ಆರೋಪಿಗಳು ಸ್ಕಲ್ ಕ್ಯಾಪ್ ಧರಿಸಿ ಮುಸ್ಲಿಮರೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದರು:ಪೊಲೀಸರು
ಲಕ್ನೋ,ಎ.29: ಮಾಂಸ ಮತ್ತಿತರ ಆಕ್ಷೇಪಾರ್ಹ ವಸ್ತುಗಳನ್ನು ಮಸೀದಿಯ ಹೊರಗೆ ಎಸೆದು ದೇವಸ್ಥಾನಗಳ ನಗರಿ ಅಯೋಧ್ಯೆಯಲ್ಲಿ ಕೋಮು ಸೌಹಾರ್ದವನ್ನು ಕದಡಲು ಪ್ರಯತ್ನಿಸಿದ್ದ ಪ್ರಕರಣದಲ್ಲಿ 11 ಆರೋಪಿಗಳ ಪಾತ್ರ ಬಯಲಾಗಿದೆ. ಜಿಲ್ಲಾ ಪೊಲೀಸರು ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಿದ್ದು,ತಲೆಮರೆಸಿಕೊಂಡಿರುವ ಇತರ ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪ್ರದೇಶದಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನಿಸಿದ್ದ ಆರೋಪಿಗಳು ತಮ್ಮನ್ನು ಮುಸ್ಲಿಮರೆಂದು ಬಿಂಬಿಸಿಕೊಳ್ಳಲು ಸ್ಕಲ್ ಕ್ಯಾಪ್‌ಗಳನ್ನು ಧರಿಸಿದ್ದರು. ಬುಧವಾರ ರಾತ್ರಿ ಘಟನೆ ನಡೆದಿದ್ದು,ಬೈಕ್‌ಗಳಲ್ಲಿ ಬಂದಿದ್ದ ಆರೋಪಿಗಳು ಶಾಂತಿ ಮತ್ತು ಸೌಹಾರ್ದವನ್ನು ಕದಡುವ ಪ್ರಯತ್ನವಾಗಿ ಮಸೀದಿಯ ಎದುರು ಮಾಂಸ,ಪವಿತ್ರ ಗ್ರಂಥದ ಪುಟಗಳು ಮತ್ತು ಕೆಲವು ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಎಸೆದು ಪರಾರಿಯಾಗಿದ್ದರು ಎಂದು ಅಯೋಧ್ಯೆಯ ಎಸ್ಎಸ್ಪಿ ಎಸ್.ಕೆ.ಪಾಂಡೆ ಅವರು ತಿಳಿಸಿದರು.ಆರೋಪಿಗಳ ಪೈಕಿ ಮಹೇಶಕುಮಾರ ಮಿಶ್ರಾ,ಪ್ರತ್ಯೂಷ ಶ್ರೀವಾಸ್ತವ, ನಿತಿನ್ಕುಮಾರ,ದೀಪಕಕುಮಾರ ಗೌರ್ ಅಲಿಯಾಸ ಗುಂಜನ್,ಬೃಜೇಶ ಪಾಂಡೆ,ಶತ್ರುಘ್ನ ಪ್ರಜಾಪತಿ ಮತ್ತು ವಿಮಲ ಪಾಂಡೆ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರದೇಶದಲ್ಲಿಯ ಸಿಸಿಟಿವಿ ದೃಶ್ಯಾವಳಿಯ ನೆರವಿನಿಂದ ಆರೋಪಿಗಳನ್ನು ಗುರುತಿಸಲಾಗಿದ್ದು,ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಮತ್ತು ಗೂಂಡಾ ಕಾಯ್ದೆಯನ್ನು ಹೇರಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ ಅವಸ್ಥಿ ಪ್ರಕರಣವನ್ನು ಬೇಧಿಸಿರುವ ಪೊಲೀಸ್ ತಂಡಕ್ಕೆ ಒಂದು ಲ.ರೂ.ಗಳ ನಗದು ಬಹುಮಾನವನ್ನು ಪ್ರಕಟಿಸಿದ್ದಾರೆ.
ಸೂಕ್ತ ಯೋಜನೆಯ ಬಳಿಕ ತಾವು ಅದನ್ನು ಕಾರ್ಯಗತಗೊಳಿಸಿದ್ದೆವು ಮತ್ತು ಮಸೀದಿಯ ಹೊರಗೆ ಆಕ್ಷೇಪಾರ್ಹ ವಸ್ತುಗಳು ಹಾಗೂ ಪೋಸ್ಟರ್‌ಗಳನ್ನು ಎಸೆದಿದ್ದೆವು ಎಂದು ಬಂಧಿತ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪಾಂಡೆ ತಿಳಿಸಿದರು. ದಿಲ್ಲಿಯ ಜಹಾಂಗೀರ್ಪುರಿ ಪ್ರದೇಶದಲ್ಲಿ ಹನುಮ ಜಯಂತಿ ಸಂದರ್ಭದಲ್ಲಿ ಶೋಭಾಯಾತ್ರೆಯ ಮೇಲಿನ ದಾಳಿ ಮತ್ತು ಕಲ್ಲುತೂರಾಟದಿಂದ ತಾವು ಆಕ್ರೋಶಗೊಂಡು ಈ ಕೃತ್ಯವನ್ನು ನಡೆಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ನಾಲ್ಕು ದಿನಗಳಿಂದಲೂ ತಾವು ಇದಕ್ಕಾಗಿ ಯೋಜನೆಯನ್ನು ರೂಪಿಸಿದ್ದೆವು ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದರು.