ಮೂರು ವರ್ಷ ಬಳಿಕ ಜಮ್ಮು ಕಾಶ್ಮೀರ ಉನ್ನತಾಧಿಕಾರಿ ಶಾ ಫೈಸಲ್ ಮರುನೇಮಕ

Update: 2022-04-29 03:43 GMT
ಶಾ ಫೈಸಲ್

ಹೊಸದಿಲ್ಲಿ: ಐಎಎಸ್ ಅಧಿಕಾರಿ ಶಾ ಫೈಸಲ್ ಅವರ ರಾಜೀನಾಮೆ ಪತ್ರವನ್ನು ವಾಪಾಸು ಪಡೆಯುವ ಅರ್ಜಿಯನ್ನು ಸ್ವೀಕರಿಸಿರುವ ಸರ್ಕಾರ, ಅವರನ್ನು ಸೇವೆಗೆ ಮರು ನೇಮಕ ಮಾಡಿಕೊಂಡಿದೆ. ಅವರ ಹೊಸ ನಿಯೋಜನೆಯನ್ನು ಶೀಘ್ರವೇ ಪ್ರಕಟಿಸುವುದಾಗಿ ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಫೈಸಲ್ ಅವರು 2019ರ ಜನವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್‍ಮೆಂಟ್ (ಜೆಕೆಪಿಎಂ) ಎಂಬ ಪಕ್ಷ ಹುಟ್ಟುಹಾಕಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಆದೇಶ ಹೊರಡಿಸಿದ ಬಳಿಕ ಅವರನ್ನು ಸಾರ್ವಜನಿಕ ಸುರಕಾ ಕಾಯ್ದೆಯಡಿ ಬಂಧಿಸಲಾಗಿತ್ತು.

ಆದರೆ ಬಿಡುಗಡೆ ಬಳಿಕ ಫೈಸಲ್ ರಾಜಕೀಯವನ್ನು ತೊರೆದು ಸಾರ್ವಜನಿಕ ಸೇವೆಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದರು. ಅವರ ರಾಜೀನಾಮೆಯನ್ನು ಸರ್ಕಾರ ಸ್ವೀಕರಿಸಿರಲಿಲ್ಲ. ಮೂಲತಃ ವೈದ್ಯರಾಗಿದ್ದ ಇವರು ಪ್ರಜಾಸತ್ತಾತ್ಮಕ ರಾಜಕೀಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿದ ಪಕ್ಷ ಹುಟ್ಟುಹಾಕಿದ್ದರು. ಆದರೆ ಇವರ ರಾಜಕೀಯ ವೃತ್ತಿ ಹಠಾತ್ತನೇ ಅಂತ್ಯವಾಗಿದೆ.

"ಐಎಎಸ್ ಹುದ್ದೆ ತೊರೆದ ಬಳಿಕ, ಭಿನ್ನಮತವನ್ನು ಸೂಚಿಸುವ ನನ್ನ ನಿರುಪದ್ರಕಾರಿ ಕ್ರಮವನ್ನು ದೇಶದ್ರೋಹ ಎಂದು ಕಾಣಲಾಯಿತು. ಇದು ನನಗೆ ಲಾಭ ತರುವುದಕ್ಕಿಂತ ಹೆಚ್ಚು ಹಾನಿ ಮಾಡಿತು. ನನ್ನ ಕ್ರಮ ಹಲವು ಮಂದಿ ನಾಗರಿಕ ಸೇವಾ ಆಕಾಂಕ್ಷಿಗಳನ್ನು ನಿರುತ್ತೇಜನಗೊಳಿಸಿತು ಹಾಗೂ ಸಹೋದ್ಯೋಗಿಗಳು ವಿಶ್ವಾಸದ್ರೋಹದ ಭಾವನೆ ವ್ಯಕ್ತಪಡಿಸಿದರು. ಇದು ನನಗೆ ತೀರಾ ಬೇಸರ ತಂದಿತು" ಎಂದು ಅವರು ಈ ಮುನ್ನ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News