ಮನೆಯಿಂದ ಹೊರಗೆ ಒಂದು ದಿನ
ಮೊನ್ನೆ ನನ್ನ ಹಳೆಯ ಸ್ನೇಹಿತ ಆನಂದಪ್ಪ ‘ಗೌರಿಬಿದನೂರು ಕಡೆ ಹೋಗಿಬರೋಣ ಬಾ’ ಎಂದು ಕರೆದ. ನಾನು ಎಚ್‌ಎಸ್‌ಆರ್ ಲೇಔಟ್‌ನಿಂದ ಓಲಾದಲ್ಲಿ ಹೋಗಿ ಕೊಡಿಗೆಹಳ್ಳಿ ಗೇಟ್‌ನಲ್ಲಿ ಇಳಿದುಕೊಂಡು ಫೋನ್ ಮಾಡಿದೆ. ಈ ಆನಂದಪ್ಪ 1980-82ರಲ್ಲಿ ನನ್ನ ಜೊತೆಗೆ ಎಂ.ಎಸ್ಸಿ ಮುಗಿಸಿ ಕಾಣದೇ ಹೋಗಿಬಿಟ್ಟಿದ್ದ. ಕೇಂದ್ರ ಸರಕಾರದಲ್ಲಿ ನನಗೆ ಕೆಲಸ ಸಿಕ್ಕಿ ಕರ್ನಾಟಕ ಬಿಟ್ಟು ಉತ್ತರ ಪ್ರದೇಶದ ಲಕ್ನೊಗೆ ಹೊರಟುಹೋಗಿದ್ದೆ. ಸರಿಯಾಗಿ 40 ವರ್ಷಗಳ ನಂತರ ಇನ್ನೊಬ್ಬ ಕ್ಲಾಸ್‌ಮೇಟ್ ಮೂಲಕ ಆನಂದಪ್ಪನ ಫೋನ್ ಸಂಖ್ಯೆ ಸಿಕ್ಕಿ ಒಂದು ವಾರದ ಹಿಂದೆ ಹಳೆ ವಿಷಯಗಳನ್ನೆಲ್ಲ ಒಂದಷ್ಟು ಮಾತನಾಡಿಕೊಂಡೆವು. ಹೆಲ್ಮೆಟ್‌ನೊಂದಿಗೆ ಕೊರೋನ-ಮಾಸ್ಕ್ ಧರಿಸಿದ್ದ ಆನಂದಪ್ಪ ಹತ್ತಿರಕ್ಕೆ ಬಂದು ಬೈಕ್ ನಿಲ್ಲಿಸಿದ. ಇಬ್ಬರೂ ಒಬ್ಬರನ್ನೊಬ್ಬರು ಗುರುತು ಹಿಡಿಯಲು ಹೆಲ್ಮೆಟ್-ಮಾಸ್ಕ್ ಅಡ್ಡ ನಿಲ್ಲಲಿಲ್ಲ. ನಾಲ್ಕು ದಶಕಗಳ ನಂತರ ನಾವು ಭೇಟಿಯಾಗಿದ್ದೆವು. ಆನಂದಪ್ಪ, ‘ವೆಂಕಟಸ್ವಾಮಿಗಳೆ’ ಎಂದ. ನಾನು, ‘ಏಹ್ ಅದೇನು ವೆಂಕಟಸ್ವಾಮಿಗಳೆ? ವೆಂಕಟಸ್ವಾಮಿ ಅಂದರೆ ಆಗಲ್ಲವ?’ ಎಂದೆ. ಮಾಸ್ಕ್ ಒಳಗೆ ನಕ್ಕ ಆನಂದಪ್ಪ, ‘ಬಾ ಕುಳಿತುಕೊ’ ಎಂದ. ಬೈಕ್ ಹಿಂದೆ ಹೆಲ್ಮೆಟ್ ಇಲ್ಲದೆ ಕುಳಿತುಕೊಂಡೆ. ಒಂದು ಕಿ.ಮೀ. ದೂರ ಹೋದ ಮೇಲೆ ಬೈಕ್‌ನಿಂದ ಇಳಿದುಕೊಂಡೆ. ಅಲ್ಲಿ ಇನ್ನೂ ಮೂವರು ನಮಗಾಗಿ ಎಳನೀರು ಕುಡಿಯುತ್ತ ಕಾಯುತ್ತಿದ್ದರು.
ಆನಂದಪ್ಪ ಮೂವರನ್ನೂ ಪರಿಚಯಿಸಿದ. ಒಬ್ಬರು ಎಕ್ಸಿಕ್ಯುರ್ಟಿವ್ ಇಂಜಿನಿಯರ್ (ಇ.ಇ.), ಇನ್ನೊಬ್ಬರು ನಿವೃತ್ತ ಬ್ಯಾಂಕ್ ಅಧಿಕಾರಿ, ಮೂರನೇಯವರು ಆರೋಗ್ಯ ಇಲಾಖೆಯಿಂದ ನಿವೃತ್ತಿಯಾದವರು. ನಾನೂ, ಆನಂದಪ್ಪ ಎಂ.ಎಸ್ಸಿ ಮಾಡುತ್ತಿದ್ದಾಗ ಈ ಇ.ಇ. ಇಂಜಿನಿಯರಿಂಗ್ ಮಾಡುತ್ತಿದ್ದು ಮೂವರೂ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನ ಮೆನ್ಸ್ ಹಾಸ್ಟೆಲ್‌ನಲ್ಲಿ ಇದ್ದೆವು. ಅವು ಗೋಲ್ಡನ್ ದಿನಗಳು ಎನ್ನುವುದನ್ನು ಹೇಳುವುದು ಅನಗತ್ಯ. ಈಗ ಎಲ್ಲರೂ ಮಾಸ್ಕ್ ಸರಿಸಿದ್ದು ಮುಖಗಳು ತೆರೆದುಕೊಂಡಿದ್ದವು. ಸರಿದುಹೋದ ಕಾಲ ಎಲ್ಲರ ಮುಖಚಹರೆಗಳನ್ನು ಶಿಥಿಲಗೊಳಿಸಿತ್ತು.
ಯಾರೇ ಒಬ್ಬ ಮನುಷ್ಯನಿಗೆ ತಾನು ಬದುಕಿರುವ ಅವಧಿಯಲ್ಲೇ ತನ್ನ ಬಾಲ್ಯ, ಶಾಲಾ-ಕಾಲೇಜು, ಅಜ್ಜ-ಅಜ್ಜಿ, ತಂದೆ-ತಾಯಿ, ಪ್ರೀತಿ ಮತ್ತು ಸಂತೋಷದ ದಿನಗಳನ್ನು ಅನುಭವಿಸುವ ಅವಕಾಶ ಮತ್ತೆ ದೊರಕಿದರೆ ಹೇಗಿರಬಹುದು? ಎನ್ನುವ ಆಲೋಚನೆ ತನ್ನ ತಲೆಯಲ್ಲಿ ನುಸುಳಿತು. ಈ ಪಾಟಿ ಬೆಳೆಯುತ್ತಿರುವ ಸೈ-ಫೈ ವಿಜ್ಞಾನ ಅಂತಹ ದಿನಗಳನ್ನು ಯಾವುದೋ ಒಂದು ರೂಪದಲ್ಲಿ ಮನುಷ್ಯನಿಗೆ ಕೊಡುಗೆಯಾಗಿ ನೀಡಿದರೂ ನೀಡಬಹುದು? ಆ ದಿನಗಳು ಬರುತ್ತವೊ ಇಲ್ಲವೊ ನನಗೆ ಗೊತ್ತಿಲ್ಲ. ಆದರೆ ಅಂತಹ ಅಪರೂಪದ ದಿನಗಳನ್ನು ಒಬ್ಬ ಮನುಷ್ಯ ತಾನು ಬದುಕಿರುವವರೆಗೂ ಮೆಲುಕು ಹಾಕಲು ಯಾವುದೇ ಅಡ್ಡಿ ಇಲ್ಲ. ಮನುಷ್ಯನಿಗೆ ಮುಪ್ಪಿನ ದಿನಗಳಲ್ಲಿ ಆಪ್ಯಾಯಮಾನವಾಗಿ ಸಹಾಯಕ್ಕೆ ಬರುವುದು ಬೇರೆ ಯಾರೂ ಅಲ್ಲ, ನೆನಪುಗಳು ಮಾತ್ರ.
ಚಾಲಕನೂ ಸೇರಿ ಆರು ಜನರಿದ್ದ ನಮ್ಮ ವಾಹನ ಗೌರಿಬಿದನೂರು ರಸ್ತೆಯಲ್ಲಿ ಸರ್ರನೆ ಓಡುತ್ತಿತ್ತು. ಆನಂದಪ್ಪ, ನಾನು ನಮ್ಮ ಎಂ.ಎಸ್ಸಿ ಗೆಳೆಯರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದೆವು. ಮಧ್ಯೆಮಧ್ಯೆ ಉಳಿದವರ ಜೊತೆಗೂ ಮಾತು ನಡೆಯುತ್ತಿತ್ತು. ಸಾಮಾಜಿಕ, ರಾಜಕೀಯ, ಖಾಸಗಿ ವಿಷಯಗಳ ಬಗ್ಗೆ ಎರಡು ಗಂಟೆಗಳ ಕಾಲ ಮಾತುಗಳು ನಡೆದವು. ಗೌರಿಬಿದನೂರು ದಾಟಿದ ವಾಹನ ಆಂಧ್ರಪ್ರದೇಶ ಗಡಿ ಒಳಕ್ಕೆ ನುಗ್ಗಿದ್ದೇ ರಸ್ತೆಗಳು ಸಣ್ಣದಾಗಿಹೋದವು. ಹಳ್ಳಿಗಳು, ಮರಗಿಡಗಳು ಮತ್ತು ರಸ್ತೆಗಳು ಧೂಳಿನಿಂದ ತುಂಬಿಹೋಗಿದ್ದು ಹುಣಸೆ ಮರಗಳು ಎಲ್ಲೆಲ್ಲೂ ಕಾಯಿಗಳನ್ನು ತುಂಬಿಕೊಂಡಿದ್ದವು.
ನಾನು, ‘ಹುಣಸೆ ಮರಗಳು ತುಂಬಾ ಇವೆಯಲ್ಲ?’ ಎಂದಾಗ ಬ್ಯಾಂಕ್ ಅಧಿಕಾರಿ ‘ಹಿಂದೂಪುರದಲ್ಲಿ ದೇಶದಲ್ಲಿಯೇ ಹುಣಸೆ ಹಣ್ಣಿನ ದೊಡ್ಡ ಮಾರ್ಕೆಟ್ ಇದೆ’ ಎಂದರು. ಅಂದರೆ ಆಂಧ್ರಪ್ರದೇಶದ ಜನರು ಟೋಮೆಟೊಗಿಂತ ಹುಣಸೆ ಹಣ್ಣನ್ನೇ ಹೆಚ್ಚು ಚಪ್ಪರಿಸಿಕೊಂಡು ತಿನ್ನುತ್ತಾರೆ ಎಂದಂತಾಯಿತು. ಕರ್ನಾಟಕದ ಜನ ಅದರಲ್ಲೂ ದಕ್ಷಿಣ ಕರ್ನಾಟಕದ ಜನ ಹುಣಸೆ ಹಣ್ಣು ತಿನ್ನುವುದನ್ನು ಯಾವಾಗಲೋ ಮರೆತುಹೋಗಿದ್ದಾರೆ ಅಥವಾ ಆಧುನಿಕತೆಗೆ ತೆರೆದುಕೊಂಡು ರಾಸಾಯನಿಕಗಳು ಚೆಲ್ಲಿ ಬೆಳೆಯುವ ಟೋಮೆಟೊ ತಿನ್ನುತ್ತಾ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆಯೇ ಎನ್ನುವ ಅನುಮಾನ ಬಂದಿತು. ಹುಣಸೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ನಮ್ಮ ಹಳ್ಳಿಗಳಲ್ಲಿ ಈಗ ಹುಣಸೆ ಮರಗಳು ಅಪರೂಪವಾಗುತ್ತಿವೆ.
ನಮ್ಮ ವಾಹನ ಹಿಂದೂಪುರ ಹೊರವಲಯ ತಲುಪುತ್ತಿದ್ದಂತೆ ಪಕ್ಕದಲ್ಲಿದ್ದ ಆರೋಗ್ಯ ಸರಿ ಇಲ್ಲದ ಆರೋಗ್ಯ ಅಧಿಕಾರಿ ‘ಇದು ಎನ್‌ಟಿಆರ್ ಮಗ ಬಾಲಕೃಷ್ಣ ಅವರ ಕ್ಷೇತ್ರ (ಸಿನೆಮಾ ನಟ) ನೋಡಿ ಹೇಗಿದೆ?’ ಎಂದರು. ಅದೇ ಮಣ್ಣು-ಧೂಳು ರಸ್ತೆಗಳು ಒಂದಷ್ಟು ಕಟ್ಟಡಗಳು. ಜಿಲ್ಲೆಯಾಗಲಿರುವ ಹಿಂದೂಪುರದ ಚಿತ್ರಣ ನೋಡಿ ತುಸು ಕಳವಳವಾಯಿತು. ಅಲ್ಲಿಂದ 30 ಕಿ.ಮೀ. ದೂರದಲ್ಲಿರುವ ಪುಟ್ಟಪರ್ತಿ ಕೂಡ ಹಿಂದೂಪುರದ ಜೊತೆಗೆ ಜಿಲ್ಲೆಯಾಗುವ ಪೈಪೋಟಿಯಲ್ಲಿದೆಯಂತೆ. ಒಂದು ಕಾಲದಲ್ಲಿ ಹಿಂದೂಪುರದಲ್ಲಿ ಬರೀ ಹಿಂದೂಗಳೇ ಇದ್ದರು ಅದಕ್ಕೆ ಹಿಂದೂಪುರ ಹೆಸರು ಬಂದಿದೆ ಎಂದರು. ನಮ್ಮ ವಾಹನ ಹಿಂದೂಪುರ ಗಡಿ ದಾಟಿ ಎರಡು ಕಿ.ಮೀ. ದೂರದ ಕೊಲ್ಲತೂಮು ಅನ್ನೋ ಹಳ್ಳಿ ಮಧ್ಯದಲ್ಲಿ ನಿಂತುಕೊಂಡಿತು. ಈ ಹಳ್ಳಿ ಹಿಂದೂಪುರ ಸಿಟಿಗೆ ಸೇರುತ್ತದೆ ಎಂದರು. ಹಿಂದೂಪುರವೇ ಒಂದು ಹಳ್ಳಿಯಂತೆ ತೋರುತ್ತಿದ್ದು ಈ ಹಳ್ಳಿ, ಸಿಟಿಗೆ ಸೇರುತ್ತದೆ ಎಂದರೆ ಹೇಗೆ ಎನ್ನುವ ಅನುಮಾನ ನನ್ನನ್ನು ಕಾಡತೊಡಗಿತು.
ನಮ್ಮ ಇ.ಇ. ಅವರ ತಾಯಿ ಪುಣ್ಯತಿಥಿಯ ಪ್ರಯುಕ್ತ ನಾವು ಅಲ್ಲಿಗೆ ಬಂದಿರುವ ಗುಟ್ಟಿನ ವಿಷಯವನ್ನು ಆನಂದಪ್ಪ ನನಗೆ ಈಗ ಬಿಟ್ಟುಕೊಟ್ಟಿದ್ದ. ‘ಸರಿ ಆಯಿತು ಬಿಡು. ನಲವತ್ತು ವರ್ಷ ಆದ ಮೇಲೆ ನಾವಿಬ್ಬರೂ ಒಂದು ದಿನ ಜೊತೆಗೆ ಕಾಲ ಕಳೆಯೋಣ’ ಎಂದೆ. ಇಬ್ಬರೂ ಮತ್ತೆ ಹಳೆ ವಿಷಯಗಳ ಬಗ್ಗೆ ಮಾತನಾಡುತ್ತ ಮೆಟ್ಟಿಲು ಹತ್ತಿ ಮೇಲಂತಸ್ತಿನಲ್ಲಿ ಹಾಕಿದ್ದ ಕುರ್ಚಿಗಳಲ್ಲಿ ಕುಳಿತುಕೊಂಡೆವು. ಗಾಳಿ ಆಹ್ಲಾದಕರವಾಗಿ ಬೀಸುತ್ತಿದ್ದು ಎದುರಿಗಿದ್ದ ಹುಣಿಸೆ ಮರಗಳು ಕಾಯಿಗಳಿಂದ ಜೋಲಾಡುತ್ತಿದ್ದವು. ಅಡುಗೆ ಕೋಣೆಯಲ್ಲಿ ನಾಲ್ಕು ಜನರು ಅದೇನೊ ತಯಾರಿ ಮಾಡುತ್ತಿದ್ದರು. ‘ಏನ್ರಪ್ಪ ಟೀ, ಕಾಫಿ ಏನಾದರೂ ಸಿಗುತ್ತ?’ ಎಂದಿದ್ದಕ್ಕೆ, ಅವರು ಟೀ, ಕಾಫಿ ಅಂದರೆ ಏನು ಎನ್ನುವಂತೆ ನಮ್ಮ ಮುಖಗಳನ್ನು ನೋಡಿದರು. ಅವರೆಲ್ಲ ಆ ಒಂದು ದಿನಕ್ಕೆ ಮಾತ್ರ ಅಡುಗೆ ಭಟ್ಟರಾಗಿದ್ದವರು. ಅದರಲ್ಲಿ ಒಬ್ಬಾತ ಕುರಿಗಳ ಮೇಯಿಸುವುದನ್ನು ಬಿಟ್ಟುಬಂದಿರುವುದಾಗಿ ಹೇಳಿದ. ನಾನು, ‘ಕುರಿಗಳು?’ ಎಂದಿದ್ದಕ್ಕೆ ‘ಒಬ್ಬ ನಮ್ಮ ಕಳಿಸಿದ್ದೀನಿ, ಅವನಿಗೆ 250 ರೂಪಾಯಿ ಕೊಡಬೇಕು’ ಎಂದ.
ನಾನು ಇಲ್ಲಿಗೆ ಬರುವುದಕ್ಕೆ ಮುಂಚೆ ಒಂದು ದಿನಕ್ಕೆ ಆಗುವಷ್ಟು ಬಟ್ಟೆಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ಬಂದಿದ್ದು ಯಾವುದೋ ತೋಟದ ಮನೆಗೆ ಕರೆದುಕೊಂಡು ಹೋಗುತ್ತಾರೆ, ರಾತ್ರಿ ಒಳ್ಳೆ ಪಾರ್ಟಿ ಇರುತ್ತೆ ಎನ್ನುವ ಭ್ರಮೆಯಲ್ಲಿದ್ದೆ. ಆದರೆ ವಿಷಯ ಬೇರೆಯೇ ಆಗಿದ್ದು ಸ್ವಲ್ಪ ನಿರಾಸೆ ಆಯಿತು. ಇನ್ನೂ ನಿರಾಸೆ ಎಂದರೆ ಆಂಧ್ರಪ್ರದೇಶ ಡ್ರೈ ಸ್ಟೇಟ್ ಎಂದು ಡಿಕ್ಲೇರ್ ಮಾಡಿದ್ದು ದಾರಿಯಲ್ಲಿ ವಿಚಾರಿಸಿದಾಗ ಇಲ್ಲಿ ಎಲ್ಲೂ ಏನೂ ಸಿಗುವುದಿಲ್ಲ ಎನ್ನುವ ವಿಷಯ ತಿಳಿಯಿತು. ಅದಕ್ಕೆಲ್ಲ ಬೆಂಗಳೂರು ಬಿಟ್ಟರೆ ಉಂಟೆ..? ಎಲ್ಲರೂ ಒಕ್ಕೊರಲಿನಿಂದ ‘ಬೆಂಗಳೂರು ಉಘೇಉಘೇ’ ಎಂದರು. ಆದರೆ ಈಗ ಏನು ಮಾಡುವುದು ಎನ್ನುವ ಚಿಂತೆ ನಮ್ಮನ್ನ ಕಾಡತೊಡಗಿತು. ಇ.ಇ. ಇದರ ಬಗ್ಗೆ ಯಾವುದೇ ಸಂಬಂಧ ಹೊಂದಿಲ್ಲದ ಕಾರಣ ಅವರು ನಿರ್ಲಕ್ಷ ಹೊಂದಿದ್ದಾರೆ ಎಂಬುದಾಗಿ ತಿಳಿದು ಅವರನ್ನ್ನು ಕೇಳಿ ಯಾವುದೇ ಪ್ರಯೋಜನ ಇಲ್ಲ ಎಂಬ ತೀರ್ಮಾನಕ್ಕೆ ಬಂದೆವು.
ಈಗ ವಿಧಿ ಇಲ್ಲದೆ ಎಲ್ಲರೂ ಮಧ್ಯಾಹ್ನ 2 ಗಂಟೆಗೆ ಊಟಕ್ಕೆ ಕುಳಿತುಕೊಂಡೆವು. ಇ.ಇ. ತಮ್ಮದೇ ಆದ ಒಂದು ಪ್ರತ್ಯೇಕ ತಾಮ್ರದ ಗಂಗಾಳ ಹಿಡಿದುಕೊಂಡು ಬಂದು ನಮ್ಮ ಜೊತೆಗೆ ಕುಳಿತುಕೊಂಡರು. ನಮಗೆಲ್ಲ ಎಲೆಗಳನ್ನು ಹಾಸಿ ಊಟ ಬಡಿಸಿದರು. ರಾಗಿಮುದ್ದೆ, ಅನ್ನ, ಸೊಪ್ಪುಸಾರು ಮತ್ತು ನಾಟಿ ಚಿಕನ್ ಸಾರು. ಪಕ್ಕದಲ್ಲಿ ಕುಳಿತಿದ್ದ ಆನಂದಪ್ಪ ದಿಢೀರನೆ ಒಂದು ಸೌಟು ಚಿಕನ್ ತೆಗೆದು ನನ್ನ ಎಲೆಗೆ ಹಾಕಿಬಿಟ್ಟ. ಒಂದು ಸೌಟು ಚಿಕನ್ ಆಗಲೇ ಮುಗಿಸಿದ್ದ ನನಗೆ ಅರೆಕೊರೆ ಬೆಂದಿದ್ದ ಚಿಕನ್ ತಿನ್ನಲು ಆಗಲಿಲ್ಲ. ಊಟ ಮುಗಿಸಿ ಅಲ್ಲೇ ಗಾಳಿಯಲ್ಲಿ ಕುಳಿತುಕೊಂಡು ಹುಣಸೆ ಮರಗಳ ಕಡೆಗೆ ನೋಡತೊಡಗಿದೆ. ಹುಣಸೆ ಮರಗಳಲ್ಲಿ ದೆವ್ವಗಳು ಇರುತ್ತವೆ ಎನ್ನುವ ಮಾತುಗಳು ಏಕೆ ಬಂದಿರಬೇಕು ಎನ್ನುವ ಆಲೋಚನೆ ಹುಟ್ಟುಕೊಂಡಿತು.
ಈಗ ಮನೆ ಮೇಲೆ ಸಂಗೀತ ಕಾರ್ಯಕ್ರಮ ಆರಂಭವಾಗಿತ್ತು. ಆನಂದಪ್ಪ ‘ಬಾಪ್ಪ ಇ.ಇ. ಕೋಪಿಸಿಕೊಂಡಿಬಿಟ್ಟಾರು ಸ್ವಲ್ಪ ಹೊತ್ತು ಕುಳಿತುಬರೋಣ’ ಎಂದ. ನಿಧಾನವಾಗಿ ಎದ್ದು ಮನೆ ಮೇಲೆ ಹೋಗಿದ್ದ್ದೆೆ ನಮ್ಮನ್ನು ಕರೆದು ನಿಲ್ಲಿಸಿಕೊಂಡು ಪರಿಚಯಿಸಿ, ಮೊಬೈಲ್‌ಗಳಲ್ಲಿ ಫೋಟೊಗಳನ್ನು ಹಿಡಿದುಕೊಂಡರು. ಅಲ್ಲಿ ಇದ್ದಿದ್ದೆ ಹದಿನೈದು ಜನ. ನಂತರ ಎದುರುಗಿದ್ದ ಕುರ್ಚಿಗಳಲ್ಲಿ ಕುಳಿತುಕೊಂಡೆವು. ಸದ್ದುಗದ್ದಲದ ಯಾವುದೇ ಕಾರ್ಯಕ್ರಮಗಳಲ್ಲಿ ನಾನು ಶಾಮೀಲಾಗಿ ಎಷ್ಟೋ ವರ್ಷಗಳು ಕಳೆದುಹೋಗಿದ್ದವು. ನಾಲ್ಕು ಜನ ಹಾಡುಗಾರರಲ್ಲಿ ಒಂದು ಹೆಣ್ಣುಮಗಳೂ ಇದ್ದಳು. ಹೈಸ್ಕೂಲ್ ಮೇಷ್ಟ್ರರೊಬ್ಬರು ಕೆಳಗೆ ಕುಳಿತು ತಲೆ ಆಡಿಸುತ್ತ ತಬಲಾ ಬಾರಿಸುತ್ತಿದ್ದರೆ, ಯುವಕನೊಬ್ಬ ಕೆಳಗೆ ಕುಳಿತು ಕೀಬೋರ್ಡ್ ಬಾರಿಸುತ್ತಿದ್ದ.
ಕೆಂಪು ಜುಬ್ಬಾ, ಬಿಳಿ ಪೈಜಾಮಾ ಧರಿಸಿದ್ದ ಹಿರಿಯ ಜನಪದ ಗಾಯಕ ತನ್ನ ಜೊತೆಗೆ ಹಾಡುತ್ತಿದ್ದವರನ್ನು ‘ಈತ ಮೂರ್ತಿ ಎಂ.ಎ., ಈಯಮ್ಮ ಸುಮಾ ಎಂ.ಕಾಮ್, ಇವರಿಬ್ಬರೂ ಮೂರುನಾಲ್ಕು ವರ್ಷದಿಂದ ನನ್ನೊಂದಿಗೆ ಹಾಡುಗಳನ್ನು ಹಾಡ್ತಾ ಇದ್ದಾರೆ. ಇನ್ನು ಕೃಷ್ಣ, ನಾನು 30 ವರ್ಷಗಳಿಂದಲೂ ಡಿಎಸ್‌ಎಸ್‌ನಲ್ಲಿ ಹಾಡ್ತಾ ಬಂದಿದ್ದೀವಿ. ಯಾರೇ ಕರೆದರೂ ಹೋಗಿ ಹಾಡ್ತೀವಿ. ಕಳೆದ ವರ್ಷ ಇಲ್ಲೇ ನಮ್ಮ ಜೊತೆಗೆ ಘಂಟಸಾಲ ಇದ್ದರು. ಪಾಪ 15 ದಿನ ಹಿಂದೆ ಕೊರೋನದಿಂದ ತೀರಿಕೊಂಡುಬಿಟ್ಟರು. ತುಂಬಾ ಚೆನ್ನಾಗಿ ಹಾಡ್ತಾ ಇದ್ದರು. ಅವರಸರು ಯೂಸುಫ್ ಅಂತ, 70 ವರ್ಷ’ ಎಂದು ದುಃಖ ತೋಡಿಕೊಂಡರು. ಘಂಟಸಾಲ ತತುಹೋದ ಮೇಲೆ ಪ್ರತಿ ಊರಿನಲ್ಲೂ ಒಬ್ಬ ಘಂಟಸಾಲ ಹುಟ್ಟಿಕೊಂಡಿದ್ದ. ಈಗ ಅವರೂ ಒಬ್ಬೊಬ್ಬರಾಗಿ ಕಾಣದೇ ಹೋಗುತ್ತಿದ್ದಾರೆ.
ಹೆಣ್ಣು ಮಗಳನ್ನು ‘ಈಯಮ್ಮ ಸುಮಾ’ ಎಂದು ಪರಿಚಯಿಸಿದರೂ ಆಕೆ ಮುಸ್ಲಿಮ್ ಹೆಣ್ಣಾಗಿದ್ದು ನನಗೆ ಹಿಜಾಬ್ ಕರಾಮತ್ತು ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದನ್ನು ನೋಡಿ ಬಹಳ ಖೇದವಾಯಿತು. ಎಲ್ಲಾ ಹಾಡುಗಾರರು ಘಂಟಸಾಲ ಸಿನೆಮಾ ಹಾಡುಗಳು, ಪರಿಸರ, ಜನಪದ, ಮಹಿಳೆಯರ ಕಷ್ಟಗಳ ಬಗ್ಗೆ ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ಹಾಡುಗಳನ್ನು ನಿರರ್ಗಳವಾಗಿ ಹಾಡಿದರು. ಮಧ್ಯೆಮಧ್ಯೆ ಅಂಬೇಡ್ಕರ್ ಅವರ ಬಗ್ಗೆ ಒಂದಷ್ಟು ಹೋರಾಟದ ಹಾಡುಗಳನ್ನು ಹಾಡಿದರು. ಎದುರಿಗೆ ಕುಳಿತಿದ್ದ ಇ.ಇ. ಆನಂದ ತಡೆಯಲಾರದೆ ಎದ್ದುನಿಂತು ಒಂದೆರಡು ಹೆಜ್ಜೆಹಾಕಿದರು. ಇಂತಹ ಕಾರ್ಯಕ್ರಮಗಳು ಸಾಧಾರಣವಾಗಿ ರಾತ್ರಿ ಹೊತ್ತು ನಡೆದರೆ ಇಲ್ಲಿ ದಿನದಲ್ಲಿಯೇ ಏರ್ಪಾಟು ಮಾಡಲಾಗಿತ್ತು. ನಮ್ಮ ಇ.ಇ. ‘ಇಡೀ ಹಳ್ಳಿಜನ ಮನೆಗಳಲ್ಲಿ ಕುಳಿತೂ ನಿಂತು ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ’ ಎಂದರು. ಈಗ ಇಡೀ ದೇಶ ಕೋಮುದಳ್ಳುರಿಯಿಂದ ಹೊತ್ತಿ ಉರಿಯುತ್ತಿದೆ. ಈ ಕೋಮುದಳ್ಳುರಿ ಸ್ವಾತಂತ್ರ್ಯಪೂರ್ವದಿಂದಲೇ ರಾಜಕಾರಣಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಹೊತ್ತಿಕೊಂಡು ದೇಶ ವಿಭಜನೆಗೊಂಡಿತು. ಸ್ವಾತಂತ್ರ್ಯೋತ್ತರ ನಂತರ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿದ ನಂತರ ಮತ್ತೆ ಕೋಮು ಕಿಚ್ಚು ಹೊತ್ತ್ತಿಕೊಂಡಿತು. ಅದರ ಮುಂದುವರಿದ ಭಾಗ ಈಗ ತಾರಕಕ್ಕೆ ಏರಿ ದೇಶದಲ್ಲಿ ಯಾವುದೋ ಒಂದು ಹೆಸರಿನಲ್ಲಿ ಕಾಲಕಾಲಕ್ಕೆ ಕೋಮುವಾದದ ಕಿಚ್ಚು ಹೊತ್ತಿಕೊಳ್ಳುತ್ತಿದೆ. ಬೆಂಕಿ ಹಚ್ಚುವವರು ಯಾರೋ, ಇದರಲ್ಲಿ ಸುಟ್ಟುಹೋಗುವವರು ಇನಾರೋ?
ಈಗ ದೇಶದಲ್ಲೆಲ್ಲ ಜೈಶ್ರೀರಾಮ್, ಜೈಬಜರಂಗಬಲಿ, ಅಲ್ಲಾ ಹು ಅಕ್ಬರ್ ಚಲಾವಣೆಯಲ್ಲಿವೆ. ಇವುಗಳ ಜೊತೆಗೆ ಈಗ ಲಾಲ್ ಸಲಾಮ್, ಜೈಭೀಮ್ ಕೂಡ ಹುಟ್ಟಿಕೊಂಡಿವೆ. ಇಂತಹ ಸಾಮಾನ್ಯ ಹಾಡುಗಾರರು, ಸಾಮಾನ್ಯ ಜನರು ಮಾತ್ರ ಅಂಬೇಡ್ಕರ್ ಎಂಬ ಮಹಾಮಾನವತಾವಾದಿಯ ಆಶಯಗಳನ್ನು ಇದುವರೆಗೂ ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ ಎನ್ನುವ ಆಲೋಚನೆ ನನ್ನ ಮನಸ್ಸಿನಲ್ಲಿ ಆಳಕ್ಕೆ ಇಳಿಯುತ್ತಿತ್ತು. ನಮ್ಮಂತಹ ಬುದ್ಧಿವಂತ ಜನರು, ಅಧಿಕಾರಿಗಳು, ವ್ಯಾಪಾರಿಗಳು, ಹಣವಂತರು, ಏಜಂಟರುಗಳು, ಬಹುಮಿಲಿಯ ಕಂಪೆನಿಗಳ ಒಡೆಯರಿಗಿಂತ ಈ ಸಾಮಾನ್ಯ ಜನರೇ ಎಷ್ಟೋ ಮೇಲು. ನಿಜವಾಗಿ ದೇಶವನ್ನು ಒಗ್ಗಟ್ಟಾಗಿ ಹಿಡಿದಿಟ್ಟುಕೊಂಡು ಬರುತ್ತಿರುವವರು ಇವರೇ.
ಈ ಘೋಷಣೆಗಳು ಹೊಸದೇನೂ ಅಲ್ಲ. ಆದರೆ ಅವು ಹಿಡಿಯುತ್ತಿರುವ ದಾರಿ ಮಾತ್ರ ಅಪಾಯಕಾರಿಯಾಗಿ ತೋರುತ್ತಿದೆ. ಮನುಷ್ಯನಷ್ಟು ಕ್ರೂರಿ ಮತ್ತು ಸ್ವಾರ್ಥಿ ಪ್ರಾಣಿ ಭೂಮಿಯ ಮೇಲೆ ಇದುವರೆಗೂ ಹುಟ್ಟಿಲ್ಲ. ಬಹುಶಃ ಮುಂದೆಯೂ ಹುಟ್ಟುವುದಿಲ್ಲ. ಬುದ್ಧಿವಂತರು ಎಂದರೆ ಮೋಸಗಾರರು ಎನ್ನುವುದು ಸರಿಯಾದ ಅರ್ಥ ಎನಿಸುತ್ತದೆ. ಯಾಕೆಂದರೆ ಭೂಮಿಯ ಮೇಲೆ ಮನುಷ್ಯ ಹುಟ್ಟಿಕೊಂಡಿದ್ದರ ಜೊತೆಜೊತೆಗೆ ತಾರತಮ್ಯ ಹುಟ್ಟಿಕೊಂಡಿತು. ನೂರರಲ್ಲಿ ಕೇವಲ ಒಂದು ಪರ್ಸೆಂಟು ಜನರು ಮಾತ್ರ ಇತಿಹಾಸದಲ್ಲಿ ಉಳಿದ 99 ಪರ್ಸೆಂಟ್ ಜನರನ್ನು ಕಾಲಕಾಲಕ್ಕೆ ಮೋಸಗೊಳಿಸುತ್ತಲೇ ಅವರ ಅನ್ನವನ್ನು ಅನಾಯಾಸವಾಗಿ ಲಪಟಾಯಿಸುತ್ತ ಐಶಾರಾಮಿ ಬದುಕು ನಡೆಸುತ್ತಾ ಬರುತ್ತಿದ್ದಾರೆ. ಈ ಭೂಮಿ ಛಿದ್ರವಾಗಿ ಹೋಗುವವರೆಗೂ ಇದು ಹೀಗೆ ನಡೆಯುತ್ತದೆ. ಹೀಗೆ ಏನೇನೋ ಯೋಚನೆಗಳು ನನ್ನ ತಲೆ ತುಂಬಾ ತುಂಬಿಕೊಂಡಿದ್ದವು. ನಮ್ಮ ವಾಹನ ಕತ್ತಲಲ್ಲಿ ಬೆಂಗಳೂರು ಕಡೆಗೆ ಧಾವಿಸುತ್ತಿತ್ತು.