ಐಪಿಎಲ್: ಬಟ್ಲರ್ 3ನೇ ಶತಕ, ಡೆಲ್ಲಿ ವಿರುದ್ಧ ರಾಜಸ್ಥಾನ ಜಯಭೇರಿ

Update: 2022-04-22 18:16 GMT

  ಮುಂಬೈ, ಎ.22: ಸತತ ಎರಡನೇ ಶತಕ ಸಿಡಿಸಿದ ಜೋಸ್ ಬಟ್ಲರ್ ಹಾಗೂ ಪ್ರಸಿದ್ಧ ಕೃಷ್ಣ ನೇತೃತ್ವದ ಬೌಲರ್‌ಗಳ ಸಂಘಟಿತ ಪ್ರದರ್ಶನದ ಸಹಾಯದಿಂದ ರಾಜಸ್ಥಾನ ರಾಯಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 15 ರನ್‌ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 34ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 223 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ ಸೋಲೊಪ್ಪಿಕೊಂಡಿತು.

 ರಾಜಸ್ಥಾನಕ್ಕೆ ಗೆಲುವಿಗೆ 12 ಎಸೆತಗಳಲ್ಲಿ 36 ರನ್ ಅಗತ್ಯವಿತ್ತು. 19ನೇ ಓವರ್ ಬೌಲಿಂಗ್ ಮಾಡಿದ ಕೃಷ್ಣ ಅವರು ಲಲಿತ್‌ ಯಾದವ್ ವಿಕೆಟ್ ಕಬಳಿಸಿದ್ದಲ್ಲದೆ ಮೇಡನ್ ಓವರ್ ಎಸೆದು ರಾಜಸ್ಥಾನದ ಗೆಲುವಿಗೆ ತಡೆಯಾದರು.

ಡೆಲ್ಲಿ ಪರ ಪೃಥ್ವಿ ಶಾ(37ರನ್, 27 ಎಸೆತ)ಹಾಗೂ ಡೇವಿಡ್ ವಾರ್ನರ್(28 ರನ್, 14 ಎಸೆತ)ಮೊದಲ ವಿಕೆಟ್‌ಗೆ 43 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ವಾರ್ನರ್ ವಿಕೆಟ್ ಪಡೆದ ಕನ್ನಡಿಗ ಪ್ರಸಿದ್ಧ ಕೃಷ್ಣ(3-22)ಈ ಜೋಡಿಯನ್ನು ಬೇರ್ಪಡಿಸಿದರು. ನಾಯಕ ರಿಷಭ್ ಪಂತ್(44 ರನ್, 24 ಎಸೆತ, 4 ಬೌಂಡರಿ, 2 ಸಿಕ್ಸರ್), ಲಲಿತ್ ಯಾದವ್(37 ರನ್, 24 ಎಸೆತ)ಹಾಗೂ ಪೊವೆಲ್( 36 ರನ್,15 ಎಸೆತ, 5 ಸಿಕ್ಸರ್ ) ತಂಡಕ್ಕೆ ಗೆಲುವು ತಂದುಕೊಡಲು ಯತ್ನಿಸಿದರು.

 ಮೂರು ವಿಕೆಟ್ ಹಂಚಿಕೊಂಡ ಆರ್.ಅಶ್ವಿನ್(2-32)ಹಾಗೂ ಯಜುವೇಂದ್ರ ಚಹಾಲ್ (1-28)ಕೃಷ್ಣಗೆ ಸಾಥ್ ನೀಡಿದರು.

ಇದಕ್ಕೂ ಮೊದಲು ಡೆಲ್ಲಿ ತಂಡದಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ತಂಡ ಜೋಸ್ ಬಟ್ಲರ್ ಈ ವರ್ಷದ ಐಪಿಎಲ್‌ನಲ್ಲಿ ದಾಖಲಿಸಿದ ಮೂರನೇ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 222 ರನ್ ಗಳಿಸಿತು.

15ನೇ ಆವೃತ್ತಿಯ ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಮೊದಲ ತಂಡ ಎನಿಸಿಕೊಂಡಿತು. ಇನಿಂಗ್ಸ್ ಆರಂಭಿಸಿದ ಜೋಸ್ ಬಟ್ಲರ್(116 ರನ್, 65 ಎಸೆತ, 9 ಬೌಂಡರಿ, 9 ಸಿಕ್ಸರ್)ಹಾಗೂ ದೇವದತ್ತ ಪಡಿಕ್ಕಲ್(54 ರನ್, 35 ಎಸೆತ, 7 ಬೌಂಡರಿ, 2 ಸಿಕ್ಸರ್)15.1ನೇ ಓವರ್‌ಗಳಲ್ಲಿ 155 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿದರು. ಡೆಲ್ಲಿ ಬೌಲರ್‌ಗಳ ಮೇಲೆ ಪ್ರಾಬಲ್ಯ ಮೆರೆದ ಈ ಇಬ್ಬರು ಆರಂಭಿಕ ಬ್ಯಾಟರ್‌ಗಳು ಚೆಂಡನ್ನು ಮೈದಾನದ ಮೂಲೆಮೂಲೆಗೆ ಅಟ್ಟಿದರು.
   
ಪಡಿಕ್ಕಲ್ ಔಟಾದ ಬಳಿಕ ನಾಯಕ ಸಂಜು ಸ್ಯಾಮ್ಸನ್(ಔಟಾಗದೆ 46 ರನ್, 19 ಎಸೆತ, 5 ಬೌಂಡರಿ, 3 ಸಿಕ್ಸರ್) ಜೊತೆಗೆ ಕೈಜೋಡಿಸಿದ ಬಟ್ಲರ್ 2ನೇ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿದರು. ಬಟ್ಲರ್ 19ನೇ ಓವರ್‌ನಲ್ಲಿ ಮುಸ್ತಫಿಝುರ್ರಹ್ಮಾನ್‌ಗೆ (1-43)ವಿಕೆಟ್ ಒಪ್ಪಿಸಿದರು. ಬಟ್ಲರ್ 2022ರ ಐಪಿಎಲ್‌ನಲ್ಲಿ ಈಗಾಗಲೇ ಮುಂಬೈ ಇಂಡಿಯನ್ಸ್ (100 ರನ್) ಹಾಗೂ ಕೋಲ್ಕತಾ ನೈಟ್ ರೈಡರ್ಸ್(103 ರನ್) ವಿರುದ್ಧ ಶತಕ ದಾಖಲಿಸಿದ್ದಾರೆ. ಈ ಎರಡು ಪಂದ್ಯಗಳನ್ನು ರಾಜಸ್ಥಾನ ಜಯಿಸಿತ್ತು.

ಹೆಟ್ಮೆಯರ್(ಔಟಾಗದೆ 1) ಜೊತೆಗೆ ಮೂರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 6 ಎಸೆತಗಳಲ್ಲಿ 20 ರನ್ ಸೇರಿಸಿದ ಸ್ಯಾಮ್ಸನ್ ರಾಜಸ್ಥಾನದ ಸ್ಕೋರನ್ನು 222ಕ್ಕೆ ತಲುಪಿಸಿದರು. ಖಲೀಲ್ ಅಹ್ಮದ್ ಒಂದು ವಿಕೆಟ್ ಪಡೆದರೂ 4 ಓವರ್‌ಗಳಲ್ಲಿ 47 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News