ಇಟ್ಸ್ ಓಕೆ ಟು ನಾಟ್ ಬಿ ಓಕೆ : ಚಿಟ್ಟೆಗಳ ರೆಕ್ಕೆಗಳಿಂದ ಉದುರಿದ ಬಣ್ಣಗಳು
'ಇಟ್ಸ್ ಓಕೆ ಟು ನಾಟ್ ಬಿ ಓಕೆ' 2020ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡ ಕೊರಿಯನ್ ಸರಣಿ. ಹಲವು ಕಾರಣಗಳಿಗಾಗಿ ಇದೊಂದು ವಿಭಿನ್ನ ಸರಣಿಯಾಗಿ ಗುರುತಿಸಿಕೊಂಡಿದೆ. ಪಾರ್ಕ್ ಶಿನ್ ವೂ ನಿರ್ದೇಶಿಸಿದ ಈ ಸರಣಿಯನ್ನು ನ್ಯೂಯಾರ್ಕ್ ಟೈಮ್ಸ್ 'ದಿ ಬೆಸ್ಟ್ ಇಂಟರ್‌ನ್ಯಾಶನಲ್ ಶೋ 2020' ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಹಲವು ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳನ್ನು ಈ ಸರಣಿ ತನ್ನದಾಗಿಸಿಕೊಂಡಿದೆ. ಈ ಸರಣಿಯು ಒಟ್ಟು ಸುದೀರ್ಘ 16 ಕಂತುಗಳನ್ನು ಹೊಂದಿದೆ. ಇಬ್ಬರು ಅನಾಥ ಸೋದರರು. ಅಣ್ಣನಿಗೆ ಆಟಿಸಂ ಕಾಯಿಲೆ. ಆತನ ಸಂಪೂರ್ಣ ಹೊಣೆಗಾರಿಕೆ ಕಿರಿಯ ಸೋದರನದು. ಕಥಾ ನಾಯಕಿ ಮೂನ್ ಸ್ಯಾಂಗ್‌ಚೆ ಈ ಸರಣಿಯ ಕೇಂದ್ರ ಪಾತ್ರ. ಈಕೆ ಮಕ್ಕಳ ಕತೆಗಳನ್ನು ಬರೆಯುವ ಸೆಲೆಬ್ರಿಟಿ ಲೇಖಕಿ. ಈಕೆಯ ಮೇಲೆ ಒಂದು ಪ್ರಮುಖ ಆರೋಪವೂ ಇದೆ. ಋಣಾತ್ಮಕವಾದ ಪಾತ್ರಗಳನ್ನೇ ಕೇಂದ್ರೀಕರಿಸಿ ಮಕ್ಕಳ ಕತೆಗಳನ್ನು ಹೆಣೆಯುವವಳು. ಈಕೆಯ ಕತೆಗಳಲ್ಲಿ ಮಾಟಗಾತಿಯರೆಲ್ಲ ಸುಂದರಿಯಾಗಿರುತ್ತಾರೆ. ವಿಲನ್‌ಗಳೇ ನಾಯಕರಾಗಿರುತ್ತಾರೆ. ಲೇಖಕಿ ಅಂತರ್ಮುಖಿ. ಒಂದು ರೀತಿಯಲ್ಲಿ ಆಕೆಯದು ಅಂತರಂಗದಲ್ಲಿ ಅಪಾರ ನೋವುಗಳನ್ನು ಬಚ್ಚಿಟ್ಟುಕೊಂಡು ನಿಷ್ಠುರ ಮುಖಭಾವದಿಂದ ಬದುಕುವ ಸೈಕೋ ಪಾತ್ರ. ಮಾಧ್ಯಮಗಳಲ್ಲಿ ತೀವ್ರ ಟೀಕೆಗೊಳಗಾದವಳು. ಕತ್ತಲೆಂದರೆ ಈಕೆಗೆ ಭಯ. ಆಕೆಯ ಬಾಲ್ಯ ವಿಲಕ್ಷಣಗಳಿಂದ ಕೂಡಿದ್ದವು.
ಆ ಬಾಲ್ಯದ ಗಾಯಗಳು ಸರಣಿಯುದ್ದಕ್ಕೂ ಆಕೆಯನ್ನು ಹಿಂಬಾಲಿಸುತ್ತಿರುತ್ತವೆ.ಅನಾಥ ಸೋದರರಲ್ಲಿ ಕಿರಿಯವನ ಹೆಸರು ಮೂನ್ ಗ್ಯಾಂಗ್ ಚೇ. ಈತನ ಬಾಲ್ಯ ಕೂಡ ಹಲವು ದುರಂತಗಳಿಂದ ಕೂಡಿವೆ. ಅವುಗಳಲ್ಲಿ ಮುಖ್ಯವಾದದ್ದು ಆಟಿಸಂ ಪೀಡಿತ ಆತನ ಅಣ್ಣ. ತಾಯಿಯ ಸಂಪೂರ್ಣ ಪ್ರೀತಿ ಅಣ್ಣನ ಪಾಲಾಗುತ್ತದೆ. 'ಅಣ್ಣನ ಬಗ್ಗೆ ಕಾಳಜಿ ವಹಿಸುವುದೇ ನಿನ್ನ ಕರ್ತವ್ಯ, ಅದಕ್ಕಾಗಿಯೇ ನೀನು ಹುಟ್ಟಿದ್ದೀಯ' ಎಂದು ತಾಯಿ ಪದೇ ಪದೇ ಹೇಳುತ್ತಿರುತ್ತಾಳೆ. ಈತನ ಮನದಲ್ಲೊಮ್ಮೆ 'ಅಣ್ಣ ಯಾಕೆ ಸಾಯಬಾರದು?' ಎನ್ನುವ ಪ್ರಶ್ನೆ ಹುಟ್ಟಿ ಬಿಡುತ್ತದೆ. ಇದೇ ಹೊತ್ತಿಗೆ ಈತನ ತಾಯಿ ಅನಿರೀಕ್ಷಿತವಾಗಿ ಕೊಲೆಗೀಡಾಗುತ್ತಾಳೆ. ಕೊಲೆಗಾತಿಯನ್ನು ಆಟಿಸಂ ಪೀಡಿತ ಅಣ್ಣ ನೋಡಿರುತ್ತಾನೆ. 'ಚಿಟ್ಟೆಯೊಂದು ತನ್ನ ತಾಯಿಯನ್ನು ಕೊಂದಿತು' ಎಂದು ಹೇಳುತ್ತಿರುತ್ತಾನೆ. ಆ ಚಿಟ್ಟೆ ಆತನನ್ನು ತೀವ್ರವಾಗಿ ಕಾಡತೊಡಗುತ್ತದೆ. ಆ ಚಿಟ್ಟೆಯಿಂದ ಪಾರಾಗುವುದಕ್ಕಾಗಿ ಈ ಸೋದರರು ಊರಿನಿಂದ ಊರಿಗೆ ಅಲೆಯುತ್ತಾ ಬೆಳೆಯುತ್ತಾರೆ. ತನ್ನ ತಾಯಿಯ ವಚನವನ್ನು ಕಿರಿಯ ಸೋದರ ನಿರ್ವಹಿಸುತ್ತಾನೆ. ಅಣ್ಣನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುತ್ತಾನೆ. ಈ ಸಂದರ್ಭದಲ್ಲೇ ಕಿರಿಯ ಸೋದರನಿಗೆ ಕಥಾನಾಯಕಿಯ ಭೇಟಿಯಾಗುತ್ತದೆ. ಇವರಿಬ್ಬರ ಮುಖಾಮುಖಿ ಅವರ ಬಾಲ್ಯದ ದುರಂತಗಳ ಮುಖಾಮುಖಿಯೂ ಹೌದು. ಪ್ರೀತಿ, ವಾತ್ಸಲ್ಯ, ಮಮತೆ ಇವುಗಳನ್ನು ನಿರೂಪಿಸಲು ಬಳಸಿದ ಸಂಕೇತಗಳು , ರೂಪಕಗಳು ಈ ಸರಣಿಯ ಹೆಗ್ಗಳಿಕೆಯಾಗಿದೆ. ನಮ್ಮ ಬಾಲ್ಯವೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಬಾಲ್ಯದ ಗಾಯಗಳಿಂದ ಸೈಕೋ ಸ್ಥಿತಿ ತಲುಪಿದ್ದ ನಾಯಕಿಯನ್ನು ಪಾರು ಮಾಡಿ, ತನ್ನ ಅಪಾರ ಪ್ರೀತಿಯ ಮೂಲಕ ಮನುಷ್ಯ ಲೋಕಕ್ಕೆ ಕರೆ ತರುವ ನಾಯಕ ನಮಗೆ ಇಷ್ಟವಾಗುತ್ತಾನೆ. ಒಂದೆಡೆ ತಾನು ಪ್ರೀತಿಸುವ ಹುಡುಗಿ, ಇನ್ನೊಂದೆಡೆ ತನ್ನನ್ನು ಅವಲಂಬಿಸಿರುವ ಅಣ್ಣ ಇವೆರಡನ್ನು ಜೊತೆ ಜೊತೆಯಾಗಿ ಕೊಂಡೊಯ್ಯಲು ಹೆಣಗಾಡುವ ನಾಯಕನ ಪಾಡು ಹೃದಯ ಮುಟ್ಟುವಂತಿದೆ. ತಂದೆ-ತಾಯಿ, ಗೆಳೆಯ-ಗೆಳತಿ, ಅಣ್ಣ-ತಮ್ಮ ಹೀಗೆ ಹಲವು ಸಂಬಂಧಗಳ ಹಿರಿಮೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಸರಣಿ ಇದು. ಸರಣಿಯನ್ನು ಲವಲವಿಕೆಯಿಂದ ನಿರೂಪಿಸಲಾಗಿದೆ. ನಾಯಕಿ ಮತ್ತು ನಾಯಕನ ನಡುವಿನ ಪ್ರೀತಿ, ಮುನಿಸು, ಕೋಪ, ತಾಪಗಳೆಲ್ಲ ಆಹ್ಲಾದಕರವಾಗಿವೆ. ಕ್ಲೈಮಾಕ್ಸ್ ನಲ್ಲಿ ಕಥಾನಾಯಕಿಯ ತಾಯಿಯ ಪ್ರವೇಶ ಸರಣಿಗೆ ತಿರುವು ನೀಡುತ್ತದೆ. ಆಟಿಸಂ ಪೀಡಿತ ಅಣ್ಣನ ಮುಗ್ಧತೆ, ಸ್ವಾರ್ಥ, ಸಿಟ್ಟು, ಹುಡುಗಾಟಿಕೆ ಎಲ್ಲವೂ ಮನ ಮುಟ್ಟುವಂತಿವೆೆ. ಕಥಾನಾಯಕ ಕೆಲಸ ನಿರ್ವಹಿಸುವ ಮಾನಸಿಕ ಆಸ್ಪತ್ರೆಯ ವಿವಿಧ ಪಾತ್ರಗಳು ಕಿರುಕತೆಗಳಾಗಿ ನಮ್ಮನ್ನು ಆರ್ದ್ರವಾಗಿ ತಟ್ಟುತ್ತವೆ. ಕೊನೆಗೂ ಚಿಟ್ಟೆಯ ಚಿತ್ರವನ್ನು ಬಿಡಿಸುವ ಮೂಲಕ ಕಲಾವಿದನಾಗಿ ಗುರುತಿಸಿಕೊಳ್ಳುವ ಆಟಿಸಂ ಪೀಡಿತ ಸೋದರ, ತನ್ನ ದಾರಿಯನ್ನು ತಾನೇ ಕಂಡುಕೊಳ್ಳುವ ಮೂಲಕ ತಮ್ಮನಿಗೆ ಬಿಡುಗಡೆ ನೀಡುತ್ತಾನೆ. ಕತೆಯೂ ಸುಖಾಂತ್ಯವಾಗುತ್ತದೆ.