ಪಂಜರವಾದ ಜಹಾಂಗೀರ್‌ಪುರಿ: ಜಹಾಂಗೀರ್‌ಪುರ ಸುತ್ತಲೂ ಪೊಲೀಸ್ ಸರ್ಪಗಾವಲು; ಟಿಎಂಸಿ ತಂಡದ ಸತ್ಯಶೋಧನಾ ವರದಿ

Update: 2022-04-23 18:05 GMT

ಹೊಸದಿಲ್ಲಿ,ಎ.23: ಕಳೆದ ವಾರ ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾದ ವಾಯವ್ಯ ದಿಲ್ಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ವಿಧಿಸಿರುವ ನಿರ್ಬಂಧಗಳಿಂದಾಗಿ ಅಲ್ಲಿನ ನಿವಾಸಿಗಳಿಗೆ ದೈನಂದಿನ ಜೀವನವನ್ನು ಸಾಗಿಸುವುದು ದುಸ್ತರವಾಗಿಬಿಟ್ಟಿದೆ ಎಂದು ಟಿಎಂಸಿ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಶನಿವಾರ ಆಪಾದಿಸಿದ್ದಾರೆ.

 ಜಹಾಂಗೀರ್‌ಪುರದಲಲಿ ಎಪ್ರಿಲ್ 16ರಂದು ನಡೆದ ಹಿಂಸಾಚಾರದ ಕೇಂದ್ರಬಿಂದುವಾಗಿದ್ದ ಸಿ ಬ್ಲಾಕ್ ಪಂಜರದಂತಾಗಿದೆ ಹಾಗೂ ಅಲ್ಲಿಂದ ಯಾರಿಗೂ ಹೊರಬರಲು ಬಿಡಲಾಗುತ್ತಿಲ್ಲವೆಂದು ಸರ್ವ ಮಹಿಳಾ ಸತ್ಯ ಶೋಧನಾ ತಂಡದ ನೇತೃತ್ವದ ವಹಿಸಿದ್ದ ದಸ್ತಿದಾರ್ ಅವರು ಆರೋಪಿಸಿದ್ದಾರೆ.ಜಹಾಂಗೀರ್‌ಪುರದ ನಿವಾಸಿಗಳು ಬೆದರಿಕೆಗೊಳಗಾಗಿದ್ದಾರೆ ಹಾಗೂ ಅವರು ಭೀತಿಯ ನೆರಳಿನಲ್ಲಿ ಬದುಕುತ್ತಿದ್ದಾರೆಂದು ಅವರು ತಿಳಿಸಿದರು. ತಮಗೆ ನೀರು ಕೂಡಾ ಲಭ್ಯವಾಗುತ್ತಿಲ್ಲವೆಂದು ಅಲ್ಲಿನ ನಿವಾಸಿಗಳು ದೂರುತ್ತಿದ್ದಾರೆಂದು ಹೇಳಿದರು.

  ಸಿ-ಬ್ಲಾಕ್‌ನ ಎಲ್ಲಾ ಪ್ರವೇಶ ಕೇಂದ್ರಗಳನ್ನು ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ ಹಾಗೂ ತಡೆಬೇಲಿಗಳನ್ನು ಹಾಕಲಾಗಿದೆ ಎಂದವರು ತಿಳಿಸಿದರು. ಕಟ್ಟುನಿಟ್ಟಿನ ನಿರ್ಬಂಧಗಳ ಹೊರತಾಗಿಯೂ ಟಿಎಂಸಿ ನಿಯೋಗವು ಕೆಲವು ಸ್ಥಳೀಯ ಮಕ್ಕಳ ನೆರವಿನಿಂದಾಗಿ ಜಹಾಂಗೀರ್‌ಪುರಿ ಪ್ರದೇಶವನ್ನು ತಲುಪುವಲ್ಲಿ ಸಫಲವಾಗಿದ್ದು ಅಲ್ಲಿನ ಹಲವಾರು ನಿವಾಸಿಗಳನ್ನು ಮಾತನಾಡಿಸಿತು. ಆನಂತರ ಪೊಲೀಸರು ತಮ್ಮನ್ನು ತಡೆದರು ಎಂದು ದಸ್ತಿದಾರ್ ತಿಳಿಸಿದರು. ಅಲ್ಲಿನ ಜನತೆ ಬೆದರಿಕೆ ಹಾಗೂ ಭೀತಿಯ ನಡುವೆ ಬದುಕುತ್ತಿದ್ದಾರೆಂದು ಅವರು ಹೇಳಿದರು.

ಜಹಾಂಗೀರ್‌ಪುರದ ಅನೇಕ ನಿವಾಸಿಗಳು ರದ್ದಿ ಮಾರಾಟಗಾರರಾಗಿದ್ದು, ನಿರ್ಬಂಧಗಳಿಂದಾಗಿ ಅವರ ದೈನಂದಿನ ದುಡಿಮೆಯಿಂದ ಹಣ ಸಂಪಾದಿಸಲು ಸಾಧ್ಯವಾಗುತ್ತಿಲ್ಲವೆಂದು ದಸ್ತಿದಾರ್ ಆತಂಕ ವ್ಯಕ್ತಪಡಿಸಿದರು. ಜಹಾಂಗೀರ್‌ಪುರದ 200ಕ್ಕೂ ಅಧಿಕ ನಿವಾಸಿಗಳನ್ನು ನಿಯೋಗವು ಮಾತನಾಡಿಸಿದೆ ಎಂದವರು ತಂಡದಲ್ಲಿದ್ದ ಟಿಎಂಸಿ ಸಂಸದೆ ಸೌಗತಾ ರಾಯ್ ತಿಳಿಸಿದರು. ನಿಯೋಗವು ತನ್ನ ವರದಿಯನ್ನು ರವಿವಾರ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಲ್ಲಿಸಲಿದೆ. ಜಹಾಂಗೀರ್‌ಪುರದ ನಿವಾಸಿಗಳಿಗೆ ನೆರವು ನೀಡಲು ನಾವು ಸಿದ್ಧರಿದ್ದೇವೆಂದು ರಾಯ್‌ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News