ಭಾರತ ವಾರ್ಷಿಕ 8.5 ಲಕ್ಷ ಕೋಟಿ ರೂ. ಮೌಲ್ಯದ ಹಾಲು ಉತ್ಪಾದಿಸುತ್ತಿದೆ: ಪ್ರಧಾನಿ ಮೋದಿ

Update: 2022-04-20 02:19 GMT

ದೇವದಾರ್ : ಭಾರತ ಇದೀಗ ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಅಗ್ರ ರಾಷ್ಟ್ರವಾಗಿ ಹೊರಹೊಮ್ಮಿದೆ. ವಾರ್ಷಿಕ 8.5 ಲಕ್ಷ ಕೋಟಿ ರೂ. ಮೌಲ್ಯದ ಹಾಲು ಉತ್ಪಾದಿಸಲಾಗುತ್ತಿದ್ದು, ಅರ್ಥಶಾಸ್ತ್ರಜ್ಞರು ಮತ್ತು ಇತರ ಹಲವು ಮಂದಿ ಈ ಬಗ್ಗೆ ಗಮನ ಹರಿಸಲು ವಿಫಲರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬನಸ್ಕಾಂತ ಜಿಲ್ಲೆಯ ದೇವದಾರ್ ತಾಲೂಕಿನಲ್ಲಿ ಮಂಗಳವಾರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎಫ್‍ಎಓ ಪ್ರಕಾರ, ಭಾರತ ಇದೀಗ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ. ಜಾಗತಿಕ ಉತ್ಪಾದನೆಯ ಶೇಕಡ 22ರಷ್ಟು ಹಾಲು ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು, ಅಮೆರಿಕ, ಚೀನಾ, ಪಾಕಿಸ್ತಾನ ಮತ್ತು ಬ್ರೆಝಿಲ್ ನಂತರದ ಸ್ಥಾನಗಳಲ್ಲಿವೆ ಎಂದು ಅವರು ವಿವರಿಸಿದರು.

ಬನಸ್ಕಾಂತ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನೂತನ ಡೇರಿ ಸಂಕೀರ್ಣ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿ ಪ್ರಧಾನಿ ಮಾತನಾಡಿದರು. ಸಹಕಾರ ಹೈನುಗಾರಿಕೆ ವ್ಯವಸ್ಥೆ ಸಣ್ಣ ರೈತರನ್ನು ಅದರಲ್ಲೂ ಮುಖ್ಯವಾಗಿ ಮಹಿಳೆಯರನ್ನು ಸಬಲೀಕರಿಸಿದ್ದು, ಗ್ರಾಮೀಣ ಆರ್ಥಿಕತೆಯನ್ನು ಬಲಗೊಳಿಸಿದೆ ಎಂದರು.

ಕೋಟ್ಯಂತರ ರೈತರ ಬದುಕು ಹಾಲನ್ನು ಅವಲಂಬಿಸಿದ್ದು, ಭಾರತ ವಾರ್ಷಿಕ 8.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹಾಲು ಉತ್ಪಾದಿಸುತ್ತಿದೆ. ಇದು ವಿಕೇಂದ್ರೀಕೃತ ಆರ್ಥಿಕತೆಯ ಉತ್ತಮ ಉದಾಹರಣೆ ಎಂದು ಬಣ್ಣಿಸಿದರು. ಇದಕ್ಕೆ ಪ್ರತಿಯಾಗಿ ಅಕ್ಕಿ ಮತ್ತು ಗೋಧಿಯ ವಹಿವಾಟು ಕೂಡಾ 8.5 ಲಕ್ಷ ಕೋಟಿ ಆಗುವುದಿಲ್ಲ. ಸಣ್ಣ ಹಾಗೂ ಅತಿಸಣ್ಣ ರೈತರು ಹೈನುಗಾರಿಕೆ ವಲಯದ ಅತಿದೊಡ್ಡ ಫಲಾನುಭವಿಗಳು ಎಂದು ಪ್ರಧಾನಿ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News