ನಕಲಿ ಸುದ್ದಿ ಪ್ರಸಾರ: ಕೇಂದ್ರದಿಂದ 16 ಯುಟ್ಯೂಬ್ ವಾಹಿನಿಗಳು ಸ್ಥಗಿತ

Update: 2022-04-25 18:20 GMT

ಹೊಸದಿಲ್ಲಿ, ಎ 25: ಭಾರತ ಸರಕಾರ ಸೋಮವಾರ 16 ಯುಟ್ಯೂಬ್ ಸುದ್ದಿ ವಾಹಿನಿಗಳನ್ನು ಸ್ಥಗಿತಗೊಳಿಸಿದೆ. ಇದರಲ್ಲಿ 6 ಪಾಕಿಸ್ತಾನ ಮೂಲದ್ದಾಗಿವೆ.

ದೇಶದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳಿಗೆ ಸಂಬಂಧಿಸಿ ತಪ್ಪು ಮಾಹಿತಿ ಹರಡುವ ಹಾಗೂ ಕೋಮು ಅಸಾಮರಸ್ಯವನ್ನು ಪ್ರಚೋದಿಸುವ ಫೇಸ್ಬುಕ್ ಖಾತೆಗಳನ್ನು ಕೂಡ ಕೇಂದ್ರ ಸರಕಾರ ಸ್ಥಗಿತಗೊಳಿಸಿದೆ. ಈ ಎಲ್ಲ ಯುಟ್ಯೂಬ್ ವಾಹಿನಿಗಳ ಸಂಚಿತ ವೀಕ್ಷಕತ್ವ 68 ಕೋಟಿ ಎಂದು ಸೋಮವಾರ ಬಿಡುಗಡೆಯಾದ ಕೇಂದ್ರ ಸರಕಾರದ ಪತ್ರಿಕಾ ಹೇಳಿಕೆ ಉಲ್ಲೇಖಿಸಿದೆ.
 
ಭಾರತದಲ್ಲಿ ಭಯ ಹುಟ್ಟಿಸಲು ತಪ್ಪು ಹಾಗೂ ರಿಶೀಲಿಸದ ಮಾಹಿತಿ ಹರಡುವ, ಕೋಮು ಅಸಾಮರಸ್ಯವನ್ನು ಪ್ರಚೋದಿಸುವ ಹಾಗೂ ಶಾಂತಿ ಸುವ್ಯವಸ್ಥೆಗೆ ಅಡ್ಡಿ ಉಂಟು ಮಾಡುವ ಭಾರತದ 10 ಹಾಗೂ ಪಾಕಿಸ್ತಾನದ 6 ವಾಹಿನಿಗಳನ್ನು ಪತ್ರಿಕಾ ಹೇಳಿಕೆ ಗುರುತಿಸಿದೆ.

ಭಾರತದ ವಾಹಿನಿಗಳು ಕೋವಿಡ್ ಕಾರಣದಿಂದ ಭಾರತದಾದ್ಯಂತ ಲಾಕ್ಡೌನ್ ಘೋಷಿಸಿರುವುದಕ್ಕೆ ಸಂಬಂಧಿಸಿದ ಸುದ್ದಿ ಹಾಗೂ ವೀಡಿಯೊವನ್ನು ಪ್ರಸಾರ ಮಾಡಿವೆ. ನಿರ್ದಿಷ್ಟ ಸಮುದಾಯದಿಂದ ಬೆದರಿಕೆ ಆರೋಪಕ್ಕೆ ಸಂಬಂಧಿಸಿ ವಾಹಿನಿಗಳು ಯೋಜಿತ ಪ್ರತಿಪಾದನೆ ಮಾಡಿವೆ. ಪಾಕಿಸ್ತಾನದ ಮೂಲ ಹೊಂದಿದ ಯುಟ್ಯೂಬ್ ಚಾನೆಲ್ಗಳು ಭಾರತದ ಸೇನಾ ಪಡೆ, ಜಮ್ಮು ಹಾಗೂ ಕಾಶ್ಮೀರ, ಉಕ್ರೇನ್‌ ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತದ ವಿದೇಶಿ ಸಂಬಂಧಗಳು ಮೊದಲಾದ ವಿವಿಧ ವಿಷಯಗಳಿಗೆ ಸಂಬಂಧಿಸಿದ ನಕಲಿ ಸುದ್ದಿಗಳನ್ನು ಸಂಯೋಜಿತ ರೀತಿಯಲ್ಲಿ ಪೋಸ್ಟ್ ಮಾಡಿರುವುದು ಪತ್ತೆಯಾಗಿವೆ.
ಐಟಿ ನಿಯಮ 2021ರ ಕಲಂ 18ರ ಅಡಿ ಅಗತ್ಯವಾಗಿರುವಂತೆ ಯಾವೊಂದು ಡಿಜಿಟಲ್ ಸುದ್ದಿ ಪ್ರಕಾಶಕರು ಕೂಡ ಸಚಿವಾಲಯದಲ್ಲಿ ಮಾಹಿತಿ ಸಲ್ಲಿಸಿಲ್ಲ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News