ಇರುವುದೊಂದೇ ಭೂಮಿ ಕಾಪಾಡಿಕೊಳ್ಳೋಣ
ಕಳೆದು ಐದು ದಶಕಗಳಿಂದಲೂ ಬ್ರಹ್ಮಾಂಡದಲ್ಲಿ ನಮಗಿರುವ ಒಂದೇ ಭೂಮಿಯನ್ನು ಕಾಪಾಡಿಕೊಳ್ಳುವ ‘ಭೂಮಿಯ ದಿನ’ವನ್ನು ವಿಶ್ವದಾದ್ಯಂತ ಅನೇಕ ದೇಶಗಳು ಆಚರಿಸುತ್ತಾ ಬಂದಿವೆ. ಆದರೆ ಪರಿಸರ ಮಾತ್ರ ದಿನೇದಿನೇ ಅಧೋಗತಿಗೆ ಇಳಿಯುತ್ತಿದೆ. ಭೂಮಿಯ ಮೇಲೆ ಮನುಷ್ಯನೇ ಅಲ್ಲ, ಪಶು ಪಕ್ಷಿ-ಪ್ರಾಣಿಗಳು, ಸಸ್ಯಗಳೂ ಕೂಡ ತಮ್ಮ ಅಳಿವು ಉಳಿವಿಗಾಗಿ ಹೋರಾಡುವಂತಹ ಪರಿಸ್ಥಿತಿ ತಲೆದೋರಿದೆ. ನೀರಿಲ್ಲದೆ ಹಾಹಾಕಾರ ಸೃಷ್ಟಿಯಾಗಿ ಪಶು ಪಕ್ಷಿಗಳು ಬಿಸಿಲ ಬೇಗೆಗೆ ಸಾವನ್ನಪ್ಪುತ್ತಿವೆ. ಭೂಮಿಯಿಂದ ಆಕಾಶದವರೆಗೂ ವಿಷ ಮಾಲಿನ್ಯ ಹರಡಿಕೊಳ್ಳುತ್ತಿದೆ. ಹಿಮಾಲಯ, ರಾಕಿ, ಆಲ್ಪ್ಸ್, ಆಂಡಿಸ್, ಉತ್ತರ, ದಕ್ಷಿಣ ಧ್ರುವಗಳೂ ಕೂಡ ಮಾಲಿನ್ಯದಿಂದ ತುಂಬಿಕೊಂಡಿವೆ. ಭೂಮಿಯ ಸುತ್ತಲೂ ಅಗಾಧ ಬಾಹ್ಯಾಕಾಶ ತ್ಯಾಜ್ಯ ಉರುಳಾಡುತ್ತಿದೆ.
ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಆಶಾದಾಯಕ ಭವಿಷ್ಯದ ದಿನಗಳನ್ನು ನಿರೀಕ್ಷಿಸುತ್ತ ಅನೇಕ ದೇಶಗಳ ಸಂಘ/ಸಂಸ್ಥೆಗಳು, ಖಾಸಗಿ ಕಂಪೆನಿಗಳು, ಭೂಮಿಯನ್ನು ಪ್ರೀತಿಸುವ ಎಲ್ಲರೂ ಒಟ್ಟುಗೂಡಿ ವಿಶ್ವದಾದ್ಯಂತ ಭೂಮಿಯ ದಿನವನ್ನು ಆಚರಿಸುತ್ತಿದ್ದಾರೆ. ಹಾಗೆಯೇ ಪರಿಸರ ಉಳಿಸುವ ಅನೇಕ ರೀತಿಯ ಪ್ರಯತ್ನಗಳೂ ನಡೆಯುತ್ತಿವೆ. ಅಮೆರಿಕದ ಸೆನೆಟರ್ ಗೇಲಾರ್ಡ್ ನೆಲ್ಸನ್ ಮೊದಲಿಗೆ 1962ರಲ್ಲಿ ಭೂಮಿಯ ದಿನವನ್ನು ಅಧ್ಯಕ್ಷ ಜಾನ್ ಎಫ್. ಕೆನಡಿಯ ಮೂಲಕ ಕಾರ್ಯರೂಪಕ್ಕೆ ತಂದರು. 1971ರಲ್ಲಿ ಸಂಯುಕ್ತ ರಾಷ್ಟ್ರಗಳ ಒಕ್ಕೂಟ ಭೂಮಿಯ ದಿನವನ್ನು ಆಚರಿಸಲು ಪ್ರಾರಂಭಿಸಿ ವಿಶ್ವದಾದ್ಯಂತ ಭೂಮಿಯ ದಿನವನ್ನು ಎಪ್ರಿಲ್ 22ರಂದು ಆಚರಿಸಲಾಗುತ್ತಿದೆ. ಪರಿಸರ ಬಗೆಗಿನ ಅಪಾಯಗಳ ಅರಿವನ್ನು ಜನರಲ್ಲಿ ಮೂಡಿಸಲು ಎಲ್ಲ ದೇಶಗಳ ಸಮಾನ ಮನಸ್ಕರು, ಶಾಲಾ-ಕಾಲೇಜುಗಳು, ಸಂಘ/ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳುತ್ತಾ ಬಂದಿವೆ. ಸಂಯುಕ್ತ ರಾಷ್ಟ್ರಗಳ ಒಕ್ಕೂಟ ಅನೇಕ ರೀತಿಯಲ್ಲಿ ಭೂ-ಪರಿಸರವನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಕೋಟ್ಯಂತರ ವರ್ಷಗಳಿಂದ ಭೂಮಿಯ ಮೇಲೆ ನೈಸರ್ಗಿಕವಾಗಿ ವಿಕಾಸಗೊಂಡ ಲಕ್ಷಾಂತರ ರೀತಿಯ ಪ್ರಾಣಿ ಪ್ರಭೇದಗಳನ್ನು ಮನುಷ್ಯನೆಂಬ ಪ್ರಾಣಿ ನಾಶ ಮಾಡಲು ಹೊರಟಿದ್ದಾನೆ.
ಭೂಮಿಯ ಮೇಲಿರುವ ಪಕ್ಷಿ-ಪ್ರಾಣಿ ಮತ್ತು ಸಸ್ಯಸಂಕುಲ ನಾಶವಾದರೆ ಮನುಷ್ಯ ತಾನಾಗಿಯೇ ನಾಶವಾಗಿ ಹೋಗುತ್ತಾನೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಭೂಮಿಯ ಮೇಲಿರುವ ಒಂದು ಸಣ್ಣ ಕ್ರಿಮಿಯಿಂದ ಆನೆಯವರೆಗೂ ಎಲ್ಲಾ ಪ್ರಾಣಿಗಳು ಉಳಿದುಕೊಂಡರೆ ಮಾತ್ರ ನಿಸರ್ಗದಲ್ಲಿ ಸಮತೋಲನವನ್ನು ಕಾಪಾಡಿ ಕೊಳ್ಳಬಹುದಾಗಿದೆ. ಒಂದು ಬೊಗಸೆ ಮಣ್ಣಿನಲ್ಲಿ ಲಕ್ಷಗಟ್ಟಲೆ ವೈರಸ್-ಬ್ಯಾಕ್ಟೀರಿಯಾಗಳಿದ್ದು ಅವೆಲ್ಲ ಲಕ್ಷಾಂತರ ವರ್ಷಗಳಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಬಂದಿವೆ. ಆದರೆ ಇತ್ತೀಚಿನ ದಶಕಗಳಲ್ಲಿ ಉಪಯೋಗಿಸುತ್ತಿರುವ ವಿಷ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳಿಂದ ವೈರಸ್-ಬ್ಯಾಕ್ಟೀರಿಯಾಗಳೆಲ್ಲ ಅಳಿದುಹೋಗಿ ಮಣ್ಣು ಬಂಜರಾಗಿ ಮುಂದಿನ ದಿನಗಳಲ್ಲಿ ಯಾವುದೇ ಬೆಳೆಗಳು ಬೆಳೆಯಲು ಸಾಧ್ಯವಿಲ್ಲದಂತಹ ವಾತಾವರಣ ಸೃಷ್ಟಿಯಾಗುತ್ತಿದೆ ಎಂಬುದಾಗಿ ವಿಜ್ಞಾನಿಗಳು ಮತ್ತು ತಜ್ಞರು ಪದೇ ಪದೇ ಹೇಳುತ್ತಿದ್ದಾರೆ. ಇದರ ಜೊತೆಗೆ ಲಕ್ಷಾಂತರ ವರ್ಷಗಳಿಂದ ಪರಿಸರವನ್ನು ಕಾಪಾಡಿಕೊಂಡು ಬರುತ್ತಿದ್ದ ಎರೆಹುಳ, ಹಾವು, ಕಪ್ಪೆ, ಚೇಳು, ಜೇಣುನೊಣ, ಹದ್ದು, ಪಕ್ಷಿ, ವನ್ಯಪ್ರಾಣಿಗಳು ಸಂಪೂರ್ಣವಾಗಿ ನಶಿಸಿಹೋಗುತ್ತಿವೆ. ಅಂದರೆ ಮಣ್ಣು ಮತ್ತು ಪರಿಸರದ ಜೊತೆಗೆ ಸಂಬಂಧ ಹೊಂದಿರುವ ಪಕ್ಷಿ ಪ್ರಾಣಿಗಳು ಮತ್ತು ಸಸ್ಯ ಜಗತ್ತಿನ ಕೊಂಡಿಗಳು ಛಿದ್ರಛಿದ್ರವಾಗಿ ಹೋಗುತ್ತಿವೆ. ಇದೇ ವೇಗದಲ್ಲಿ ಪರಿಸರ ಹಾಳಾದರೆ ಕೇವಲ ಇನ್ನು ನಾಲ್ಕೈದು ದಶಕಗಳು ಮಾತ್ರ ಮಣ್ಣಿನಲ್ಲಿ ಬೆಳೆಗಳು ಬೆಳೆಯಲು ಸಾಧ್ಯವಾಗಬಹುದು ಎನ್ನಲಾಗಿದೆ. ಆದರೆ ಜಗತ್ತಿನ ಯಾವ ದೇಶದ ಜನರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮಣ್ಣು ಮತ್ತು ನಿಸರ್ಗದ ಮೇಲೆ ನಡೆಯುತ್ತಿರುವ ಕ್ರೌರ್ಯತೆಯನ್ನು ಜಗತ್ತಿನಾದ್ಯಂತ ಈಗಿಂದೀಗಲೇ ನಿಲ್ಲಿಸಬೇಕಿದೆ. ಒಂದು ಕಡೆ ಭೂಮಿಯ ಮೇಲಿನ ಪರಿಸರವನ್ನು ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಸುತ್ತಲಿನ ಪರಿಸರದ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇದೆ.
ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಸುತ್ತಲಿನ ಅರಣ್ಯಗಳು ಮತ್ತು ಜೀವಜಗತ್ತು ಸಂಪೂರ್ಣವಾಗಿ ನಾಶವಾಗುತ್ತಿದ್ದು ಭೂಮಿಯ ತಾಪಮಾನ ನಿರಂತರವಾಗಿ ಹೆಚ್ಚುತ್ತಲೇ ಹೋಗುತ್ತಿದೆ. ಗಾಳಿ, ನೀರು ಪರಿಸರ ಮಾಲಿನ್ಯದಿಂದ ರೋಗಗಳು ಹರಡುತ್ತಿದ್ದು ತಾಪಮಾನ ಹೆಚ್ಚಾಗಿ ಪಕ್ಷಿ-ಪ್ರಾಣಿಗಳು ನೀರು-ಆಹಾರ ದೊರಕದೆ ಸಾವನ್ನಪ್ಪುತ್ತಿವೆ. ಸಮುದ್ರಗಳಲ್ಲಿ ಸೃಷ್ಟಿಯಾಗುತ್ತಿರುವ ಅಕಾಲಿಕ ಚಂಡಮಾರುತಗಳಿಂದ ಹೇರಳ ಬೆಳೆಗಳು ನಾಶವಾಗುತ್ತಿವೆ. ಮುಖ್ಯವಾಗಿ ಅರಣ್ಯಗಳು ಇಂಗಾಲ ಡೈಆಕ್ಸೈಡನ್ನು ಹೀರಿಕೊಂಡು ಆಮ್ಲಜನಕವನ್ನು ಪರಿಸರಕ್ಕೆ ಚೆಲ್ಲಿ ಮನುಷ್ಯ, ಪ್ರಾಣಿ ಪಕ್ಷಿಗಳೇ ಅಲ್ಲದೆ ಇಡೀ ಜೀವಜಗತ್ತನ್ನು ಕಾಪಾಡಿಕೊಂಡು ಬರುತ್ತಿವೆ. ಜನಸಂಖ್ಯೆ ಹೆಚ್ಚುತ್ತಿರುವುದರಿಂದ ವಸತಿ, ರಸ್ತೆಗಳು, ಜಾನುವಾರುಗಳಿಗೆ ಮೇವು, ಕಾಗದ ಮತ್ತು ಪೀಠೋಪಕರಣಗಳಿಗಾಗಿ ಅರಣ್ಯಗಳನ್ನು ಯಾವ ಮರ್ಜಿಯೂ ಇಲ್ಲದೆ ಕಡಿಯಲಾಗುತ್ತಿದೆ. ಇದರಿಂದ ಕಾಡುಗಳು ನಾಶವಾಗಿ ಇಂಗಾಲ ಡೈಆಕ್ಸೈಡ್ ವಾತಾವರಣಕ್ಕೆ ಸೇರಿ ಭೂಮಿ ಬಿಸಿಯೇರುತ್ತಿದೆ. ಅರಣ್ಯಗಳಲ್ಲಿ ಶೇ. 70ರಷ್ಟು ವನ್ಯಪ್ರಾಣಿಗಳಿದ್ದು ಅವು ಆಶ್ರಯ ಕಳೆದುಕೊಂಡು ನಾಡಿಗೆ ಬಂದು ಜನರ ಕೈಯಲ್ಲಿ ಸಾಯುತ್ತಿವೆ.
ಇದರಿಂದ ಅರಣ್ಯಗಳ ಜೀವವೈವಿಧ್ಯತೆ ನಾಶವಾಗುತ್ತಿದೆ. ಅರಣ್ಯಗಳು ಕಡಿಮೆಯಾಗುವುದರ ಜೊತೆಗೆ ಹೊರಚೆಲ್ಲುವ ತೇವಾಂಶ ಕಡಿಮೆಯಾಗಿ ಮೋಡಗಳು ಸೃಷ್ಟಿಯಾಗುವುದು ಕಡಿಮೆಯಾಗುತ್ತಿದೆ. ಅಮೆಝಾನ್ ಮಳೆಕಾಡುಗಳು ಮತ್ತು ಉಷ್ಣವಲಯದ ದಟ್ಟ ಮಳೆಕಾಡುಗಳನ್ನು ಹೆಚ್ಚು ನಾಶ ಮಾಡಲಾಗುತ್ತಿದೆ. ಪ್ರಪಂಚದಲ್ಲಿನ ಅರ್ಧದಷ್ಟು ವನ್ಯ ಪ್ರಾಣಿಗಳು ಮತ್ತು ಸಸ್ಯಗಳು ಉಷ್ಣವಲಯದ ದಟ್ಟ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಈಗಾಗಲೇ ಜಗತ್ತಿನಲ್ಲಿ ಮೂರನೇ ಒಂದು ಭಾಗದ ಅರಣ್ಯ ನಾಶವಾಗಿದೆ. 10,000 ವರ್ಷಗಳ ಹಿಂದೆ ಜಗತ್ತಿನಲ್ಲಿ ಸುಮಾರು 6.0 ಬಿಲಿಯನ್ ಹೆಕ್ಟೇರುಗಳ ಅರಣ್ಯವಿದ್ದು ಈಗ ಅದು ಕೇವಲ 4.06 ಬಿಲಿಯನ್ ಹೆಕ್ಟೇರುಗಳಿಗೆ ಇಳಿದಿದೆ. ಪ್ರಸ್ತುತ ಶೇ. 31 ಭೂಮಿ ಅರಣ್ಯಗಳಿಂದ ಆವರಿಸಿಕೊಂಡಿದ್ದು, ಭಾರತದಲ್ಲಿ 80 ಲಕ್ಷ ಚ.ಕಿ.ಮೀ. ಕಾಡು ಇರುವುದಾಗಿ ಸರಕಾರ ಹೇಳಿಕೊಂಡಿದೆ. ಈಗಾಗಲೇ ಸಾವಿರಾರು ಪ್ರಾಣಿ-ಪಕ್ಷಿ ಪ್ರಭೇದಗಳು ಭೂಮಿಯಿಂದ ಅಳಿಸಿಹೋಗಿ ನೂರಾರು ಪ್ರಭೇದಗಳು ಅಳಿವಿನ ಅಂಚು ತಲುಪಿವೆ. ಇಂದಿಗೂ ಹೇಗೋ ನಿಸರ್ಗದಲ್ಲಿ ಉಳಿದುಕೊಂಡು ಬಂದಿರುವ ಜಾವಾ ಹುಲಿಗಳು, ಸಿಂಧೂ ಡಾಲ್ಫಿನ್ಸ್, ಹಿಮಚಿರತೆಗಳು, ದೈತ್ಯ ಪಾಂಡ, ಕಸ್ತೂರಿಮೃಗ ಇತ್ಯಾದಿ ಅಪರೂಪದ ಪ್ರಾಣಿಗಳು ಈಗ ಅಳಿವಿನ ಅಂಚಿಗೆ ತಲುಪಿವೆ. ಈ ಪ್ರಾಣಿಗಳೆಲ್ಲ ಪರಿಸರ ಮಾಲಿನ್ಯ ಮತ್ತು ಮನುಷ್ಯನ ಅಟ್ಟಹಾಸದಿಂದ ಆಹಾರ ದೊರಕದೆ, ಆವಾಸಸ್ಥಾನಗಳ ಕೊರತೆ ಮತ್ತು ವಿವಿಧ ರೋಗಗಳಿಂದ ಉಸಿರುಗಟ್ಟಿ ಸಾಯುತ್ತಿವೆ. ಮನುಷ್ಯನು ಪರಿಸರಕ್ಕೆ ಮಾಡಿದ ಹಾನಿಯನ್ನು ಸರಿಪಡಿಸಲು ಕೆಲವು ಸೂಕ್ಷ್ಮ ಜೀವಿಗಳು ತಮ್ಮ ರೂಪ ಬದಲಿಸಿಕೊಂಡು, ಆನುವಂಶೀಯವಾಗಿ ಪರಿವರ್ತನೆಗೊಳ್ಳುತ್ತ ನಮ್ಮ ಸಹಾಯಕ್ಕೆ ನಿಂತಿವೆ. ಅವು ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳಲು ಸುತ್ತಲಿನ ತ್ಯಾಜ್ಯವನ್ನು ತಿಂದು ಪರಿಸರವನ್ನು ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿಕೊಂಡಿವೆ. ಇದರ ಜೊತೆಗೆ ವಿಜ್ಞಾನಿಗಳು ಇನ್ನಷ್ಟು ಕೃತಕ ಸೂಕ್ಷ್ಮಜೀವಿಗಳನ್ನು ಸೃಷ್ಟಿಸಿ ಪಾಲಿಕ್ಲೋರಿನೇಟೆಡ್ ಬೈಫಿನೈಲ್ (ಪಿಸಿಬಿ), ತೈಲ, ವಿಕಿರಣ ತ್ಯಾಜ್ಯ, ಗ್ಯಾಸೋಲಿನ್, ಪಾದರಸ (ಗಣಿಗಾರಿಕೆ ಪ್ರದೇಶಗಳು) ಇತ್ಯಾದಿ ಮಾಲಿನ್ಯಕಾರಕ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಯೋಜನೆಗಳನ್ನು ಮಾಡುತ್ತಿದ್ದಾರೆ.
ಹಸು, ಎಮ್ಮೆಗಳಿಂದ ಹಿಡಿದು ಸಮುದ್ರ ಹಕ್ಕಿಗಳವರೆಗೆ ಅನೇಕ ಪ್ರಾಣಿ ಪಕ್ಷಿಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ತಿಂದು ಸಾವನ್ನಪ್ಪುತ್ತಿವೆ. ಇವೆಲ್ಲವೂ ನಮ್ಮ ಕಣ್ಣುಗಳ ಮುಂದೆಯೇ ನಡೆಯುತ್ತಿದ್ದರೂ ನಾವು ಬುದ್ಧಿವಂತ ಮನುಷ್ಯರು ಪರಿಸರದ ಬಗ್ಗೆ ಯಾವುದೇ ಕಾಳಜಿ ತೋರದೆ ಹೆಚ್ಚು ಕಸ ಸುರಿಯುತ್ತ ಸುತ್ತಲಿನ ಪರಿಸರವನ್ನು ಇನ್ನಷ್ಟು ಕೊಳಕು ಮಾಡುತ್ತಿದ್ದೇವೆ. ನಮ್ಮ ಕಾಲಿಗೆ ನಾವೇ ಕೊಡಲಿ ಹಾಕಿಕೊಳ್ಳುತ್ತಿದ್ದೇವೆ. ಸುತ್ತಮುತ್ತಲಿನ ಹಸಿರನ್ನು ನಾಶ ಮಾಡಿ ಕಲಬೆರಕೆ-ವಿಷಮಿಶ್ರಿತ ಆಹಾರ ಸೇವಿಸುತ್ತ ಬದುಕನ್ನು ಇನ್ನಷ್ಟು ಅಸಹನೀಯ ಮಾಡಿಕೊಳ್ಳತ್ತಿದ್ದೇವೆ. ಇಷ್ಟಾದರೂ ಪ್ರಕೃತಿ ಇನ್ನೂ ಸಹನಶೀಲತೆಯಿಂದಲೇ ನಮ್ಮನ್ನು ಮಡಿಲಲ್ಲಿ ಹಾಕಿಕೊಂಡು ಮಕ್ಕಳನ್ನು ಕಾಪಾಡುವಂತೆ ಪೋಷಿಸುತ್ತಾ ಬಂದಿದೆ. ಆದರೆ ಮನುಷ್ಯನ ಕ್ರೌರ್ಯತೆ ಹದ್ದುಮೀರಿ ಭೂಮಿ ತಾಪಮಾನವನ್ನು ಹೆಚ್ಚಿಸಿಕೊಳ್ಳುತ್ತ ಬಿರುಗಾಳಿ, ಮಳೆ, ಬರ, ಪ್ರವಾಹ, ಭೂಕಂಪ, ಚಂಡಮಾರುತ, ಸುನಾಮಿಗಳನ್ನು ಸೃಷ್ಟಿಸುತ್ತ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಲೇ ಬರುತ್ತಿದೆ. ಈಗಲೂ ಎಚ್ಚೆತ್ತುಕೊಳ್ಳದೆ ಹೋದರೆ ನಿಜವಾಗಿಯೂ ಭೂಮಿ ಬೆಂಕಿಯ ಗೋಳವಾಗಿ ಎಲ್ಲವೂ ಸುಟ್ಟು ಬೂದಿಯಾಗುತ್ತದೆ ಎಂಬುದಾಗಿ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ನಾವು ವರ್ಷಕ್ಕೆ ಒಮ್ಮೆ ಬರುವ ಭೂಮಿಯ ದಿನವೇ ಅಲ್ಲದೇ ಎಲ್ಲಾ ದಿನಗಳು, ಭೂಮಿಯನ್ನು ಉಳಿಸಿಕೊಳ್ಳಲು ಮತ್ತು ನಮ್ಮ ಬದುಕು ಹಸನಾಗಿಸಿಕೊಳ್ಳಲು ಕೆಲವು ಕನಿಷ್ಠ ನಿಯಮಿತ ಕೆಲಸಗಳನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ. ‘ವಿಶ್ವ ಮಟ್ಟದಲ್ಲಿ ಆಲೋಚಿಸುತ್ತ ಮನೆ ಮಟ್ಟದಲ್ಲಿ ಆಚರಣೆಗೆ ತರಬೇಕು’ ಎನ್ನುವ ನಾಣ್ಣುಡಿ ಇದೆ. ಶಾಖೋತ್ಪನ್ನ ಅನಿಲಗಳನ್ನು ಕಡಿತಗೊಳಿಸಿ ಅವು ಪರಿಸರ ಸೇರುವುದನ್ನು ಎಲ್ಲಾ ರೀತಿಯಲ್ಲೂ ಕಡಿಮೆ ಮಾಡಬೇಕಿದೆ. ಸಾಧ್ಯವಾದಷ್ಟು ಆಹಾರ ಧಾನ್ಯಗಳು, ಹಣ್ಣು ತರಕಾರಿಗಳನ್ನು ಸ್ಥಳೀಯವಾಗಿ ಸಾವಯವ ಗೊಬ್ಬರಗಳ ಮೂಲಕ ಬೆಳೆಯುವುದನ್ನು ಅಳವಡಿಸಿಕೊಳ್ಳಬೇಕಿದೆ. ಇದರಿಂದ ಪರಿಸರ ಸ್ವಚ್ಛವಾಗಿ ಸಾಗಿಸುವ ಖರ್ಚು ಕಡಿಮೆಯಾಗಿ ಇಂಧನ ಬಳಕೆಯೂ ಉಳಿಯುತ್ತದೆ. ಆರೋಗ್ಯ ಪರಿಸರ, ಮನೆಯಿಂದಲೇ ಪ್ರಾರಂಭವಾಗಬೇಕಿದೆ. ಆಗ ಮಾತ್ರ ಪರಿಸರವನ್ನು ಸ್ವಲ್ಪಮಟ್ಟಿಗೆ ಸ್ವಚ್ಛವಾಗಿಡಲು ಸಾಧ್ಯವಾಗಬಹುದು.