ಗೋರಖ್‍ ನಾಥ್ ದೇಗುಲ ಮೇಲೆ ದಾಳಿ; ಆರೋಪಿ ವಿರುದ್ಧ ಯುಎಪಿಎ ಪ್ರಕರಣ ದಾಖಲು

Update: 2022-04-17 02:11 GMT
(ಫೋಟೊ - PTI)

ಲಕ್ನೋ: ಉತ್ತರ ಪ್ರದೇಶದ ಗೋರಖ್‍ನಾಥ್ ದೇವಾಲಯ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್), ಆರೋಪಿ ಅಹ್ಮದ್ ಮುರ್ತಝಾ ಅಬ್ಬಾಸಿ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಿಸಿದೆ.

ಆರೋಪಿಯ ಪೊಲೀಸ್ ಕಸ್ಟಡಿ ಶನಿವಾರ ಮುಕ್ತಾಯವಾದ ಹಿನ್ನೆಲೆಯಲ್ಲಿ ಇದೀಗ ಅಬ್ಬಾಸಿಯನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಯುಎಪಿಎ ಅನ್ವಯ ತನಿಖಾ ಸಂಸ್ಥೆಗಳು ಆರೋಪಿಯನ್ನು ಸುಧೀರ್ಘ ಅವಧಿಗೆ ವಶಕ್ಕೆ ಪಡೆಯಲು ಅವಕಾಶವಿದ್ದು, ಚಾರ್ಜ್‍ಶೀಟ್ ಸಲ್ಲಿಕೆಗೆ ಕೂಡಾ ವಿಸ್ತರಿತ ಅವಧಿ ಪಡೆಯಬಹುದಾಗಿದೆ.

ಭಯೋತ್ಪಾದನೆಗೆ ಸಂಬಂಧಿಸಿದ ಯುಎಪಿಎ ಸೆಕ್ಷನ್ 16, ಸೆಕ್ಷನ್ 18 (ಭಯೋತ್ಪಾದನೆ ಸಂಚು), ಸೆಕ್ಷನ್ 20 (ಉಗ್ರಗಾಮಿ ಸಂಘಟನೆಯ ಸದಸ್ಯತ್ವ ಹೊಂದಿರುವುದು) ಮತ್ತು ಸೆಕ್ಷನ್ 40 (ಭಯೋತ್ಪಾದಕ ಸಂಘಟನೆಗೆ ಹಣ ಕ್ರೋಢೀಕರಿಸುವುದು) ಅನ್ವಯ ಅಬ್ಬಾಸಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಟಿಎಸ್ ಹೆಚ್ಚುವರಿ ಮಹಾ ನಿರ್ದೇಶಕ ನವೀನ್ ಅರೋರಾ ಹೇಳಿದ್ದಾರೆ.

ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಿದಾಗ ಉಗ್ರಗಾಮಿ ಸಂಘಟನೆಗೆ ನೆರವಿಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಮತ್ತು ಹಣಕಾಸು ವ್ಯವಹಾರಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಯುಎಪಿಎ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಗೋರಖ್‍ಪುರ ನ್ಯಾಯಾಲಯದಿಂದ ಏಳು ದಿನಗಳ ಅವಧಿಗೆ ಆರೋಪಿಯನ್ನು ಕಸ್ಟಡಿಗೆ ಪಡೆಯಲಾಗಿತ್ತು. ಬಳಿಕ ಮತ್ತೆ ಐದು ದಿನ ವಿಸ್ತರಿಸಲಾಗಿತ್ತು.

ಮುಂಬೈ ಐಐಟಿ ಪದವೀಧರನಾಗಿರುವ ಅಬ್ಬಾಸಿ ಎ.3ರಂದು ಗೋರಖ್‍ ನಾಥ್ ದೇವಾಲಯ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದ. ಇದನ್ನು ತಡೆಯಲು ಭದ್ರತಾ ಸಿಬ್ಬಂದಿ ಯತ್ನಿಸಿದಾಗ ಅವರ ಮಲೆ ಹಲ್ಲೆ ನಡೆಸಿದ್ದ ಎಂದು ಆಪಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News