ಎಸ್ಸಿ, ಎಸ್ಟಿಗಳಿಗಿಂತ ಮೇಲ್ವರ್ಗದವರ ಆಯುಷ್ಯ ಜಾಸ್ತಿ!

Update: 2022-04-23 05:44 GMT

ಹೊಸದಿಲ್ಲಿ: ಭಾರತದಲ್ಲಿ ಜನಸಾಮಾನ್ಯರ ಆಯುಷ್ಯ ಕೂಡಾ ಸಾಮಾಜಿಕ ಶ್ರೇಣಿಗೆ ಅನುಗುಣವಾಗಿರುತ್ತದೆ ಎಂದರೆ ನೀವು ನಂಬುತ್ತೀರಾ? ಹೌದು. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪುರುಷರು ಹಾಗೂ ಮಹಿಳೆಯರಿಗೆ ಹೋಲಿಸಿದರೆ ಮೇಲ್ವರ್ಗದ ಪುರುಷ ಹಾಗೂ ಮಹಿಳೆಯರು ಸುಮಾರು ನಾಲ್ಕರಿಂದ ಆರು ವರ್ಷ ಹೆಚ್ಚು ಬದುಕುತ್ತಾರೆ.

ಎಲ್ಲ ಪ್ರದೇಶ, ಆದಾಯ ಮಟ್ಟ ಮತ್ತು ಕಾಲಾವಧಿಯಲ್ಲೂ ಇದೇ ಪ್ರವೃತ್ತಿ ಇದೆ. ದೇಶದಲ್ಲಿ ನಿರೀಕ್ಷಿತ ಜೀವಿತಾವಧಿ ಗಣನೀಯವಾಗಿ ಹೆಚ್ಚಿದೆ. ಆದರೆ ಸಾಮಾಜಿಕ ಗುಂಪುಗಳ ನಡುವಿನ ಅಂತರ ಮಾತ್ರ 1997-2000ನೇ ಅವಧಿಗೆ ಹೋಲಿಸಿದರೆ 2013-16ರ ಅವಧಿಯಲ್ಲೂ ಹಾಗೆಯೇ ಉಳಿದಿದೆ ಅಥವಾ ಇನ್ನಷ್ಟು ಅಧಿಕವಾಗಿದೆ.

ಎಸ್ಸಿ/ಎಸ್ಟಿ ಮತ್ತು ಮೇಲ್ವರ್ಗದವರ ನಿರೀಕ್ಷಿತ ಜೀವಿತಾವಧಿ ಅಂತರ 4.6 ವರ್ಷದಿಂದ 6.1 ವರ್ಷಕ್ಕೆ ಹೆಚ್ಚಿದೆ. ಮೇಲ್ವರ್ಗದವರು ಮತ್ತು ಮುಸ್ಲಿಂ ಪುರುಷರ ಜೀವಿತಾವಧಿ ಅಂತರ ಮತ್ತಷ್ಟು ಹೆಚ್ಚಿದೆ. ಇದು 0.3 ವರ್ಷದಿಂದ 2.6 ವರ್ಷಕ್ಕೆ ಹೆಚ್ಚಿದೆ. ಅಂತೆಯೇ ಮೇಲ್ವರ್ಗದ ಮಹಿಳೆಯರು ಮತ್ತು ಮುಸ್ಲಿಂ ಮಹಿಳೆಯರ ಜೀವಿತಾವಧಿ ಅಂತರ 2.1 ವರ್ಷದಿಂದ 2.8 ವರ್ಷಕ್ಕೆ ಏರಿದೆ.

ಈ ಅಧ್ಯಯನವು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಎರಡು ಮತ್ತು ನಾಲ್ಕನೇ ಸುತ್ತಿನ ಅಂಕಿ ಅಂಶಗಳನ್ನು ವಿಶ್ಲೇಷಿಸಿದೆ. ಪಾಪ್ಯುಲೇಶನ್ ಆ್ಯಂಡ್ ಡೆವಲಪ್‍ಮೆಂಟ್ ರಿವ್ಯೂ ನಿಯತಕಾಲಿಕದಲ್ಲಿ ಈ ವರದಿ ಪ್ರಕಟಿಸಲಾಗಿದೆ.

ಸಾಮಾನ್ಯವಾಗಿ ಕೆಳಸ್ತರದ ಮತ್ತು ಮೇಲ್‍ಸ್ತರದ ಜಾತಿ ಗುಂಪುಗಳ ಮಹಿಳೆಯರ ನಡುವಿನ ಜೀವಿತಾವಧಿ ಅಂತರ ಅಲ್ಪಮಟ್ಟಿಗೆ ಕಡಿಮೆಯಾಗಿದೆ. ಆದರೆ ಪರಿಶಿಷ್ಟ ಜಾತಿ, ಮುಸ್ಲಿಮರು ಮತ್ತು ಇತರ ಹಿಂದುಳಿದ ವರ್ಗಗಳ ಪುರುಷರ ಜೀವಿತಾವಧಿ ಅಂತರ ಮತ್ತಷ್ಟು ಹೆಚ್ಚಿದೆ. ಪರಿಶಿಷ್ಟ ಪಂಗಡದ ಪುರುಷರು ಹಾಗೂ ಮೇಲ್ವರ್ಗದ ಪುರುಷರ ಜೀವಿತಾವಧಿ ಅಂತರ 8.4 ವರ್ಷದಿಂದ ಕುಸಿದಿದ್ದರೂ, ಅಗಾಧ ಅಂದರೆ 7 ವರ್ಷಗಳ ಅಂತರ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News