ಜಹಾಂಗಿರ್‌ಪುರಿ 'ಬುಲ್ಡೋಜರ್‌ʼ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ತಡೆ

Update: 2022-04-20 15:35 GMT
Photo: Twitter/@ndtv

ಹೊಸದಿಲ್ಲಿ,ಎ.20: ಕಳೆದ ವಾರ ನಡೆದ ಕೋಮು ಘರ್ಷಣೆಗಳ ಬಳಿಕ ಇನ್ನೂ ಉದ್ವಿಗ್ನ ಸ್ಥಿತಿಯಲ್ಲಿರುವ ದಿಲ್ಲಿಯ ಜಹಾಂಗೀರ್‌ಪುರಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯು ಬುಧವಾರ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಸ್ಥಗಿತಗೊಂಡಿದೆ. ಆದರೆ ಇದಕ್ಕೂ ಮುನ್ನ ಶನಿವಾರದ ಘರ್ಷಣೆಗಳ ಕೇಂದ್ರಬಿಂದುವಾಗಿದ್ದ ಮಸೀದಿ ಸಮೀಪದ ಕಟ್ಟಡಗಳನ್ನು ಬುಲ್ಡೋಝರ್ಗಳು ನೆಲಸಮಗೊಳಿಸಿದ್ದವು.

ಬುಲ್ಡೋಝರ್‌ಗಳು ಹಿಂಸಾಚಾರ ಪೀಡಿತ ಪ್ರದೇಶದಲ್ಲಿಯ ಅಂಗಡಿಗಳು ಮತ್ತು ಇತರ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯವನ್ನು ಆರಂಭಿಸಿದ ಬೆನ್ನಿಗೇ ಇದರ ವಿರುದ್ಧ ಸಲ್ಲಿಸಲಾಗಿದ್ದ ತುರ್ತು ಅರ್ಜಿಯೊಂದನ್ನು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಮತ್ತು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿತು. ಗುರುವಾರ ಅರ್ಜಿಯ ತುರ್ತು ವಿಚಾರಣೆಗೂ ಅದು ಆದೇಶಿಸಿತು.

ಆದರೆ ನ್ಯಾಯಾಲಯದ ಆದೇಶದ ನಂತರವೂ ಸುಮಾರು ಎರಡು ಗಂಟೆಗಳ ಕಾಲ ನೆಲಸಮ ಕಾರ್ಯಾಚರಣೆ ಮುಂದುವರಿದಿತ್ತು. ‘ಆದೇಶವಿನ್ನೂ ನಮ್ಮ ಕೈ ಸೇರಿಲ್ಲ ಮತ್ತು ಅಲ್ಲಿಯವರೆಗೂ ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದುವರಿಯುತ್ತದೆ ’ಎಂದು ಉತ್ತರ ದಿಲ್ಲಿ ಮಹಾನಗರ ಪಾಲಿಕೆಯ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಪ್ರದೇಶದಲ್ಲಿ ಹೆಚ್ಚುತ್ತಿದ್ದ ಉದ್ವಿಗ್ನತೆಯ ನಡುವೆಯೇ ಮಸೀದಿಯ ಗೇಟ್ಗಳನ್ನು ಮತ್ತು ಸಮೀಪದ ಅಂಗಡಿಗಳನ್ನು ನೆಲಸಮಗೊಳಿಸಲು ಬುಲ್ಡೋಝರ್ ಮುಂದಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲ ದುಷ್ಯಂತ ದವೆ ಅವರು ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ದೂರಿಕೊಂಡರು. ಇದಕ್ಕೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ನ್ಯಾಯಾಲಯದ ಆದೇಶವನ್ನು ತಕ್ಷಣ ಅಧಿಕಾರಿಗಳಿಗೆ ತಲುಪಿಸಲು ನಿರ್ದೇಶ ನೀಡಿದರು.

 ಸರಿಸುಮಾರು ಇದೇ ವೇಳೆಗೆ ಹಿರಿಯ ಸಿಪಿಎಂ ನಾಯಕಿ ಬೃಂದಾ ಕಾರಾಟ್ ಅವರು ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ಸ್ಥಳಕ್ಕೆ ತಲುಪಿದ್ದರು. ನೆಲಸಮ ಕಾರ್ಯಾಚರಣೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಆಗ್ರಹಿಸಿದ ಅವರು ಬುಲ್ಡೋಝರ್ನ ಎದುರು ನಿಂತು ಪ್ರತಿಭಟನೆ ನಡೆಸಿದ ವೀಡಿಯೊ ವೈರಲ್ ಆಗಿದೆ. ಕೊನೆಗೂ ಕಾರ್ಯಾಚರಣೆ ಸ್ಥಗಿತಗೊಂಡಾಗ ಕಾರಾಟ್ ಅವರು,ಶಾಂತಿಯನ್ನು ಕಾಯ್ದುಕೊಳ್ಳುವಂತೆ ಜಹಾಂಗೀರ್ಪುರಿ ನಿವಾಸಿಗಳಿಗೆ ಮನವಿ ಮಾಡಿಕೊಂಡರು.

ಬುಧವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಪ್ರದೇಶವನ್ನು ಪ್ರವೇಶಿಸಿದ್ದ ಒಂಭತ್ತು ಬುಲ್ಡೋಝರ್‌ಗಳು ಭಾರೀ ಸಂಖ್ಯೆಯ ಪೊಲೀಸರ ಉಪಸ್ಥಿತಿಯ ನಡುವೆ ಅಂಗಡಿಗಳು ಮತ್ತು ಇತರ ಕಟ್ಟಡಗಳ ನೆಲಸಮ ಕಾರ್ಯವನ್ನು ಆರಂಭಿಸಿದ್ದವು. ದಂಗೆಕೋರರ ಅಕ್ರಮ ಕಟ್ಟಡಗಳನ್ನು ಗುರುತಿಸುವಂತೆ ಮತ್ತು ಅವುಗಳನ್ನು ನೆಲಸಮಗೊಳಿಸುವಂತೆ ಕೋರಿ ದಿಲ್ಲಿ ಬಿಜೆಪಿ ಮುಖ್ಯಸ್ಥ ಆದೇಶ ಗುಪ್ತಾ ಅವರು ಮೇಯರ್ಗೆ ಪತ್ರ ಬರೆದ ಬಳಿಕ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಆದೇಶಿಸಲಾಗಿತ್ತು.

ಇದೊಂದು ಮಾಮೂಲು ಕಾರ್ಯಾಚರಣೆ ಎಂದು ಮೇಯರ್ ಬಣ್ಣಿಸಿದ್ದಾರಾದರೂ ಆದೇಶದ ಸಮಯವು,ವಿಶೇಷವಾಗಿ ಗುಪ್ತಾರ ಪತ್ರದ ನಂತರ ಆದೇಶವು ಹೊರಬಿದ್ದಿರುವುದರಿಂದ,ರಾಜಕೀಯ ಉದ್ದೇಶಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

 ಕೋಮು ಸಂಘರ್ಷಗಳ ಬಳಿಕ ನೆಲಸಮ ಕಾರ್ಯಾಚರಣೆಗೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿರುವ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಂತಹ ರಾಜ್ಯಗಳಲ್ಲಿಯ ಪರಿಚಿತ ಮಾದರಿಯನ್ನೇ ದಿಲ್ಲಿಯ ಕಾರ್ಯಾಚರಣೆಯು ಅನುಸರಿಸಿದೆ ಎಂದು ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು. ತೆರವು ಕಾರ್ಯಾಚರಣೆಗೆ ಮುನ್ನ ತಮಗೆ ನೋಟಿಸ್‌ಗಳನ್ನು ನೀಡಲಾಗಿರಲಿಲ್ಲ ಎಂದು ಪ್ರದೇಶದ ನಿವಾಸಿಗಳು ಹೇಳಿದರು. ಮಹಾನಗರ ಪಾಲಿಕೆಯು ಎರಡು ದಿನಗಳ ಅತಿಕ್ರಮಣ ತೆರವು ಅಭಿಯಾನಕ್ಕಾಗಿ ಕನಿಷ್ಠ 400 ಪೊಲೀಸರನ್ನು ಒದಗಿಸುವಂತೆ ಮಂಗಳವಾರ ಇಲಾಖೆಯನ್ನು ಕೋರಿಕೊಂಡಿತ್ತು. ಸಂಬಂಧಿಸಿದ ಅಧಿಕಾರಿಗಳ ಅನುಮತಿಯನ್ನು ಪಡೆಯದೆ ಶನಿವಾರ ಆಯೋಜಿಸಲಾಗಿದ್ದ ಹನುಮ ಜಯಂತಿ ಮೆರವಣಿಗೆಯು ಮಸೀದಿಯೆದುರಿನ ರಸ್ತೆಯಲ್ಲಿ ಸಾಗುತ್ತಿದ್ದಾಗ ಕೋಮು ಘರ್ಷಣೆಗಳು ಭುಗಿಲೆದ್ದಿದ್ದವು. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು,ಪೊಲೀಸರು ಪ್ರದೇಶದಲ್ಲಿ ಕಟ್ಟೆಚ್ಚರವನ್ನು ವಹಿಸಿದ್ದಾರೆ. ಎರಡು ಗುಂಪುಗಳು ಪರಸ್ಪರರತ್ತ ಕಲ್ಲು ತೂರಾಟ ನಡೆಸಿದ್ದು,ಎಂಟು ಪೊಲೀಸರು ಸೇರಿದಂತೆ ಒಂಭತ್ತು ಜನರು ಗಾಯಗೊಂಡಿದ್ದರು. ಘರ್ಷಣೆಗಳ ಸಂದರ್ಭ ಗುಂಡುಗಳನ್ನು ಹಾರಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ 25 ಜನರನ್ನು ಬಂಧಿಸಲಾಗಿದ್ದು,ಈ ಪೈಕಿ ಐವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ)ಯಡಿ ಆರೋಪಗಳನ್ನು ಹೊರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News