ಪ್ರಭಾಸ್‌ ಅಭಿನಯದ ಆದಿ ಪುರುಷ್‌ ಬಿಜೆಪಿಯ ಅಜೆಂಡಾವನ್ನು ಹರಡುತ್ತದೆ: ತೆಲಂಗಾಣ ಸಚಿವ ಕೆಟಿಆರ್

Update: 2022-04-26 18:39 GMT
photo- twitter

ಭಾರತದ ಯುವ ಜನಾಂಗವನ್ನು ಗುರಿಯಲ್ಲಿಟ್ಟು ಹಾಗೂ ರಾಷ್ಟ್ರೀಯತೆ ಮತ್ತು ಕೋಮುವಾದವನ್ನು ಬೆರೆಸಲು ಬಿಜೆಪಿ ಸಿನಿಮಾವನ್ನು ಬಳಸಿಕೊಳ್ಳುತ್ತಿದೆ ಎಂದು ತೆಲಂಗಾಣದ ಸಚಿವ ಕೆಟಿ ರಾಮರಾವ್ ಆರೋಪಿಸಿದ್ದಾರೆ. 

ತೆಲಂಗಾಣದ ಐಟಿ, ನಗರಾಭಿವೃದ್ಧಿ, ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿರುವ ಕೆಟಿಆರ್‌ ಇತ್ತೀಚೆಗೆ TV5 ಸುದ್ದಿಗೆ ನೀಡಿದ ಸಂದರ್ಶನದಲ್ಲಿ, ಬಿಜೆಪಿ ಸಿನೆಮಾಗಳನ್ನು ಕೂಡಾ ತನ್ನ ಅಜೆಂಡಾ ಹರಡುವ ಸಾಧವಾಗಿ ಬಳಸುತ್ತಿದೆ ಎಂದು ಹೇಳಿದ್ದಾರೆ.    2019 ರ ಲೋಕಸಭಾ ಚುನಾವಣೆಗೂ ಮುನ್ನ ಬಂದ ವಿಕ್ಕಿ ಕೌಶಲ್ ಅಭಿನಯದ ಉರಿ, ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನದ ವಿವಾದಿತ ಚಿತ್ರ ದಿ ಕಾಶ್ಮೀರ ಫೈಲ್ಸ್ ಹಾಗೂ ಮುಂದಿನ ವರ್ಷ ಬಿಡುಗಡೆಯಾಗಲಿರುವ ಪ್ರಭಾಸ್ ಅಭಿನಯದ ಆದಿಪುರುಷನಂತಹ ಸಿನೆಮಾಗಳನ್ನು ಉದಾಹರಣೆಗಳಾಗಿ ಉಲ್ಲೇಖಿಸಿದ ಕೆಟಿಆರ್‌ ರಾಷ್ಟ್ರೀಯತೆ ಮತ್ತು ಕೋಮುವಾದವನ್ನು ಬೆರೆಸಲು ಸಿನೆಮಾಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕೆಟಿಆರ್ ಸಂದರ್ಶನದ ಈ ಭಾಗ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ.  

“ಅವರು (ಬಿಜೆಪಿ) ರಾಷ್ಟ್ರೀಯತೆ ಮತ್ತು ಕೋಮುವಾದವನ್ನು ಬೆರೆಸುವ ತಂತ್ರವನ್ನು ರೂಪಿಸಿದ್ದಾರೆ. ಯುವಕರನ್ನು ಮತ್ತು ಒಂದು ಜನಾಂಗವನ್ನು ಗುರಿಯಾಗಿಸಿ ಎಲ್ಲರೂ ಒಂದು ನಿರ್ದಿಷ್ಟ ರೀತಿಯಲ್ಲಿ ಯೋಚಿಸಲು ಬೇಕಾದ ವಾತಾವರಣವನ್ನು ಸೃಷ್ಟಿಸುವುದು ಅವರ ಉದ್ದೇಶವಾಗಿದೆ. ಇದಕ್ಕೆ ಸಿನೆಮಾಗಳು ಸಹ ಹೊರತಾಗಿಲ್ಲ. ಅವರು ಸಿನೆಮಾಗಳಿಗೆ ನೇರವಾಗಿ ಹಣ ಹೂಡುವುದಿಲ್ಲ, ಹಾಗಾಗಿ ಎಷ್ಟೋ ಬಾರಿ ನಮಗೆ ಅರ್ಥವಾಗುವುದಿಲ್ಲ. ಉರಿ, ಕಾಶ್ಮೀರ ಫೈಲ್ಸ್, ಆದಿಪುರುಷ ಇತ್ಯಾದಿ ಅವರ ಪ್ರೊಪಗಾಂಡದ ಚಿತ್ರಗಳು. ಬಿಜೆಇ ಇದರ ಹಿಂದೆ ಕೆಲಸ ಮಾಡುತ್ತಿದೆ” ಎಂದು ಕೆಟಿಆರ್‌ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News