​ಅಮೆರಿಕದ ಕಾಂಗ್ರೆಸ್ ಸದಸ್ಯೆಯ ಪಿಒಕೆ ಭೇಟಿಗೆ ಭಾರತದ ಖಂಡನೆ

Update: 2022-04-21 18:34 GMT

ಹೊಸದಿಲ್ಲಿ,ಎ.21: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಅಮೆರಿಕದ ಕಾಂಗ್ರೆಸ್ ಸದಸ್ಯೆ ಇಲ್ಹಾನ್ ಉಮರ್ ಅವರ ಭೇಟಿಯನ್ನು ಭಾರತವು ಗುರುವಾರ ಖಂಡಿಸಿದೆ.
ಉಮರ್ ಅವರು ಎ.20ರಿಂದ ಪಾಕಿಸ್ತಾನಕ್ಕೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದು, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಹಾಲಿ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
‘ಇಂತಹ ರಾಜಕಾರಣಿಯೋರ್ವರು ತನ್ನ ಸಂಕುಚಿತ ಮನಸ್ಸಿನ ರಾಜಕೀಯವನ್ನು ತನ್ನ ಮನೆಯಲ್ಲಿ ನಡೆಸಲು ಬಯಸಿದರೆ ಅದು ಅವರ ವ್ಯವಹಾರ, ಆದರೆ ಅದಕ್ಕಾಗಿ ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವುದು ನಮಗೆ ಸಂಬಂಧಿಸಿದ್ದಾಗುತ್ತದೆ. ಇದು ಖಂಡನೀಯವಾಗಿದೆ ’ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 ಉಮರ್ ಅವರು ಪಾಕಿಸ್ತಾನದ ಸಾಂಸ್ಕೃತಿಕ,ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಾಮರ್ಥ್ಯಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಲಾಹೋರ ಮತ್ತು ‘ಆಝಾದ್ ಜಮ್ಮು-ಕಾಶ್ಮೀರ’ಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನಿ ಕಚೇರಿಯು ತಿಳಿಸಿತ್ತು.
ಅಮೆರಿಕದೊಂದಿಗೆ ಪಾಕಿಸ್ತಾನದ ಸಂವಾದಗಳಲ್ಲಿ ಕಾಶ್ಮೀರವು ಯಾವಾಗಲೂ ಪ್ರಮುಖವಾಗಿ ಪ್ರಸ್ತಾವಗೊಳ್ಳುತ್ತದೆ. ಪ್ರಧಾನಿ ಶರೀಫ್ ಮತ್ತು ಉಮರ ನಡುವೆಯೂ ಕಾಶ್ಮೀರ ಬಗ್ಗೆ ಚರ್ಚೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News