ಮಧ್ಯಪ್ರದೇಶ: ಕಳೆದ ತಿಂಗಳಿನಿಂದಲೇ ಜೈಲಿನಲ್ಲಿರುವವರನ್ನು ರಾಮನವಮಿ ಹಿಂಸಾಚಾರದ ಆರೋಪಿಗಳ ಪಟ್ಟಿಗೆ ಸೇರಿಸಿದ ಪೊಲೀಸರು

Update: 2022-04-15 06:45 GMT
Photo: Twitter

ಪಾಲ್: ಕೊಲೆಯತ್ನ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮೂವರು ವ್ಯಕ್ತಿಗಳನ್ನು  ಇತ್ತೀಚೆಗೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಖರ್ಗೋನ್ ಎಂಬಲ್ಲಿ ರಾಮ ನವಮಿ ಸಂದರ್ಭ ನಡೆದ ಮತೀಯ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳೆಂದು ಹೆಸರಿಸಲಾಗಿರುವುದು ತಿಳಿದು ಬಂದಿದ್ದು, ಈ ಪ್ರಕರಣದಲ್ಲಿ ಪೊಲೀಸ್ ತನಿಖೆಯನ್ನೂ ಇದು ಪ್ರಶ್ನಿಸುವಂತಾಗಿದೆ. ಈ ಮೂವರ ಪೈಕಿ ಒಬ್ಬಾತನ ಮನೆ ಅಕ್ರಮವಾಗಿ ನಿರ್ಮಾಣಗೊಂಡಿದೆ ಎಂದು ಹೇಳಿಕೊಂಡು ಜಿಲ್ಲಾಡಳಿತ ಅದನ್ನು ಇತ್ತೀಚೆಗೆ ನೆಲಸಮಗೊಳಿಸಿತ್ತು.

ಈ ಮೂವರನ್ನೂ ಕಳೆದ ತಿಂಗಳು ಬಂಧಿಸಿದಂದಿನಿಂದ ಅವರು ಜೈಲಿನಲ್ಲಿದ್ದು ಎಪ್ರಿಲ್ 10ರಂದು ಬರ್ವಾನಿ ಜಿಲ್ಲೆಯ ಸಂಧ್ವಾ ಎಂಬಲ್ಲಿ ರಾಮ ನವಮಿ ಹಿಂಸಾಚಾರದ ಸಂದರ್ಭ ಮೋಟಾರ್ ಬೈಕ್ ಒಂದಕ್ಕೆ ಬೆಂಕಿ ಹಚ್ಚಿದ್ದಾರೆಂದು ಆರೋಪಿಸಲಾಗಿತ್ತು.

ಅವರ ವಿರುದ್ಧ ಕೊಲೆ ಪ್ರಕರಣವಿರುವ ಠಾಣೆಯಲ್ಲಿಯೇ ಈ ಪ್ರಕರಣವೂ ದಾಖಲಾಗಿದೆ. ಈ ಪ್ರಮಾದದ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು ದೂರುದಾರನ ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಮೂವರು ಆರೋಪಿಗಳಾದ ಶಬಾಝ್, ಫಕ್ರು ಹಾಗೂ ರೌಫ್ ವಿರುದ್ಧ ಕೊಲೆ ಯತ್ನ ಪ್ರಕರಣ ಮಾರ್ಚ್ 5ರಂದು ದಾಖಲಿಸಲಾಗಿತ್ತು. ಶಬಾಝ್ ತಾಯಿ ಸಕೀನಾ ಮಾತನಾಡಿ ಮತೀಯ ಹಿಂಸಾಚಾರ ನಂತರ ಯಾವುದೇ ನೋಟಿಸ್ ನೀಡದೆ ಮನೆಯನ್ನು ನೆಲಸಮಗೊಳಿಸಲಾಗಿದೆ ಎಂದು ಹೇಳಿದರು. ಎಪ್ರಿಲ್ 10ರ ಘಟನೆ ಸಂಬಂಧ ಮಗನ ವಿರುದ್ಧ ಪ್ರಕರಣ ದಾಖಲಿಸಿದಾಗ ಆತ ಈ ಹಿಂದೆಯೇ ಜೈಲಿನಲ್ಲಿದ್ದಾನೆಂದು ಹೇಳಿದರೂ ಯಾರೂ ಕಿವಿಗೆ ಹಾಕಿಕೊಂಡಿಲ್ಲ ಎಂದು ಆಕೆ ಹೇಳಿದ್ದಾರೆ.

ರಾಮ ನವಮಿ ಮೆರವಣಿಗೆ ಸಂದರ್ಭ ದಾಳಿ ನಡೆಸಿದ್ದಾರೆನ್ನಲಾದವರ ಅಕ್ರಮ ಕಟ್ಟಡಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಮುಖ್ಯಮಂತ್ರಿಯ ಸೂಚನೆ ಮೇರೆಗೆ ನೆಲಸಮಗೊಳಿಸಿದ್ದವು. ಸುಮಾರು 45 ಮನೆಗಳು ಹಾಗೂ ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News