"ಭಾರತಕ್ಕೆ ಒಂದು ಭಾಷೆ ಇದೆ ಅದು...": ರಾಷ್ಟ್ರೀಯ ಭಾಷೆ ಸ್ಥಾನಮಾನ ಚರ್ಚೆಯಲ್ಲಿ ಸೋನು ಸೂದ್‌ ಹೇಳಿದ್ದೇನು?

Update: 2022-04-28 17:57 GMT

ಮುಂಬೈ: ಹಿಂದಿಗೆ ರಾಷ್ಟ್ರ ಭಾಷೆಯ ಸ್ಥಾನಮಾನದ ಕುರಿತು ಟ್ವಿಟರ್‌ನಲ್ಲಿ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ಅವರ ನಡುವಿನ ವಾಗ್ವಾದದಲ್ಲಿ, ನಟ ಸೋನು ಸೂದ್ ಕೂಡಾ ಸೇರಿಕೊಂಡಿದ್ದಾರೆ.  ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಸೋನು ಸೂದ್‌, ಕೇವಲ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಕರೆಯಲಾಗುವುದಿಲ್ಲ ಎಂದು ಹೇಳಿದ್ದಾರೆ.

ಸುದೀಪ್ ಇತ್ತೀಚೆಗೆ "ಹಿಂದಿ ಇನ್ನು ಮುಂದೆ ರಾಷ್ಟ್ರ ಭಾಷೆಯಲ್ಲ" ಎಂದು ಹೇಳಿದಾಗಿನಿಂದ ರಾಷ್ಟ್ರ ಭಾಷೆಯ ಸುತ್ತಲಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.   

ಸೋನು ಸ್ವತಃ ಹಲವಾರು ವರ್ಷಗಳಿಂದ ದಕ್ಷಿಣ ಭಾರತದ ಭಾಷೆಯ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ವಿಷಯದ ಬಗ್ಗೆ IndianExpress.com ಜೊತೆ ಮಾತನಾಡಿದ ಅವರು, “ಕೇವಲ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಕರೆಯಬಹುದು ಎಂದು ನಾನು ಭಾವಿಸುವುದಿಲ್ಲ. ಭಾರತಕ್ಕೆ ಒಂದು ಭಾಷೆ ಇದೆ, ಅದು ಮನರಂಜನೆ. ನೀವು ಯಾವ (ಭಾಷೆಯ) ಚಿತ್ರರಂಗಕ್ಕೆ ಸೇರಿದ್ದೀರಿ ಎಂಬುದು ನಿಜವಾಗಿಯೂ ವಿಷಯವಲ್ಲ. ನೀವು ಜನರಿಗೆ ಮನರಂಜನೆ ನೀಡಿದರೆ, ಅವರು ನಿಮ್ಮನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಮತ್ತು ನಿಮ್ಮನ್ನು ಸ್ವೀಕರಿಸುತ್ತಾರೆ” ಎಂದು ಹೇಳಿದ್ದಾರೆ.

ದಕ್ಷಿಣ ಚಲನಚಿತ್ರಗಳ ಯಶಸ್ಸು "ಹಿಂದಿ ಚಲನಚಿತ್ರಗಳ ನಿರ್ಮಾಣದ ವಿಧಾನವನ್ನು ಬದಲಾಯಿಸುತ್ತದೆ" ಎಂದು ಸೂದ್ ಹೇಳಿದ್ದಾರೆ. ಚಲನಚಿತ್ರ ನಿರ್ಮಾಪಕರು ಈಗ ಪ್ರೇಕ್ಷಕರ ಸಂವೇದನೆಗಳನ್ನು ಗೌರವಿಸಬೇಕಾಗಿದೆ. ಜನರು ಸರಾಸರಿ ಚಿತ್ರಕ್ಕೆ ಸಾವಿರಾರು ರೂಪಾಯಿಗಳನ್ನು ಹಾಕುವುದಿಲ್ಲ. ಒಳ್ಳೆಯ ಸಿನಿಮಾ ಮಾತ್ರ ಒಪ್ಪಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಚಿರಂಜೀವಿ ಮತ್ತು ರಾಮ್ ಚರಣ್ ಅವರ ತಂದೆ-ಮಗ ಜೋಡಿ ನಟಿಸಿರುವ ತೆಲುಗು ಚಿತ್ರ ʼಆಚಾರ್ಯʼದಲ್ಲಿ ಸೋನು ಕಾಣಿಸಿಕೊಳ್ಳಲಿದ್ದಾರೆ. ಅವರ ತಮಿಳು ಚಿತ್ರ ʼತಮಿಳರಸನ್ʼ ಕೂಡ ಈ ವರ್ಷ ಬಿಡುಗಡೆಗೆ ಅಣಿಯಾಗಿದ್ದಾರೆ. ಇದರ ನಂತರ, ಅವರು ಅಕ್ಷಯ್ ಕುಮಾರ್ ಅಭಿನಯದ ಐತಿಹಾಸಿಕ ಮಹಾಕಾವ್ಯ ʼಪೃಥ್ವಿರಾಜ್‌ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರ ಚೊಚ್ಚಲ ಚಿತ್ರವಾಗಿದ್ದು ಇದರಲ್ಲಿ ಸಂಜಯ್ ದತ್ ಕೂಡ ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News