ಇಸ್ಲಾಂ ಧರ್ಮ ಸ್ವೀಕರಿಸಿದ ತಮಿಳುನಾಡಿನ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಶಬರಿಮಲ ಜಯಕಾಂತನ್‌

Update: 2022-04-24 16:20 GMT

ಚೆನ್ನೈ: ಖ್ಯಾತ ತಮಿಳು ಮೋಟಿವೇಷನಲ್‌ ಸ್ಪೀಕರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಬರಿಮಲ ಜಯಕಾಂತನ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಅವರು ಮಕ್ಕಾದಲ್ಲಿನ ಹರಮ್ ಮಸೀದಿಯ ಕಾಬಾದ ಮುಂದೆ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಹಾಗೂ ತನ್ನ ಹೆಸರನ್ನು ಫಾತಿಮಾ ಶಬರಿಮಲ ಎಂದು ಬದಲಾಯಿಸಿಕೊಂಡಿದ್ದಾರೆ. 

"ಪ್ರಪಂಚದಾದ್ಯಂತ ಮುಸ್ಲಿಮರ ಮೇಲೆ ಯಾಕೆ ಇಷ್ಟೊಂದು ದ್ವೇಷವಿದೆ ಎಂದು ನನ್ನನ್ನು ನಾನು ಕೇಳಿಕೊಂಡೆ. ನಂತರ ತಟಸ್ಥ ಮನಸ್ಸಿನಿಂದ ಕುರಾನ್ ಓದಲು ಪ್ರಾರಂಭಿಸಿದೆ. ಹಾಗೆ ನಾನು ಆ ಸತ್ಯವನ್ನು ಅರ್ಥಮಾಡಿಕೊಂಡೆ. ನಾನು ಈಗ ನನಗಿಂತ ಹೆಚ್ಚಾಗಿ ಇಸ್ಲಾಂ ಅನ್ನು ಪ್ರೀತಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

ಮುಸ್ಲಿಮರಾಗಿರುವುದು ದೊಡ್ಡ ಗೌರವ ಮತ್ತು ಅದೃಷ್ಟ ಎಂದು ಹೇಳಿದ ಫಾತಿಮಾ ಶಬರಿಮಲ, ಮುಸ್ಲಿಮರು ತಮ್ಮ ಪವಿತ್ರ ಗ್ರಂಥ ಕುರ್‌ಆನ್ ಅನ್ನು ಎಲ್ಲರಿಗೂ ಪರಿಚಯಿಸಬೇಕೆಂದು ಕೇಳಿಕೊಂಡಿದ್ದಾರೆ. "ನಿಮ್ಮ ಕೈಯಲ್ಲಿ ಅದ್ಭುತವಾದ ಪುಸ್ತಕವಿದೆ. ಅದನ್ನು ಮನೆಯಲ್ಲಿ ಏಕೆ ಮರೆಮಾಡಿದ್ದೀರ. ಜಗತ್ತು ಅದನ್ನು ಓದಬೇಕು,” ಎಂದು ಅವರು ಹರಮ್ ಮಸೀದಿಯಿಂದ ನೀಡಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಪ್ರವಾದಿ ಮುಹಮ್ಮದ್ ಅವರ ಮೇಲಿನ ಗೌರವ ಮತ್ತು ಪ್ರೀತಿಯಿಂದಾಗಿ ಪ್ರವಾದಿ ಪುತ್ರಿ ಫಾತಿಮಾ ಹೆಸರನ್ನು ತನಗಿಟ್ಟುಕೊಂಡಿರುವುದಾಗಿ ಶಬರಿಮಲ ತಿಳಿಸಿದ್ದಾರೆ. ವಿಶೇಷ ಅತಿಥಿಯಾಗಿ ಕಿಸ್ವಾ (ಕಾಬಾದ ಮೇಲಿನ ಹೊದಿಕೆ) ನಿರ್ಮಿತಿ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶವೂ ಅವರಿಗೆ ಸಿಕ್ಕಿದ್ದು, ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೀಟ್ ಪರೀಕ್ಷೆ ವಿರೋಧಿಸಿ ರಾಜೀನಾಮೆ; ಮಹಿಳಾ ಹಕ್ಕುಗಳಿಗಾಗಿ ರಾಜಕೀಯ ಪಕ್ಷ ರಚನೆ

2017ರಲ್ಲಿ ನೀಟ್ ಪರೀಕ್ಷೆ ವಿರೋಧಿಸಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಶಬರಿಮಲ ಸುದ್ದಿಯಾಗಿದ್ದರು. ಪ್ಲಸ್ ಟು ರ್ಯಾಂಕರ್ ಆಗಿದ್ದ ಅನಿತಾ ವೈದ್ಯಕೀಯ ಸೀಟ್ ಸಿಗದೆ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸರಕಾರ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ‌ ಶಬರಿಮಲ ರಾಜೀನಾಮೆ ನೀಡಿದ್ದರು.  

ಕೆಲಸಕ್ಕಿಂತ ದೇಶ ಮುಖ್ಯ ಎಂದು ಸಾರಿದ ಶಬರಿಮಲ, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಚಟುವಟಿಕೆ ಆರಂಭಿಸಿದರು. ಮೋಟಿವೇಶನಲ್‌ ಸ್ಪೀಕರ್‌ ಆಗುವುದರೊಂದಿಗೆ ಅವರು 2020 ರಲ್ಲಿ, ಮಹಿಳೆಯರ ಹಕ್ಕುಗಳಿಗಾಗಿ 'ಪೆನ್ ವಿಡುತಲೈ ಕಚ್ಚಿ' ಎಂಬ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದ್ದರು. 

ಫಾತಿಮಾ 2002 ರಿಂದ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿದ್ದಾರೆ. ಶಿಕ್ಷಣ ನ್ಯಾಯ, ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಅವರು ಹೋರಾಟ ಮಾಡುತ್ತಿದ್ದರು. 2017 ರಲ್ಲಿ, 'ವಿಷನ್ 2040' ಎಂಬ ಹೊಸ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಏಕ ಶಿಕ್ಷಣ ವ್ಯವಸ್ಥೆ ಎಂಬ ವಿಷಯದೊಂದಿಗೆ ಸಂಸ್ಥೆಯನ್ನು ರಚಿಸಲಾಗಿದೆ.

ಇದರಡಿಯಲ್ಲಿ, ಆರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು. ಇದೇ ವಿಷಯದ ಕುರಿತು ಪುಸ್ತಕ ಬರೆದು ಸುಮಾರು 5 ಸಾವಿರ ಶಾಲಾ ಮಕ್ಕಳಿಗೆ ವಿತರಿಸಲಾಯಿತು. ಕೊಯಮತ್ತೂರಿನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಹತ್ಯೆಗೀಡಾದ ರಿತನ್ಯಶ್ರೀ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡಿ ಸಂಸ್ಥೆ ಸುದ್ದಿಯಾಗಿತ್ತು.

ಅವರು ಮೋಟಿವೇಶನಲ್‌ ಸ್ಪೀಕರ್‌ ಆಗಿ ಜನಪ್ರಿಯಗೊಳ್ಳುತ್ತಿದ್ದಂತೆ, ಅವರ ಬೇಡಿಕೆಯೂ ಹೆಚ್ಚಾಯಿತು. ಕನಿಷ್ಟ 200 ಕ್ಕೂ ಹೆಚ್ಚು ಪ್ಲಾಟ್‌ಫಾರ್ಮ್‌ಗಳಲ್ಲಿ ಅವರು ಭಾಗವಹಿಸಿದ್ದಾರೆ. ನ್ಯೂಸ್ 7 ಟಿವಿ, ಜಯ ಟಿವಿ ಮತ್ತು ವಾಂಡರ್ ಟಿವಿ ಮೊದಲಾದ ವಾಹಿನಿಗಳಲ್ಲಿ  ಹಲವಾರು ಕಾರ್ಯಕ್ರಮಗಳನ್ನು ಅವರು ಆಯೋಜಿಸಿದ್ದಾರೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News