ಈದ್ ಸಮಯದಲ್ಲಿ ಸಮಾಜ ವಿರೋಧಿ ಶಕ್ತಿಗಳ ಬಗ್ಗೆ ಎಚ್ಚರ: ಸಮುದಾಯಕ್ಕೆ ಮುಸ್ಲಿಂ ಸಂಘಟನೆಗಳ ಕರೆ

Update: 2022-04-29 09:00 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಪ್ರಮುಖ ಅಲ್ಪಸಂಖ್ಯಾತ ಸಂಘಟನೆಗಳು ಈದ್-ಉಲ್-ಫಿತ್ರ್ ಅನ್ನು ಶಾಂತಿಯುತವಾಗಿ ಆಚರಿಸುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿವೆ. ವಿನಾಶಕಾರಿ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಎಚ್ಚರಿಕೆ ವಹಿಸುವಂತೆ ಕರೆ ನೀಡಿವೆ. ಇಂತಹವರ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದೆ. 

ಮಸೀದಿಗಳು ಹಾಗೂ  ಈದ್ಗಾಗಳು  ಎಚ್ಚರಿಕೆ ವಹಿಸಿ ಪದಬಳಕೆ ಮಾಡಬೇಕು. ಈದ್ ಧರ್ಮೋಪದೇಶದಲ್ಲಿ ಸ್ಪಷ್ಟವಾದ ಭಾಷೆಯನ್ನು ಬಳಸಬೇಕು.  ಏನನ್ನೂ ವಿರೂಪಗೊಳಿಸುವಂತಿರಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

“ನಿಮಗೆ ತಿಳಿದಿರುವಂತೆ ಪ್ರಸ್ತುತ ನಮ್ಮ ದೇಶದ ಬಹುತೇಕ ರಾಜ್ಯಗಳಲ್ಲಿ ಕೋಮು ಸೌಹಾರ್ದತೆಗೆ ತೀವ್ರ ಧಕ್ಕೆಯಾಗಿದೆ. ದುಷ್ಟ ಹಾಗೂ ಸಮಾಜ ವಿರೋಧಿ ಶಕ್ತಿಗಳು ನಮ್ಮ ಶಾಂತಿ ಹಾಗೂ ಸೌಹಾರ್ದತೆಯನ್ನು ಅಸ್ಥಿರಗೊಳಿಸಲು ಬಹಿರಂಗವಾಗಿ ಪ್ರಯತ್ನಿಸುತ್ತಿವೆ. ದೇಶದ ಕೆಲವು ಭಾಗಗಳಿಂದ ಪ್ರತಿದಿನವೂ ಅಹಿತಕರ ಸುದ್ದಿಗಳು ಬರುತ್ತಿವೆ. ಪರಸ್ಪರ ಸಹೋದರತೆ, ಪ್ರೀತಿ ಹಾಗೂ  ಐಕ್ಯತೆಯನ್ನು ಕಾಪಾಡಿಕೊಂಡು ಬರುವ ಧಾರ್ಮಿಕ  ಹಬ್ಬಗಳು ಈಗ  ಸಮಾಜ ವಿರೋಧಿ ಹಾಗೂ  ದುಷ್ಟ ಶಕ್ತಿಗಳ ಕೈಗಳಿಗೆ ಸಿಲುಕಿ ದ್ವೇಷವನ್ನು ಹರಡುವ ಮತ್ತು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳನ್ನು ಹೆಚ್ಚಿಸುವ ಸಾಧನವಾಗಿ ಬಿಟ್ಟಿದೆ'' ಎಂದು ಮನವಿಯಲ್ಲಿ ತಿಳಿಸಲಾಗಿದೆ.

“ಮುಸ್ಲಿಮರು ಈದ್-ಉಲ್-ಫಿತ್ರ್ ಅನ್ನು ತಮ್ಮ ದೇಶವಾಸಿಗಳೊಂದಿಗೆ ತಮ್ಮ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಆಚರಿಸಬೇಕು. ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬೆಳೆಸುವ, ಶಾಂತಿ ಮತ್ತು ಸೌಹಾರ್ದವನ್ನು ಸ್ಥಾಪಿಸುವ ಸಂದರ್ಭವನ್ನಾಗಿ ಮಾಡಿಕೊಳ್ಳಬೇಕು. ಯಾವುದೇ ಸಮಾಜ ವಿರೋಧಿ ಹಾಗೂ ದುಷ್ಟ ಶಕ್ತಿಗಳು ಕಿಡಿಗೇಡಿಗಳನ್ನು ಸೃಷ್ಟಿಸಲು ಅವಕಾಶ ನೀಡಬಾರದು’’ ಎಂದು ಅದು ಹೇಳಿದೆ.

ಈ ಮನವಿಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮುಖ್ಯಸ್ಥರು, ಅಧ್ಯಕ್ಷರು, ಜಮಿಯತ್ ಉಲೇಮಾ-ಐ-ಹಿಂದ್, ಜಮಾತ್-ಎ-ಇಸ್ಲಾಮಿ ಹಿಂದ್, ಶರಿಯಾ ಕೌನ್ಸಿಲ್, ಮರ್ಕಝ್ ಜಮೀಯತ್ ಅಹ್ಲೆ ಹದೀಸ್ ಹಿಂದ್, ಅಖಿಲ ಭಾರತ ಮುಸ್ಲಿಂ ಮಜ್ಲಿಸ್-ಇ ಮುಶಾವರ, ದಾರುಲ್ ಉಲೂಮ್, ದಿಯೋಬಂದ್ (ವಕ್ಫ್), ಶಿಯಾ ಜಾಮಿಯಾ ಮಸೀದಿಯ ಇಮಾಮ್ ಕಾಶ್ಮೀರಿ ಗೇಟ್, ಆಲ್ ಇಂಡಿಯಾ ಶಿಯಾ ಕೌನ್ಸಿಲ್ ಮತ್ತು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಅನುಮೋದಿಸಿವೆ.

"ಯಾರಾದರೂ ಕಿಡಿಗೇಡಿ ಕೃತ್ಯ ಮಾಡಲು ಪ್ರಯತ್ನಿಸಿದರೆ, ಆ ವ್ಯಕ್ತಿಯ ವಿರುದ್ಧ ಸ್ಥಳೀಯ ಆಡಳಿತಕ್ಕೆ ದೂರು ನೀಡಿ. ಯಾವುದೇ ಸಂದರ್ಭದಲ್ಲೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸ್ಥಳೀಯ ಆಡಳಿತದೊಂದಿಗೆ ಸಭೆಗಳನ್ನು ನಡೆಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. 
ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮಟ್ಟದಲ್ಲಿ ಇತರ ಧರ್ಮಗಳ ಪ್ರತಿನಿಧಿಗಳೊಂದಿಗೆ ಸಭೆಗಳನ್ನು ನಡೆಸುವಂತೆ ಮನವಿಯಲ್ಲಿ ಕರೆ ನೀಡಲಾಗಿದೆ. ಸಾಧ್ಯವಿರುವಲ್ಲೆಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಒದಗಿಸಬೇಕು ಎಂದು ಅವರು ಶಿಫಾರಸು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News