‘ಗೃಹಸಚಿವ ಅಮಿತ್‌ ಶಾ ನಿವಾಸವನ್ನು ಧ್ವಂಸಗೊಳಿಸಿ’: ದಿಲ್ಲಿಯ ತೆರವು ಕಾರ್ಯಾಚರಣೆಗೆ ಪ್ರತಿಪಕ್ಷಗಳ ಆಕ್ರೋಶ

Update: 2022-04-20 15:28 GMT

ಹೊಸದಿಲ್ಲಿ,ಎ.20: ಕಳೆದ ವಾರ ಕೋಮು ಘರ್ಷಣೆಗಳಿಗೆ ಸಾಕ್ಷಿಯಾಗಿದ್ದ ದಿಲ್ಲಿಯ ಜಹಾಂಗೀರ್ಪುರಿ ಪ್ರದೇಶದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕರು ಬುಧವಾರ ಬಿಜೆಪಿ ವಿರುದ್ಧ ತೀವ್ರ ದಾಳಿ ನಡೆಸಿದರು. ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿಯವರು ‘ದ್ವೇಷದ ಬುಲ್ಡೋಝರ್ಗಳನ್ನು’ ಸ್ಥಗಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದರೆ,ಕೋಮು ಘರ್ಷಣೆಗಳಿಗೆ ಗೃಹಸಚಿವ ಅಮಿತ್ ಶಾ ಅವರೇ ಕಾರಣರೆಂದು ನೇರವಾಗಿ ಆರೋಪಿಸಿರುವ ಆಪ್ ಸಂಸದ ರಾಘವ ಛಡ್ಡಾ ಅವರು,ಶಾ ನಿವಾಸವನ್ನು ಧ್ವಂಸಗೊಳಿಸುವಂತೆ ಆಗ್ರಹಿಸಿದ್ದಾರೆ.

ಖುದ್ದು ಗೃಹಸಚಿವರೇ ಈ ಗಲಭೆಗಳ ರೂವಾರಿಯಾಗಿದ್ದಾರೆ. ಬುಲ್ಡೋಜರ್ನ್ನು ಬಳಸಲು ಬಯಸಿದ್ದರೆ ಅದನ್ನು ಗೃಹಸಚಿವರ ನಿವಾಸವನ್ನು ಧ್ವಂಸಗೊಳಿಸಲು ಬಳಸಿ. ಆಗ ಗಲಭೆಗಳು ನಿಲ್ಲುತ್ತವೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಛಡ್ಡಾ ಕಿಡಿಕಾರಿದರು.


ಬಿಜೆಪಿಯು 15 ವರ್ಷಗಳ ಕಾಲ ದಿಲ್ಲಿ ಮಹಾನಗರ ಪಾಲಿಕೆಗಳಲ್ಲಿ ಆಡಳಿತವನ್ನು ನಡೆಸಿದ್ದು,ಅದರ ನಾಯಕರು ಲಂಚಗಳನ್ನು ಪಡೆದುಕೊಂಡು ಅಕ್ರಮ ನಿರ್ಮಾಣಗಳಿಗೆ ಅವಕಾಶ ನೀಡಿದ್ದರು. ಇಂದು ಅವರು ಈ ಅಕ್ರಮ ನಿರ್ಮಾಣಗಳನ್ನು ನೆಲಸಮಗೊಳಿಸಲು ಮುಂದಾಗಿರುವಾಗ ಲಂಚಗಳನ್ನು ಪಡೆದಿದ್ದ ಬಿಜೆಪಿ ನಾಯಕರ ಮನೆಗಳೂ ಧ್ವಂಸಗೊಳ್ಳಬೇಕು ಎಂದೂ ಛಡ್ಡಾ ಹೇಳಿದರು. ಸಂವಿಧಾನದ ಪೀಠಿಕೆಯತ್ತ ಬುಲ್ಡೋಜರ್ ಮುನ್ನುಗ್ಗುತ್ತಿರುವ ಚಿತ್ರವೊಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ‘ಈ ತೆರವು ಕಾರ್ಯಾಚರಣೆ ಭಾರತದ ಸಾಂವಿಧಾನಿಕ ವೌಲ್ಯಗಳ ಧ್ವಂಸವಾಗಿದೆ. ಅದು ಬಡವರು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿರುವ ಸರಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಬಿಜೆಪಿ ಇದರ ಬದಲು ತನ್ನ ಹೃದಯದಲ್ಲಿ ಮಡುವುಗಟ್ಟಿರುವ ದ್ವೇಷವನ್ನು ಬುಲ್ಡೋಝ್ ಮಾಡಬೇಕು ’ ಎಂದು ಹೇಳಿದ್ದಾರೆ.

ದೇಶಾದ್ಯಂತ ಕಲ್ಲಿದ್ದಲು ಕೊರತೆಗಾಗಿಯೂ ಮೋದಿಯವರನ್ನು ವ್ಯಂಗ್ಯವಾಡಿರುವ ರಾಹುಲ್,‘ದ್ವೇಷದ ಬುಲ್ಡೋಝರ್ಗಳನ್ನು ಸ್ವಿಚ್ಆಫ್ ಮಾಡಿ ಮತ್ತು ವಿದ್ಯುತ್ ಸ್ಥಾವರಗಳನ್ನು ಸ್ವಿಚ್ಆನ್ ಮಾಡಿ ’ ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News