ಪತ್ರಕರ್ತರ ಮೇಲೆ ಹಲ್ಲೆ; ಆಮ್ ಆದ್ಮಿ ಸಿಎಂಗಳ ಮೌನಕ್ಕೆ ಪ್ರೆಸ್‍ಕ್ಲಬ್ ಖಂಡನೆ

Update: 2022-04-29 02:09 GMT
ಅರವಿಂದ್ ಕೇಜ್ರಿವಾಲ್

ಹೊಸದಿಲ್ಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಜಂಟಿ ಪತ್ರಿಕಾಗೋಷ್ಠಿಗೆ ಹಾಜರಾಗದಂತೆ ನಮ್ಮನ್ನು ತಡೆಯಲಾಯಿತು ಮತ್ತು ಪಂಜಾಬ್ ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪತ್ರಕರ್ತ ನರೇಶ್ ವತ್ಸ್ ಹೇಳಿಕೆ ನೀಡಿದ ಎರಡು ದಿನಗಳ ಬಳಿಕ, ಉಭಯ ಮುಖ್ಯಮಂತ್ರಿಗಳ ಮೌನವನ್ನು ಭಾರತದ ಪ್ರೆಸ್‍ಕ್ಲಬ್ ಖಂಡಿಸಿದೆ.

"ಇದು ಈ ಘಟನೆಯನ್ನು ಅನುಮೋದಿಸುವ ಜಾಣ ತಂತ್ರ ಎನ್ನುವುದನ್ನು ಸೂಚಿಸುತ್ತದೆ" ಎಂದು ಹೇಳಿದೆ.

ದೆಹಲಿಯ ಇಂಪೀರಿಯಲ್ ಹೋಟೆಲ್‍ನಲ್ಲಿ ಮಂಗಳವಾರ ನಡೆದ ಈ ಘಟನೆಯನ್ನು ಖಂಡಿಸಿ ಚಂಡೀಗಢ ಪ್ರೆಸ್ ಕ್ಲಬ್ ಹೇಳಿಕೆ ನೀಡಿದ ಎರಡು ದಿನಗಳ ಬಳಿಕ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಪ್ರತಿಕ್ರಿಯಿಸಿದೆ.

ಹಲ್ಲೆ ನಡೆಸಿದ್ದಾರೆ ಎನ್ನಲಾದ ಪೊಲೀಸರನ್ನು ಅಮಾನತು ಮಾಡಬೇಕು ಮತ್ತು ವತ್ಸ್ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರೆಸ್ ಕ್ಲಬ್ ಆಗ್ರಹಿಸಿದೆ. ಈ ವಿಷಯ ತೀರಾ ಗಂಭೀರವಾಗಿದ್ದು, ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅಥವಾ ಹೇಳಿಕೆಯನ್ನೂ ನೀಡದಿರುವುದು ಖಂಡನೀಯ ಎಂದಿದೆ.

ಪತ್ರಕರ್ತ ಎನ್ನುವುದನ್ನು ಸಾಬೀತುಪಡಿಸಲು ಪೊಲೀಸರು ಕೇಳಿದಾಗ ತಾವು ಪಿಐಬಿ ಕಾರ್ಡ್ ತೋರಿಸಿದ್ದಾಗಿ ವತ್ಸ್ ಹೇಳಿದ್ದಾರೆ. ಆದಾಗ್ಯೂ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದು, ಈ ಪತ್ರಕರ್ತನನ್ನು ಜೈಲಿಗೆ ಅಟ್ಟಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾಗಿ ವತ್ಸ್ ಆಪಾದಿಸಿದ್ದಾರೆ. ಆ ಬಳಿಕ ವತ್ಸ್ ಪಿಐಬಿ ಮಹಾನಿರ್ದೇಶಕರು ಹಾಗೂ ಕೇಂದ್ರ ಮಾಹಿತಿ ಸಚಿವಾಲಯಕ್ಕೆ ಈ ಬಗ್ಗೆ ದೂರು ಸಲ್ಲಿಸಿದ್ದರು.

ಈ ಹಲ್ಲೆಯನ್ನು ಶಿರೋಮಣಿ ಅಕಾಲಿದಳ ಮುಖಂಡ ಹಾಗೂ ಮಾಜಿ ಸಿಎಂ ಸುಖ್ಬೀರ್ ಸಿಂಗ್ ಬಾದಲ್ ಕೂಡಾ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News