ಶುಲ್ಕ ಪಾವತಿ ಬಾಕಿ:‌ ಪಾರಂಪರಿಕ ಅಜಂತಾ ಗುಹೆಗಳಿಗೆ 2019ರಿಂದ ನೀರು ಪೂರೈಕೆ ಸ್ಥಗಿತ

Update: 2022-04-18 17:21 GMT

ಔರಂಗಾಬಾದ್, ಎ. 18: ಬಾಕಿ ಪಾವತಿಸದ ಹಿನ್ನೆಲೆಯಲ್ಲಿ 2019ರಲ್ಲಿ ನೀರು ಪೂರೈಕೆ ಸ್ಥಗಿತಗೊಂಡಿರುವುದರಿಂದ ಮಹಾರಾಷ್ಟ್ರ ಔರಂಗಾಬಾದ್ ಜಿಲ್ಲೆಯಲ್ಲಿರುವ ಅಜಂತಾ ಗುಹೆಗಳ ಸಂಕೀರ್ಣದ ವಿಶ್ವ ಪಾರಂಪರಿಕ ನಿವೇಶನದಲ್ಲಿ ನಡೆಯುತ್ತಿರುವ ಭೂ ವಿನ್ಯಾಸ ಹಾಗೂ ಉದ್ಯಾನವನದ ಕೆಲಸಗಳಿಗೆ ಅಡ್ಡಿ ಉಂಟಾಗಿದೆ.

ನಾವು ಗುಹೆಗಳ ನೈಸರ್ಗಿಕ ಸಂಪನ್ಮೂಲದ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನ ಹೇಗೋ ನಿಭಾಯಿಸುತ್ತಿದ್ದೇವೆ. ಆದರೆ, ಉದ್ಯಾನವನದ ಕೆಲಸಗಳಿಗೆ ಅಡ್ಡಿಯಾಗಿದೆ ಎಂದು ಭಾರತದ ಪುರಾತತ್ವ ಸರ್ವೇಕ್ಷಣಾಲಯ (ಎಎಸ್ಐ)ದ ಅಧಿಕಾರಿ ತಿಳಿಸಿದ್ದಾರೆ. ಅಜಂತಾ ಗುಹೆಗಳಿಗೆ ಜನವರಿಯಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಭೇಟಿ ನೀಡಿದ ಬಳಿಕವೂ ಈ ಸಮಸ್ಯೆ ಪರಿಹಾರವಾಗದೆ ಉಳಿದಿದೆ. ಅಜಂತಾ ಗುಹೆಗಳಿಗೆ ಮಹಾರಾಷ್ಟ್ರ ಜೀವನ್ ಪ್ರಾಧಿಕರಣ್ (ಎಂಜೆಪಿ) ನೀರು ಪೂರೈಕೆ ಮಾಡುತ್ತಿತ್ತು.

ಆದರೆ, ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಂಟಿಡಿಸಿ) ಮಹಾರಾಷ್ಟ್ರ ಜೀವನ್ ಪ್ರಾಧಿಕರಣ್ (ಎಂಜೆಪಿ)ಗೆ ಶುಲ್ಕ ಪಾವತಿ ಬಾಕಿ ಉಳಿಸಿರುವುದರಿಂದ 2019ರಿಂದ ನೀರು ಪೂರೈಕೆ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಂಜೆಪಿಗೆ ಎಂಟಿಡಿಸಿ ಪಾವತಿಸಬೇಕಾದ 3.2 ಕೋಟಿ ರೂಪಾಯಿ ಬಾಕಿ ಇದೆ ಎಂದು ಎಎಸ್ಐ ಸುಪರಿಂಟೆಂಡೆಂಟ್ (ಔರಂಗಾಬಾದ್ ಸರ್ಕಲ್) ಮಿಲನ್ ಕುಮಾರ್ ಚೌಲೆ ಹೇಳಿದ್ದಾರೆ. ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಅಜಂತಾ ಗುಹೆಗಳ ಸಂಕೀರ್ಣಕ್ಕೆ ನೀರು ಪೂರೈಕೆಯನ್ನು 2019ರಲ್ಲಿ ಸ್ಥಗಿತಗೊಳಿಸಲಾಗಿದೆ. ಇದು ಭೂ ವಿನ್ಯಾಸ ಹಾಗೂ ಉದ್ಯಾನದ ಕೆಲಸಗಳಿಗೆ ಅಡ್ಡಿ ಉಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ. ಅಜಂತಾ ಗುಹೆಗಳಿಗೆ ಭೇಟಿ ನೀಡಿದ ಸಂದರ್ಭ ಆದಿತ್ಯ ಠಾಕ್ರೆ ಅವರು ಈ ಸಮಸ್ಯೆಯ ಬಗ್ಗೆ ಪ್ರಶ್ನೆ ಎತ್ತಿದರು. ಆದರೆ, ಇದು ಇಲ್ಲಿವರೆಗೆ ಪರಿಹಾರವಾಗಿಲ್ಲ ಎಂದು ಚೌಲೆ ತಿಳಿಸಿದ್ದಾರೆ.

ನಾವು ಕುಡಿಯುವ ನೀರಿಗಾಗಿ ಗುಹೆಯಲ್ಲಿ ಆರ್ಒ ವ್ಯವಸ್ಥೆ ರೂಪಿಸಿದ್ದೇವೆ. ಗುಹೆಗಳಲ್ಲಿರುವ ನೈಸರ್ಗಿಕ ನೀರಿನ ಮೂಲವನ್ನು ಬಳಸಿರುವುದರಿಂದ ಇದುವರೆಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News