಗೊಳಿಸಲು ಮತ್ತು ಹಸಿರು ಶಕ್ತಿಯತ್ತ ಸಾಗಲು ದ.ಏಶ್ಯಾ ಪ್ರದೇಶವನ್ನು ಪ್ರಚೋದಿಸಬಹುದು ಎಂದು ವರದಿಯು ಹೇಳಿದೆ.

ಮಾ.30ರಂದು ಇಂಡಿಯಾ ರೇಟಿಂಗ್ಸ್ 2022-23ನೇ ಸಾಲಿಗೆ ಭಾರತದ ಬೆಳವಣಿಗೆಯ ಅಂದಾಜನ್ನು ಮೊದಲಿನ ಶೇ.7.6ರಿಂದ ಶೇ.7-ಶೇ 7.2ಕ್ಕೆ ತಗ್ಗಿಸಿದ್ದರೆ,ಮಾ.22ರಂದು ಅಮೆರಿಕದ ಕ್ರೆಡಿಟ್ ರೇಟಿಂಗ್ ಸಂಸ್ಥೆ ಫಿಚ್ ಅದನ್ನು ಮೊದಲಿನ ಶೇ.10.3ರಿಂದ ಶೇ.8.5ಕ್ಕೆ ತಗ್ಗಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News