ಅಮೆರಿಕ ರಷ್ಯಾದಿಂದ ಖರೀದಿಸುವ ಇಂಧನ ಭಾರತಕ್ಕಿಂತ ಅಧಿಕ!

Update: 2022-04-30 01:53 GMT

ಹೊಸದಿಲ್ಲಿ: ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಪಾಶ್ಚಾತ್ಯ ದೇಶಗಳು ಧ್ವನಿ ಎತ್ತಿರುವ ಮಧ್ಯೆಯೇ, ಯೂರೋಪಿಯನ್ ದೇಶಗಳು ಮಾತ್ರವಲ್ಲದೇ ಅಮೆರಿಕ ಕೂಡಾ ರಷ್ಯಾದಿಂದ ಅತ್ಯಧಿಕ ಪ್ರಮಾಣದಲ್ಲಿ ಇಂಧನ ಆಮದು ಮಾಡಿಕೊಳ್ಳುತ್ತಿದೆ ಎಂಬ ಅಂಶ ಇದೀಗ ಬಹಿರಂಗವಾಗಿದೆ.

ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ನಡೆಸಿದ ಬಳಿಕ ಅಮೆರಿಕ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿರುವುದಾಗಿ ಘೋಷಿಸಿದ್ದರೂ, ಯುದ್ಧ ಆರಂಭದ ಬಳಿಕ ಭಾರತ ಆಮದು ಮಾಡಿಕೊಂಡ ತೈಲಕ್ಕಿಂತ ಅಧಿಕ ಪ್ರಮಾಣದ ತೈಲವನ್ನು ಅಮೆರಿಕ, ರಷ್ಯಾದಿಂದ ಆಮದು ಮಾಡಿಕೊಂಡಿದೆ.

ಸೆಂಟರ್ ಫಾರ್ ರೀಸರ್ಚ್ ಆನ್ ಎನರ್ಜಿ ಆ್ಯಂಡ್ ಕ್ಲೀನ್ ಏರ್ (ಸಿಆ‌ರ್‌ಇಎ) ವರದಿಯ ಪ್ರಕಾರ, ರಷ್ಯಾದಿಂದ ಭಾರತ ಹಾಗೂ ಈಜಿಪ್ಟ್ ಗೆ ತೈಲ ರಫ್ತು ಯುದ್ಧದ ಬಳಿಕ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದೆ. ಭಾರತದ ಸರ್ಕಾರಿ ಅಧಿಕಾರಿಗಳ ಪ್ರಕಾರ, ರಷ್ಯಾ ದೊಡ್ಡಮೊತ್ತದ ರಿಯಾಯ್ತಿಯನ್ನು ನೀಡುತ್ತಿದೆ. ಪಾಶ್ಚಿಮಾತ್ಯ ದೇಶಗಳ ಮೂಲಗಳ ಪ್ರಕಾರ, ಭಾರತಕ್ಕೆ ಪ್ರತಿ ಬ್ಯಾರಲ್ ಕಚ್ಚಾ ತೈಲಕ್ಕೆ 30 ಡಾಲರ್ ರಿಯಾಯ್ತಿ ದೊರಕುತ್ತಿದೆ. ಇದು ಭಾರತೀಯ ಖರೀದಿದಾರರಿಗೆ ಆಕರ್ಷಕವಾಗಿ ಪರಿಣಮಿಸಿದೆ.‌

ಭಾರತದ ಸರ್ಕಾರಿ ಸ್ವಾಮ್ಯದ ಕಂಪನಿಗಳ ಮತ್ತು ಖಾಸಗಿ ವಲಯದ ರಿಲಯನ್ಸ್, ಉಕ್ರೇನ್ ಸಂಘರ್ಷ ಆರಂಭದ ಬಳಿಕ 30 ದಶಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸಿವೆ. ಇದಕ್ಕೆ ಪಾಶ್ಚಿಮಾತ್ಯ ದೇಶಗಳ ಮುಖಂಡರು ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಟುವಾಗಿ ಟೀಕಿಸಿದ್ದರು.

ಆದರೆ ಸಿಆರ್‌ಇಎ ವರದಿಯ ಪ್ರಕಾರ ಉಕ್ರೇನ್ ಮೇಲಿನ ದಾಳಿ ಆರಂಭದ ಬಳಿಕ ರಷ್ಯಾ 63 ಶತಕೋಟಿ ಯೂರೊ ಮೌಲ್ಯದ ದಹನ ಇಂಧನವನ್ನು ರಫ್ತು ಮಾಡಿದ್ದು, ಈ ಪೈಕಿ ಅಮೆರಿಕ ಹಾಗೂ ಪಾಶ್ಚಾತ್ಯ ದೇಶಗಳ ಪಾಲು ಶೇಕಡ 71ರಷ್ಟಿದೆ. ಆದಾಗ್ಯೂ ತೈಲ ಖರೀದಿ ಯುದ್ಧಪೂರ್ವ ಅವಧಿಗೆ ಹೋಲಿಸಿದರೆ ಕಡಿಮೆ ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News