‘ಸೆಂಟ್ರಲ್ ಬೋರ್ಡ್ ಆಫ್ ಸಪ್ರೆಸಿಂಗ್ ಎಜ್ಯುಕೇಷನ್’: ಸಿಬಿಎಸ್ಇ ಪಠ್ಯಕ್ರಮ ಬದಲಾವಣೆಗಳಿಗೆ ರಾಹುಲ್ ಟೀಕೆ‌

Update: 2022-04-25 17:08 GMT

ಹೊಸದಿಲ್ಲಿ, ಎ.25: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸೋಮವಾರ ‘ಸೆಂಟ್ರಲ್ ಬೋರ್ಡ್ ಆಫ್ ಸಪ್ರೆಸಿಂಗ್ ಎಜ್ಯುಕೇಷನ್ (ಕೇಂದ್ರೀಯ ಶಿಕ್ಷಣ ದಮನ ಮಂಡಳಿ)’ ಎಂದು ಬಣ್ಣಿಸಿದ್ದಾರೆ. ಸಿಬಿಎಸ್ಇ ಕೆಲವು ದಿನಗಳ ಹಿಂದೆ 10 ಮತ್ತು 12ನೇ ತರಗತಿಗಳ ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಪಠ್ಯಕ್ರಮದಿಂದ ಹಲವಾರು ಅಧ್ಯಾಯಗಳನ್ನು ತೆಗೆದುಹಾಕಿರುವ ಹಿನ್ನೆಲೆಯಲ್ಲಿ ರಾಹುಲ್ ರ ಈ ಟೀಕೆ ಹೊರಬಿದ್ದಿದೆ.

 ಪಠ್ಯಕ್ರಮದಲ್ಲಿ ಮಾರ್ಪಾಡು ಕುರಿತು ಆರೆಸ್ಸೆಸ್ ಅನ್ನೂ ಗುರಿಯಾಗಿಸಿಕೊಂಡಿರುವ ರಾಹುಲ್ ಅದನ್ನು ‘ರಾಷ್ಟ್ರೀಯ ಶಿಕ್ಷಾ ಶ್ರೆಡರ್ (ರಾಷ್ಟ್ರೀಯ ಶಿಕ್ಷಣ ಛೇದಕ)’ ಎಂದು ಬಣ್ಣಿಸಿದ್ದಾರೆ. ‘ರಾಷ್ಟ್ರೀಯ ಶಿಕ್ಷಾ ಶ್ರೆಡರ್’ ಎಂದು ಸೋಮವಾರ ಟ್ವೀಟಿಸಿರುವ ಅವರು, ಶ್ರೆಡರ್ ಯಂತ್ರವು ಪ್ರಜಾಪ್ರಭುತ್ವ ಮತ್ತು ವಿವಿಧತೆ, ಕೃಷಿಯ ಮೇಲೆ ಜಾಗತೀಕರಣದ ಪರಿಣಾಮ, ಅಲಿಪ್ತ ಚಳವಳಿ, ಮುಘಲರ ಆಸ್ಥಾನ, ಕೈಗಾರಿಕಾ ಕ್ರಾಂತಿ, ಫೈಝ್ ಕವನಗಳಂತಹ ವಿಷಯಗಳನ್ನು ಚೂರುಚೂರಾಗಿ ಕತ್ತರಿಸುವ ಚಿತ್ರವನ್ನು ಲಗತ್ತಿಸಿದ್ದಾರೆ. ಉದ್ಯೋಗ, ಕೋಮು ಸೌಹಾರ್ದತೆ ಮತ್ತು ಸಂಸ್ಥೆಗಳ ಸ್ವಾತಂತ್ರದಂತಹ ಸಾಮಾಜಿಕ ಒಳಿತುಗಳನ್ನು ಯಂತ್ರವು ಚೂರುಚೂರಾಗಿಸುವುದನ್ನೂ ಚಿತ್ರವು ತೋರಿಸಿದೆ.

ಸಿಬಿಎಸ್ಇ ತನ್ನ ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಪಠ್ಯಕ್ರಮಗಳಿಂದ ಆಫ್ರೋ-ಏಶ್ಯನ್ ಪ್ರದೇಶಗಳಲ್ಲಿ ಇಸ್ಲಾಮಿಕ್ ಸಾಮ್ರಾಜ್ಯಗಳ ಉದಯ, ಮುಘಲ್ ಆಸ್ಥಾನಗಳ ವೃತ್ತಾಂತಗಳು, ಶೀತಲ ಸಮರ ಮತ್ತು ಕೈಗಾರಿಕಾ ಕ್ರಾಂತಿಗೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದುಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News