ತ.ನಾಡು: ಉಪಕುಲಪತಿ ನೇಮಿಸಲು ರಾಜ್ಯ ಸರಕಾರಕ್ಕೆ ಅಧಿಕಾರ ನೀಡುವ ಮಸೂದೆ ಅಂಗೀಕಾರ

Update: 2022-04-25 08:20 GMT

ಚೆನ್ನೈ: ವಿಶ್ವವಿದ್ಯಾನಿಲಯಗಳಿಗೆ ಉಪಕುಲಪತಿಗಳನ್ನು ನೇಮಿಸುವ ರಾಜ್ಯಪಾಲರ ಅಧಿಕಾರವನ್ನು ರಾಜ್ಯ ಸರಕಾರಕ್ಕೆ ವಹಿಸಲು ಅನುವು ಮಾಡಿಕೊಡುವ ಮಸೂದೆಯನ್ನು ತಮಿಳುನಾಡು ವಿಧಾನಸಭೆ ಇಂದು ಅಂಗೀಕರಿಸಿದೆ.

ಈ ಶಾಸನವನ್ನು ಜಾರಿಗೊಳಿಸುವ ಅಗತ್ಯವನ್ನು ವಾದಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಉಪಕುಲಪತಿಗಳನ್ನು ನೇಮಿಸಲು ರಾಜ್ಯ ಸರಕಾರಕ್ಕೆ ಅಧಿಕಾರದ ಕೊರತೆಯು ಉನ್ನತ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನೊಂದಿಗೆ ಹೋಲಿಕೆ ಮಾಡಿದರು.

ರಾಜ್ಯಪಾಲ ಆರ್ .ಎನ್. ರವಿ ಅವರು ರಾಜ್ಯ, ಕೇಂದ್ರ ಹಾಗೂ  ಖಾಸಗಿ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ಎರಡು ದಿನಗಳ ಸಮ್ಮೇಳನವನ್ನು ಊಟಿಯಲ್ಲಿ ಆಯೋಜಿಸುತ್ತಿರುವ ದಿನದಂದು ಶಾಸನವನ್ನು ಸದನದಲ್ಲಿ ಪರಿಚಯಿಸಲಾಗಿದೆ.

ವಿರೋಧ ಪಕ್ಷಗಳಾದ ಎಐಎಡಿಎಂಕೆ ಮತ್ತು ಬಿಜೆಪಿ ಶಾಸನವನ್ನು ವಿರೋಧಿಸಿದವು.

ಮಸೂದೆಯು ಕುರಿತು ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್, "ರಾಜ್ಯಪಾಲರು ರಾಜ್ಯ ಸರಕಾರದೊಂದಿಗೆ ಸಮಾಲೋಚಿಸಿ ಉಪಕುಲಪತಿಗಳನ್ನು ನೇಮಕ ಮಾಡುತ್ತಾರೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಹೊಸ ಪ್ರವೃತ್ತಿ ಹೊರಹೊಮ್ಮಿದೆ.  ರಾಜ್ಯಪಾಲರು ತಾವೊಬ್ಬರು ವಿಶೇಷ ಎಂಬಂತೆ ವರ್ತಿಸುತ್ತಾರೆ. ಈ ಅಭ್ಯಾಸವು "ಚುನಾಯಿತ ಸರಕಾರವನ್ನು ಅಗೌರವಗೊಳಿಸುತ್ತದೆ" ಹಾಗೂ  "ಜನರ ಆಡಳಿತದ ತತ್ವಕ್ಕೆ ವಿರುದ್ಧವಾಗಿದೆ" ಎಂದು ಅವರು ಹೇಳಿದರು.

ಪ್ರಸ್ತುತ ವ್ಯವಸ್ಥೆಯು ವಿಶ್ವವಿದ್ಯಾನಿಲಯಗಳ ಆಡಳಿತದಲ್ಲಿ "ಗೊಂದಲ" ಕ್ಕೆ ಕಾರಣವಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News